

ನವದೆಹಲಿ: ಭಾರತದ ಜ್ಯಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಅಥ್ಲೆಟಿಕ್ಸ್ ನಲ್ಲಿ ಇತಿಹಾಸ ಬರೆದಿದ್ದು, ಇದೇ ಮೊದಲ ಬಾರಿಗೆ ಜ್ಯಾವೆಲಿನ್ ಥ್ರೋ ಫೈನಲ್ ನಲ್ಲಿ ಚಿನ್ನ ಗೆಲ್ಲುವ ಮೂಲಕ ಅಥ್ಲೆಟಿಕ್ಸ್ನಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪೋಲೆಂಡ್ನ ಬೈಡ್ಗೊಸಿಗ್ಜ್ ನಲ್ಲಿ ಶನಿವಾರ ನಡೆದ ಐಎಎಎಫ್ ವಿಶ್ವ ಯು-20 ಚಾಂಪಿಯನ್ಶಿಪ್ನಲ್ಲಿ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ 86.48 ಮೀ ದೂರಕ್ಕೆ ಎಸೆಯುವ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಈ ವಿಭಾಗದಲ್ಲಿ ಸ್ವರ್ಣಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಈ ದಾಖಲೆಗೆ ಎರಡು ಅವಕಾಶಗಳನ್ನು ಪಡೆದ ನೀರಜ್ ಚೋಪ್ರಾ ಎರಡನೇ ಎಸೆತದ ವೇಳೆ ಈ ದಾಖಲೆ ನಿರ್ಮಿಸಿದ್ದಾರೆ.
ಮೂಲತಃ ಹರಿಯಾಣದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದ ನಿವಾಸಿಯಾದ 18ರ ಹರೆಯದ ಚೋಪ್ರಾ ಲ್ಯಾಟಿವಿಯನ್ ಜಿಗಿಸಮುಂಡ್ಸ್ ಸಿರ್ಮಾಯಿಸ್ ಅವರು ನಿರ್ಮಿಸಿದ್ದ 84.69 ಮೀಟರ್ ದೂರಕ್ಕೆ ಜ್ಯಾವೆಲಿನ್ ಎಸೆದು ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಇನ್ನು ಇದೇ ಸ್ಪರ್ಧೆಯಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ ಗ್ರಾಬ್ಲರ್ ಅವರು 80.59 ಮೀ. ದೂರಕ್ಕೆ ಎಸೆದು ಎರಡನೇ ಸ್ಥಾನ (ಬೆಳ್ಳಿ) ಗಳಿಸಿದರೆ, 79.65 ಮೀ ದೂರಕ್ಕೆ ಎಸೆದ ಗ್ರನಡಾದ ಆ್ಯಂಡರ್ಸನ್ ಪೀಟರ್ಸ್ ಅವರು ಕಂಚಿನ ಪದಕ (3ನೇ ಸ್ಥಾನ)ಕಕ್ಕೆ ತೃಪ್ತಿಪಟ್ಟುಕೊಂಡರು.