ಏಕಾಂಗಿ ಭಾವ ಕಾಡುತ್ತಿದೆಯಾ? ಹಾಗಿದ್ದರೆ ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್ ಮಾಡ್ತಾ ಇರಿ ಅಂತಾರೆ ಸಂಶೋಧಕರು. ಹೌದು. ಪದೇ ಪದೇ ಫೇಸ್‌ಬುಕ್ ಸ್ಟೇಟಸ್ ಅಪ್‌ಡೇಟ್ ಮಾಡುತ್ತಿದ್ದರೆ ಏಕಾಂಗಿ ಭಾವ ಕಡಿಮೆಯಾಗುತ್ತದಂತೆ. ಅಮೆರಿಕದ ಕಾಲೇಜು ವಿದ್ಯಾರ್ಥಿಗಳ ಮೇಲೆ ನಡೆಸಿದ ಅಧ್ಯಯನವು ಇದನ್ನು ದೃಢೀಕರಿಸಿದೆ. ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಫೋಟೋ, ವಿಚಾರಗಳನ್ನು ಯಾರೂ ಲೈಕ್ ಮಾಡದೇ ಹೋದರೂ ಎಲ್ಲರೊಂದಿಗೆ ಸಂಪರ್ಕದಲ್ಲಿದ್ದೇವೆ ಎನ್ನುವ ಭಾವನೆ ಬೆಳೆಯುತ್ತದೆ. ಇದು ಯುವಜನರಲ್ಲಿ ಏಕಾಂಗಿ ಭಾವವನ್ನು ನಿಧಾನವಾಗಿ ಕಡಿಮೆ ಮಾಡುತ್ತದೆ. ಹಾಗಂತ ಇಡೀ ದಿನ ಫೇಸ್‌ಬುಕ್‌ನಲ್ಲೇ ಮುಳುಗಿಹೋದರೆ... ಬಹುತೇಕ ವಿದ್ಯಾರ್ಥಿಗಳ ವಿಚಾರದಲ್ಲಿ ಆಗುತ್ತಿರುವುದು ಇದೇ. ಫೇಸ್‌ಬುಕ್‌ನಲ್ಲಿ ಸಂಪೂರ್ಣ ಮುಳುಗಿ ಹೋಗುವ ಅನೇಕ ವಿದ್ಯಾರ್ಥಿಗಳು ಎಲ್ಲರೂ ಇದ್ದರೂ ಏಕಾಂಗಿಯಾಗಿ ಬಿಡುತ್ತಾರೆ. ಅತಿಯಾದರೆ ಅಮೃತವೂ ವಿಷ ಎನ್ನುವ ವಿಚಾರ ನೆನಪಿರಲಿ.