

ರಿಯೋ ಡಿ ಜನೇರೊ: ಬ್ರೆಜಿಲ್ ನ ರಿಯೋ ಡಿ ಜನೆರೋ ದಲ್ಲಿ ನಡೆಯಲಿರುವ ಈ ವರ್ಷದ ಒಲಂಪಿಕ್ಸ್ ತಮ್ಮ ಕೊನೆಯದ್ದು ಎಂದಿದ್ದಾರೆ ಖ್ಯಾತ ಅಥ್ಲೆಟಿಕ್ ಓಡು ಪಟು ಉಸೇನ್ ಬೋಲ್ಟ್. ಅವರ ಅಭಿಮಾನಿಗಳು ವೃತ್ತಿಜೀವನವನ್ನು ಮುಂದುವರೆಸಲು ಮೊರೆಯಿಟ್ಟಿದರೂ ಉಸೇನ್ ಬೋಲ್ಟ್ ಈ ಘೋಷಣೆ ಮಾಡಿದ್ದಾರೆ.
ಈ ಹಿಂದೆ ಅವರು ಜನವರಿಯಲ್ಲಿ ಹೇಳಿದ್ದಂತೆ, ತಮ್ಮ ತರಬೇತುದಾರ ಗ್ಲೆನ್ ಮಿಲ್ಸ್ ಅವರ ಸಲಹೆ ಮೇರೆಗೆ ೨೦೨೦ರ ಟೋಕಿಯೋ ಒಲಂಪಿಕ್ಸ್ ವರೆಗೂ ಮುಂದುವರೆಯಲಿದ್ದೇನೆ ಎಂದಿದ್ದರು. ಆದರೆ ಈಗ ತಮ್ಮ ನಿಲುವು ಬದಲಿಸಿರುವ ಅವರು "ಇದು ಖಂಡಿತಾ ನನ್ನ ಕೊನೆಯ ಒಲಂಪಿಕ್ಸ್. ಇನ್ನೂ ನಾಲ್ಕು ವರ್ಷ ಮುಂದುವರೆಯುವುದು ನನಗೆ ಕಷ್ಟ" ಎಂದಿದ್ದಾರೆ ಆರು ಬಾರಿ ಒಲಂಪಿಕ್ಸ್ ಪದಕ ಗೆದ್ದಿರುವ ಬೋಲ್ಟ್.
೨೦೧೨ ರ ಲಂಡನ್ ಒಲಂಪಿಕ್ಸ್ ನಲ್ಲಿ ಬೋಲ್ಟ್ ಅವರು ೧೦೦ ಮೀಟರ್, ೨೦೦ ಮೀಟರ್ ಮತ್ತು ೪ x ೧೦೦ ಮೀಟರ್ ಓಟಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೇ ಪ್ರದರ್ಶನವನ್ನು ನಾಲ್ಕು ವರ್ಷಗಳ ನಂತರ ಬೀಜೀಂಗ್ ಒಲಂಪಿಕ್ಸ್ ನಲ್ಲೂ ಪುನರಾವರ್ತಿಸಿದ್ದರು.
"ನನ್ನ ಅತಿ ದೊಡ್ಡ ಕನಸೆಂದರೆ ಮತ್ತೆ ಒಲಂಪಿಕ್ಸ್ ನಲ್ಲಿ ಮೂರು ಪದಕಗಳನ್ನು ಗೆಲ್ಲುವುದು. ನಾನು ಈ ಗುರಿಯತ್ತ ನನ್ನ ಗಮನ ನೆಟ್ಟಿದ್ದೇನೆ" ಎಂದಿದ್ದಾರೆ ಬೋಲ್ಟ್.
೨೦೦ ಮೀಟರ್ ಓಟವನ್ನು ೧೯.೧೯ ಸೆಕಂಡಗಳಲ್ಲಿ ಮುಗಿಸಿರುವ ವಿಶ್ವದಾಖಲೆ ಹೊಂದಿದ್ದರೂ ಇನ್ನೂ ಸಾಧಿಸಬೇಕೆನ್ನುವ ಹಠದಲ್ಲಿದ್ದಾರೆ ಬೋಲ್ಟ್. ೧೯ ಸೆಕಂಡ ಒಳಗೆ ೨೦೦ ಮೀಟರ್ ಓಟವನ್ನು ಮುಗಿಸುವುದು ನನ್ನ ಮಹತ್ವದ ಗುರಿ ಎಂದಿದ್ದಾರೆ.