ಪ್ರಧಾನ ಸುದ್ದಿ

ಇದು ಪಡ್ಡೆಗಳ ಅಡ್ಡ; ತೋಡಿ ಖೆಡ್ಡ

Published On :

ದೇವರಾಜು ಕಪ್ಪಸೋಗೆ
ಕ.ಪ್ರ.ವಾರ್ತೆ    ಚಾಮರಾಜನಗರ    ಆ.10
ಜನಪ್ರತಿನಿಧಿಗಳು, ಅಧಿಕಾರಿಗಳು ಕಾಳಜಿ ವಹಿಸಿದ್ದರೆ ಇದೊಂದು ಶಿಕ್ಷಣ ಕಾಶಿಯಾಗಬೇಕಿತ್ತು. ಆದರೆ, ಹತ್ತಾರು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ಪ್ರದೇಶ ಪುಂಡ ಪೋಕರಿಗಳ ತಾಣವಾಗಿದೆ.  
ಜನಪ್ರತಿನಿಧಿಗಳು ನಿತ್ಯ ಭೇಟಿ ನೀಡುವ ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲೇ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೇರಿದಂತೆ ಶಿಕ್ಷಣ ಸಂಸ್ಥೆಗಳನ್ನೇ ಹೊಂದಿರುವ ಪ್ರದೇಶದಲ್ಲಿರುವ ಬಹುತೇಕ ಸರ್ಕಾರಿ ಕಚೇರಿ, ಶಾಲಾ, ಕಾಲೇಜುಗಳ ಕೊಠಡಿಗಳ ಗ್ಲಾಸ್ಗಳು ಪುಂಡರ ದಾಳಿಗೆ ಪುಡಿ ಪುಡಿಯಾಗಿವೆ. ಈ ಪ್ರದೇಶ ಪುಂಡ ಪೋಕರಿಗಳ ತಾಣವಾಗಿದ್ದರೂ, ಜನಪ್ರತಿನಿಧಿಗಳು ಈ ಶಿಕ್ಷಣ ಸಮುಚ್ಚಯಕ್ಕೆ ಭೇಟಿ ನೀಡಿ ಮಕ್ಕಳಿಗೆ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಮುಂದಾಗಿಲ್ಲ.
ಶಾಲೆ ನಡೆಯುವ ಅವಧಿಯಲ್ಲೇ ಇಲ್ಲಿನ ಮೈದಾನಗಳಲ್ಲಿ ಹೊರಗಿನವರು ಪ್ರವೇಶ ಮಾಡಿ ಕ್ರಿಕೆಟ್, ಚಿಣ್ಣಿ ದಾಂಡು, ಲಗೋರಿ ಆಡುತ್ತಾರೆ. ಶಾಲಾ ಮಕ್ಕಳು ಆಟದಲ್ಲಿ ನಿರತರಾಗುವ ವೇಳೆಯಲ್ಲಿ ವೇಗವಾಗಿ ಅತ್ತಿಂದಿತ್ತ ಸ್ಕೂಟರ್ ಓಡಿಸಿ ಸ್ಕೂಟರ್ ಸಾಹಸ ಪ್ರದರ್ಶಿಸಿ ಮಕ್ಕಳ ಆಟಕ್ಕೆ ಭಂಗ ತರುವುದು ಮಾಮೂಲಿಯಾಗಿದೆ.
ಮಕ್ಕಳು ಆಟವಾಡುವ ಸಂದರ್ಭದಲ್ಲಿ, ಶಾಲೆ ಬಿಟ್ಟು ಮನೆಗೆ ತೆರಳುವ ಸಂದರ್ಭದಲ್ಲಿ ಕೀಟಲೆ ಮಾಡುವುದು. ಇದೇ ಆವರಣದಲ್ಲಿ ಕುಳಿತು ಬೀಡಿ, ಸಿಗರೇಟು ಸೇವನೆ ಮಾಡುತ್ತಾ, ಜೋರಾಗಿ ಕಿರಿಚುತ್ತಾ ದಿನವಿಡಿ ಪಡ್ಡೆಗಳ ಪಡೆ ಇಲ್ಲಿ ಕಾಲಹರಣ ಮಾಡುತ್ತಿದೆ. ಕೆಲವರು ಸಿರಂಜ್ನಲ್ಲಿ ಪೆಟ್ರೋಲ್, ಬಣ್ಣ ತುಂಬಿಕೊಂಡು ಮಕ್ಕಳಿಗೆ ಹಾರಿಸಿದ ಉದಾಹರಣೆಗಳಿದ್ದರೂ ಪೊಲೀಸರು ಇವರ ಪುಂಡತನಕ್ಕೆ ಕಡಿವಾಣ ಹಾಕವ ಧೈರ್ಯ ಮಾಡಿಲ್ಲ.  ವಿವಿಧ ಸಂಸ್ಥೆಗಳ ಮುಖ್ಯಸ್ಥರೂ ನಮಗ್ಯಾಕೆ ಬೇಕು ಇವರ ಉಸಾಬರಿ ಎಂದು ಸುಮ್ಮನಾಗಿದ್ದಾರೆ. ಇಲ್ಲಿನ ಸಮಸ್ಯೆಗಳಿಗೆ ಗಂಭೀರವಾಗಿ ತಲೆ ಕೆಡಿಸಿಕೊಳ್ಳದ ಪರಿಣಾಮ ಸಮಸ್ಯೆಗಳು ಬಿಗಡಾಯಿಸಿದೆ.
ಭಯದ ವಾತಾವರಣ; ಇದೀಗ ಈ ಆವರಣದಲ್ಲೇ ಕಸ್ತೂರು ಬಾ ವಿದ್ಯಾರ್ಥಿನಿ ನಿಲಯ ತೆರೆಯಲಾಗಿದ್ದು, ಇತ್ತೀಚಿಗೆ ಕೆಲವರು ಹಾಸ್ಟೆಲ್ನ ಅಡುಗೆ ಮನೆ, ಕೊಠಡಿಗಳ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಮೋಟಾರ್ ಸುಟ್ಟು ಹಾಕಿದ್ದು, ಇದೀಗ ವಿದ್ಯಾರ್ಥಿನಿಯರು ಇಲ್ಲಿ ತಂಗಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಇದರಿಂದ  ಮಕ್ಕಳನ್ನು ಹಾಸ್ಟೆಲ್ನಲ್ಲಿ ಉಳಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ಒಂದೆರಡು ದಿನ ಗಸ್ತು ನಡೆಸಿ, ಸುಮ್ಮನಾಗಿದ್ದಾರೆ. ಇದುವರೆಗೆ ಮಕ್ಕಳ ಶೈಕ್ಷಣಿಕ ವಾತಾವರಣಕ್ಕೆ ಭಂಗ ಉಂಟು ಮಾಡುವ ಒಬ್ಬನನ್ನು ಸಹ ಬಂಧಿಸಲು ಮುಂದಾಗದಿರುವುದು ಪೊಲೀಸ್ ವ್ಯವಸ್ಥೆಯನ್ನೇ ಅಣಕಿಸುವಂತಿದೆ.  


ಮುಂಭಾಗವೇ ಲಾರಿ ಸ್ಟ್ಯಾಂಡ್
ಹಲವು ಸರ್ಕಾರಿ ಶಿಕ್ಷಣ ಸಮುಚ್ಚಯದ ಕಟ್ಟಡಗಳಿಗೆ ಹೊಂದಿಕೊಂಡಂತೆ ಮುಂಭಾಗದಲ್ಲೇ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಲಾರಿ ಸ್ಟ್ಯಾಂಡ್ ಇದ್ದು, ಇದರಿಂದ ಎಷ್ಟೋ ಬಾರಿ ವಾಹನಗಳು ಕಾಂಪೌಂಡ್ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಜಖಂಗೊಂಡಿದೆ. ಇದಕ್ಕೆ ಸಾಕ್ಷಿ ಎಂಬಂತೆ ಹಲವು ಕಡೆ ಕಾಂಪೌಂಡ್ ಬಿರುಕು ಬಿಟ್ಟಿದೆ. ಜೊತೆಗೆ ಲಾರಿಗಳನ್ನು ಸಣ್ಣ ಪುಟ್ಟ ರಿಪೇರಿ ಮತ್ತು ಸ್ವಚ್ಛಗೊಳಿಸುತ್ತಿರುವುದರಿಂದ ಮತ್ತು ಈ ಕಾಂಪೌಂಡ್ ಬಳಿ ಮೂರ್ತ ವಿಸರ್ಜನೆ ಮಾಡುವುದರಿಂದ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ. ಮಾಂಸದ ತ್ಯಾಜ್ಯ ಸೇರಿದಂತೆ ಇತರೆ ತ್ಯಾಜ್ಯವನ್ನು ಶಾಲಾ ಕಾಂಪೌಂಡ್ ಒಳಗಡೆ ಆಗಾಗ್ಗೆ ಸುರಿಯಲಾಗುತ್ತದೆ. ಇದರಿಂದ ಆ ಪ್ರದೇಶ ಗಬ್ಬೆದ್ದು ನಾರುತ್ತಿದೆ. ನಾಲ್ಕಾರು ಕಡೆ ಕಾಂಪೌಂಡ್ ಒಡೆದು, ಓಡಾಡಲು ದಾರಿ ಮಾಡಿಕೊಳ್ಳಲಾಗಿದೆ. ಕಾಂಪೌಂಡ್ ಒಂದು ಭಾಗ ಪೂರ್ಣಗೊಂಡಿಲ್ಲ. ಯಾರೋ ಖಾಸಗಿಯವರು ತಮ್ಮದೆಂದು ಕಲ್ಲು ನೆಟ್ಟುಕೊಂಡಿದ್ದಾರೆ. ಅದನ್ನು ಸಂಬಂಧಪಟ್ಟವರು ಬಂದು ಸರಿಪಡಿಸಿಲ್ಲ. ಇದರಿಂದಾಗಿ ಆ ಭಾಗ ಖಾಲಿ ಬಿದ್ದಿದ್ದು ಓಡಾಡುವವರಿಗೆ ದಾರಿಯಾಗಿದೆ. ಪುಂಡರಿಗೆ ಸ್ಕೂಟರ್ ರೇಸ್ ನಡೆಸುವ ರಸ್ತೆಯಾಗಿದೆ.  



ಒಂದೇ ಆವರಣ, ಹಲವು ಕಟ್ಟಡ
1. ಸರ್ಕಾರಿ ಪದವಿ ಪೂರ್ವ ಕಾಲೇಜು
2. ಸರ್ಕಾರಿ ಬಾಲಕಿಯರ ಪ್ರೌಢಶಾಲೆ
3. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
4. ಕ್ಷೇತ್ರ ಸಂಪನ್ಮೂಲ ಕೇಂದ್ರ ಕಟ್ಟಡ
5. ಜಿಲ್ಲಾ ಕೇಂದ್ರ ಗ್ರಂಥಾಲಯ
6. ಲೋಕ ವಯಸ್ಕರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಜಿಲ್ಲಾ ಲೋಕಶಿಕ್ಷಣ ಸಮಿತಿ
7. ಡಯಟ್ ಕಾಲೇಜು
8. ತಮಿಳು ಹಿರಿಯ ಪ್ರಾಥಮಿಕ ಶಾಲೆ
9. ಉರ್ದು ಹಿರಿಯ ಪ್ರಾಥಮಿಕ ಶಾಲೆ
10. ಸರ್ಕಾರಿ ಹಿರಿಯ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ
11. ಕಸ್ತೂರ ಬಾ ಗಾಂಧಿ ಬಾಲಕಿಯರ ವಸತಿ ನಿಲಯ
12. ಸರ್ಕಾರಿ ಆದರ್ಶ ವಿದ್ಯಾಲಯ
13. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ


ಕನ್ನಡಪ್ರಭ ಕಾಳಜಿ...
1. ಜನಪ್ರತಿನಿಧಿಗಳು ಶಿಕ್ಷಣ ಸಂಸ್ಥೆಗಳ ಸಮುಚ್ಚಯ ಅಭಿವೃದ್ಧಿಗೆ ಕಾಳಜಿ ವಹಿಸಬೇಕು.
2. ಹತ್ತಾರು ಎಕರೆ ಪ್ರದೇಶದಲ್ಲಿರುವ ಶಿಕ್ಷಣ ಸಂಸ್ಥೆ ಸುತ್ತಲೂ ಎತ್ತರವಾದ ಕಾಂಪೌಂಡ್ ನಿರ್ಮಾಣವಾಗಬೇಕು.
3. ಅಗತ್ಯವಿರುವ ಕಡೆ ಮಾತ್ರ ಗೇಟ್ಗಳನ್ನು ಅಳವಡಿಸಬೇಕು.
4. ಸಾರ್ವಜನಿಕರು, ಪುಂಡ- ಪೋಕರಿಗಳು ಅನಗತ್ಯವಾಗಿ ಪ್ರವೇಶಿಸುವುದನ್ನು ತಪ್ಪಿಸಬೇಕು.
5. ಪೊಲೀಸರು ನಿತ್ಯ ಹಲವಾರು ಸಲ ಗಸ್ತು ತಿರುಗುವ ಮೂಲಕ ಶಿಸ್ತು ಮೂಡಿಸಬೇಕು.
6. ಸರ್ಕಾರಿ ಅಸ್ತಿ ಪಾಸ್ತಿಗಳ ರಕ್ಷಣೆ ನಿಟ್ಟಿನಲ್ಲಿ ಕಾವಲು ಕಾಯಲು ಸಿಬ್ಬಂದಿ ನಿಯೋಜಿಸಬೇಕು.
8. ಮರ- ಗಿಡಗಳನ್ನು ನೆಟ್ಟು ಸುಂದರ ವಾತಾವರಣ ನಿರ್ಮಾಣ ಮಾಡಬೇಕು.
9. ಸಂಘ ಸಂಸ್ಥೆಗಳು ದತ್ತು ಪಡೆದು ಈ ಆವರಣವನ್ನು ಅಭಿವೃದ್ಧಿ ಪಡಿಸಬೇಕು.
10. ಲಾರಿ ಸ್ಟ್ಯಾಂಡ್ ಸ್ಥಳಾಂತರವಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.