ಕೊರೋನಾ ಸೋಂಕಿಗೆ ತುತ್ತಾಗಿದ್ದ ಹಾಕಿ ಆಟಗಾರ ಮನ್‌ದೀಪ್ ಸಿಂಗ್ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕುಸಿತ: ಆಸ್ಪತ್ರೆಗೆ ದಾಖಲು

ಕೊರೋನಾ ಸೋಂಕಿಗೆ ತುತ್ತಾಗಿದ್ದ ಹಾಕಿ ಆಟಗಾರ ಮನ್‌ದೀಪ್ ಸಿಂಗ್ ಅವರ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕುಸಿತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸೋಂಕಿಗೆ ತುತ್ತಾಗಿದ್ದ ಹಾಕಿ ಆಟಗಾರ ಮನ್‌ದೀಪ್ ಸಿಂಗ್ ಅವರ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕುಸಿತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮನ್ ದೀಪ್ ಸಿಂಗ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿತ್ತು. ಇಂದು ಅವರ ರಕ್ತದಲ್ಲಿ ಆಮ್ಲಜನಕ ಪ್ರಮಾಣದಲ್ಲಿ ಕುಸಿತ ಉಂಟಾದ ಪರಿಣಾಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಭಾರತೀಯ  ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮಂಗಳವಾರ ತಿಳಿಸಿದೆ.

ಬೆಂಗಳೂರಿನ ನ್ಯಾಷನಲ್ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿರುವ ಸೋಂಕಿತ ಆಟಗಾರರನ್ನು ದಿನಕ್ಕೆ ನಾಲ್ಕು ಬಾರಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸೋಮವಾರ ರಾತ್ರಿಯ ತಪಾಸಣೆ ವೇಳೆ ಮನ್‌ದೀಪ್ ಸಿಂಗ್ ಅವರ ರಕ್ತದಲ್ಲಿ ಆಮ್ಲಜನಕ ಪ್ರಮಾಣ ನಿಗದಿತ ಮಟ್ಟಕ್ಕಿಂತ ಕಡಿಮೆಯಾಗುತ್ತಿರುವುದು  ಕಂಡುಬಂದಿತ್ತು. ಇದು ಅವರಲ್ಲಿ ಕೊರೊನಾ ಲಕ್ಷಣಗಳು ತೀವ್ರಗೊಳ್ಳುತ್ತಿರುವ ಸೂಚನೆಯಾಗಿತ್ತು. ಹಾಗಾಗಿ ತಕ್ಷಣವೇ ಅವರನ್ನು ಎಸ್ಎಸ್‌ ಸ್ಪರ್ಷ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಿಳಿಸಿದೆ.

ಭಾರತೀಯ ಹಾಕಿ ತಂಡದಲ್ಲಿ ಕೊರೊನಾ ಸೋಂಕು ತಗುಲಿದ ಆರನೇ ಆಟಗಾರರಾಗಿದದ್ದಾರೆ ಸಿಂಗ್. ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್, ಇತರ ಆಟಗಾರರಾದ ಸುರೇಂದರ್ ಕುಮಾರ್, ಜಸ್‌ಕರನ್ ಸಿಂಗ್, ವರುಣ್ ಕುಮಾರ್ ಮತ್ತು ಕೃಷ್ಣ ಬಿ. ಪಾಠಕ್ ಅವರಿಗೂ ಸೋಂಕು ತಗುಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com