

ಪ್ಯಾರಿಸ್: ಬ್ರೆಜಿಲ್ನ ರಿಯೋ ಡಿ ಜನೈರೋದಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ರಿಯೋ ಒಲಂಪಿಕ್ಸ್ನಲ್ಲಿ ಪಾಲ್ಗೊಳ್ಳಲಿರುವ ಫ್ರಾನ್ಸ್ನ ತಂಡದ ಮೇಲೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಫ್ರಾನ್ಸ್ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಪ್ಯಾರಿಸ್ ನಗರದಲ್ಲಿ ನಡೆದಿದ್ದ ಉಗ್ರ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಮಿಲಿಟರಿ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಜನರಲ್ ಕ್ರಿಸೋಫೆ ಗೋಮಾರ್ಟ್ ಫ್ರಾನ್ಸ್ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಕ್ರೀಡಾ ಪಟುಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಕುರಿತು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ ಆಗಸ್ಟ್ 5 ರಿಂದ 21ರವರೆಗೆ ನಡೆಯಲಿರುವ ಒಲಂಪಿಕ್ಸ್ಗಾಗಿ ಬ್ರೆಜಿಲ್ ಸರ್ಕಾರ ಭಾರೀ ಬಿಗಿ ಭದ್ರತೆ ಒದಗಿಸಿದೆ.
47 ಸಾವಿರ ಪೊಲೀಸರು ಮತ್ತು 38 ಸಾವಿರ ಯೋಧರ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಸುಮಾರು 10,500 ಕ್ರೀಡಾ ಪಟಗಳು, ಪತ್ರಕರ್ತರು ಮತ್ತು ಸಾವಿರಾರು ಪ್ರವಾಸಿಗರು ಭಾಗವಹಿಸಲಿದ್ದಾರೆ. 2012 ರಲ್ಲಿ ಲಂಡನ್ ಒಲಂಪಿಕ್ಸ್ ಗೆ ಭದ್ರತೆಗಾಗಿ ನಿಯೋಜಿಸಿದ್ದ ಎರಡು ಪಟ್ಟು ಪೊಲೀಸರನ್ನು ನಿಯೋಜಿಸಲಾಗಿದೆ.