ಕೂಲಿಗಾಗಿ 'ಸೇವ್ ನರೇಗಾ' ಹೋರಾಟ!
ಮಲ್ಲಿಕಾರ್ಜುನ ಸಿದ್ದಣ್ಣವರ
ಬಾಗಲಕೋಟೆ: ಬಡವರ ಕೈಗೆ ಕೂಲಿ ನೀಡಿ ಅವರನ್ನು ಸ್ವಾವಲಂಬಿ ಮಾಡುವ 'ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ' (ನರೇಗಾ) ಯಾವುದೇ ಕಾರಣಕ್ಕೂ ನಿಂತು ಹೋಗಬಾರದು ಎನ್ನುವ ಕಳಕಳಿಯಿಂದ ಕೆಲವು ಸಾಮಾಜಿಕ ಕಾರ್ಯಕರ್ತರು ಸೇರಿಕೊಂಡು 'ಸೇವ್ ನರೇಗಾ' ಅಭಿಯಾನ ಆರಂಭಿಸಿದ್ದಾರೆ.
ಹೋರಾಟದ ಮುಂಚೂಣಿಯಲ್ಲಿ ದೆಹಲಿಯ ಅರುಣರಾಯ ನಿಖಿಂಡೆ, ಬಿಹಾರದ ಅಭಯಕುಮಾರ, ಕಾಸರಗೋಡಿನ ಸ್ವರ್ಣಾ ಭಟ್ ಇದ್ದಾರೆ. ಹೋರಾಟ ಸಮಿತಿಯಲ್ಲಿ ಮಾತ್ರ ಜಾಬ್ ಕಾರ್ಡ್ (ಕೂಲಿ ಕಾರ್ಮಿಕರ ಗುರುತಿನ ಚೀಟಿ) ಹೊಂದಿದ ಬಡವರೇ ಇದ್ದು, ತಮ್ಮ ಉದ್ಯೋಗ ಹಕ್ಕಿಗಾಗಿ ಬೀದಿಗಿಳಿಯುತ್ತಿದ್ದಾರೆ. ಇದಕ್ಕಾಗಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.
ಸೇವ್ ನರೇಗಾ ಹೋರಾಟದ ಅಸಲಿ ಆತಂಕ ಎಂದರೆ ಇಷ್ಟರಲ್ಲೇ ಜಾರಿಯಾಗಲಿರುವ ಆಹಾರ ಭದ್ರತೆ (ದೇಶದ ಶೇ.90ರಷ್ಟು ಕುಟುಂಬಗಳಿಗೆ ಬೇಳೆ, ಅಕ್ಕಿ, ಗೋದಿ ನೀಡುವ ಯೋಜನೆ)ಗೆ ಹಣ ಹೊಂದಿಸಲು ಕೇಂದ್ರ ಸರ್ಕಾರ ನರೇಗಾ ಬಲಿ ಕೊಡಲಿದೆ ಎನ್ನುವ ಸಂಶಯ ಅರುಣರಾಯ್, ಅಭಯಕುಮಾರ, ಸ್ವರ್ಣಾ ಭಟ್ ಅವರನ್ನು ಈ ಗ್ರಾಮೀಣ ಬಡವರ ಬೆನ್ನಿಗೆ ನಿಲ್ಲುವಂತೆ ಮಾಡಿದೆ. ಅನುದಾನದ ಅಪವ್ಯಯ, ಯೋಜನೆಗಳಲ್ಲಿ ಭ್ರಷ್ಟಾಚಾರ ಬಹುತೇಕ ಇಲಾಖೆಗಳಲ್ಲಿ ಕೇಳಿ ಬರುತ್ತಿದ್ದರೂ ಕೇಂದ್ರ ಸರ್ಕಾರ ನರೇಗಾ ಕುರಿತು ಸಿಎಜಿ ವರದಿಗೆ ಕಿವಿ ಅಗಲಿಸಿರುವುದು ಈ ಹೋರಾಟಗಾರರನ್ನು ಕೆರಳಿಸಿದೆ.
ತನಿಖೆ ಮಾಡಿ: ಭ್ರಷ್ಟಾಚಾರ ಆಗಿದ್ದರೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ, ಅದು ಬಿಟ್ಟು ಉದ್ಯೋಗ ಹಕ್ಕಿನ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು, ಇದನ್ನು ಸರಿ ಮಾಡಲು ಸಾಧ್ಯವೇ ಇಲ್ಲ ಎನ್ನುವ ಅಪಸ್ವರ ಎತ್ತುವುದು ಬೇಡ. ಉದ್ಯೋಗವನ್ನು ಬಡವರ ಹಕ್ಕು ಎಂದು ಅದಕ್ಕೆ ಕಾನೂನಿನ ಸ್ವರೂಪ ನೀಡಿಯೂ ಅದರಿಂದ ಬಡವರನ್ನು ವಂಚಿತರನ್ನಾಗಿ ಮಾಡಬೇಡಿ ಎನ್ನುವುದು ಈ ಹೋರಾಟಗಾರರ ಹಕ್ಕೊತ್ತಾಯ.
ನರೇಗಾದಿಂದ ನಿರೀಕ್ಷಿತ ಜನಪ್ರಿಯತೆ ಬಾರದಿರುವುದರಿಂದ ಸ್ವತಃ ಕೇಂದ್ರ ಸರ್ಕಾರವೇ ನಿಂತು ನರೇಗಾ ಅನುದಾನ ಬಳಕೆಯಲ್ಲಿನ ಭ್ರಷ್ಟಾಚಾರವನ್ನು ದೊಡ್ಡ ದನಿಯಲ್ಲಿ ಚರ್ಚಿಸುತ್ತಿದೆ. ಕಳೆದ ಎರಡು ವರ್ಷದಿಂದ ನಡೆದ ಬಹುತೇಕ ಅಧಿವೇಶನಗಳಲ್ಲಿ ಈ ನರೇಗಾ ಹಗರಣಗಳು ಧ್ವನಿಸುತ್ತಿರುವ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎನ್ನುವ ಶಂಕೆಯೂ ಇವರದು.
ನರೇಗಾ ಉದ್ಯೋಗದ ಹಕ್ಕು: ಅದಾಗಲೇ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ರಾಯಚೂರು, ಬಿಜಾಪುರ ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ತಾಲೂಕು ಹೋರಾಟ ಸಮಿತಿಗಳು ಹುಟ್ಟಿಕೊಂಡು ಬಡವರು ಹೆಚ್ಚಾಗಿ ಇರುವ ಲಂಬಾಣಿ ತಾಂಡಾ, ಕುಗ್ರಾಮಗಳು, ಹಟ್ಟಿ, ದೊಡ್ಡಿಗಳಿಗೆ ಈ ಸಮಿತಿಯ ಕಾರ್ಯಕರ್ತರು ಹೋಗಿ ಖಾತ್ರಿ ಕಾರ್ಡು ಹೊಂದಿರುವವರಿಗೆ ಅವರ ಉದ್ಯೋಗ ಹಕ್ಕಿನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದು ದಿನದಿಂದ ದಿನಕ್ಕೆ ವಿಸ್ತಾರವಾಗುತ್ತ ಹೊರಟಿದೆ. ಕೆಲಸ ಇಲ್ಲದ ಎಲ್ಲ ಬಡವರು ಮೊದಲು ಜಾಬ್ ಕಾರ್ಡ್ ಮಾಡಿಸಿಕೊಳ್ಳುವಂತೆ ತಿಳಿವಳಿಕೆ ನೀಡುವುದು ಇವರ ಆದ್ಯತೆಯ ಕೆಲಸವಾಗಿದೆ.
ಬಳಿಕ ಇಂಥ 50 ಕುಟುಂಬಗಳನ್ನು ಸೇರಿಸಿ ಒಂದು ಗುಂಪು ರಚಿಸಲಾಗುತ್ತದೆ. ಈ ಗುಂಪಿನ ಕೆಲವು ಸದಸ್ಯರು ತಮ್ಮ ವ್ಯಾಪ್ತಿಗೆ ಬರುವ ಗ್ರಾಪಂಗೆ ಹೋಗಿ ಉದ್ಯೋಗ ನೀಡುವಂತೆ ಮನವಿ ಮಾಡುವುದು. ತಕ್ಷಣಕ್ಕೆ ಕೆಲಸ ನೀಡಲು ಸಾಧ್ಯವಾಗದಿದ್ದರೆ ಉದ್ಯೋಗ ನೀಡುವವರೆಗೆ ಖಾಲಿ ಉಳಿಯುವ ದಿನಗಳಲ್ಲಿ ಸಂಬಳದ ಕಾಲುಭಾಗವನ್ನು ನಿರುದ್ಯೋಗ ಭತ್ಯೆಯನ್ನಾಗಿ ಭರಿಸುವುದು. ವರ್ಷದಲ್ಲಿ 100 ದಿನ ಕೆಲಸ ನೀಡಲು ಸಾಧ್ಯವಾಗದಿದ್ದರೆ 50 ದಿನಗಳ ನಿರುದ್ಯೋಗ ಭತ್ಯೆ ನೀಡುವುದು ಕಡ್ಡಾಯ. ನಾವು ಮಾಡಿದ ಕೆಲಸಕ್ಕಾಗಿ ಅಂದಿನ ಸಂಬಳವನ್ನು ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿ. ಪ್ರತಿ ವರ್ಷ 100 ದಿನಗಳ ಕೂಲಿ ಪಡೆಯುವುದು ನಮ್ಮ ಹಕ್ಕು. ಜಾಬ್ ಕಾರ್ಡ್ಗಳನ್ನು ಯಾರದೋ ಕೈಗೆ ಕೊಟ್ಟು ಪುಡಿಗಾಸಿಗೆ ಹೆಬ್ಬೆಟ್ಟು ಒತ್ತುವುದಿಲ್ಲ ಎನ್ನುವ ಶಪಥವನ್ನು ಆ ಬಡವರಲ್ಲಿ ಮಾಡಿಸಲಾಗುತ್ತಿದೆ.
ಬಡವರ ಕೈಗೆ ಕೆಲಸ ನೀಡುವ ಕಾನೂನು ಇದು. ಉದ್ಯೋಗ ಪಡೆಯುವುದು ಬಡವರ ಹಕ್ಕು ಎಂದು ಹೇಳಿದ ಬಳಿಕ ಆ ಬಗ್ಗೆ ಅಪಸ್ವರವೇಕೆ? ತಪ್ಪು ಇದ್ದಲ್ಲಿ ತನಿಖೆ, ಶಿಕ್ಷೆ ಇದ್ದೇ ಇದೆ. ಮೊದಲು ಈ ಹಕ್ಕಿನ ಬಗ್ಗೆ ಪಂಚಾಯಿತಿ ಮತ್ತು ಗ್ರಾಮೀಣಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ತಿಳಿವಳಿಕೆ ನೀಡಿ ಸೂಕ್ತ ಸಮಯದಲ್ಲಿ ಕ್ರಿಯಾ ಯೋಜನೆ ರಚಿಸಿ, ಬಡವರು ಕೇಳಿದಾಗಲೆಲ್ಲ ಅವರ ಕೈಗೆ ಕೂಲಿ ನೀಡುವ ವ್ಯವಸ್ಥೆಯಾಗಬೇಕು.
ಟಿ ಸ್ವರ್ಣಾ ಭಟ್, ಸೇವ್ ನರೇಗಾ ಹೋರಾಟಗಾರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

