ಮೀನು ಉತ್ಪನ್ನ ರಕ್ಷಣೆಗೆ ಗಾಮಾ ವಿಕಿರಣ ಬಳಕೆ
ಮಂಗಳೂರು: ಒಳನಾಡು ಮತ್ತು ಸಮುದ್ರ ಮೀನು ಉತ್ಪನ್ನಗಳನ್ನು ವಾಣಿಜ್ಯಕ್ಕೆ ಬಳಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿರುವಂತೆಯೇ ಅವುಗಳನ್ನು ದೀರ್ಘ ಸಮಯ ಕೆಡದಂತೆ ಶುದ್ಧವಾಗಿ ಉಳಿಸಲು ಮಾರ್ಗೋಪಾಯ ಕಂಡುಕೊಳ್ಳಲಾಗುತ್ತಿದೆ.
ಹಸಿ ಮೀನು ಸಹಿತ ಮೀನಿನ ಯಾವುದೇ ಉತ್ಪನ್ನ ತಯಾರಿಸಿ ಪ್ಯಾಕೆಟ್ ಮಾಡಿ ರಫ್ತು ಮಾಡಲು ಸಾಧ್ಯವಾಗುವಂತೆ ಅವುಗಳಿಗೆ ಸ್ವಲ್ಪ ಪ್ರಮಾಣದಲ್ಲಿ ಗಾಮಾ ವಿಕಿರಣ ಹಾಯಿಸಿ ಬಾಳ್ವಿಕೆ ಬರುವಂತೆ ಮಾಡಲು ಸಾಧ್ಯವಿದೆ ಎಂಬುದನ್ನು ಮಂಗಳೂರಿನ ಮೀನುಗಾರಿಕಾ ವಿದ್ಯಾಲಯದ ತಾಂತ್ರಿಕ ವಿಭಾಗ ಶ್ರುತಪಡಿಸಿದೆ. ಐಸಿಎಆರ್(ಇಂಡಿಯನ್ ಕೌನ್ಸಿಲ್ ಆಫ್ ಎಗ್ರಿಕಲ್ಚರ್ ರಿಸರ್ಚ್)ಆಶ್ರಯದಲ್ಲಿ ಗಾಮಾ ವಿಕಿರಣ ಅಭಿವೃದ್ಧಿಪಡಿಸುವಲ್ಲಿ ಯಶಸ್ಸು ಸಾಧಿಸಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಸಮುದ್ರ ಉತ್ಪನ್ನಗಳ ಮಾರುಕಟ್ಟೆ ಮೇಲೆ ಆಶಾದಾಯಕ ಬೆಳವಣಿಗೆಯಾಗಲಿದೆ.
ವಿವಿಯಲ್ಲಿ ಸಂಶೋಧನೆ ಕೇಂದ್ರ: ಮುಂಬೈನ ಬಿಆರ್‌ಎನ್‌ಎಸ್‌ನ ಕಾರ್ಟ್(ಸೆಂಟರ್ ಫಾರ್ ಎಪ್ಲಿಕೇಶನ್ ಆಫ್ ರೇಡಿಯೇಷನ್ ಅಂಡ್ ರೇಡಿಯೊ ಐಸೊಟೆಪ್ ಟೆಕ್ನಾಲಜಿ)ಕೇಂದ್ರ ಪ್ರಾರಂಭಗೊಂಡಿದೆ. ಈ ಕೇಂದ್ರದಲ್ಲಿ ಮೀನುಗಾರಿಕಾ ವಿದ್ಯಾಲಯದ ತಾಂತ್ರಿಕ ವಿಭಾಗ ಗಾಮಾ ವಿಕಿರಣ ಕುರಿತ ವಿಸ್ತೃತ ಸಂಶೋಧನೆ ನಡೆಸುತ್ತಿದೆ.
ಪದಾರ್ಥ ಕೆಡದಂತೆ ಈಗಾಗಲೇ ಗಾಮಾ ವಿಕಿರಣ ಹಾಯಿಸಲಾಗುತ್ತಿದೆ. ಇದನ್ನು ಪ್ಯಾಕಿಂಗ್‌ನಲ್ಲೂ ಮಾಡುತ್ತಾರೆ. ಆದರೆ ಮೀನು ಉತ್ಪನ್ನಗಳಿಗೆ ಗಾಮಾ ವಿಕಿರಣ ಸೋಕಿಲ್ಲ. ಗಾಮಾ ವಿಕಿರಣ ಬಳಸಿ ಒಂದು ತಿಂಗಳು ಪದಾರ್ಥವನ್ನು ಸಂರಕ್ಷಿಸಬಹುದು.
ಗಾಮಾ ವಿಕಿರಣವನ್ನು ಸ್ವಲ್ಪ ಪ್ರಮಾಣದಲ್ಲಿ ಹಾಯಿಸಲಾಗುತ್ತದೆ. ಇದರಿಂದ ಮಾನವ ಶರೀರಕ್ಕೆ ಯಾವುದೇ ಅಡ್ಡಪರಿಣಾಮ ಇಲ್ಲ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಈಗಾಗಲೇ ಗಾಮಾ ವಿಕರಣವನ್ನು ಬೆಳೆ ಹಾಳಾಗದಂತೆ ರಕ್ಷಿಸುವಲ್ಲಿ, ಹಾಲು, ಇತರೆ ಆಹಾರ ಉತ್ಪನ್ನಗಳಲ್ಲಿ ಬಳಸುತ್ತಿದ್ದಾರೆ ಎನ್ನುತ್ತಾರೆ ಡಾ.ಮಂಜ ನೈಕ್. ಸಂಶೋಧನೆಯ ಅಂತಿಮ ವರದಿಯನ್ನು ಐಸಿಎಆರ್‌ಗೆ ಸಲ್ಲಿಸಲಿದ್ದು, ನಂತರ ಮೀನು ಉತ್ಪನ್ನಗಳಿಗೆ ಗಾಮಾ ವಿಕಿರಣ ಬಳಕೆ ಕುರಿತಂತೆ ಕೇಂದ್ರ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎನ್ನುತ್ತಾರೆ.
ಏನಿದು ಗಾಮಾ ವಿಕಿರಣ ತಂತ್ರ?
ಗಾಮಾ ವಿಕರಣ ಅಂದರೆ ವಿಕಿರಣಗಳಲ್ಲಿ ಕಡಿಮೆ ಡೋಸ್ ಇರುವಂಥದ್ದು. ಎಕ್ಸರೇ, ಎಲೆಕ್ಟ್ರಾನ್ ಭೀಮ್‌ಗಳಲ್ಲಿ ಬಳಕೆಯಾಗುವುದಕ್ಕಿಂತ ಅತ್ಯಂತ ಕಡಿಮೆ, ಅಪಾಯಕಾರಿಯಲ್ಲದ್ದು. ಆಹಾರ ವಸ್ತುಗಳಿಗೆ ಗಾಮಾ ವಿಕರಣ ಬಳಸುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ ಎಚ್‌ಒ)ಅನುಮತಿ ನೀಡಿದೆ. 1980ರ ದಶಕದಲ್ಲಿ ಮೀನು ಉತ್ಪನ್ನಕ್ಕೆ ಗಾಮಾ ಕಿರಣ ಬಳಸುವ ಬಗ್ಗೆ ಮುಂಬೈನಲ್ಲಿ ಸಂಶೋಧನೆ ನಡೆದಿತ್ತು. ಆದರೆ ಅದನ್ನು ಸರ್ಕಾರ ಉತ್ತೇಜನ ನೀಡಿ ಮುಂದುವರಿಸಲಿಲ್ಲ. ಹಾಗಾಗಿ ಮೀನು ಉತ್ಪನ್ನಗಳ ಮಾರುಕಟ್ಟೆ ವಿಚಾರದಲ್ಲಿ ಬಹುದಿನ ಕಾಲ ಕೆಡದಂತೆ ಇಡುವ ವ್ಯವಸ್ಥೆ ಸಾಧ್ಯವಾಗಲಿಲ್ಲ. ಇದೀಗ ಸಂಸತ್‌ನಲ್ಲಿ ಕೇಂದ್ರ ಸರ್ಕಾರ, ಮೀನು ಉತ್ಪನ್ನಗಳನ್ನು ವಾಣಿಜ್ಯ ದೃಷ್ಟಿಯಿಂದ ಜಾಗತಿಕ ಮಾರುಕಟ್ಟೆಗೆ ಉದ್ದೇಶಿಸಿರುವುದರಿಂದ ಸಂಶೋಧನೆಗೆ ಮಹತ್ವ ಬಂದಿದೆ. ಮುಂಬೈನ ಅಣುವಿಜ್ಞಾನ ಸಂಶೋಧನಾ ಮಂಡಳಿ(ಬಿಆರ್‌ಎನ್‌ಎಸ್) ಮೀನುಗಾರಿಕಾ ವಿದ್ಯಾಲಯಕ್ಕೆ ಸಂಶೋಧನೆಗೆ ರು. 10 ಲಕ್ಷ ನೀಡಿದ್ದು, ಮೂರು ವರ್ಷದಲ್ಲಿ ಸಂಶೋಧನೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ. ಈಗಾಗಲೇ ಸಹಾಯಕ ಪ್ರೊಫೆಸರ್ ಡಾ.ಬಿ.ಮಂಜ ನೈಕ್ ನೇತೃತ್ವದಲ್ಲಿ ಸಂಶೋಧನೆ ನಡೆಯುತ್ತಿದೆ.
ಮೀನು ಉತ್ಪನ್ನಗಳನ್ನು ಕೆಡದಂತೆ ಸಂರಕ್ಷಿಸುವಲ್ಲಿ ಗಾಮಾ ಕಿರಣಗಳ ಬಳಕೆ ಜಾರಿಗೆ ಬಂದರೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟಿನ ಸಾಧನೆ ಮಾಡಿದಂತಾಗುತ್ತದೆ. ದೇಶಕ್ಕೆ ಇಂಥ ಕೊಡುಗೆ ನೀಡುವುದು ಮೀನುಗಾರಿಕಾ ತಾಂತ್ರಿಕ ವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
- ಪ್ರೊಫೆಸರ್ ಪ್ರಭು, ತಾಂತ್ರಿಕ ವಿದ್ಯಾಲಯ ಪ್ರಭಾರ ಮುಖ್ಯಸ್ಥ
- ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

