ಕಾಲೇಜು ದಿನಗಳೇ ಹಾಗೆ. ಆ ದಿನಗಳನ್ನು ನೆಪಿಸಿಕೊಂಡಾಗಲೆಲ್ಲ ಅಧ್ಯಾಪಕರು, ಲೈಬ್ರೆರಿ, ಬುಕ್ಸ್, ಓದು, ಅಸೈನ್ಮೆಂಟ್, ಗೆಳೆಯರು, ತುಂಟಾಟ, ಕೀಟಲೆಗಳು... ಹೀಗೆ ಏನೇನೆಲ್ಲಾ ನೆನಪಿಗೆ ಬರುತ್ತದೆ ಅಲ್ವಾ...? ಕಳೆದು ಹೋದ ಆ ದಿನಗಳನ್ನು ನೆನಪಿಸಿಕೊಳ್ಳುವ ಖುಷಿಯೇ ಬೇರೆ. ಮನೆಯ ಗೋಡೆಗೆ ನೇತು ಹಾಕಿರುವ ಫೋಟೋಗ್ರಾಫ್, ಕಪಾಟಿನಲ್ಲಿ ಬೆಚ್ಚಗೆ ಕೂತಿರುವ ಆಟೋಗ್ರಾಫ್ ಇವೆರಡನ್ನು ನೋಡಿದರಂತೂ ಆ ದಿನಗಳ ನೆನಪಿನ ಬುತ್ತಿ ತನ್ನಿಂತಾನೆ ಬಿಚ್ಚಿಕೊಳ್ಳುತ್ತದೆ.
ಹೀಗೆ ಬಿಡುವಿದ್ದಾಗ ಮೊನ್ನೆ ನನ್ನ ಕಾಲೇಜಿನ ಕೊನೆಯ ದಿನದ ಫೋಟೋಗ್ರಾಫ್ವೊಂದನ್ನು ನೋಡುತ್ತಿದ್ದೆ. ಹಳೆಯ ನೆನಪು ಅದೆಷ್ಟು ಬೇಗ ಬಿಚ್ಚಿಕೊಂಡಿತು ಅನ್ನುವುದು ನನಗೇ ಗೊತ್ತಾಗಲಿಲ್ಲ. ನನ್ನ ದೇಹ ಮನೆಯಲ್ಲಿದ್ದರೂ ಮನಸ್ಸು ಮಾತ್ರ ಕಾಲೇಜು ಕಾರಿಡಾರಿನಲ್ಲಿತ್ತು. ಈ ವೇಳೆ ತಕ್ಷಣಕ್ಕೆ ಮರೆಯಲಾಗದ ಹಳೆಯ ಘಟನೆಯೊಂದು ನೆನಪಾಯ್ತು. ಆವತ್ತು ಕಾಲೇಜೊಂದರಲ್ಲಿ ಯಾವುದೋ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಸ್ನೇಹಿತೆಯೊಬ್ಬಳು ಬಂದು ದಿನೇಶ ನೀನೇ ಕಾರ್ಯಕ್ರಮದ ಸಮಾರೋಪ ಮಾಡಬೇಕು ಎಂದು ಒತ್ತಾಯಿಸಿದಳು. ನನಗೋ ಒಪ್ಪಲಾ, ಬೇಡವಾ ಎನ್ನುವ ಗೊಂದಲ... ಆಗ ಇತರೆ ಗೆಳೆಯರೆಲ್ಲ ಸೇರಿ ನೀನೇ ಸಮಾರೋಪ ಮಾಡಬೇಕು ಕಣೋ ಎಂದು ಪಟ್ಟು ಹಿಡಿದು ಕೂತರು. ಧೈರ್ಯ ತುಂಬಿದರು. ಕೊನೆಗೆ ಗೆಳೆಯರ ಒತ್ತಾಯಕ್ಕೆ ಒಲ್ಲದ ಮನಸ್ಸನಿಂದ ಒಪ್ಪಿಕೊಂಡೆ. ಆದರೆ, ನಾನು ಒಂದು ದಿನವೂ ವೇದಿಕೆ ಹತ್ತಿದವನಲ್ಲ. ಹಾಗಾಗಿ ಮನಸ್ಸಿನ ಮೂಲೆಯಲ್ಲಿ ಏನೋ ಅವ್ಯಕ್ತ ಭಯ. ಕಾರ್ಯಕ್ರಮ ಪ್ರಾರಂಭವಾಯಿತು. ನನ್ನ ಎದೆಬಡಿತ ಜೋರಾಗತೊಡಗಿತು. ಕೊನೆಗೆ ಸಮಾರೋಪದ ಸರದಿ ಬಂತು. ಎಲ್ಲಿತ್ತೋ ಧೈರ್ಯ ವೇದಿಕೆ ಹತ್ತಿ ಮೈಕ್ ಎದುರಿಗೆ ನಿಂತು ನನಗೆ ಕೊಟ್ಟ ಕೆಲಸ ಯಶಸ್ವಿಯಾಗಿ ಮುಗಿಸಿದೆ. ವೇದಿಕೆಯಿಂದ ಇಳಿದು ಬರುವ ಹೊತ್ತಿಗೆ ಮೈ ಬೆವತು ಹೋಗಿತ್ತು. ಆ ಕ್ಷಣವನ್ನು ನೆನಪಿಸಿಕೊಂಡರೆ ಈಗಲೂ ನಗು, ಖುಷಿ ಎರಡೂ ಆಗುತ್ತದೆ. ಆ ಕ್ಷಣದಲ್ಲಿ ಧೈರ್ಯ ತುಂಬಿದ ಸ್ನೇಹಿತರ ಬಗ್ಗೆ ಹೆಮ್ಮೆಯೂ ಆಗುತ್ತದೆ.
- ದಿನೇಶ್ ರಾ.ರಾ, ದನಗನಹಳ್ಳಿ