
ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಕಳೆದ ಕೆಲವು ದಶಕಗಳಲ್ಲಿ ದೇಶ ಕಂಡ ಅತ್ಯಂತ ಯಶಸ್ವಿ ಕ್ರೀಡಾ ಪಟುಗಳಾಗಿದ್ದಾರೆ. ಸಾನಿಯಾ ಭಾರತದ ಶ್ರೇಷ್ಠ ಮಹಿಳಾ ಟೆನಿಸ್ ಆಟಗಾರ್ತಿಯಾಗಿದ್ದರೆ, ಶಮಿ ಟೀಂ ಇಂಡಿಯಾದ ವೇಗದ ಬೌಲರ್ ಆಗಿದ್ದಾರೆ. ಇತ್ತೀಚೆಗೆ, ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆಯಾಗಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದೆ.
ಸಾನಿಯಾ ಮತ್ತು ಪಾಕಿಸ್ತಾನ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ಈ ವರ್ಷದ ಆರಂಭದಲ್ಲಿ ವಿಚ್ಛೇದನ ಪಡೆದಿದ್ದರೆ, ಶಮಿ ಕೂಡ ತಮ್ಮ ಪತ್ನಿ ಹಸೀನ್ ಜಹಾನ್‌ನಿಂದ ಬೇರ್ಪಟ್ಟಿದ್ದಾರೆ.
ಮೊಹಮ್ಮದ್ ಶಮಿಯೊಂದಿಗೆ ಸಾನಿಯಾ ವಿವಾಹವಾಗಲಿದ್ದಾರೆ ಎನ್ನುವ ವದಂತಿಗಳ ಕುರಿತು ಸಾನಿಯಾ ತಂದೆ ಇಮ್ರಾನ್ ಪ್ರತಿಕ್ರಿಯಿಸಿದ್ದಾರೆ. ಈ ಮದುವೆ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದೆಲ್ಲವೂ ಕೇವಲ ವದಂತಿಯಷ್ಟೇ, ಅವರು ಶಮಿಯನ್ನು ಭೇಟಿಯಾಗಿಲ್ಲ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಭಾರತೀಯ ಟೆನಿಸ್ ಐಕಾನ್ ಸಾನಿಯಾ ಮಿರ್ಜಾ ಅವರು ಕ್ರಿಕೆಟಿಗ ಪತಿ ಶೋಯೆಬ್ ಮಲಿಕ್ ಅವರೊಂದಿಗೆ ಬೇರ್ಪಟ್ಟ ಸುಮಾರು 5 ತಿಂಗಳ ನಂತರ ಇತ್ತೀಚೆಗೆ ಹಜ್ ಯಾತ್ರೆಯನ್ನು ಕೈಗೊಂಡಿದ್ದರು. ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗಿರುವ ಸಾನಿಯಾ, ಇತ್ತೀಚೆಗೆ ಪ್ರತಿಷ್ಠಿತ ಫ್ರೆಂಚ್ ಓಪನ್ 2024 ಗಾಗಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಪರಿವರ್ತನೆಯ ಅನುಭವಕ್ಕಾಗಿ ಸಜ್ಜಾಗುತ್ತಿದ್ದು, ಉತ್ತಮ ವ್ಯಕ್ತಿಯಾಗಿ ಮರಳಲು ಆಸಿಸುತ್ತಿರುವುದಾಗಿ ಸಾನಿಯಾ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು.
ಭಾನುವಾರ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ, 'ನಾನು ಈ ಪರಿವರ್ತನೆಯ ಹಾದಿಯಲ್ಲಿರುವಾಗ ಯಾವುದೇ ತಪ್ಪುಗಳು ಮತ್ತು ನ್ಯೂನತೆಗಳಿಗಾಗಿ ನಾನು ವಿನಮ್ರವಾಗಿ ನಿಮ್ಮ ಕ್ಷಮೆಯನ್ನು ಕೇಳುತ್ತೇನೆ. ಅಲ್ಲಾಹನು ತನ್ನ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ ಮತ್ತು ಈ ಹಾದಿಯಲ್ಲಿ ತನಗೆ ಮಾರ್ಗದರ್ಶನ ನೀಡುತ್ತಾನೆ ಎಂದು ನಾನು ಭಾವಿಸುತ್ತೇನೆ' ಎಂದು ಸಾನಿಯಾ ಹೇಳಿದ್ದಾರೆ.
'ನಾನು ಅದೃಷ್ಟಶಾಲಿ ಮತ್ತು ಅಪಾರ ಕೃತಜ್ಞತೆಯನ್ನು ಅನುಭವಿಸುತ್ತಿದ್ದೇನೆ. ನನ್ನ ಈ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ನನ್ನೊಂದಿಗೆ ಇರಲಿ. ವಿನಮ್ರ ಹೃದಯ ಮತ್ತು ಬಲವಾದ ನಂಬಿಕೆಯೊಂದಿಗೆ ಉತ್ತಮ ವ್ಯಕ್ತಿಯಾಗಿ ಹಿಂದಿರುಗಲು ನಾನು ಆಶಿಸುತ್ತೇನೆ' ಎಂದಿದ್ದಾರೆ.
ಸಾನಿಯಾ ಇತ್ತೀಚೆಗೆ ಪ್ರಸಿದ್ಧ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಹಾಸ್ಯನಟ ಕಪಿಲ್ ಶರ್ಮಾ ಅವರೊಂದಿಗೆ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದರು.
Advertisement