ಕೊರಗ ಮಕ್ಕಳ ಇಂಗ್ಲಿಷ್ ಕಲಿಕೆಗೆ ವಿಶೇಷ ಯೋಜನೆ
ಕ.ಪ್ರ.ವಾರ್ತೆ ಮಂಗಳೂರು ಆ. 17
ಇಂಗ್ಲಿಷ್ ಭಾಷಾ ಕೌಶಲ್ಯ ಹೆಚ್ಚಿಸುವ ದಿಶೆಯಲ್ಲಿ ಕೊರಗ ಮಕ್ಕಳಿಗೆ ವಿಶೇಷ ಶಿಕ್ಷಣ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಹಮ್ಮಿಕೊಳ್ಳಲಿದ್ದು, ಗುಣಮಟ್ಟ ಶಿಕ್ಷಣ ಯೋಜನೆಯಡಿ ಇದನ್ನು ಮಾದರಿಯಾಗಿ ಅನುಷ್ಠಾನಗೊಳಿಸಲಿದೆ. ಈ ಕುರಿತು ಪೂರ್ವಭಾವಿ ಸಭೆ ನಡೆದಿದ್ದು, ಶೀಘ್ರವೇ ಅಂತಿಮ ಸಭೆ ನಡೆದು ಸೆಪ್ಟೆಂಬರ್ನಿಂದಲೇ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ.
ಆ ಮೂಲಕ ಹಿಂದುಳಿದ ಕೊರಗ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಇತರೆ ಮಕ್ಕಳಂತೆ ಮುಂಚೂಣಿಗೆ ಬರಲಿದ್ದಾರೆ. ಕೊರಗ ಮಕ್ಕಳು ಹೆಚ್ಚಾಗಿ ಅವಲಂಬಿಸಿರುವ ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸವಲತ್ತುಗಳಿದ್ದರೂ ಶಿಕ್ಷಣ ಕೌಶಲ್ಯ ಕೊರಗ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಇದನ್ನು ಮನಗಂಡ ಜಿಪಂ ಭಾಷಾ ಕೌಶಲ್ಯಕ್ಕೆ ಒತ್ತು ನೀಡಲು ಮುಂದಾಗಿದೆ.
ಸ್ಪೀಕಿಂಗ್ ಕೋರ್ಸ್, ಸ್ವಿಮ್ಮಿಂಗ್: ಒಂದರಿಂದ ಐದು ಹಾಗೂ ಐದರಿಂದ ಹತ್ತನೇ ತರಗತಿವರೆಗಿನ ಕೊರಗ ಮಕ್ಕಳಿಗೆ ವಿಶೇಷ ಶಿಕ್ಷಣಕ್ಕೆ ಒತ್ತು ನೀಡಲು ನಿರ್ಧರಿಸಿದ್ದು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ) ಇಲಾಖೆ ಅನುಷ್ಠಾನಗೊಳಿಸಲಿದೆ. ಇತ್ತೀಚೆಗೆ ನಡೆದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆಯಲ್ಲಿ ಕ್ಲಿಷ್ಟ ವಿಷಯ ಬೋಧನೆ, ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್, ಕಲಿಕಾ ಕಿಟ್, ಸ್ವಿಮ್ಮಿಂಗ್ ಕಲಿಕೆ, ಹಾಜರಾತಿ ಪ್ರೋತ್ಸಾಹಕ್ಕೆ ಆದ್ಯತೆ ನೀಡಲು ಸೂಚಿಸಲಾಗಿದೆ.
ಒಂದರಿಂದ ಹತ್ತನೇ ತರಗತಿ ಕೊರಗ ಮಕ್ಕಳಿಗೆ ಕಷ್ಟವಾಗುವ ಪಠ್ಯಗಳನ್ನು ಕಾಲೋನಿಗಳಲ್ಲಿ ಗುಂಪು ಅಥವಾ ವೈಯಕ್ತಿಕವಾಗಿ ವಿಶೇಷ ಟ್ಯೂಷನ್ ಮೂಲಕ ಸರ್ಕಾರಿ ಶಿಕ್ಷಕರು ಇಲ್ಲವೇ ಸಂಪನ್ಮೂಲ ವ್ಯಕ್ತಿಗಳು ಕಲಿಸಲಿದ್ದಾರೆ. ಇದಕ್ಕಾಗಿ ಪ್ರತಿ ಮಗುವಿಗೆ ವಾರ್ಷಿಕ 5 ಸಾವಿರ ನಿಗದಿಪಡಿಸಲಾಗಿದೆ. ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ಗೆ ಪ್ರತಿ ಮಗುವಿಗೆ ಮಾಸಿಕ 1 ಸಾವಿರ ಮೀಸಲಿಡಲಾಗಿದೆ. ಶಾಲೆಯಲ್ಲಿ ಮಧ್ಯಾಹ್ನ ಅಥವಾ ತರಗತಿ ಬಳಿಕ ಅಥವಾ ಕಾಲೋನಿಗಳಲ್ಲಿ ದಿನಕ್ಕೆ 2 ಗಂಟೆ ಕಾಲ ವಿಶೇಷ ತರಗತಿ ನಡೆಸಲಾಗುವುದು. ಇದಕ್ಕೆ ಬೇಕಾಗುವ ಲಾಂಗ್ ಪುಸ್ತಕ, ಡಿಕ್ಷನರಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ಪುತ್ತೂರು ಬಾಲವನದ ಈಜುಕೊಳ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಈಜುಕೊಳದಲ್ಲಿ ಕೊರಗ ಮಕ್ಕಳಿಗೆ ಈಜು ಕಲಿಕೆ ವ್ಯವಸ್ಥೆಗೊಳಿಸಲಾಗುತ್ತದೆ. ವಿಶೇಷವಾಗಿ ಪ್ರತಿ ತಿಂಗಳು 25 ದಿನ ಶಾಲಾ ತರಗತಿಗೆ ಹಾಜರಾದರೆ ಆ ಮಗುವಿನ ಕುಟುಂಬಕ್ಕೆ ವಾರ್ಷಿಕ 500 ಮೊತ್ತ ನೀಡಲು ರೂಪುರೇಷೆ ತಯಾರಿಸಲಾಗಿದೆ.
445 ಫಲಾನುಭವಿಗಳು: ಜಿಲ್ಲೆಯಲ್ಲಿ ಒಟ್ಟು 445 ಕೊರಗ ಮಕ್ಕಳಿದ್ದು, ಈ ಯೋಜನೆಗೆ 35 ಲಕ್ಷ ಕಾದಿರಿಸಲಾಗಿದೆ. ಕೊರಗ ಮಕ್ಕಳಿಗೆ ದೊರಕುವ ಸ್ಕಾಲರ್ಶಿಪ್ ಅಲ್ಲದೆ ಇದು ವಿಶೇಷ ಯೋಜನೆಯ ಸವಲತ್ತು.
ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಇಲಾಖೆ ಹಾಗೂ ಎಲ್ಲ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆದು ಕೊರಗ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಸಂಬಂಧವಾಗಿ ಚರ್ಚಿಸಲಾಗಿದೆ. ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ವಿಸ್ತೃತವಾಗಿ ಅಭಿಪ್ರಾಯ ವ್ಯಕ್ತಪಡಿಸುವಂತೆ ಸೂಚಿಸಲಾಗಿದೆ. ತಾಲೂಕುವಾರು ವರದಿಯನ್ನು ತರಿಸುತ್ತಿದ್ದು, ಜಿಲ್ಲಾಧಿಕಾರಿ ಜತೆ ಚರ್ಚಿಸಿದ ಬಳಿಕವಷ್ಟೆ ಯೋಜನೆ ಅನುಷ್ಠಾನಕ್ಕೆ ಬರಲಿದೆ.
- ಸಬೀರ್ ಅಹ್ಮದ್ ಮುಲ್ಲಾ, ಐಟಿಡಿಪಿ ಅಧಿಕಾರಿ
ತಾಲೂಕು 1-5 ತರಗತಿ 6-10 ತರಗತಿ ಒಟ್ಟು
ಪುತ್ತೂರು 31 32 63
ಬೆಳ್ತಂಗಡಿ 19 10 29
ಬಂಟ್ವಾಳ 54 41 95
ಮಂಗಳೂರು
ದಕ್ಷಿಣ 70 73 143
ಸುಳ್ಯ 10 8 18
ಮೂಡುಬಿದಿರೆ 49 48 97
ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

