ಭರ್ಜರಿ ಮತ ಬೇಟೆ
ಕನ್ನಡಪ್ರಭ ವಾರ್ತೆ ಮಂಡ್ಯ/ರಾಮನಗರ ಆ.13
ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಜಿದ್ದಾಜಿದ್ದಿಗೆ ವೇದಿಕೆಯಾಗಿರುವ ಮಂಡ್ಯ, ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಪ್ರಮುಖ ನಾಯಕರ ಆರೋಪ, ಪ್ರತ್ಯಾರೋಪ ಜೋರಾಗಿದ್ದು ಮತ ಬೇಟೆ ಭರ್ಜರಿಯಾಗಿಯೇ ನಡೆಯುತ್ತಿದೆ. ಇದಕ್ಕೆ ಇನ್ನಷ್ಟು ಕಳೆ ತುಂಬಲು ಶೀಘ್ರವೇ ಕೇಂದ್ರ ಸಚಿವ, ನಟ ಚಿರಂಜೀವಿ, ಕ್ರಿಕೆಟಿಗ ಅಜರುದ್ದೀನ್ ಆಗಮಿಸಲಿದ್ದಾರೆ.
ಮಂಗಳವಾರ ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶಕುಮಾರ್ ಪರ ಸಿಎಂ ಸಿದ್ದರಾಮಯ್ಯ, ಸೋದರ ಡಿ.ಕೆ.ಶಿವಕುಮಾರ್ ಮತಯಾಚಿಸಿದರೆ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಪರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಇತರೆ ನಾಯಕರು ಪ್ರಚಾರ ನಡೆಸಿದರು. ನಟಿ ರಮ್ಯಾ ತಾಯಿ ರಂಜಿತಾ ಅಖಾಡಕ್ಕಿಳಿದಿದ್ದು ಮತ್ತಷ್ಟು ರಂಗೇರಿದೆ.
ರಾಮನಗರ ಜಿಲ್ಲೆ ಬಿಡದಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, 'ಜೆಡಿಎಸ್, ಬಿಜೆಪಿ, ಕೆಜೆಪಿ ಒಗ್ಗೂಡಿ ಕಾಂಗ್ರೆಸ್ ಸೋಲಿಸುವ ಮೂಲಕ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಸಜ್ಜಾಗಿವೆ. ಇದಕ್ಕೆ ಜನತೆ ಅವಕಾಶ ಕೊಡುವುದಿಲ್ಲ. ಜ್ಯಾತ್ಯತೀತ ಪದದ ಅರ್ಥವೇ ಗೊತ್ತಿಲ್ಲದ, ಕೇವಲ ಅಧಿಕಾರವನ್ನೇ ಗುರಿಯಾಗಿಸಿಕೊಂಡ ದೇವೇಗೌಡರ ಕುಟುಂಬಕ್ಕೆ ಜನತೆ ಈ ಬಾರಿ ತಕ್ಕ ಪಾಠ ಕಲಿಸುತ್ತಾರೆ' ಎಂದರು.
ಡಿ.ಕೆ.ಸುರೇಶಕುಮಾರ್ ಪರ ವಿವಿಧೆಡೆ ಪ್ರಚಾರ ನಡೆಸುವ ವೇಳೆ ಮಾತನಾಡಿದ ಡಿಕೆಶಿ, ಮಾತು ತಪ್ಪುವುದೇ ಜೆಡಿಎಸ್ ಚಾಳಿ. ಕುಮಾರಸ್ವಾಮಿ ವಿಶ್ವಾಸದ್ರೋಹದಿಂದ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು.
ಅಧಿಕಾರ ಇಲ್ಲದೇ ಗೌಡರ ಕುಟುಂಬಕ್ಕೆ ಒದ್ದಾಡುತ್ತಿದೆ. ಈಗ ಮತ್ತೆ ಅವರಿಗೆ ಅಧಿಕಾರ ಸಿಗದಂತೆ ನೋಡಿಕೊಳ್ಳಿ ಎಂದರು.
ಕುಣಿಗಲ್ನಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಮತಯಾಚಿಸಿದ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಮಾತನಾಡಿ, ಸಿದ್ದರಾಮಯ್ಯ ಜೆಡಿಎಸ್ ಪಾಳೆಯದಿಂದಲೇ ಬೆಳೆದು ಬಂದಿದ್ದಾರೆ. ಈಗ ಕಂಡಲ್ಲೆಲ್ಲಾ ನನ್ನ ಹಾಗೂ ಜೆಡಿಎಸ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಿಎಂ ಸ್ಥಾನಕ್ಕೆ ಘನತೆ, ಗೌರವ, ಗಾಂಭೀರ್ಯಕ್ಕೆ ತಕ್ಕಂತೆ ನಡೆದುಕೊಳ್ಳಲಿ. ಇಲ್ಲದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಅಪ್ಪ- ಮಕ್ಕಳ ಪಕ್ಷ ಬಿಟ್ಟು ತಾಯಿ-ಮಕ್ಕಳ ಪಕ್ಷ ಸೇರಿದ್ದಾರೆ ಎಂದರು.
ಕಣ್ಣೀರಿಗೆ ಮರುಳಾಗಬೇಡಿ: ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಪರ ಪ್ರಚಾರ ನಡೆಸಿದ ಕುಮಾರಸ್ವಾಮಿ, ರಮ್ಯಾ ಫಾರ್ಚುನ್ರ ಕಾರು, ಪುಟ್ಟರಾಜು ಬೈಸಿಕಲ್ ಇದ್ದಂತೆ. ಜನರ ಕಷ್ಟಗಳಿಗೆ ಪುಟ್ಟರಾಜು ನೇರವಾಗಿ ಸ್ಪಂದಿಸುತ್ತಾರೆ. ರಮ್ಯಾ ಕಾರು ಬಿಟ್ಟು ಕೆಳಗಿಳಿಯುವುದೇ ಇಲ್ಲ. ಅವರ ಕಣ್ಣೀರಿಗೆ ಕರಗಿ ಅಭಿವೃದ್ಧಿ ಅಡ್ಡುಗಲ್ಲು ಹಾಕಬೇಡಿ ಎಂದರು. ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಪರ ಪ್ರಚಾರ ನಡೆಸಿದ ವಸತಿ ಸಚಿವ ಅಂಬರೀಷ್, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಉಭಯ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ನೀಡಲಾಗುವುದು. ರಮ್ಯಾ ನಿಮ್ಮೆಲ್ಲರ ಸಮಸ್ಯೆಗೆ ಸ್ಪಂದಿಸುತ್ತಾಳೆ. ಕ್ಷೇತ್ರವನ್ನೂ ಮಾದರಿಯಾಗಿ ಮಾಡುತ್ತಾಳೆ ಎಂದು ಭರವಸೆ ನೀಡಿದರು. ಇದೇ ವೇಳೆ ನಟಿ ರಮ್ಯಾ ತಾಯಿ ರಂಜಿತಾ ಹಾಗೂ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಮಂಜುಳಾ ನಾಯ್ಡು ಮನೆ ಮನೆಗೆ ತೆರಳಿ ಮತಯಾಚಿಸಿದರು.
ಸಿಎಂ ಸಿದ್ದು ತವರಲ್ಲಿ ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಪಣ
ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಕೆಜೆಪಿ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದೆ. ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರ ರಾಜಿನಾಮೆಯಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾದ ಮೇಲೆ ಕಾಂಗ್ರೆಸ್, ಬಿಜೆಪಿ, ಕೆಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಂತರ ರಾಜ್ಯ ಮಟ್ಟದಲ್ಲಿ ಕೆಜೆಪಿ-ಬಿಜೆಪಿ ನಡುವೆ ಹೊಂದಾಣಿಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶಸ್ವಿ ಸೋಮಶೇಖರ್ ನಾಮಪತ್ರ ಹಿಂಪಡೆದಿದ್ದರು. ಅಭ್ಯರ್ಥಿಯನ್ನು ಕಣಕ್ಕಿಳಿಸದ ಜೆಡಿಎಸ್ ಸಹ ಇದೀಗ ಕೆಜೆಪಿ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

