ಅಯ್ಯೋ ಆಸರೆ!
ಮೂಲ ಸೌಲಭ್ಯಗಳಿಲ್ಲ ಎನ್ನುವ ಕಾರಣಕ್ಕೆ ಫಲಾನುಭವಿಗಳು ಬಳಸಲು ಹಿಂದೇಟು ಹಾಕುತ್ತಿದ್ದರೆ, ಜನರು ವಾಸಿಸುತ್ತಿಲ್ಲ ಎನ್ನುವ ನೆಪ...
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ
ಇತ್ತ ಆಲಿಸಿ.., ನೆರೆ ಸಂತ್ರಸ್ತರಿಗಾಗಿ ಎಂದೇ ನಿರ್ಮಿಸಿಕೊಟ್ಟ 'ಆಸರೆ' ಮನೆಗಳು ವಾಸಿಸುವವರಿಲ್ಲದೇ ಪಾಳು ಮನೆಗಳಾಗುತ್ತಿವೆ. ಇಲ್ಲಿ ಮೂಲ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಜನ ವಾಸ ಮಾಡಲು ಹಿಂಜರಿದರೆ, ಜನರೇ ಬರುತ್ತಿಲ್ಲ ಎಂಬ ಕಾರಣದಿಂದಾಗಿ ನೀವು ಮೂಲಸೌಲಭ್ಯಗಳನ್ನೇ ಒದಗಿಸುತ್ತಿಲ್ಲ. ಹಾಗಾದರೆ ಭಾರಿ ಹಣ ತೆತ್ತು ನಿರ್ಮಿಸಿರುವ ಈ ಮನೆಗಳು ಅನಾಥವಾಗಬೇಕೇ? ಇದಕ್ಕೆ ಏನಾದರೂ ಮಾಡಲು ಸಾಧ್ಯವಿಲ್ಲವೇ...?
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಆ.17
ಮೂಲ ಸೌಲಭ್ಯಗಳಿಲ್ಲ ಎನ್ನುವ ಕಾರಣಕ್ಕೆ ಫಲಾನುಭವಿಗಳು ಬಳಸಲು ಹಿಂದೇಟು ಹಾಕುತ್ತಿದ್ದರೆ, ಜನರು ವಾಸಿಸುತ್ತಿಲ್ಲ ಎನ್ನುವ ನೆಪವೊಡ್ಡಿ ಸರ್ಕಾರ ಅಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸುವ ಗೋಜಿಗೇ ಹೋಗುತ್ತಿಲ್ಲ. ಹಾಗಾಗಿ ನೆರೆ ಸಂತ್ರಸ್ತರಿಗೆ ನೆರಳಾಗುವ ಮುನ್ನವೇ 'ಆಸರೆ' ಮನೆಗಳು ಮುರಿದು ಬೀಳುತ್ತಿವೆ!
2007 ಮತ್ತು 2009ರಲ್ಲಿ ಉಕ್ಕೇರಿದ ಮಲಪ್ರಭಾ ನದಿ ಪ್ರವಾಹಕ್ಕೆ ಸಿಕ್ಕು ನಲುಗಿದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಬಾಗಲಕೋಟೆ ತಾಲೂಕುಗಳ ನೆರೆ ಸಂತ್ರಸ್ತರಿಗಾಗಿ ಸರ್ಕಾರ ದಾನಿಗಳ ನೆರವಿನಿಂದ ನಿರ್ಮಿಸಿರುವ 'ಆಸರೆ' ಮನೆಗಳ ಪರಿಸ್ಥಿತಿ ಇದು.
ನೆರೆ ಸಂತ್ರಸ್ತರಿಗೆ ನೆರವಾಗುವ ದಿಸೆಯಲ್ಲಿ ಜಿಲ್ಲೆಯ ಹಲವೆಡೆ ದಾನಿಗಳೇ ಗ್ರಾಮಗಳನ್ನು ದತ್ತು ಪಡೆದು ನವ ಗ್ರಾಮಗಳನ್ನು ನಿರ್ಮಿಸಿದರೆ, ಕೆಲವೆಡೆ ಸರ್ಕಾರವೇ ಮನೆಗಳನ್ನು ಕಟ್ಟಿಕೊಟ್ಟಿತು.
ಆದರೆ, ಈಗ ಈ ಆಸರೆಯ ಸ್ಥಿತಿಗತಿಗಳ ರಿಯಾಲಿಟಿ ಚೆಕ್ ಮಾಡಿದ 'ಕನ್ನಡಪ್ರಭ'ಕ್ಕೆ ಅವ್ಯವಸ್ಥೆ, ಸರ್ಕಾರದ ಅಸಡ್ಡೆ ಮತ್ತು ಸಂತ್ರಸ್ತರ ನಿರಾಸಕ್ತಿ ಒಟ್ಟೊಟ್ಟಿಗೆ ದಿಗ್ದರ್ಶನವಾಯಿತು. ಕಲ್ಲು-ಮುಳ್ಳುಗಳ ಮಧ್ಯೆ ಈ ಸೂರುಗಳು ಅನಾಥವಾಗಿವೆ. ಬೆಳಕು ಮತ್ತು ಮನುಷ್ಯರು ಅಲ್ಲಿ ಪ್ರವೇಶವಾಗುವ ಕಾಲ ಬಹುಶಃ ಬರಲಿಕ್ಕಿಲ್ಲ.
ಮನುಷ್ಯರು ವಾಸಕ್ಕೆ ಬರುವ ಮುನ್ನವೇ ಅವೆಲ್ಲ ನೆಲಸಮವಾಗುವ ಎಲ್ಲ ಲಕ್ಷಣಗಳೂ ಇವೆ.
ಹಾಳುಬಿದ್ದ ನವಗ್ರಾಮಗಳು: ಮಲಪ್ರಭಾ ನದಿಯ ಇಕ್ಕೆಲಗಳಲ್ಲಿ ನಿರ್ಮಾಣವಾಗಿರುವ ನೆರೆ ಸಂತ್ರಸ್ತರ ಬಹುತೇಕ ನವಗ್ರಾಮಗಳು ಇಂದು ಹಾಳು ಬಿದ್ದಿವೆ. ತಮಿನಾಳ, ಕುರುವಿನಕೊಪ್ಪ, ಕಾತರಕಿ, ಮುಂಬರಡ್ಡಿಕೊಪ್ಪ, ಕಾತರಕಿ, ಖ್ಯಾಡ ನವಗ್ರಾಮಗಳಲ್ಲಿ ಸಾಲು ಸಾಲಾಗಿ ನೂರಾರು ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳ ದ್ವಾರದಲ್ಲಿ ಇಂತಿಂಥ ನವಗ್ರಾಮ ಎನ್ನುವ ಫಲಕ ಬಿಟ್ಟರೆ ಇನ್ನೇನೂ ಇಲ್ಲ. ಪೊದೆ ಪೊದೆಯಾಗಿ ಬೆಳೆದಿರುವ ಬಳ್ಳಾರಿ ಜಾಲಿ ಮುಳ್ಳಿನ ಕಂಟಿ, ಒಡೆದು ಹೋಗಿರುವ ಗಟಾರು, ಅರೆಬರೆಯಾಗಿರುವ ರಸ್ತೆ, ತಂತಿಗಳು ಹರಿದು ಜೋತು ಬಿದ್ದಿರುವ ಬೀದಿದೀಪದ ಕಂಬಗಳು ಅಲ್ಲಿನ ಪರಿಸ್ಥಿತಿಯನ್ನು ಕೂಗಿ ಕೂಗಿ ಹೇಳುತ್ತವೆ. ಇನ್ನಷ್ಟು ಒಳ ಹೋಗಿ ಇಣುಕಿದರೆ ಬಾಗಿಲು, ಕಿಟಕಿಗಳೆಲ್ಲ ಕಿತ್ತು ಹೋಗಿರುವುದು ಗಮನಕ್ಕೆ ಬರುತ್ತದೆ. ಮನುಷ್ಯರ ವಾಸವಿಲ್ಲ ಎಂದ ಮೇಲೆ ದನಗಾಯಿಗಳು, ಕಳ್ಳಕಾಕರು, ಅನೈತಿಕ ಚಟುವಟಿಕೆ ನಡೆಸುವವರಿಗೆ ಇವು 'ಆಸರೆ'ಯಾಗಿವೆ. ಅವರೆಲ್ಲ ಕೈಗೆ ಸಿಗುವ ಎಲ್ಲ ವಸ್ತುಗಳನ್ನೂ ಕಿತ್ತೊಯ್ದಿದ್ದಾರೆ. ನೆಲಕ್ಕೆ ಹಾಸಿದ್ದ ಕಲ್ಲು (ತಾಳಿಕೋಟೆಯ ಹಾಲುಗಲ್ಲು)ಗಳನ್ನೂ ಬಿಟ್ಟಿಲ್ಲ.
ಕುರಿ, ದನಗಳಿಗೆ ಆಸರೆಯಾದ ಸೂರು: ಹಿಂದಿನ ಬಿಜೆಪಿ ಸರ್ಕಾರ ಈ ಗ್ರಾಮಗಳ ಉದ್ಘಾಟನೆಯನ್ನು ಅದ್ದೂರಿಯಾಗಿ ನಡೆಸಿ ಇದೊಂದು ತನ್ನ ಅಮೋಘ ಸಾಧನೆ ಎಂದು ಬೆನ್ನು ತಟ್ಟಿಕೊಂಡಿತ್ತು. ಅಂದು ಈ ಸೂರಿನ ಫಲಾನುಭವಿಗಳೂ ಅಷ್ಟೇ ಆಸಕ್ತಿ ತೋರಿಸಿದ್ದರು. ಆದರೆ, ಇಂದು ಮಳೆಗಾಲದ ರಾತ್ರಿ ಜನಗಳ ಬದಲಾಗಿ ದನಗಳು, ಕುರಿಗಳು, ನಾಯಿಗಳು ಇಲ್ಲಿ ಆಸರೆ ಪಡೆಯುತ್ತಿವೆ. ಖ್ಯಾಡ ಇತ್ಯಾದಿ ಗ್ರಾಮಗಳಲ್ಲಿ ಇನ್ನೂ ಮನೆಗಳ ಹಂಚಿಕೆಯಾಗಿಲ್ಲ. ಹಾಗಾಗಿ ಕುರಿಗಾಯಿಗಳು ಯಾವುದೇ ಅಂಜಿಕೆ, ಮುಜುಗರ ಇಲ್ಲದೇ ಎಲ್ಲೆಂದಲ್ಲಿ ತಮಗೆ ಅನುಕೂಲವಾಗುವ ಮನೆಗಳಲ್ಲಿ ಕುರಿಗಳನ್ನು ಮಲಗಿಸಿ, ಬೀಗ ಹಾಕಿ ಮನೆಗೆ ಬಂದು ತಾವೂ ಹಾಯಾಗಿ ಮಲಗುತ್ತಾರೆ.
ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವ ಪಣ ತೊಟ್ಟು ನಿರ್ಮಿಲಾಗಿರುವ ಈ ಆಸರೆಗಳು ಈಗ ಸರ್ಕಾರ ಮತ್ತು ಸಂತ್ರಸ್ತರಿಗೂ ಬೇಡವಾಗಿರುವುದು ಮಾತ್ರ ವಿಪರ್ಯಾಸ.
ಸರ್ಕಾರದ ಭರವಸೆ ನಂಬಿ ನೆರೆಗೆ ತುತ್ತಾಗಿದ್ದ ಮನೆಗಳನ್ನು ರಿಪೇರಿ ಮಾಡಿಸದೇ ಆಸರೆ ಮನೆಗಳಿಗಾಗಿ ಕಾದೆವು. ಈಗ ಸರ್ಕಾರ ಇಲ್ಲಿ ಮನೆಗಳನ್ನು ನಿರ್ಮಿಸಿದ್ದನ್ನು ಬಿಟ್ಟರೆ ನೀರು, ವಿದ್ಯುತ್, ರಸ್ತೆ ಏನೊಂದೂ ನೀಡಿಲ್ಲ. ಈ ಜಾಗದಲ್ಲಿ ಇರುವುದಾದರೂ ಹೇಗೆ?
- ಹನುಮಂತ ಶಿವಪುರ, ಕಾತರಕಿ ಗ್ರಾಮ ನಿವಾಸಿ.
- ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

