'ವಸತಿ'ಗೆ ಕೃಷಿ ಭೂಮಿ: ರೈತರ ತೀವ್ರ ವಿರೋಧ
ಕ.ಪ್ರ.ವಾರ್ತೆ ಬೆಳಗಾವಿ ಆ. 6
ಇಲ್ಲಿಯ ಸುವರ್ಣ ವಿಧಾನಸೌಧ ಸುತ್ತಮುತ್ತಲಿನ ಕೃಷಿ ಭೂಮಿ ಕೋಟ್ಯಂತರ ರುಪಾಯಿ ಬೆಲೆ ಬಾಳುವಂಥದ್ದು. ಆದರೆ, ಕರ್ನಾಟಕ ಗೃಹ ಮಂಡಳಿ ವಸತಿ ಯೋಜನೆಗಾಗಿ ಕೋಟ್ಯಂತರ ರುಪಾಯಿ ಮೌಲ್ಯದ ಕೃಷಿ ಭೂಮಿಗೆ ಕಡಿಮೆ ದರ ನಿಗದಿಪಡಿಸಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ!
ಸುವರ್ಣ ವಿಧಾನಸೌಧದ ಕೂಗಳತೆ ದೂರದಲ್ಲಿರುವ ಕೆ.ಕೆ. ಕೊಪ್ಪ, ಕಮಕಾರಟ್ಟಿ ಮತ್ತು ಕೊಂಡಸಕೊಪ್ಪ ಗ್ರಾಮಗಳ ರೈತರು ಸ್ವಾಧೀನವನ್ನು ವಿರೋಧಿಸುತ್ತಿದ್ದರೂ, ಒಟ್ಟು 750 ಎಕರೆ ಕೃಷಿ ಭೂಮಿ ಮೇಲೆ ಕೆಎಚ್ಬಿ ವಕ್ರದೃಷ್ಟಿ ಬೀರಿದೆ.
ಈಗಾಗಲೇ ಸುವರ್ಣ ವಿಧಾನಸೌಧ ಕಟ್ಟಡ ಹಾಗೂ ಪುಣಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರ ಅಗಲೀಕರಣ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಲ್ಲಿ ಈ ಭಾಗದ ರೈತರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡಿದ್ದಾರೆ. ಅಲ್ಲದೇ, ರಿಂಗ್ ರೋಡ್ ಯೋಜನೆಗಾಗಿ ಇನ್ನೂ ಅನೇಕರು ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕೃಷಿ ಹೊರತು ಬೇರೆ ಯಾವುದೇ ಉದ್ಯೋಗವೂ ನಮಗೆ ಗೊತ್ತಿಲ್ಲ. ಸಿಗುವ ಪರಿಹಾರಧನದಿಂದ ಬೇರೆಡೆಗೆ ಕೃಷಿ ಜಮೀನನ್ನು ಖರೀದಿಸಿಯೇ ಉಪಜೀವನ ಸಾಗಿಸಬೇಕು. ಅತ್ಯಲ್ಪ ಪರಿಹಾರದಿಂದ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಎಕರೆಗೆ ಕನಿಷ್ಠ 14 ಲಕ್ಷ ಪರಿಹಾರ ನೀಡಬೇಕೆಂಬುದು ರೈತರ ಆಗ್ರಹ. ಭೂ ಖರೀದಿ ಸಮಿತಿಯ ಅಧ್ಯಕ್ಷರು ಪ್ರತಿ ಎಕರೆಗೆ 10 ಲಕ್ಷ ನಿಗದಿಪಡಿಸಿದ್ದು, ರೈತರು ಇದಕ್ಕೆ ಒಪ್ಪಿರಲಿಲ್ಲ. ಕನಿಷ್ಠ 12 ಲಕ್ಷ ಪರಿಹಾರ ನೀಡಿ ಎಂದು ಪಟ್ಟು ಹಿಡಿದರು. ಕೊನೆಗೂ 10.80 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಲು ನಿರ್ಧರಿಸಿ, ರೈತರ ಮನವೊಲಿಸಲಾಗಿತ್ತು. ಇದು 27-4-2011ರಲ್ಲಿ ನಿಗದಿ ಪಡಿಸಿದ ದರ. ಈಗ ಭೂಮಿ ಬೆಲೆ ಹೆಚ್ಚಳವಾಗಿದ್ದು, ಪರಿಹಾರಧನವನ್ನು ಹೆಚ್ಚಿಸಬೇಕೆಂಬುದು ರೈತರ ಬೇಡಿಕೆ.
ರೈತರ ವಿರೋಧದಿಂದ ಭೂಸ್ವಾಧೀನ ಕೈಬಿಡಲಾಗಿತ್ತು: ಬೆಳಗಾವಿ ತಾಲೂಕಿನ ಕೆ.ಕೆ. ಕೊಪ್ಪ ಮತ್ತಿತರೆಡೆ ಸುಮಾರು 750 ಎಕರೆ ಜಮೀನು ಖರೀದಿಸಲು ಉದ್ದೇಶಿಸಿದ್ದ ಕೆಎಚ್ಬಿ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಮಂಜೂರಾತಿಯನ್ನು ಪಡೆದುಕೊಂಡಿತ್ತು.
ಆದರೆ, ಕೆಎಚ್ಬಿಯ 225 ವಸತಿ ಯೋಜನೆಗಾಗಿ ಈ ಮೂರು ಗ್ರಾಮಗಳಲ್ಲಿನ ವಿವಿಧ ಸರ್ವೆ ನಂಬರ್ಗಳ ಜಮೀನುಗಳನ್ನು ಭೂ ಸ್ವಾಧೀನಕ್ಕೆ ಒಳಪಡಿಸಲು ಕ್ರಮ ಕೈಗೊಳ್ಳಲಾಯಿತು. ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಅಂದಿನ ವಸತಿ ಸಚಿವ ವಿ.ಸೋಮಣ್ಣ ಕೈಬಿಡಲಾಗಿದೆ ಎಂದು ಘೋಷಿಸಿದ್ದರು. ಈಗ ಕೆಎಚ್ಬಿ ರೈತರ ಜಮೀನನ್ನು ನೇರ ಖರೀದಿಗೆ ಮುಂದಾಗಿದೆ. ಅಲ್ಲದೇ, ನೇರ ಖರೀದಿ ಪ್ರಸ್ತಾವನೆಗೂ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದಿದೆ.
ಜಮೀನು ನೇರ ಖರೀದಿ: ವಸತಿ ಯೋಜನೆಗಾಗಿ ಕೆ.ಕೆ.ಕೊಪ್ಪ, ಕಮಕಾರಟ್ಟಿ ಮತ್ತು ಕೊಂಡಸಕೊಪ್ಪ ಗ್ರಾಮಗಳ ಜಮೀನನ್ನು ನೇರವಾಗಿ ಖರೀದಿಸಲು ಉದ್ದೇಶಿಸಲಾಗಿದೆ. ಆದರೆ, ಹಲವು ರೈತರು ತಮ್ಮ ಜಮೀನುಗಳನ್ನು ಮಂಡಳಿಗೆ ನೀಡಲು ನಿರಾಕರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಮೀನು ಕಾಂಪ್ಯಾಕ್ಟಾಗಿ ಒಟ್ಟುಗೂಡಿಸುವ ಉದ್ದೇಶದಿಂದ ಭೂಸ್ವಾಧೀನ ಕಾಯ್ದೆಯಡಿ ಈ ಭೂಮಿಯನ್ನು ಸ್ವಾಧೀನ ಪಡೆಯಲು ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರೈತರು ನಿಗದಿತ ದರದಲ್ಲಿ ತಮ್ಮ ಭೂಮಿಯನ್ನು ಮಾರಲು ಸಹಮತ ಇದ್ದರೆ, ಮಂಡಳಿಯು ನಿಯಮಾನುಸಾರ ಜಮೀನಿನ ಮಾಲೀಕರಿಂದ ನೇರವಾಗಿ ಭೂಮಿ ಖರೀದಿಸಲು ಕೆಎಚ್ಬಿ ಮುಂದಾಗಿದೆ ಎನ್ನುತ್ತಾರೆ ಕೆಎಚ್ಬಿ ಸಹಾಯಕ ಕಾರ್ಯಪಾಲಕ ಅಭಿಯಂತರರು.
ಈ ಯೋಜನೆ ವಿಳಂಬವಾದಷ್ಟು ರೈತರಿಗೆ ಹಾನಿಯಾಗುತ್ತಿದ್ದು, ರಿಯಲ್ ಎಸ್ಟೇಟ್ ಉದ್ಯಮದಾರರಿಗೆ ಲಾಭವಾಗುತ್ತದೆ. ಎರಡು ವರ್ಷಗಳ ಹಿಂದೆ ನಿಗದಿಗೊಳಿಸಿದ ದರವನ್ನು ಪರಿಷ್ಕರಿಸಬೇಕು.
- ಐ.ಎಸ್. ಪಾಟೀಲ್, ರೈತ ಮುಖಂಡ
ಶ್ರೀಶೈಲ ಮಠದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

