ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023: ಸೆಮಿಫೈನಲ್ ನಲ್ಲಿ ಜಪಾನ್ ವಿರುದ್ದ ಭಾರತಕ್ಕೆ 5-0 ಭರ್ಜರಿ ಜಯ, ಫೈನಲ್ ಗೆ ಲಗ್ಗೆ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದ ಭಾರತ ತಂಡ ಇದೀಗ ಸೆಮೀಸ್ ನಲ್ಲಿ ಪ್ರಬಲ ಜಪಾನ್ ತಂಡವನ್ನೂ ಭರ್ಜರಿಯಾಗಿ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಜಪಾನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
Updated on

ಚೆನ್ನೈ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದ ಭಾರತ ತಂಡ ಇದೀಗ ಸೆಮೀಸ್ ನಲ್ಲಿ ಪ್ರಬಲ ಜಪಾನ್ ತಂಡವನ್ನೂ ಭರ್ಜರಿಯಾಗಿ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ.

ಹೌದು.. ತೀವ್ರ ಕುತೂಹಲ ಕೆರಳಿಸಿದ್ದ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮೀಸ್ ಕದನದಲ್ಲಿ ಪ್ರಬಲ ಜಪಾನ್ ತಂಡವನ್ನು ಭಾರತ ತಂಡ ಭರ್ಜರಿಯಾಗಿ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಚೆನ್ನೈನ ಮೇಯರ್ ರಾಧಾಕೃಷ್ಣನ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023 ರ ಫೈನಲ್ನಲ್ಲಿ ಜಪಾನ್ ತಂಡವನ್ನು 5-0 ಅಂತರದಿಂದ ಸೋಲಿಸಿದ ಭಾರತ ಫೈನಲ್ಗೆ ಪ್ರವೇಶಿಸಿತು.

ಗೋಲ್ ರಹಿತ ಮೊದಲ ಕ್ವಾರ್ಟರ್ ನಂತರ, 2023 ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ನಲ್ಲಿ ಎರಡನೇ ಕ್ವಾರ್ಟರ್ನಲ್ಲಿ ಭಾರತ 3-0 ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದ ಕೊನೆಯ ಎರಡು ಕ್ವಾರ್ಟರ್ಗಳಲ್ಲಿ ತಲಾ ಒಂದು ಗೋಲು ಗಳಿಸಿದ ಭಾರತ 5-0 ಅಂತರದ ಮುನ್ನಡೆ ಸಾಧಿಸಿತು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಮೊದಲ ಗೋಲು ಸಿಡಿಸುವ ಮೂಲಕ ಶುಭಾರಂಭ ಮಾಡಿತು. ಆಕಾಶ್‌ದೀಪ್ ಭಾರತಕ್ಕೆ ಮೊದಲಕ ಮುನ್ನಡೆಯನ್ನು ನೀಡಿದರು. ಅದಾದ ಬಳಿಕ ಭಾರತ ಮತ್ತೊಂದು ಗೋಲು ಸಿಡುಸುವಲ್ಲಿ ಯಶಸ್ವಿಯಾಯಿತು. 23ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಭಾರತಕ್ಕೆ ಎರಡನೇ ಗೋಲು ಸಿಡಿಸಿದರು. 29ನೇ ನಿಮಿಷದಲ್ಲಿ ಭಾರತದ ಪರ ಮೂರನೇ ಗೋಲು ದಾಖಲಾಯಿತು. ಈ ಬಾರಿ ಮಂದೀಪ್ ಸಿಂಗ್ ಭಾರತಕ್ಕೆ ಮೇಲುಗೈ ಒದಗಿಸಿದರು. ಈ ಮೂಲಕ ಎರಡನೇ ಕ್ವಾರ್ಟರ್‌ನ ಅಂತ್ಯಕ್ಕೆ 3-0 ಅಂತರದಿಂದ ಸ್ಪಷ್ಟ ಮುನ್ನಡೆ ಸಾಧಿಸಿತು.

ಮೂರನೇ ಕ್ವಾರ್ಡರ್‌ನಲ್ಲಿಯೂ ಭಾರತದ ಆಕ್ರಮಣಕಾರಿ ಆಟ ಮುಂದುವರಿದಿತ್ತು. ಸುಮಿತ್ ಭಾರತದ ಪರವಾಗಿ ನಾಲ್ಕನೇ ಗೋಲು ಬಾರಿಸಿದರು. ಮೂರನೇ ಕ್ವಾರ್ಟರ್‌ನ ಅಂತ್ಯದಲ್ಲಿ ಭಾರತ 4-0 ಅಂತರದಿಂದ ಮುನ್ನಡೆ ಸಾಧಿಸಿತ್ತು. ಇನ್ನು ಕೊನೆಯ ಕ್ವಾರ್ಟರ್‌ನಲ್ಲಿಯೂ ಭಾರತ ಒಂದು ಗೋಲು ಬಾರಿಸುವಲ್ಲಿ ಯಶಸ್ವಿಯಾಗುವ ಮೂಲಕ ಗೋಲಿನ ಸಂಖ್ಯೆಯನ್ನು 5-0ಗೆ ಏರಿಸಿದೆ. ಕಾರ್ತಿ ಸೆಲ್ವಂ ಕೊನೆಯ ಗೋಲು ಸಿಡಿಸಿದರು. ಈ ಮೂಲಕ ಭಾರತ ಈ ಪಂದ್ಯವನ್ನು 5-0 ಅಂತರದ ಅಮೋಘ ಗೆಲುವಿನಿಂದಿಗೆ ಮುಕ್ತಾಯಗೊಳಿಸಿದೆ.

ಈ ಗೆಲುವಿನೊಂದಿಗೆ ಭಾರತ ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2023ರ ಆವೃತ್ತಿಯ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಫೈನಲ್‌ನಲ್ಲಿ ಮಲೇಶಿಯಾ ತಂಡವನ್ನು ಎದುರಿಸಲಿದ್ದು ಚಾಂಪಿಯನ್ ಪಟ್ಟದ ಮೇಲೆ ಭಾರತ ಚಿತ್ತ ನೆಟ್ಟಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com