ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ಸ್ಪೇನ್ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿದೆ.
ಒಲಂಪಿಕ್ಸ್ ಕ್ರೀಡಾಕೂಟದ ಪುರುಷರ ಹಾಕಿ ವಿಭಾಗದಲ್ಲಿ ನಡೆದ ಪೂಲ್ ಎ ಹಣಾಹಣಿಯಲ್ಲಿ ಸ್ಪೇನ್ ತಂಡವನ್ನು ಭಾರತ ತಂಡ 3-0 ಗೋಲುಗಳಿಂದ ಸೋಲಿಸಿದೆ.
ಭಾರತದ ಪರ ಸಮರ್ಜಿತ್ ಸಿಂಗ್ ಮತ್ತು ರೂಪಿಂದರ್ ಪಾಲ್ ಸಿಂಗ್ ಜೋಡಿ 3 ಗೋಲು ತಂದು ಕೊಡುವ ಮೂಲಕ ಭಾರತಕ್ಕೆ ಭರ್ಜರಿ ಜಯ ತಂದಿತ್ತರು. ಸಮರ್ಜಿತ್ ಸಿಂಗ್ ಮೊದಲು ಗೋಲು ತಂದು ಕೊಟ್ಟರೆ ತಮಗೆ ಸಿಕ್ಕ ಎರಡೂ ಪೆನಾಲ್ಟಿ ಕಾರ್ನರ್ ಸ್ಟ್ರೋಕ್ ಗಳನ್ನು ಗೋಲ್ ಆಗಿ ಪರಿವರ್ತಿಸಿದ ರೂಪಿಂದರ್ ಪಾಲ್ ಸಿಂಗ್ ಭಾರತಕ್ಕೆ ಮತ್ತೆರಡು ಗೋಲುಗಳನ್ನು ತಂದು ಕೊಟ್ಟರು.
ಈ ಪಂದ್ಯದ ಗೆಲುವಿನೊಂದಿಗೆ ಭಾರತ ಮುಂದಿನ ಹಂತಕ್ಕೆ ಭಡ್ತಿ ಪಡೆದಿದ್ದು, ಮುಂದಿನ ಗ್ರೂಪ್ ಸ್ಟೇಜ್ ಹಣಾಹಣಿಯಲ್ಲಿ ಅರ್ಜೆಂಟಿನಾ ಮತ್ತು ಜಪಾನ್ ತಂಡಗಳನ್ನು ಎದುರಿಸಲಿದೆ.
Advertisement