ಪ್ರಧಾನ ಸುದ್ದಿ

ಸ್ವಾತಂತ್ರ್ಯ ಹೋರಾಟಗಾರನ 'ಅರಣ್ಯರೋದನ'

Published On :

ಕ.ಪ್ರ.ವಾರ್ತೆ, ಬಂಟ್ವಾಳ, ಆ. 11
ಭಾರತಕ್ಕೆ ಸ್ವಾತಂತ್ರ್ಯ ದೊರೆತು 66 ವರ್ಷ ತುಂಬುವ ಸಂಭ್ರಮ ಎಲ್ಲೆಡೆ ಕಂಡುಬರುತ್ತಿದ್ದರೆ, ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಹೋರಾಟಗಾರರೊಬ್ಬರು ತಮ್ಮದೇ ಸ್ವಾತಂತ್ರ್ಯಕ್ಕೆ ಹಂಬಲಿಸಿ ನೊಂದಿರುವ ವಿಷಾದನೀಯ ಸನ್ನಿವೇಶ ಬಂಟ್ವಾಳದಲ್ಲಿ ಬೆಳಕಿಗೆ ಬಂದಿದೆ.
ಹೆಸರು ಎಂ.ಡಿ. ಶ್ಯಾಮರಾವ್ ಆಚಾರ್, ಈವರೆಗಿನ ತಮ್ಮ ಜೀವಿತದ ಬಹು ವರ್ಷಗಳನ್ನು ಶಿವಮೊಗ್ಗದಲ್ಲಿ ಕಳೆದಿದ್ದರೂ ಮೂಲತಃ ಬಂಟ್ವಾಳ ತಾಲೂಕಿನ ಬಿ.ಸಿ. ರೋಡಿನವರು. ಸ್ವಾತಂತ್ರ್ಯ ಹೋರಾಟದ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ 1944ರಲ್ಲಿ ಬಿ.ಸಿ. ರೋಡಿನ ಬ್ರಹ್ಮರಕೂಟ್ಲು ಬಳಿಯಲ್ಲಿ ಬ್ರಿಟಿಷರನ್ನು ಹೆದರಿಸಲು ಪಟಾಕಿ ಸಿಡಿಸಿದರು. ಬಳಿಕ ಬ್ರಿಟಿಷ್ ಪೊಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಶಿವಮೊಗ್ಗದ ಅಣ್ಣ ದಿ. ಪುಟ್ಟಣಾಚಾರ್ ಮನೆಗೆ ಸೇರಿಕೊಂಡರು. ಬಳಿಕ ಶಿವಮೊಗ್ಗದಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾಗಿ 2 ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿದವರು. ಇವರಿಗೆ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರನೆಂಬ ಗೌರವ ಕೊಟ್ಟಿದೆ, ಜಮೀನು ಕೊಟ್ಟಿದೆ, ಮಾಸಾಶನವೂ ನೀಡುತ್ತಿದೆ. ಆದರೆ, ನೆಮ್ಮದಿಯನ್ನೇ ಕಸಿದುಕೊಂಡಿದೆ.

ಏನಾಗಿದೆ?:  ಕಿರಿಯ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರನೆಂಬ ಕೀರ್ತಿಗೆ ಪಾತ್ರರಾಗಿರುವ ಎಂ.ಡಿ. ಶ್ಯಾಮರಾವ್ ಆಚಾರ್ ಅವರಿಗೆ ಈಗ 85 ವರ್ಷ. ಶಿವಮೊಗ್ಗದ ಮಗನ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ 2 ಹೆಕ್ಟೇರ್ ಜಮೀನು ಶ್ಯಾಮರಾವ್‌ಗೂ ದೊರೆತಿದೆ. ಆದರೆ, ಕಳೆದ 22 ವರ್ಷಗಳಿಂದ ಅರಣ್ಯ ಇಲಾಖೆಯ ಚಿಕ್ಕ ತಪ್ಪಿನಿಂದಾಗಿ ಇವರು ಪರಿತಪಿಸುವ ದುಃಸ್ಥಿತಿ ಎದುರಾಗಿದೆ. 2 ಹೆಕ್ಟೇರ್‌ನಲ್ಲಿ ಇವರ ಜಮೀನು ನಕಾಶೆಯಲ್ಲಿ ಕಾಣುತ್ತಿರುವುದು ಕೇವಲ 3.40 ಎಕರೆ ಮಾತ್ರ. ಈ ಪೈಕಿ 2 ಎಕರೆ ಸ್ಥಳದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಸರ್ಕಾರಿ ಜಮೀನು ಎಂಬ ಕಾರಣಕ್ಕೆ ಕಾಡು ಬೆಳೆಸಿರುವುದು ಶ್ಯಾಮರಾವ್‌ಗೆ ಸಮಸ್ಯೆಯಾಗಿದೆ.
ಗಿಡ ನೆಡಲು ಹೊಂಡ ತೋಡುತ್ತಿರುವಾಗಲೇ ಈ ಸಮಸ್ಯೆಯ ಬಗ್ಗೆ 1991-92ರಲ್ಲಿ ಆಗಿನ ದ.ಕ. ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರೂ ಇವರ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಇದಕ್ಕಾಗಿ 20 ವರ್ಷಗಳಿಂದಲೂ ಹೋರಾಟ ನಡೆಸುತ್ತಿರುವ ಶ್ಯಾಮರಾವ್, ಬಂಟ್ವಾಳ ಕ್ಷೇತ್ರದ ಶಾಸಕ ರಮಾನಾಥ ರೈ ಅರಣ್ಯ ಸಚಿವರಾಗಿರುವುದರಿಂದ ತಮ್ಮ ಸಮಸ್ಯೆಗೆ ಅತಿ ಶೀಘ್ರ ಪರಿಹಾರ ದೊರಕೀತು ಎಂಬ ನಿರೀಕ್ಷೆಯಲ್ಲಿದ್ದಾರೆ.

ಹೋರಾಟಗಾರನ ಕನಸು: ಸ್ವಾತಂತ್ರ್ಯ ಹೋರಾಟದ ತಮ್ಮ ನೆನಪುಗಳನ್ನು ಕಾಪಿಡುವ ಉದ್ದೇಶದಿಂದ ಈ ಜಮೀನಿನಲ್ಲಿ ಹಣ್ಣಿನ ತೋಟ ಬೆಳೆಸಿ, ವಿಹಾರಧಾಮ ನಿರ್ಮಿಸಬೇಕು ಎಂಬ ಕನಸು ಶ್ಯಾಮರಾವ್ ಅವರದ್ದು. ಅದಕ್ಕಾಗಿ ಜಮೀನು ಮಂಜೂರಾದ ವರ್ಷದಲ್ಲೇ ಹಣ್ಣು ಹಂಪಲಿನ ಗಿಡಕ್ಕಾಗಿ ತೋಟಗಾರಿಕಾ ಇಲಾಖೆಗೂ ಮನವಿ ಸಲ್ಲಿಸಿದ್ದರಂತೆ. 1991-92ರ ಬಳಿಕ ಅದೆಷ್ಟೋ ಜಿಲ್ಲಾಧಿಕಾರಿಗಳು, ತಹಸೀಲ್ದಾರರು, ಅರಣ್ಯ ಇಲಾಖಾ ಅಧಿಕಾರಿಗಳು ಬಂದು ಹೋಗಿದ್ದಾರೆ, ಸರ್ಕಾರಗಳು ಬದಲಾಗಿದೆ. ಆದರೆ, ಶ್ಯಾಮರಾವ್ ಕನಸು ಮಾತ್ರ ನನಸಾಗಿಲ್ಲ. ಅರಣ್ಯ ಇಲಾಖೆಯ ಗಿಡ ದೊಡ್ಡದಾಗುತ್ತಲೇ ಇವರ ಕನಸು- ಧ್ವನಿ 'ಅರಣ್ಯ ರೋದನ'ವಾಗಿಯೇ ಉಳಿದಿದೆ.

ಲಂಚ ಕೊಟ್ಟಿಲ್ಲ, ಕೋರ್ಟ್‌ಗೂ ಹೋಗಲ್ಲ
ನಾನೆಂದೂ ಲಂಚ ಕೊಟ್ಟಿಲ್ಲ, ಕೊಡೋದೂ ಇಲ್ಲ. ಕೋರ್ಟ್‌ಗೆ ಹೋಗಿ ಅಂತ ತುಂಬಾ ಮಂದಿ ನನಗೆ ಸಲಹೆ ನೀಡಿದ್ದಾರೆ. ಆದರೆ, ನಾನು ಆ ಬಗೆಯ ಹೋರಾಟವನ್ನೂ ಮಾಡೋನಲ್ಲ ಎಂದು ಅಭಿಮಾನದಿಂದ ಹೇಳುವ ಶ್ಯಾಮರಾವ್ ಅವರ ಮಾತುಗಳಲ್ಲಿ ಸರ್ಕಾರ ಇಂದಲ್ಲ ನಾಳೆ ತನ್ನ ಬೇಡಿಕೆಗೆ ಮನ್ನಣೆ ನೀಡೀತು ಎಂಬ ಆಶಾವಾದವಿದೆ. 1991-92ರಲ್ಲಿ ದ.ಕ. ಜಿಲ್ಲಾಧಿಕಾರಿಯಾಗಿದ್ದ ಶಾಲಿನಿ ಗೋಯಲ್ ತನಗೆ 24 ಗಂಟೆಗಳಲ್ಲಿ ನ್ಯಾಯ ಒದಗಿಸುತ್ತೇನೆ ಎಂದಿದ್ದರು. ಆದರೆ, ನನ್ನ ನಿರೀಕ್ಷೆಯ ನ್ಯಾಯ ಇನ್ನೂ ದೊರೆತಿಲ್ಲ ಎಂದು ನೊಂದು ನುಡಿಯುತ್ತದೆ ಹಿರಿಯ ಜೀವ.

ಅರಣ್ಯ ಇಲಾಖೆ ಈ ಸ್ಥಳದಲ್ಲಿ ಗಿಡ ನೆಟ್ಟ ಬಳಿಕವಷ್ಟೇ ಆ ಜಮೀನು ಶ್ಯಾಮ್‌ರಾವ್ ಹೆಸರಿಗೆ ಮಂಜೂರಾಗಿದೆ. ಇದನ್ನು ಅರಣ್ಯ ಇಲಾಖೆಯ ದಾಖಲೆಗಳು ತಿಳಿಸಿಕೊಡುತ್ತದೆ. ಒಂದು ವೇಳೆ ಈಗ ಹೆಮ್ಮರವಾಗಿರುವ ಮರಗಳನ್ನು ಶ್ಯಾಮ್‌ರಾವ್ ಇಲಾಖೆಗೆ ಬಿಟ್ಟುಕೊಟ್ಟರೆ, ಸಮಸ್ಯೆಯೇ ಇಲ್ಲ.
- ಶ್ರೀಧರ ನಾಯಕ್, ದ.ಕ. ಜಿಲ್ಲಾ ಪ್ರಭಾರ ಅರಣ್ಯಾಧಿಕಾರಿ (ಸಾಮಾಜಿಕ)

ನಮ್ಮ ಆಕ್ಷೇಪಣೆ ನಡುವೆಯೂ ಜಮೀನಿನಲ್ಲಿ ಬೆಳೆದು ನಿಂತಿರುವ ಅಕೇಶಿಯಾ ಗಿಡಗಳನ್ನು ಆರೈಕೆ ಮಾಡಿದ್ದೇವೆ. ಅಲ್ಲದೆ ಗಿಡ ನೆಟ್ಟ ಅವಧಿಯಲ್ಲೇ ಆಗಿನ ಜಿಲ್ಲಾಧಿಕಾರಿ ಸಸಿಗಳ ಸಹಿತ ಜಮೀನನ್ನು ಬಿಟ್ಟುಕೊಡುವಂತೆ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಈಗಲಾದರೂ ಅದರ ಹಕ್ಕನ್ನು ನಮಗೆ ಕೊಡುವ ಬದಲು, ಮರಗಳನ್ನು ಇಲಾಖೆ ತಮ್ಮ ವಶಕ್ಕೆ ಕೇಳುತ್ತಿರುವುದು ಸರಿಯೆ?
- ಸತೀಶ್ ಕುಮಾರ್, ಶ್ಯಾಮರಾವ್ ಆಚಾರ್ ಪುತ್ರ

- ಮೌನೇಶ್ ವಿಶ್ವಕರ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.