ಚೀನಾ ಕಂಪನಿ ಕೈ ಬಿಟ್ಟ ಐಒಎ, ಬ್ರ್ಯಾಂಡೆಡ್ ಬಟ್ಟೆ ಇಲ್ಲದೆಯೇ ಟೋಕಿಯೋ ಒಲಿಂಪಿಕ್ಸ್ ಗೆ ಭಾರತ!

ಟೋಕಿಯೊ ಒಲಿಂಪಿಕ್ಸ್​ಗೆ ಭಾರತ ತಂಡದ ಕಿಟ್​ ಪ್ರಾಯೋಜಕತ್ವದಿಂದ ಚೀನಾದ ಲೀ ನಿಂಗ್​ ಕಂಪನಿಯನ್ನು ಭಾರತೀಯ ಒಲಿಂಪಿಕ್ಸ್​ ಸಂಸ್ಥೆ (ಐಒಎ) ಹೊರಗಿಟ್ಟಿದೆ. 

Published: 10th June 2021 01:29 AM  |   Last Updated: 10th June 2021 12:39 PM   |  A+A-


Tokyo Olympics Kiren Rijiju

ಆಟಗಾರರೊಂದಿಗೆ ಕೇಂದ್ರ ಸಚಿವ ಕಿರಣ್ ರಿಜಿಜು

Posted By : Srinivasamurthy VN
Source : PTI

ನವದೆಹಲಿ: ಟೋಕಿಯೊ ಒಲಿಂಪಿಕ್ಸ್​ಗೆ ಭಾರತ ತಂಡದ ಕಿಟ್​ ಪ್ರಾಯೋಜಕತ್ವದಿಂದ ಚೀನಾದ ಲೀ ನಿಂಗ್​ ಕಂಪನಿಯನ್ನು ಭಾರತೀಯ ಒಲಿಂಪಿಕ್ಸ್​ ಸಂಸ್ಥೆ (ಐಒಎ) ಹೊರಗಿಟ್ಟಿದೆ. 

ಹೌದು.. ಟೋಕಿಯೊ ಒಲಿಂಪಿಕ್ಸ್​ಗೆ ಭಾರತ ತಂಡ ಪ್ರಾಯೋಜಕರಿಲ್ಲದೇ ಕಣಕ್ಕಿಳಿಯಲು ನಿರ್ಧರಿಸಿದ್ದು, ಆಟಗಾರರು ಪ್ರಾಯೋಜಕತ್ವ ಇಲ್ಲದ ಜೆರ್ಸಿಗಳನ್ನು ತೊಟ್ಟು ಕಣಕ್ಕಿಳಿಯಲಿದ್ದಾರೆ. ಕಳೆದ ವಾರವಷ್ಟೇ ಐಒಎ ಲೀ ನಿಂಗ್ ಸಂಸ್ಥೆಯ ಪ್ರಾಯೋಜಕತ್ವ ಇರುವ ಜೆರ್ಸಿಯನ್ನು ಬಿಡುಗಡೆ ಮಾಡಿತ್ತು. ಆದರೆ ಇದಕ್ಕೆ  ಕ್ರೀಡಾಭಿಮಾನಿಗಳಉ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಚೀನಾ ಮೂಲದ ಪ್ರಾಯೋಜಕತ್ವಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕ್ರೀಡಾ ಸಚಿವಾಲಯ ಪ್ರಾಯೋಜಕತ್ವದಿಂದ ಚೀನಾದ ಲೀ ನಿಂಗ್​ ಕಂಪನಿಯನ್ನು ಕೈಬಿಟ್ಟಿದೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಭಾರತೀಯ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಯಾವುದೇ ಬ್ರಾಂಡ್ ಅಥವಾ ಪ್ರಾಯೋಜಕತ್ವದ ಉಡುಪುಗಳನ್ನು ಧರಿಸುವುದಿಲ್ಲ. ನಮ್ಮ ಕ್ರೀಡಾಪಟುಗಳ ಜೆರ್ಸಿಗಳ ಮೇಲೆ  ಮತ್ತು ಕಿಟ್ ಗಳ ಮೇಲೆ 'ಇಂಡಿಯಾ' ಎಂದು ಮಾತ್ರ ಬರೆಯಲಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಐಒಎ ಅಧ್ಯಕ್ಷ ನರೀಂದರ್​ ಬಾತ್ರಾ ಅವರು, 'ನಮ್ಮ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ, ಅನ್ ಬ್ರಾಂಡೆಡ್ ಅಥವಾ ಪ್ರಯೋಜಕತ್ವ ಇಲ್ಲದ ಉಡುಪುಗಳನ್ನು ಧರಿಸುತ್ತಾರೆ. ಈ ನಿರ್ಧಾರ ತೆಗೆದುಕೊಳ್ಳುವಲ್ಲಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ  ಮಾರ್ಗದರ್ಶನಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಕ್ರೀಡಾಪಟುಗಳು ಉಡುಪು ಬ್ರಾಂಡ್ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸದೆ ತರಬೇತಿ ನೀಡಲು ಮತ್ತು ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದು ನಾವು ಬಯಸುತ್ತೇವೆ. ಸಾಂಕ್ರಾಮಿಕ ರೋಗದಿಂದ ಆಟಗಾರರು ಸವಾಲು ಎದುರಿಸುತ್ತಿದ್ದಾರೆ ಮತ್ತು ಅವರು  ವಿಚಲಿತರಾಗಬಾರದು ಎಂದು ನಾವು ಬಯಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್ ನಿಂದ ಕರೋಲಿನಾ ಮರಿನ್ ಔಟ್; ಪಿವಿ ಸಿಂಧುಗೆ ಇದು ವರವಾಗುತ್ತಾ?

ಕಳೆದ ವಾರವಷ್ಟೇ ಐಎಒ, ಒಲಿಂಪಿಕ್​ ಕ್ರೀಡಾಕೂಟಕ್ಕೆ ಚೀನಾ ಸಂಸ್ಥೆ ಲೀ ನಿಂಗ್​ ಪ್ರಾಯೋಜಕತ್ವ ಭಾರತ ತಂಡದ ಕಿಟ್​ ಬಿಡುಗಡೆ ಮಾಡಿತ್ತು.ಆದರೆ, ಸಾರ್ವಜನಿಕ ಹಿತದೃಷ್ಟಿಯಿಂದ ಐಒಎ ಚೀನಾ ಕಂಪನಿಯ ಪ್ರಾಯೋಜಕತ್ವದಿಂದ ಹಿಂದೆ ಸರಿಯಿತು. ಚೀನಾ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿದ್ದಕ್ಕೆ  ಸಾರ್ವಜನಿಕ ವಲಯದಲ್ಲಿ ಐಒಎ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಮಾಧ್ಯಮಗಳು ಸೇರಿದಂತೆ ಎಲ್ಲ ಕಡೆಯಿಂದಲೂ ಚೀನಾ ಕಂಪನಿ ಪ್ರಾಯೋಜಕತ್ವಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು. ಹೀಗಾಗಿ ಸಾರ್ವಜನಿಕ ಹಿತಾಸಕ್ತಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬಾತ್ರಾ ವಿವರಿಸಿದರು.

ಕೋವಿಡ್​ ಕಾರಣದಿಂದಾಗಿ ಭಾರತ ಸೇರಿದಂತೆ 9 ದೇಶಗಳಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಆಯೋಜಕರು ನಿರ್ಬಂಧ ವಿಧಿಸಲಿದ್ದಾರೆ ಎಂಬ ವರದಿಯನ್ನು ಬಾತ್ರಾ ತಳ್ಳಿ ಹಾಕಿದರು. ಈ ಕುರಿತು ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಇದೆಲ್ಲವೂ ಗಾಳೆ ಸುದ್ದಿ, ಒಲಿಂಪಿಕ್ಸ್​ ನಲ್ಲಿ ಭಾರತ ತಂಡ ಸ್ಪರ್ಧಿಸಲಿದೆ ಎಂದು ಬಾತ್ರಾ ಸ್ಪಷ್ಟಪಡಿಸಿದರು. ಭಾರತ ಸೇರಿದಂತೆ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಮಾಲ್ಡೀವ್ಸ್​, ಶ್ರೀಲಂಕಾ, ಅಘಾನಿಸ್ತಾನ, ವಿಯೆಟ್ನಾಂ, ಹಾಗೂ ಬ್ರಿಟನ್​ ತಂಡಗಳನ್ನು ಒಲಿಂಪಿಕ್ಸ್​ನಿಂದ ನಿರ್ಬಂಧ ಹೇರಲಾಗಿದೆ ಎಂದು ಮಲೇಷ್ಯಾ ಮಾಧ್ಯಮಗಳಲ್ಲಿ ವರದಿಯಾಗಿತ್ತು.  ಅಲ್ಲದೆ, ಕ್ರೀಡಾಕೂಟದ ಆಯೋಜಕರು ಕೂಡ ಈ ವರದಿಯನ್ನು ತಳ್ಳಿಹಾಕಿದ್ದಾರೆ.


Stay up to date on all the latest ಕ್ರೀಡೆ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp