95, 86ರ ಇಳಿವಯಸ್ಸಿನಲ್ಲೂ ಕ್ರೀಡೆಯಲ್ಲಿ ಸಹೋದರರ ಉತ್ಸಾಹ: ಮಾಸ್ಟರ್ಸ್ ಟೂರ್ನಿಗಾಗಿ ಸಿಡ್ನಿಗೆ ತೆರಳಲು ಭರ್ಜರಿ ಸಿದ್ಧತೆ!

55-60 ವರ್ಷವಾಗುತ್ತಿದ್ದಂತೆಯೇ ಸಾಕಷ್ಟು ಮಂದಿ ನಮಗೆ ವಯಸ್ಸಾಯಿತು, ಮಂಡಿ ನೋವು, ಸೊಂಟ ನೋವು ಹೀಗೆ ಹಲವು ಆರೋಗ್ಯ ಸಮಸ್ಯೆಗಳ ಹೇಳಿಕೊಂಡು ವೃದ್ಧಾಪ್ಯವೆಂದು ವಿಶ್ರಾಂತಿ ಪಡೆದುಕೊಳ್ಳುವುದುಂಟು. ಆದರೆ, ಕೊಡಗಿನ ಈ ಸಹೋದರರು ಇವರಿಗೆ ತದ್ವಿರುದ್ಧವಾಗಿದ್ದು, 95 ಮತ್ತು 86ರ ಇಳಿವಯಸ್ಸಿನಲ್ಲಿಯೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಇತರರಿಗೆ ಮಾದರಿಯಾಗಿ ನಿಂತಿದ್ದಾರೆ.
ಬೋಪಯ್ಯ, ಮಾಚಮ್ಮ, ಬೆಳ್ಳಿಯಪ್ಪ.
ಬೋಪಯ್ಯ, ಮಾಚಮ್ಮ, ಬೆಳ್ಳಿಯಪ್ಪ.

ಮಡಿಕೇರಿ: 55-60 ವರ್ಷವಾಗುತ್ತಿದ್ದಂತೆಯೇ ಸಾಕಷ್ಟು ಮಂದಿ ನಮಗೆ ವಯಸ್ಸಾಯಿತು, ಮಂಡಿ ನೋವು, ಸೊಂಟ ನೋವು ಹೀಗೆ ಹಲವು ಆರೋಗ್ಯ ಸಮಸ್ಯೆಗಳ ಹೇಳಿಕೊಂಡು ವೃದ್ಧಾಪ್ಯವೆಂದು ವಿಶ್ರಾಂತಿ ಪಡೆದುಕೊಳ್ಳುವುದುಂಟು. ಆದರೆ, ಕೊಡಗಿನ ಈ ಸಹೋದರರು ಇವರಿಗೆ ತದ್ವಿರುದ್ಧವಾಗಿದ್ದು, 95 ಮತ್ತು 86ರ ಇಳಿವಯಸ್ಸಿನಲ್ಲಿಯೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಇತರರಿಗೆ ಮಾದರಿಯಾಗಿ ನಿಂತಿದ್ದಾರೆ.

ಕೊಡಗು ಜಿಲ್ಲೆಯ ಕುಟ್ಟಂಡಿ ಗ್ರಾಮದ ನಿವಾಸಿಗಳಾದ ಪಾಲೇಕಂಡ ಪಿ ಬೋಪಯ್ಯ (95) ಮತ್ತು ಪಾಲೇಕಂಡ ಬೆಳಿಯಪ್ಪ (86) ಸಹೋದರರು ದೇಶಾದ್ಯಂತ ನಡೆದ ಹಲವಾರು ಮಾಸ್ಟರ್ ಗೇಮ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಇದೂವರೆಗೆ 13 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ಈ ಸಹೋದರರು ಮಾಸ್ಟರ್ಸ್ ಟೂರ್ನಿಗಾಗಿ ಸಿಡ್ನಿಗೆ ತೆರಳಲು ಸಜ್ಜಾಗುತ್ತಿದ್ದಾರೆ. ಇದು ಇವರ ಮೊದಲ ಅಂತರಾಷ್ಟ್ರೀಯ ಕೂಟವಾಗಿದೆ.

"ಮಾಸ್ಟರ್ ಗೇಮ್ಸ್ ಚಾಂಪಿಯನ್‌ಶಿಪ್ ಮಾರ್ಚ್ 10 ರಿಂದ ಮಾರ್ಚ್ 15 ರವರೆಗೆ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವುದು ನಮ್ಮ ಬಹುದಿನಗಳ ಕನಸಾಗಿತ್ತು. ನಮ್ಮ ಕುಟುಂಬದ ಬೆಂಬಲದಿಂದ ನಾವು ಭಾಗವಹಿಸುತ್ತಿದ್ದೇವೆ ಎಂದು ಬೆಳ್ಳಿಯಪ್ಪ ಹೇಳಿದ್ದಾರೆ.

ಪಂದ್ಯಾವಳಿಯಲ್ಲಿ ಭಾಗವಹಿಸಲು ವಿಮಾನ ಮತ್ತು ಇತರ ಖರ್ಚುಗಳಿಗೆ 2.45 ಲಕ್ಷ ರೂ. ವೆಚ್ಚವಾಗಲಿದೆ. ಹೀಗಾಗಿ ಕೊಡಗು-ಮೈಸೂರು ಸಂಸದರು, ಕೊಡಗು ಡಿಸಿ, ಕ್ರೀಡಾ ಇಲಾಖೆ ಅಧಿಕಾರಿಗಳು ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. ಆದರೆ, ಯಾವುದೇ ಅಧಿಕಾರಿಗಳಿಂದಲೂ ಪ್ರತಿಕ್ರಿಯೆಗಳು ಸಿಕ್ಕಿಲ್ಲ. ಬೆಂಗಳೂರು ಡಿಸಿ ಕಚೇರಿಗೂ ಪತ್ರ ಬರೆಯಲಾಗಿದೆ. ಆದರೆ, ನೆರವು ನೀಡಲು ನಿರಾಕರಿಸಿದ್ದಾರೆ. ಇದೀಗ ನಮ್ಮ ಕುಟುಂಬ ನಮ್ಮ ನೆರವಿಗೆ ಧಾವಿಸಿ ನಿಧಿ ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ.

ಬೋಪಯ್ಯ ಅವರು ನಿವೃತ್ತ ಸೈನಿಕರಾಗಿದ್ದರೆ, ಬೆಳ್ಳಿಯಪ್ಪ ರಾಷ್ಟ್ರೀಯ ಸರ್ಕಾರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ಹಿರಿಯ ಸಹೋದರರು ಈಗಾಗಲೇ ಸಿಡ್ನಿಗೆ ತೆರಳಿದ್ದು, ಬೋಪಯ್ಯ ಅವರು ಜಾವೆಲಿನ್ ಎಸೆತ, ಡಿಸ್ಕಸ್ ಎಸೆತ ಮತ್ತು ಶಾಟ್‌ಪುಟ್‌ನಲ್ಲಿ ಭಾಗವಹಿಸಿದರೆ, ಬೆಳ್ಳಿಯಪ್ಪ 100 ಮತ್ತು 200 ಮೀ ಓಟ ಮತ್ತು 1,500 ಮೀ ನಡಿಗೆ ಓಟದಲ್ಲಿ ಭಾಗವಹಿಸಲಿದ್ದಾರೆ.

“ಇತರ ಅಂತಾರಾಷ್ಟ್ರೀಯ ಆಟಗಾರರು ಏಳು ವಿಭಿನ್ನ ಈವೆಂಟ್‌ಗಳಲ್ಲಿ ಭಾಗವಹಿಸಬಹುದಾದರೂ, ತಲಾ ಮೂರರಲ್ಲಿ ಭಾಗವಹಿಸುವ ಆಯ್ಕೆಯನ್ನು ನಮಗೆ ನೀಡಲಾಗಿದೆ. ಕನಿಷ್ಠ ಐದು ವಿಭಾಗಗಳಲ್ಲಿ ಭಾಗವಹಿಸುವಂತೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ’ ಎಂದು ಬೆಳ್ಳಿಯಪ್ಪ ವಿವರಿಸಿದ್ದಾರೆ.

ಇಬ್ಬರು ಸಹೋದರರು ತಲಾ ಕನಿಷ್ಠ ಎರಡು ಪದಕಗಳನ್ನು ಗೆದ್ದು ದೇಶಕ್ಕೆ ಹೆಮ್ಮೆ ತರುವ ಅಭಿಲಾಷೆಯನ್ನು ಹೊಂದಿದ್ದಾರೆ. ಆಸ್ಟ್ರೇಲಿಯನ್ ಚಾಂಪಿಯನ್‌ಶಿಪ್‌ಗಳ ನಂತರ, ಸಹೋದರರು ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾದಲ್ಲಿ ಮಾಸ್ಟರ್ ಗೇಮ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಭರವಸೆ ಹೊಂದಿದ್ದಾರೆ.

ಇದಕ್ಕಾಗಿ ಪ್ರಾಯೋಜಕರನ್ನು ಹುಡುಕುತ್ತೇವೆಂಬ ವಿಶ್ವಾಸ ನಮಗಿದೆ ಎಂದು ಬೋಪಯ್ಯ ಹಾಗೂ ಬೆಳ್ಳಿಯಪ್ಪ ಹೇಳಿದ್ದಾರೆ.

ಈ ನಡುವೆ ಕೊಡಗಿನ ಇನ್ನೋರ್ವ ಹಿರಿಯ ವಯಸ್ಕ ಅಥ್ಲೀಟ್, ಕರ್ನಾಟಕ ಮಾಸ್ಟರ್ ಗೇಮ್ಸ್ ಅಸೋಸಿಯೇಷನ್ ಅಧ್ಯಕ್ಷೆ ಹುದಿಕೇರಿಯ ಮಾಚಮ್ಮ (77) ಸಿಡ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com