ಪ್ರಧಾನ ಸುದ್ದಿ

ಪಾಕ್ ರಗಳೆ

ಪಾಕ್ ಪಾಪಿಗಳ ರಕ್ತದಾಹ ಇನ್ನೂ ಆರಿಲ್ಲ. ಐವರು ಭಾರತೀಯ ಯೋಧರನ್ನು ಹತ್ಯೆಗೈದು ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸಿರುವ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಶುಕ್ರವಾರ...

ಪಾಕ್ ರಗಳೆ
Published On :

ಜಮ್ಮು: ಪಾಕ್ ಪಾಪಿಗಳ ರಕ್ತದಾಹ ಇನ್ನೂ ಆರಿಲ್ಲ. ಐವರು ಭಾರತೀಯ ಯೋಧರನ್ನು ಹತ್ಯೆಗೈದು ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸಿರುವ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ಶುಕ್ರವಾರ ಮಧ್ಯರಾತ್ರಿ ಪಾಕಿಸ್ತಾನಿ ಸೇನಾಪಡೆಯು ಪೂಂಛ್ ಜಿಲ್ಲೆಯ ದುರ್ಗಾ ಬಟಾಲಿಯನ್ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಹಠಾತ್ ಗುಂಡಿನ ದಾಳಿ ನಡೆಸಿದೆ.
7 ಸಾವಿರ ಸುತ್ತಿನ ದಾಳಿ: ಪಾಕ್ ಪಡೆಯು ಭಾರಿ ಶಸ್ತ್ರಗಳು ಹಾಗೂ ಫಿರಂಗಿಗಳ ಮೂಲಕ 7 ಸಾವಿರ ಸುತ್ತುಗಳ ಗುಂಡಿನ ದಾಳಿ ನಡೆಸಿದೆ. ಇದನ್ನು ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ಕದನ ವಿರಾಮ ಉಲ್ಲಂಘನೆ ಎಂದು ಭಾರತೀಯ ಸೇನೆ ಬಣ್ಣಿಸಿದೆ. ಭಾರತೀಯ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಪಾಕ್ ಈ ಕೃತ್ಯವೆಸಗಿದೆ. ಭಾರಿ ಪ್ರಮಾಣದ ಪ್ರಾಣಹಾನಿಯಾಗಬೇಕು ಎಂಬ ಉದ್ದೇಶದಿಂದ ಈ ಮಟ್ಟದ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಆದರೆ, ಗಡಿಯಾದ್ಯಂತ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ ಎಂದೂ ಅವರು ಹೇಳಿದ್ದಾರೆ.
ಭಯಭೀತರಾದ ಜನ: ಶುಕ್ರವಾರ ರಾತ್ರಿ ಪಾಕ್ ಪಡೆಗಳು ಅಪ್ರಚೋದಿತ ದಾಳಿ ನಡೆಸುತ್ತಿದ್ದಂತೆಯೇ ಭಾರತೀಯ ಸೇನೆಯೂ ಪ್ರತಿದಾಳಿ ನಡೆಸಿತು. ಎರಡೂ ಪಡೆಗಳ ಗುಂಡಿನ ಚಕಮಕಿ ಸುಮಾರು ಏಳೂವರೆ ಗಂಟೆಗಳ ಕಾಲ ಮುಂದುವರಿಯಿತು. ಭಾರಿ ಗುಂಡಿನ ಸದ್ದು, ಫಿರಂಗಿ ಸ್ಫೋಟದ ಶಬ್ದ ಪೂಂಛ್ ನಗರದಾದ್ಯಂತ ಆವರಿಸಿತ್ತು. ಇದರಿಂದಾಗಿ ಆ ಪ್ರದೇಶದ ಜನ ಭಯಭೀತರಾದರು.
 ಆ. 6ರಂದು ಪಾಕಿಸ್ತಾನ ಸೇನಾಪಡೆ ನೇತೃತ್ವದ 20 ಮಂದಿ ಶಸ್ತ್ರಸಜ್ಜಿತ ವ್ಯಕ್ತಿಗಳು ಪೂಂಛ್ ಜಿಲ್ಲೆಯ ಭಾರತೀಯ ಗಡಿ ದಾಟಿ 450 ಮೀಟರ್ ಮುಂದೆ ಬಂದಿದ್ದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ 5 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯು ಭಾರತ-ಪಾಕ್ ಸಂಬಂಧ ವೃದ್ಧಿ ಮಾತುಕತೆಯ ಮೇಲೆ ಕರಿನೆರಳು ಬೀರಿತ್ತು.   

7,000 ಸುತ್ತು ಗುಂಡು ಹಾರಾಟ
ಶುಕ್ರವಾರ ರಾತ್ರಿ  10.30 ರಿಂದ
ಶನಿವಾರ ಬೆಳಗ್ಗೆ 4.30 ವರೆಗೆ
58 ನೇ ಪ್ರಸಕ್ತ ವರ್ಷದ ಕದನ ವಿರಾಮ ಉಲ್ಲಂಘನೆ
ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ-ಪಾಕ್ ಸೇನೆಗಳ ನಡುವೆ ಆಗಾಗ ಗುಂಡಿನ ಚಕಮಕಿ ನಡೆಯುತ್ತದೆ. ಸಾಮಾನ್ಯವಾಗಿ ಅದು 30 ನಿಮಿಷಗಳ ಕಾಲ ನಡೆಯುತ್ತದೆ. 30 ಸುತ್ತುಗಳಷ್ಟು ಗುಂಡು ಹಾರಾಟ ನಡೆಯುತ್ತದೆ.

ಪಾಕಿಸ್ತಾನ ನೀಡುವ ಯಾವುದೇ ಹೇಳಿಕೆ ನಂಬಲರ್ಹವಲ್ಲ. ಪಾಕಿಸ್ತಾನವು ಉಗ್ರ ಲಾಡೆನ್‌ನನ್ನು 10 ವರ್ಷ ತನ್ನ ಮಣ್ಣಲ್ಲೇ ಇಟ್ಟುಕೊಂಡಿತ್ತು. ಈ ವಿಷಯವನ್ನು ಅಮೆರಿಕದಿಂದ ಮುಚ್ಚಿಟ್ಟಿತ್ತು. ಈಗ ದಾವೂದ್ ವಿಚಾರದಲ್ಲೂ ಹಾಗೆಯೇ ಮಾಡುತ್ತಿದೆ. ಇದರಲ್ಲಿ ವಿಶೇಷವೇನೂ ಇಲ್ಲ.
- ರಾಜೀವ್ ಪ್ರತಾಪ್ ರೂಡಿ, ಬಿಜೆಪಿ ನಾಯಕ

ಈಗ ಪಾಕ್‌ಗೆ ಗೊತ್ತೇ ಇಲ್ವಂತೆ!
ನವದೆಹಲಿ:
ಕಳ್ಳಾಟ ಆಡುವುದರಲ್ಲಿ ತಾನು ನಿಸ್ಸೀಮ ಎಂಬುದನ್ನು ಪಾಕಿಸ್ತಾನ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಪಾಕ್ ಯು-ಟರ್ನ್ ಹೊಡೆದಿದೆ. ನಾನು ಆ ರೀತಿ ಹೇಳಲೇ ಇಲ್ಲ, ದಾವೂದ್ ಎಲ್ಲಿದ್ದಾನೆಂದು ನಮಗೆ ಗೊತ್ತೇ ಇಲ್ಲ ಎಂಬ ನಾಟಕ ಶುರುಮಾಡಿದೆ.
ಉಲ್ಟಾ ಖಾನ್: ಭಾರತದೊಂದಿಗಿನ ಸಂಬಂಧ ವೃದ್ಧಿಗಾಗಿ ನೇಮಿಸಲಾಗಿರುವ ಪಾಕ್ ಪ್ರಧಾನಿಯ ವಿಶೇಷ ರಾಯಭಾರಿ ಶಹರ್ಯಾರ್ ಖಾನ್ ಅವರೇ ಈ ವಿವಾದಿತ ಹೇಳಿಕೆ ನೀಡಿದ್ದು. ಶುಕ್ರವಾರ ಭಾರತೀಯ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಖಾನ್, 'ದಾವೂದ್ ಪಾಕಿಸ್ತಾನದಲ್ಲೇ ಇದ್ದ. ಆದರೆ ಈಗ ಅವನನ್ನು ಅಲ್ಲಿಂದ ಓಡಿಸಲಾಗಿದೆ. ಈಗ ಆತ ಯುಎಇಯಲ್ಲಿದ್ದಾನೆ. ಅವನು ಪಾಕ್‌ನಲ್ಲೇ ಇದ್ದಿದ್ದರೆ ಬಲೆ ಬೀಸಿ ಬಂಧಿಸಲಾಗುತ್ತಿತ್ತು' ಎಂದಿದ್ದರು.                 

ದಾವೂದ್ ಪಾಕ್‌ನಲ್ಲಿದ್ದ ಎಂಬ ವಿಚಾರವನ್ನು ಅಧಿಕೃತವಾಗಿ ಅಧಿಕಾರಿಯೊಬ್ಬರು ಹೇಳಿರುವುದು ಇದೇ ಮೊದಲು ಎಂಬ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಖಾನ್ ಉಲ್ಟಾ ಹೊಡೆದಿದ್ದಾರೆ. ನಾನು ವಿದೇಶಾಂಗ ಸಚಿವಾಲಯದಲ್ಲಿ ಇದ್ದಾಗಲಾಗಲೀ, ಈಗಲಾಗಲೀ ದಾವೂದ್ ಎಲ್ಲಿದ್ದಾನೆಂಬುದು ಗೊತ್ತಿಲ್ಲ.
  ಪಾಕ್ ಮಾಧ್ಯಮಗಳು ಹೇಳಿರುವುದನ್ನು ನಾನು ಹೇಳಿದೆ ಅಷ್ಟೆ. ದಾವೂದ್ ಬಗ್ಗೆ ನಂಗೇನೂ ಗೊತ್ತಿಲ್ಲ ಎಂದಿದ್ದಾರೆ.
ದಾಖಲೆಗೆ ಮುಕ್ತಿ ನೀಡಲ್ಲ: ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, 1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಚ್ಚುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. 250 ಮಂದಿಯನ್ನು ಬಲಿತೆಗೆದುಕೊಂಡ ಸ್ಫೋಟದ ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗುವವರೆಗೂ ಸುಮ್ಮನಿರುವುದಿಲ್ಲ ಎಂದೂ ಎಚ್ಚರಿಸಿದೆ.

ಏಪ್ರಿಲ್‌ವರೆಗೆ ಪಾಕ್‌ನಲ್ಲೇ ಇದ್ದ
ಐಪಿಎಲ್-ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ದಾವೂದ್ ಹೆಸರೂ ಇದೆ. ದಾವೂದ್ ಮತ್ತು ಆತನ ಸಹಚರರು ನಡೆಸಿದ ದೂರವಾಣಿ ಸಂಭಾಷಣೆಗಳನ್ನು ನೋಡಿದರೆ, ಆತ 2013ರ ಏಪ್ರಿಲ್ ಅಂತ್ಯದವರೆಗೂ ಪಾಕ್‌ನಲ್ಲಿದ್ದ ಎಂಬುದು ತಿಳಿದುಬಂದಿದೆ. ಖಾನ್ ಅವರು ದಾವೂದ್ ಪಾಕ್‌ನಿಂದ ಹೋಗಿದ್ದಾನೆ ಎಂದಿದ್ದಾರೆ. ಆದರೆ, ಕರಾಚಿಯಲ್ಲಿರುವ ದಾವೂದ್ ಮನೆಗೆ ಈಗಲೂ ಸಿಂಧ್ ಪೊಲೀಸರು ಕಾವಲು ನಿಂತಿದ್ದಾರೆ. ದಾವೂದು ಬ್ಯುಸಿನೆಸ್ ಉದ್ದೇಶಕ್ಕಾಗಿ ಆಗಾಗ್ಗೆ ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಿರುತ್ತಾನೆ ಎನ್ನುತ್ತವೆ ಭಾರತೀಯ ಗುಪ್ತಚರ ಸಂಸ್ಥೆಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.