ಪ್ರಧಾನ ಸುದ್ದಿ

ಈಗ್ಲೇ ಹಿಂಗೆ ಮುಂದೆ ಇನ್ನೆಂಗೋ

Published On :

ಕ.ಪ್ರ.ವಾರ್ತೆ    ತುರುವೇಕೆರೆ    ಆ.13
ಇಷ್ಟು ದಿನ ಹೆಂಗೂ ಜೀವನ ನಡೆಸುತ್ತಿದ್ವಿ, ಮುಂದೆ ಹೆಂಗಪ್ಪಾ ಜೀವನ ಮಾಡೋದು. ಹಬ್ಬ ಬೇರೆ ಬಂತು. ಈ ಪಾಟಿ ರೇಟ್ನಲ್ಲಿ ಹಬ್ಬ ಮಾಡೋದಾದ್ರೂ ಹೇಗಪ್ಪಾ ಅನ್ನೋದು ಜನಸಾಮಾನ್ಯರ ಮನದಾಳದ ಮಾತು.
ಈಗಿನ್ನೂ ಆಷಾಡ ಕಳೆದು ಶ್ರಾವಣ ಬಂದಿದೆ. ಹಬ್ಬಗಳ ಸಾಲು ಸಾಲು ಇನ್ನು ಪ್ರಾರಂಭ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುವುದನ್ನು ಕಂಡು ಕಂಗಾಲಾಗುತ್ತಿದ್ದಾರೆ. ಈ ಮಧ್ಯೆ ಪೂಜೆ ಪುನಸ್ಕಾರಗಳಿಗಾಗಿ
ಅತ್ಯವಶ್ಯಕವಾಗಿ ಬೇಕಾಗಿರುವ ಹೂವು, ಹಣ್ಣುಗಳು ಹಾಗೂ ತರಕಾರಿಯ ಬೆಲೆ ಕೇಳಿ ಕಂಗಾಲಾಗಿ ಹೋಗುವ ಸರದಿ. ಶುಕ್ರವಾರ ಬರಲಿರುವ ವರಮಹಾಲಕ್ಷ್ಮಿ ಹಬ್ಬದಿಂದಲೇ ಜನ ಬೆಚ್ಚಿ ಬೀಳಲಿದ್ದಾರೆ. ಶ್ರಾವಣ ಮಾಸದ ಆರಂಭದ ದಿನದಲ್ಲಿ ಬರುವ ಭೀಮನ ಅಮಾವಾಸ್ಯೆ ಹಾಗೂ ನಾಗರ ಪಂಚಮಿಯನ್ನು ಕೆಲವೇ ಜನಾಂಗದವರು ಆಚರಿಸುತ್ತಾರೆ. ಆದರೆ ವರಲಕ್ಷ್ಮಿ ಹಬ್ಬವನ್ನು ಸಾಮಾನ್ಯವಾಗಿ ಪ್ರತಿಯೊಂದು ಜನಾಂಗದವರು ಆಚರಿಸುತ್ತಾರೆ. ಹಾಗಾಗಿಯೇ ಇದಕ್ಕೆ ಅಗತ್ಯವಾಗಿ ಬೇಕಾಗುವ ಹೂವು ಹಣ್ಣು ಹಾಗೂ ತರಕಾರಿಗಳ ಬೆಲೆಯನ್ನು ಕಣ್ಮುಚ್ಚಿಕೊಂಡು ಏರಿಸಲಾಗುತ್ತದೆ.  
ಗಗನಕ್ಕೆ: ಆಷಾಡ ಮಾಸದಲ್ಲಿ ಹಾಗೂ ಕಳೆದ ಐದಾರು ದಿನಗಳ ಹಿಂದೆಯಷ್ಟೆ ಮಾರು ಹೂವಿಗೆ 10 ರಿಂದ 15 ರು.ಇತ್ತು.   ಸದ್ಯ ಕಾಕಡ ಹೂವು ಮಾರಿಗೆ 30 ರಿಂದ 40 ರು. ಇದೆ. ಬಟನ್ಸ್ 40 ರು. ಇದೆ. ಮಲ್ಲೆ ಹೂವು 35 ರಿಂದ 40 ರೂ, ಶಾವಂತಿಗೆ 50 ರು. ಇದೆ. ಹಬ್ಬ ದ ದಿನ ಹತ್ತಿರ ಬಂದಂತೆ ಈ ಹೂವುಗಳ ಬೆಲೆ ಗಗನಕ್ಕೇರುತ್ತವೆ.
ಅರ್ಧ ದಿನವೂ ಬಾಳದ ಹೂವು ನೂರರ ಬಡ್ಡೆ ತಲುಪಿದರೂ ಆಶ್ಚರ್ಯವಿಲ್ಲ. ಕಳೆದ ಹತ್ತಾರು ದಿನಗಳ ಹಿಂದೆ ಕ್ಯಾರೇಟ್, ಹುರುಳಿಕಾಯಿ, ಬದನೇಕಾಯಿ, ಬೀಟ್ ರೂಟ್, ಗಡ್ಡೆ ಕೋಸು ಮೊದಲಾದವು ಗರಿಷ್ಠ ಕೆಜಿಗೆ 20 ರು. ಇತ್ತು. ಈಗ ಸದ್ಯಕ್ಕೆ 40 ರಿಂದ 50 ರು.ಗಳ ತನಕ ಇದೆ. ಈರುಳ್ಳಿ ಹಾಗೂ ಹಸಿರು ಮೆಣಸಿನ ಕಾಯಿಯ ಬೆಲೆ ಕೇಳಿದರಂತೂ ಕಣ್ಣೂ ಉರಿಯುತ್ತೆ, ಮೈ ಯೂ ಉರಿಯುತ್ತದೆ.
ಅನುಮಾನವಿಲ್ಲ: ಮುಂದಿನ ಹಬ್ಬದ ದಿನ ಹತ್ತಿರವಾಗುತ್ತಿದ್ದಂತೆ ಬೆಲೆಗಳು ಗಗನಕ್ಕೇರುವುದರಲ್ಲಿ ಅನುಮಾನವೇ ಇಲ್ಲ. ಮಳೆ ಇಲ್ಲ, ಬೆಳೆ ಇಲ್ಲ ಎನ್ನುವುದು ಸತ್ಯಕ್ಕೆ ದೂರ. ಇದ್ದುದರಲ್ಲಿ ಮಳೆ ಬೆಳೆ ಸಾಕಷ್ಟು ಆಗಿದೆ. ನಿಜವಾದ ರೈತಾಪಿಗಳಿಗೆ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಗೆ ಬಂದ ರೈತರಿಂದ ಹೂವು, ತರಕಾರಿಗಳನ್ನು ಕೊಳ್ಳುವ ಮಧ್ಯವರ್ತಿಗಳು ಮನಸೋ ಇಚ್ಛೆ ಬೆಲೆ ನಿಗದಿಪಡಿಸಿ ಸಾರ್ವಜನಿಕರನ್ನು ಶೋಷಣೆ ಮಾಡುತ್ತಾ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.
ಹಬ್ಬವೆಂದ ಮೇಲೆ ಪೂಜೆ ಮಾಡುವುದು ಅನಿವಾರ್ಯ. ಅದಕ್ಕಾಗಿ ಹೂವು ಹಣ್ಣು ಹಾಗೂ ತರಕಾರಿಗಳಿಗೆ ಬೇಕೆಂತಲೇ ಬೆಲೆಯನ್ನು ಮಧ್ಯವರ್ತಿಗಳು ಹೆಚ್ಚಿಸುತ್ತಾರೆ. ಹಬ್ಬವಾದ ಮರು ದಿನವೇ ಈ ಹಿಂದಿನ ಬೆಲೆ ತಾವಾಗಿಯೇ ನೀಡುತ್ತಾರೆ. ಸಾರ್ವಜನಿಕರ ಧಾರ್ಮಿಕ ಭಾವನೆಯನ್ನೇ ಬಂಡವಾಳ ಮಾಡಿಕೊಳ್ಳುವ ಮಧ್ಯವರ್ತಿಗಳ ಹಾವಳಿಯಿಂದಾಗಿ ದೇವರ ಪೂಜೆ ಪುನಸ್ಕಾರವನ್ನೂ ನೆಮ್ಮದಿಯಿಂದ ಮಾಡದಾಗಿದೆ.
ಒಂದಕ್ಕೆ ಎರಡು ಪಟ್ಟು ಮೂರು ಪಟ್ಟು ಬೆಲೆಯನ್ನು ಹೆಚ್ಚಿಸುವ ಮಧ್ಯವರ್ತಿಗಳ ಕಾಟ ಅತಿಯಾಗಿದ್ದು ಜನಸಾಮಾನ್ಯರು ಅವರಿಗೆ ಹಿಡಿ ಶಾಪ ಹಾಕುತ್ತಲೇ ವಿಧಿ ಇಲ್ಲದೇ ದೇವರ ಪೂಜೆ ಮಾಡುವುದು ಸಾಮಾನ್ಯವಾಗಿದೆ. ಮಧ್ಯವರ್ತಿಗಳಿಗೆ ಲಗಾಮು ಹಾಕುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಇವಕ್ಕೆಲ್ಲಾ ಪರಿಹಾರವೆಂಬಂತೆ ಎಷ್ಟೋ ಮಂದಿ ಹಬ್ಬಕ್ಕೆ ಮೂರ್ನಾಲ್ಕು ದಿನ ಮುಂಚೆಯೇ ತರಕಾರಿ, ಹೂವುಗಳನ್ನು ಕೊಂಡು ಫ್ರಿಡ್ಜ್ನಲ್ಲಿ ಇಟ್ಟುಕೊಳ್ಳುವ ಪರಿಪಾಠವೂ ಇದೆ.

- ಎಸ್.ನಾಗಭೂಷಣ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.