ಪ್ರಧಾನ ಸುದ್ದಿ

ದಸರಾ ಧಮಾಕ

ನಾಡಹಬ್ಬ, ವಿಶ್ವಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ ವೈಭವ ಕಾಣಿಸಿಕೊಳ್ಳಲಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ 9...

Published On :

ಕ.ಪ್ರ.ವಾರ್ತೆ  ಬೆಂಗಳೂರು  ಆ. 10
ನಾಡಹಬ್ಬ, ವಿಶ್ವಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಈ ಬಾರಿ ವೈಭವ ಕಾಣಿಸಿಕೊಳ್ಳಲಿದೆ.
ರಾಜ್ಯದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ 9 ದಿನಗಳ ದಸರಾ ಉತ್ಸವವನ್ನು ವೈಭವದಿಂದ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಅ. 5ರಿಂದ 14ರವರೆಗೆ ನಡೆಯಲಿರುವ ದಸರಾ ಉತ್ಸವವನ್ನು ಈ ಬಾರಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಉದ್ಘಾಟಿಸಲಿದ್ದಾರೆ. ಹಿರಿಯ ರಂಗಕರ್ಮಿ ಶತಾಯುಷಿ ಏಣಗಿ ಬಾಳಪ್ಪ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶನಿವಾರ ವಿಧಾನಸೌಧದಲ್ಲಿ ನಡೆದ ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅ. 5ರಂದು ಬೆಳಗ್ಗೆ 8.30ರ ವೇಳೆಗೆ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ.
ವಿಜಯದಶಮಿಯಂದು ಅರಮನೆಯಿಂದ ಬನ್ನಿ ಮಂಟಪದವರೆಗೆ ನಡೆಯುವ ಅಂಬಾರಿ ಸಮೇತ ಜಂಬೂ ಸವಾರಿಯನ್ನು ಈ ಬಾರಿ ವಿಶೇಷವಾಗಿ ಹಮ್ಮಿಕೊಳ್ಳಲು ಸರ್ಕಾರ ಮುಂದಾಗಿದೆ.
ದಸರಾ ಜನರ ಹಬ್ಬವಾಗಬೇಕು: ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಸರಾ ಉತ್ಸವ ಅರ್ಥಪೂರ್ಣವಾಗಬೇಕು. ಅದು ಕೇವಲ ಅಧಿಕಾರಿಗಳ ಹಬ್ಬವಾಗದೆ ಜನರ ಹಬ್ಬವಾಗಬೇಕು. ಈ ಬಾರಿ ಜಲಾಶಯಗಳು ಭರ್ತಿಯಾಗಿವೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಲಿದೆ. ಏಕತಾನತೆ ಬಿಟ್ಟು ವಿಭಿನ್ನ ಮತ್ತು ಆಕರ್ಷಣೀಯವಾಗಿ ಉತ್ಸವ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿಶ್ವ ಮಟ್ಟದ ಉತ್ಸವವಾಗಲಿ: ದಸರಾ ಸಂದರ್ಭದಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವವನ್ನು ಇನ್ನಷ್ಟು ಆಕರ್ಷಣೀಯವಾಗಿ ರೂಪಿಸಲು ಹೊರ ರಾಜ್ಯದ ಮತ್ತು ಜನಪ್ರಿಯ ಕಲಾವಿದರನ್ನು ಕರೆಸಿ. ಇದಕ್ಕೆ ಯಾವುದೇ ಅಡ್ಡಿ ಇಲ್ಲ. ಜತೆಗೆ ಸ್ಥಳೀಯ ಕಲಾವಿದರು ಮತ್ತು ಕಲಾ ತಂಡಗಳಿಗೆ ಆದ್ಯತೆ ನೀಡಬೇಕು. ಅದೇ ರೀತಿ ಅಂಬಾರಿ ಮೆರವಣಿಗೆ ಸಂದರ್ಭದಲ್ಲಿ ಇತರೆ ರಾಜ್ಯಗಳು ಮತ್ತು ಹೊರ ರಾಷ್ಟ್ರಗಳ ಸ್ತಬ್ಧ ಚಿತ್ರಗಳು ಮತ್ತು ಕಲಾತಂಡಗಳು ಭಾಗವಹಿಸಿ ಇದನ್ನು ವಿಶ್ವಮಟ್ಟದ ಸಾಂಸ್ಕೃತಿಕ ಉತ್ಸವವಾಗಿ ರೂಪಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
10 ಕೋಟಿ ಅನುದಾನ: ಸಭೆಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರು, ದಸರಾ ಉತ್ಸವಕ್ಕೆ ಸರ್ಕಾರ ಕನಿಷ್ಠ 10 ಕೋಟಿ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಿದ್ದರಾಮಯ್ಯ ಒಪ್ಪಿದರು.
ಆದರೆ, ಜಂಬೂಸವಾರಿ ಸಾಗುವ ಮಾರ್ಗವನ್ನು ಸಿಂಗಾರಗೊಳಿಸುವುದು, ಉದ್ಯಾನವನಗಳನ್ನು ಶೃಂಗರಿಸುವುದು, ರಸ್ತೆ ಅಭಿವೃದ್ಧಿ ಮತ್ತಿತರ ಕಾರ್ಯಕ್ರಮಗಳಿಗೆ 19 ಕೋಟಿ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿದ ಮುಖ್ಯಮಂತ್ರಿಗಳು, ಮೈಸೂರು ಮಹಾನಗರ ಪಾಲಿಕೆಗೆ ಬಜೆಟ್‌ನಲ್ಲಿ ಸರ್ಕಾರ 100 ಕೋಟಿ ಅನುದಾನ ಹಂಚಿಕೆ ಮಾಡಿದೆ. ಈ ಹಣದಲ್ಲೇ ಆದ್ಯತೆ ಮೇಲೆ ಕಾರ್ಯಕ್ರಮ ರೂಪಿಸಿ. ರಸ್ತೆ ದುರಸ್ತಿ ಮತ್ತಿತರ ಕಾಮಗಾರಿಗಳಿಗೆ ಅನಗತ್ಯ ವೆಚ್ಚ ಮಾಡಬೇಡಿ ಎಂದು ತಾಕೀತು ಮಾಡಿದರು.
ಒಟ್ಟು 19 ಕೋಟಿ ವೆಚ್ಚ: ಈ ಬಾರಿ ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರ ಬಿಡುಗಡೆ ಮಾಡುವ 10 ಕೋಟಿ ಸೇರಿದಂತೆ ಒಟ್ಟು 19 ಕೋಟಿ ವೆಚ್ಚ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.  ಇದೇ ಸಂದರ್ಭದಲ್ಲಿ ಮೈಸೂರು ದಸರಾ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಸಚಿವರಾದ ಆರ್.ವಿ. ದೇಶಪಾಂಡೆ, ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಸಂತೋಶ್ ಲಾಡ್, ಉಮಾಶ್ರೀ, ಶಾಸಕರಾದ ಎಂ.ಕೆ. ಸೋಮಶೇಖರ್, ವಿಜಯಶಂಕರ್, ಸಂದೇಶ್ ನಾಗರಾಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಮತ್ತಿತರರು ಹಾಜರಿದ್ದರು.

ಅರಮನೆಗೆ ಶತಮಾನದ ವೈಭವ
1912ರಲ್ಲಿ ನಿರ್ಮಾಣವಾದ ಮೈಸೂರು ಅರಮನೆಗೆ 2012ರಲ್ಲಿ 100 ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ದಸರಾ ಸಂದರ್ಭದಲ್ಲಿ ಅರಮನೆಯನ್ನು ಮತ್ತಷ್ಟು ಶೃಂಗಾರಭರಿತವಾಗಿ ಕಂಗೊಳಿಸುವಂತೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಕಳೆದ ವರ್ಷ ಶತಮಾನ ಪೂರೈಸಿದ್ದರೂ ಬರಗಾಲದ ಹಿನ್ನೆಲೆಯಲ್ಲಿ ಹೆಚ್ಚು ವೈಭವದಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಬಾರಿ ಅರಮನೆ ಮತ್ತಷ್ಟು ಸುಂದರವಾಗಿ ಕಂಗೊಳಿಸುವಂತೆ ನೋಡಿಕೊಳ್ಳಬೇಕು. ದೀಪಾಲಂಕಾರ ಮಾತ್ರವಲ್ಲದೆ, ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕು. ಒಟ್ಟಿನಲ್ಲಿ ಅರಮನೆ ವೈಭವೋಪೇತವಾಗಿ ಕಂಗೊಳಿಸಬೇಕು ಎಂದು ಅವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಯುವದಸರಾಕ್ಕೆ ಮರುಜೀವ
ಬರಗಾಲ ಮತ್ತಿತರ ಕಾರಣಗಳಿಂದಾಗಿ ಕಳೆದ 3 ವರ್ಷಗಳಿಂದ ಸ್ಥಗಿತಗೊಂಡಿದ್ದ ಯುವ ದಸರಾಕ್ಕೆ ಈ ಬಾರಿ ಮತ್ತೆ ಚಾಲನೆ ಸಿಗಲಿದೆ. ಕಳೆದ ಬಾರಿ ಬರ ಇದ್ದರೂ ದಸರಾ ಉತ್ಸವಕ್ಕೆ 8 ಕೋಟಿ ಖರ್ಚು ಮಾಡಲಾಗಿದೆ. ಆದರೂ ಯುವ ದಸರಾ ನಡೆಸಿಲ್ಲ. ಆದರೆ, ಈ ಬಾರಿ ಯಾವುದೇ ಕಾರಣಕ್ಕೂ ಯುವ ದಸರಾ ಸ್ಥಗಿತಗೊಳ್ಳಬಾರದು. ದಸರಾ ಜತೆಗೆ ಯುವ ದಸರಾಕ್ಕೂ ಸಿದ್ಧತೆ ಮಾಡಿ ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.  ಯುವ ದಸರಾವನ್ನು ಕೇವಲ ಹೆಸರಿಗೆ ಮಾತ್ರ ನಡೆಸುವುದಲ್ಲ. ಯುವಕರಿಗೆ ಸಂದೇಶ ಹೋಗಬೇಕು. ದಾರಿತಪ್ಪಲು ಅವಕಾಶ ಮಾಡಿಕೊಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಬಾರಿ ವಿಶೇಷವಾಗಿ ಹಮ್ಮಿಕೊಳ್ಳಲು ಸರ್ಕಾರ ಮುಂದಾಗಿದೆ. ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧ ಚಿತ್ರಗಳ ಜತೆಗೆ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯುವ ಸೇನಾ ತುಕಡಿಗಳ ಮೆರವಣಿಗೆಯನ್ನೂ ನಡೆಯಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ತುಕಡಿಗಳನ್ನು ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಪತ್ರ ಬರೆಯಲು ಉನ್ನತ ಮಟ್ಟದ ಸಮಿತಿ ಸಭೆ ನಿರ್ಧರಿಸಿದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ
ದಸರಾ ಸಂದರ್ಭದಲ್ಲಿ ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ದಸರಾ ವಿಶ್ವವಿಖ್ಯಾತ ಉತ್ಸವ. ಇದನ್ನು ವೈಭವದಿಂದ ಆಚರಿಸುವುದರ ಜತೆಗೆ ಎಚ್ಚರಿಕೆಯಿಂದಲೂ ಇರಬೇಕಾಗುತ್ತದೆ. ಮೇಲಾಗಿ ಕೆಆರ್‌ಎಸ್ ಭರ್ತಿಯಾಗಿರುವುದರಿಂದ ಅದು ಪ್ರವಾಸಿಗರ ವಿಶೇಷ ಆಕರ್ಷಣೆಯಾಗಲಿದೆ. ಅದೇ ರೀತಿ ಅರಮನೆಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಗಲಿದೆ. ಇದರ ಜತೆಗೆ ಮೈಸೂರು ಸುತ್ತಮುತ್ತಲಿನ ಚಾಮುಂಡಿ ಬೆಟ್ಟ, ನಂಜನಗೂಡು, ಬಿಳಿಗಿರಿರಂಗನ ಬೆಟ್ಟ, ಶ್ರೀರಂಗಪಟ್ಟಣ ಮತ್ತಿತರ ಕಡೆಯೂ ಅಕ್ಟೋಬರ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಆದ್ದರಿಂದ ಈ ಭಾಗದಲ್ಲಿ ಕಟ್ಟೆಚ್ಚರ ವಹಿಸಿ ಬಿಗಿ ಭದ್ರತೆ ಒದಗಿಸಬೇಕು ಎಂದು ತಿಳಿಸಿದರು.

ಅಕ್ಟೋಬರ್‌ನಲ್ಲಿ ಸುಂಕ ಸಂಗ್ರಹ ಇಲ್ಲ
ದಸರಾ ಉತ್ಸವದ ಅಂಗವಾಗಿ ರಾಜ್ಯಕ್ಕೆ ಆಗಮಿಸುವ ಅನ್ಯ ರಾಜ್ಯದ ಪ್ರವಾಸಿ ವಾಹನಗಳಿಗೆ ಸುಂಕ ವಿಧಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಸರಾ ಉತ್ಸವಕ್ಕೆ ಹೊರ ರಾಜ್ಯದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಹೊರ ರಾಜ್ಯದ ಪ್ರವಾಸಿ ವಾಹನಗಳಿಗೆ ಟೋಲ್ (ಪ್ರವೇಶ ಸುಂಕ) ವಿಧಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಆದ್ದರಿಂದ ಅಕ್ಟೋಬರ್ ತಿಂಗಳಲ್ಲಿ ಪ್ರವಾಸಿ ವಾಹನಗಳಿಗೆ ಸುಂಕ ವಿಧಿಸುವುದು ಬೇಡ ಎಂದು ಅವರು ಹೇಳಿದರು. ಇದರ ಜತೆಗೆ ಹೊರ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಇದಕ್ಕಾಗಿ ಎಲ್ಲಾ ನಿಲ್ದಾಣಗಳು, ರೈಲು, ಬಸ್‌ಗಳಲ್ಲಿ ಬಿತ್ತಿಪತ್ರ ಅಂಟಿಸುವುದು, ಅಂತರ್ಜಾಲದ ಮೂಲಕ ಪ್ರವಾಸಿಗರಿಗೆ ಮಾಹಿತಿ ನೀಡಿ ಅವರನ್ನು ರಾಜ್ಯಕ್ಕೆ ಆಹ್ವಾನಿಸುವ ಕೆಲಸವನ್ನೂ ಮಾಡಬೇಕು. ಇದಕ್ಕಾಗಿ ಟ್ವಿಟರ್‌ನಂತಹ ಸಾಮಾಜಿಕ ತಾಣಗಳ ಸಹಾಯ ಪಡೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.