ಪ್ರಧಾನ ಸುದ್ದಿ

ಆಲೂಗಡ್ಡೆ ಬೆಳೆಗಾರರಿಗೆ ಅಂಗ'ಮಾರಿ'

Published On :

ಚಿಕ್ಕಮಗಳೂರು: ಬಿಡುವಿಲ್ಲದೆ ಸುರಿದ ಮಳೆಯಿಂದಾಗಿ ಆಲೂಗೆಡ್ಡೆ ಅಂಗಮಾರಿ ರೋಗಕ್ಕೆ ತುತ್ತಾಗಿದೆ. ಚಿಕ್ಕಮಗಳೂರು ಹಾಗೂ ನೆರೆ ಹಾಸನ ಜಿಲ್ಲೆಗಳಲ್ಲಿ ಸುಮಾರು 11,500 ಹೆಕ್ಟೇರ್ ಆಲೂಗೆಡ್ಡೆ ಬೆಳೆ ನಾಶವಾಗಿದ್ದು, ರೈತರಿಗೆ ಸುಮಾರು 100 ಕೋಟಿಗೂ ಹೆಚ್ಚು ನಷ್ಟವಾಗಿದೆ.
ಮುಂಗಾರಿನಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಬೆಳಗಾವಿ, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತದೆ. ಈ ಐದು ಜಿಲ್ಲೆಗಳ ಪೈಕಿ ಹಾಸನ ಜಿಲ್ಲೆಯೊಂದರಲ್ಲೇ ಸುಮಾರು 22 ಸಾವಿರ ಹೆಕ್ಟೇರ್ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 3,859 ಹೇಕ್ಟರ್‌ನಲ್ಲಿ ಆಲೂಗೆಡ್ಡೆ ಬೆಳೆಯಲಾಗುತ್ತದೆ.
ಆಲೂಗೆಡ್ಡೆಗೆ ಅಂಗಮಾರಿ ರೋಗ ಹೊಸದೇನೂ ಅಲ್ಲ. ಕಳೆದ ಎರಡು ವರ್ಷಗಳ ಹಿಂದೆ ಈ ರೋಗ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಆದರೆ, ಕಳೆದ ವರ್ಷ ರೋಗ ಇತ್ತಾದರೂ ಇದರ ತೀವ್ರತೆ ಹೆಚ್ಚಿರಲಿಲ್ಲ. ಸ್ವಲ್ಪ ಮಟ್ಟಿಗೆ ಬೆಳೆದ ಆಲೂಗೆಡ್ಡೆಗೆ ಬಂಪರ್ ಬೆಲೆ ಬಂದಿತ್ತು. ಇದರಿಂದ ಈ ವರ್ಷದಲ್ಲಿ ರೈತರು ಮುಂಗಾರಿನಲ್ಲಿ ಹೆಚ್ಚು ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತಿದ್ದರು.

ಬಿಡದ ಮಳೆಯಿಂದ ಬಂದ ರೋಗ:
ಸತತವಾಗಿ ಸುಮಾರು ಎರಡು ತಿಂಗಳ ಕಾಲ ಸುರಿದ ಮಳೆಗೆ ಆಲೂಗೆಡ್ಡೆಗೆ ಈ ಬಾರಿಯೂ ಅಂಗಮಾರಿ ರೋಗ ಬಂದಿದೆ. ಫಸಲಿರುವ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದ್ದರೆ, ಈ ರೋಗ ಕಾಣಿಸಿಕೊಳ್ಳುತ್ತದೆ. ನಿರಂತರವಾಗಿ ಮಳೆ ಬಂದರೆ ಈ ರೋಗ ಇನ್ನಷ್ಟು ಪ್ರದೇಶಕ್ಕೆ ಹರಡುತ್ತದೆ. ಈ ಬಾರಿ  ವಾಡಿಕೆಗೂ ಮೀರಿ ಮಲೆ ಬಂದಿದ್ದರಿಂದ ಅಂಗಮಾರಿ ರೋಗ ತೀವ್ರವಾಗಿ ಕಾಣಿಸಿಕೊಂಡಿದೆ. ಹಾಸನ ಜಿಲ್ಲೆಯಲ್ಲಿ ಸುಮಾರು 9 ಸಾವಿರ ಹೆಕ್ಟೇರ್, ಚಿಕ್ಕಮಗಳೂರು ಜಿಲ್ಲೆಯಲ್ಲಿ 2,500 ಹೆಕ್ಟೇರ್ ಆಲೂಗೆಡ್ಡೆ ಪ್ರದೇಶ ಅಂಗಮಾರಿ ರೋಗಕ್ಕೆ ತುತ್ತಾಗಿದೆ. ಇದರಿಂದಾಗಿ ರೈತರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ.

ಕೋಟ್ಯಾಂತರ ನಷ್ಟ: ಮುಂಗಾರು ಆರಂಭಗೊಳ್ಳುತ್ತಿದ್ದಂತೆ ಆಲೂಗೆಡ್ಡೆ ಬಿತ್ತನೆ ಮಾಡಲಾಗಿತ್ತು. ಆದರೆ, ಮಳೆ ಬಿಡುವು ನೀಡದ ಕಾರಣ ಔಷಧಿ ಸಿಂಪಡಿಸಲೂ ರೈತರಿಗೆ ಆಗಲಿಲ್ಲ. ಇದೀಗ ಮಳೆ ನಿಂತಿದ್ದರೂ ರೋಗ ಎಲ್ಲೆಡೆ ಹರಡಿದೆ. ರೈತರಿಗೆ ಹಾಕಿದ ಬಂಡವಾಳ ಸಿಗುವುದೂ ಕಷ್ಟ. ಒಂದು ಹೆಕ್ಟೇರ್‌ನಲ್ಲಿ ಆಲೂಗೆಡ್ಡೆ ಬೆಳೆಯಲು ಖರ್ಚಾಗುವುದು 90 ಸಾವಿರ. ಆದರೆ, ಸರ್ಕಾರ ಒಂದು ಹೆಕ್ಟೇರ್‌ನಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ನೀಡುವ ಪರಿಹಾರದ ಮೊತ್ತ ಕೇವಲ 5 ಸಾವಿರ ಮಾತ್ರ. ಇದನ್ನು ಪಡೆಯಲು ಯಾವ ರೈತನೂ ಮನಸ್ಸು ಮಾಡುವುದೇ ಇಲ್ಲ. ಹವಮಾನ ವೈಪರಿತ್ಯದಿಂದ ಆಲೂಗೆಡ್ಡೆ ಬೆಳೆಯನ್ನು ಕಳೆದುಕೊಂಡ ರೈತರಿಗೆ ಬೆಳೆ ವಿಮೆ ನೀಡಲು ಅವಕಾಶ ಇದೆ. ಅದರಲ್ಲೂ ರೈತರಿಗೆ ಸಮಧಾನ ಸಿಗುವಷ್ಟು ವಿಮಾ ಹಣ ಸಿಗುವುದಿಲ್ಲ. ಉತ್ತಮ ಫಸಲು ಮತ್ತು ಬೆಲೆಯ ನಿರೀಕ್ಷೆಯೊಂದಿಗೆ ಆಲೂಗೆಡ್ಡೆ ಬೆಳೆದ ರೈತರು ಕಂಗಲಾಗಿದ್ದಾರೆ. ಸರ್ಕಾರ ಈಗ ನೀಡುತ್ತಿರುವ ಪರಿಹಾರ ಧನವನ್ನು ಹೆಚ್ಚಿಸಿದರೆ ಮಾತ್ರ ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ಸಾಧ್ಯ. ಇಲ್ಲದಿದ್ದಲ್ಲಿ ರೈತರು ಆರ್ಥಿಕ ಸಮಸ್ಯೆಯನ್ನು ಎದುರಿಸುವುದು ಗ್ಯಾರಂಟಿ.

- ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.