ಪ್ರಧಾನ ಸುದ್ದಿ

ಮಂತ್ರಾಲಯದಲ್ಲಿ ಕಳೆಗಟ್ಟಿದ ಸಂಭ್ರಮ

Published On :

ರಾಯಚೂರು: ರಾಘವೇಂದ್ರ ಸ್ವಾಮಿಗಳ 342ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಸಕಲ ರೀತಿಯಿಂದ ಸಜ್ಜಾಗಿದೆ. ಆ.19ರಿಂದ 25ರವರೆಗೆ ನಡೆಯಲಿರುವ ಆರಾಧನಾ ಮಹೋತ್ಸವಕ್ಕೆ ಸೀಮಾಂಧ್ರ ಹೋರಾಟದ ಬಿಸಿ ತಟ್ಟುವ ಭೀತಿಯ ಮಧ್ಯೆಯೂ ರಾಯರ ಆರಾಧನೆಗೆ ಭಕ್ತರು ಆಗಮಿಸುತ್ತಿದ್ದು, ಸಂಭ್ರಮ ಎಲ್ಲೆಡೆ ಮನೆ ಮಾಡಿದೆ.
ಶ್ರೀಮಠದಲ್ಲಿ ಈಗಾಗಲೇ ಆರಾಧನೆಯ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ಜಾರಿಯಲ್ಲಿದ್ದು, ಶ್ರೀಮಠದ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಭವ್ಯ ವೇದಿಕೆ ಸಜ್ಜಾಗಿದೆ. ಮಳೆ ಸುರಿದರೂ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವೇದಿಕೆ ಸಜ್ಜುಗೊಳಿಸಿದ್ದು, ಶ್ರೀಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇಂದಿನಿಂದ ಆರಂಭ: ಶ್ರೀಮಠಕ್ಕೆ ಈಗಾಗಲೇ ದೀಪಾಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ಆ.19ರಂದು ಸಂಜೆ ಪೀಠಾಧಿಪತಿಗಳಾದ ಸುಯತೀಂದ್ರತೀರ್ಥರು ಹಾಗೂ ಸುಬುಧೇಂದ್ರತೀರ್ಥರ ನೇತೃತ್ವದಲ್ಲಿ ಆರಾಧನಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಸಪ್ತರಾತ್ರೋತ್ಸವದ ಧ್ವಜಾರೋಹಣ ನೆರವೇರಲಿದೆ. ಆನಂತರ ಗಜಪೂಜೆ, ಗೋವು ಪೂಜೆ, ಲಕ್ಷ್ಮಿಪೂಜೆ, ಧಾನ್ಯಪೂಜೆ ನೆರವೇರಿಸುವರು. ಆನಂತರ ಪ್ರಭಾ ಉತ್ಸವ ನಡೆಯಲಿದೆ. ಆ.20ರಂದು ಋಗ್ವೇದ, ಯಜುರ್ವೇದ ಉಪಾಕರ್ಮ ನಡೆಯಲಿದ್ದು, ರಜತ ಮಂಟಪೋತ್ಸವ ಹಾಗೂ ಶಾಕೋತ್ಸವ ನಡೆಯಲಿದೆ. ಆ.21ರಂದು ಶ್ರೀರಾಯರ ಪೂರ್ವಾರಾಧನೆ, ಆ.22ರಂದು ಮಧ್ಯಾರಾಧನೆ ಹಾಗೂ ಆ.23ರಂದು ಉತ್ತರಾರಾಧನೆ ಅಂಗವಾಗಿ ಮೂಲಬೃಂದಾವನಕ್ಕೆ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀಮಠದಿಂದ ಆಯೋಜಿಸಲಾಗಿದೆ.

ಸಂಚಾರ ಸಮಸ್ಯೆ ಭೀತಿ: ಆ.24ರಂದು ಶ್ರೀಮಠದಲ್ಲಿ ಸುಜ್ಞಾನೇಂದ್ರ ತೀರ್ಥರ ಆರಾಧನೆ, ಆ.25ರಂದು ಸರ್ವಸಮರ್ಪಣೋತ್ಸವ ನಡೆಯಲಿದೆ. ಶ್ರೀರಾಯರ ಆರಾಧನೆ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕ, ಆಂಧ್ರಪ್ರದೇಶದ ಹಾಗೂ ತಮಿಳುನಾಡು ಮತ್ತಿತರೆಡೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಈ ಮಧ್ಯೆ ಕಳೆದ ಕೆಲ ದಿನಗಳಿಂದ ಆಂಧ್ರದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ಘೋಷಣೆಗೆ ಸಂಬಂಧಿಸಿ ಸೀಮಾಂಧ್ರ ಪ್ರದೇಶದಲ್ಲಿ ಹೋರಾಟದ ಕಾವೇರಿದ್ದು, ರಸ್ತೆ ತಡೆ, ಬಂದ್‌ನಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆದಿದ್ದು, ಅದರಿಂದಾಗಿ ಸೀಮಾಂಧ್ರ ಭಾಗದಲ್ಲಿರುವ ಮಂತ್ರಾಲಯಕ್ಕೆ ಬೆಂಗಳೂರು, ಮೈಸೂರು ಕಡೆಯಿಂದ ಆಂಧ್ರದ ಅನಂತಪುರ ಮಾರ್ಗವಾಗಿ ಆಗಮಿಸುವ ಬಸ್ ಸಂಚಾರಕ್ಕೆ ವ್ಯತ್ಯಯವಾಗಿದೆ.

ವಿಶೇಷ ಬಸ್ ಸೌಲಭ್ಯ: ಸೀಮಾಂಧ್ರ ಹೋರಾಟ ತೀವ್ರಗೊಂಡರೆ ಭಕ್ತರು ರೈಲು ಮೂಲಕ ಮಂತ್ರಾಲಯಕ್ಕೆ ಆಗಮಿಸುವುದು ಅನಿವಾರ್ಯ ಎಂಬಂತಾಗಿದೆ. ಅದರಲ್ಲೂ ಆ.19ರಿಂದ ಆ.25ರವರೆಗೆ ಶ್ರೀರಾಯರ ಆರಾಧನೆ ಮಹೋತ್ಸವದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಧಾವಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಅವರಲ್ಲಿ ಸೀಮಾಂಧ್ರ ಹೋರಾಟದ ಭೀತಿ ಮೂಡಿದೆ. ಆದರೆ ಭಕ್ತರು ರಾಯಚೂರು ಮಾರ್ಗವಾಗಿ ಮಂತ್ರಾಲಯವನ್ನು ಸುರಕ್ಷಿತವಾಗಿ ಸೇರಬಹುದಾಗಿದೆ. ಇದು ಕೊಂಚಮಟ್ಟಿಗೆ ಭಕ್ತರಲ್ಲಿ ನೆಮ್ಮದಿ ತಂದಿದೆ.
ಈ ಮಧ್ಯೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿಯು ಬೆಂಗಳೂರು, ಮೈಸೂರು ಮತ್ತಿತರೆಡೆಯಿಂದ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಬಸ್ ಸೌಲಭ್ಯ ಕಲ್ಪಿಸುವ ಮೂಲಕ ಭಕ್ತರಿಗೆ ನೆರವಾಗುವ ಕಾರ್ಯ ಮಾಡುತ್ತಿದೆ.  ಅದೇ ರೀತಿ ಮಂತ್ರಾಲಯದ ಜತೆ ಜತೆಗೆ ಸುತ್ತಲಿನ ಪ್ರದೇಶಗಳಾದ ಗಾಣದಾಳ ಪಂಚಮುಖಿ ದೇವಸ್ಥಾನ, ಎಲೆಬಿಚ್ಚಾಲೆ ಕ್ಷೇತ್ರ ಸೇರಿದಂತೆ ಪ್ಯಾಕೇಜ್ ಟೂರ್‌ಗೆ ಸಂಸ್ಥೆಯು ಅವಕಾಶ ಮಾಡಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ತಿಳಿಸಿದೆ.
ಮಂತ್ರಾಲಯದಲ್ಲಿ ಒಂದು ವಾರ ಕಾಲ ರಾಘವೇಂದ್ರ ತೀರ್ಥರ 342ನೇ ಆರಾಧನಾ ಮಹೋತ್ಸವದ ಸಡಗರ ಮನೆ ಮಾಡಲಿದೆ. ಸಹಜವಾಗಿಯೇ ರಾಯರ ಕ್ಷೇತ್ರದಲ್ಲಿ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಸಂತಸ ಕಳೆಗಟ್ಟಿದೆ.

- ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.