

ಅಟ್ಲಾಂಟಾ: ಎಂಜೊ ಫೆರ್ನಾಂಡೆಸ್ ಮತ್ತು ಲೌಟಾರೊ ಮಾರ್ಟಿನೆಸ್ ಅಂತಿಮ ಕ್ಷಣಗಳಲ್ಲಿ ಗಳಿಸಿದ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ, ಇಂಗ್ಲೆಂಡ್ ವಿರುದ್ಧ 2-1ರ ರೋಚಕ ಗೆಲುವು ಸಾಧಿಸಿ ಫಿಫಾ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ.
ನಿನ್ನೆ ಬುಧವಾರ ಅಟ್ಲಾಂಟಾ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನಲ್ಲಿ, 85ನೇ ನಿಮಿಷದಲ್ಲಿ ಲಿಯೋನೆಲ್ ಮೆಸ್ಸಿ ನೀಡಿದ ಪಾಸ್ ನ್ನು ಎಂಜೊ ಫೆರ್ನಾಂಡೆಸ್ ಎಡ ಮೂಲೆಗೆ ನಿಖರವಾಗಿ ಬಾರಿಸಿ ಸಮಬಲ ಸಾಧಿಸಿದರು. ಹೆಚ್ಚುವರಿ ಸಮಯದ ಎರಡನೇ ನಿಮಿಷದಲ್ಲಿ ಮೆಸ್ಸಿಯ ಮತ್ತೊಂದು ಅದ್ಭುತ ಪಾಸ್ ನ್ನು ಲೌಟಾರೊ ಮಾರ್ಟಿನೆಸ್ ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಾಗೆ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಇದೇ ಭಾನುವಾರ ನ್ಯೂಜೆರ್ಸಿಯ ಈಸ್ಟ್ ರದರ್‌ಫೋರ್ಡ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ನಾಲ್ಕನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶ ಅರ್ಜೆಂಟೀನಾಕ್ಕೆ ಲಭಿಸಿದೆ.
ಈ ವಿಶ್ವಕಪ್‌ನಲ್ಲಿ ಲಿಯೋನೆಲ್ ಮೆಸ್ಸಿ ಈಗಾಗಲೇ 8 ಗೋಲು ಹಾಗೂ 4 ಅಸಿಸ್ಟ್‌ಗಳನ್ನು ದಾಖಲಿಸಿದ್ದು, ನಿನ್ನೆಯ ಪಂದ್ಯದಲ್ಲಿ ನೀಡಿದ ಎರಡು ಅಸಿಸ್ಟ್‌ಗಳೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ 12 ಅಸಿಸ್ಟ್‌ಗಳ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.
ಪಂದ್ಯದ 55ನೇ ನಿಮಿಷದಲ್ಲಿ ಡೆಕ್ಲಾನ್ ರೈಸ್ ನೀಡಿದ ಪಾಸ್ ನ್ನು ಮೋರ್ಗನ್ ರೋಜರ್ಸ್ ಅದ್ಭುತವಾಗಿ ಆಂಥನಿ ಗೋರ್ಡನ್‌ಗೆ ತಲುಪಿಸಿದರು. ರಕ್ಷಣಾ ಆಟಗಾರರನ್ನು ಹಿಂದಿಕ್ಕಿದ ಗೋರ್ಡನ್ ಬಲಪಾದದ ಸ್ಪರ್ಶದೊಂದಿಗೆ ಚೆಂಡನ್ನು ಗೋಲಿನೊಳಗೆ ತಳ್ಳುವ ಮೂಲಕ ಇಂಗ್ಲೆಂಡ್‌ಗೆ 1-0ರ ಮುನ್ನಡೆ ನೀಡಿದರು.
ಸ್ವಲ್ಪ ಹೊತ್ತಿನಲ್ಲೇ ಅರ್ಜೆಂಟೀನಾದ ಗಿಯುಲಿಯಾನೊ ಸಿಮಿಯೋನೆಗೆ ಸಿಕ್ಕಿದ್ದ ಉತ್ತಮ ಅವಕಾಶವನ್ನು ಇಂಗ್ಲೆಂಡ್‌ನ ಡ್ಜೆಡ್ ಸ್ಪೆನ್ಸ್ ಅದ್ಭುತ ಟ್ಯಾಕಲ್ ಮೂಲಕ ವಿಫಲಗೊಳಿಸಿದರು.
70ನೇ ನಿಮಿಷದ ವೇಳೆಗೆ ಗೋಲ್‌ಕೀಪರ್ ಜೋರ್ಡನ್ ಪಿಕ್‌ಫೋರ್ಡ್ ಅದ್ಭುತ ಡೈವಿಂಗ್ ಸೇವ್ ಮೂಲಕ ಅರ್ಜೆಂಟೀನಾದ ಗೋಲು ಪ್ರಯತ್ನವನ್ನು ತಡೆದು ಇಂಗ್ಲೆಂಡ್‌ನ ಮುನ್ನಡೆಯನ್ನು ಉಳಿಸಿಕೊಂಡರು. 76ನೇ ನಿಮಿಷದಲ್ಲಿ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಅವರ ಶಾಟ್ ಗೋಲ್‌ಪೋಸ್ಟ್‌ಗೆ ಬಡಿದು ಹೊರಬಂದಿದ್ದು, ಅರ್ಜೆಂಟೀನಾ ಸಮಬಲ ಸಾಧಿಸುವ ಅವಕಾಶ ಕೈತಪ್ಪಿತು.
ಪಂದ್ಯ ಅಂತ್ಯದ ವೇಳೆಗೆ ಅರ್ಜೆಂಟೀನಾ ತನ್ನ ಆಟದ ವೇಗವನ್ನು ಹೆಚ್ಚಿಸಿತು. ಮೆಸ್ಸಿಯ ಸೃಜನಾತ್ಮಕ ಆಟದಿಂದ ಸಿಕ್ಕ ಅವಕಾಶಗಳನ್ನು ಎಂಜೊ ಫೆರ್ನಾಂಡೆಸ್ ಮತ್ತು ಲೌಟಾರೊ ಮಾರ್ಟಿನೆಸ್ ಸಮರ್ಥವಾಗಿ ಗೋಲಾಗಿಸಿ, ಸೋಲಿನ ಅಂಚಿನಲ್ಲಿದ್ದ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
ಮೊದಲಾರ್ಧದಲ್ಲಿ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ನಡೆದರೂ ಯಾವುದೇ ಗೋಲು ದಾಖಲಾಗಲಿಲ್ಲ. ಅರ್ಜೆಂಟೀನಾ ಒಟ್ಟು 15 ಗೋಲು ಪ್ರಯತ್ನಗಳನ್ನು ನಡೆಸಿದರೆ, ಇಂಗ್ಲೆಂಡ್ ಕೇವಲ ಐದು ಪ್ರಯತ್ನಗಳಿಗೆ ಸೀಮಿತವಾಯಿತು. ಇಂಗ್ಲೆಂಡ್ ಶನಿವಾರ ಮಿಯಾಮಿಯಲ್ಲಿ ನಡೆಯಲಿರುವ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಫ್ರಾನ್ಸ್‌ನ್ನು ಎದುರಿಸಲಿದೆ.
ಇನ್ನೊಂದೆಡೆ, ಸ್ಪೇನ್ ಸತತ 37 ಪಂದ್ಯಗಳಲ್ಲಿ ದಾಖಲೆ (30 ಗೆಲುವು, 7 ಡ್ರಾ)ಯೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದು, 2010ರ ಬಳಿಕ ಎರಡನೇ ಬಾರಿ ವಿಶ್ವಕಪ್ ಗೆಲ್ಲುವ ಗುರಿಯೊಂದಿಗೆ ಅರ್ಜೆಂಟೀನಾವನ್ನು ಎದುರಿಸಲಿದೆ.