ಅಣೆಕಟ್ಟು ಎತ್ತರ, ರೈತರ ಬಾಳು ತತ್ತರ
ಕನ್ನಡಪ್ರಭ ವಾರ್ತೆ, ಬಂಟ್ವಾಳ, ಆ.20-
ಒಂದೆಡೆ ಡ್ಯಾಂ ಎತ್ತರ ಹೆಚ್ಚುತ್ತಿರುವ ವದಂತಿ, ಇನ್ನೊಂದೆಡೆ ಜನಪ್ರತಿನಿಧಿಗಳ ಮೌನ. ಏನೂ ಕೇಳದಂತೆ- ಕಾಣದಂತೆ ಸುಮ್ಮನಿರುವ ಅಧಿಕಾರಿ ವರ್ಗ. ಇವೆಲ್ಲದರ ನಡುವೆ ಕೃಷಿಕರ ಬದುಕೂ ಕೊಚ್ಚಿ ಹೋಗುತ್ತಿರುವ ವಿಷಾದನೀಯ ಸನ್ನಿವೇಶಗಳ ಸೃಷ್ಟಿಗೆ ಕಾರಣವಾಗುತ್ತಿವೆ ನೇತ್ರಾವತಿ ನದಿ ಪಾತ್ರದ ಉದ್ದಿಮೆಗಳು.
ಬಂಟ್ವಾಳ ತಾಲೂಕಿನ ಶಂಭೂರು, ತುಂಬೆ, ಸೆಝ್ ಆಯ್ತು.. ಇದೀಗ ಸರಪಾಡಿ ಸರದಿ. ಮಂಗಳೂರಿನ ವಿಶೇಷ ವಿತ್ತ ವಲಯಕ್ಕೆ ನೀರು ಒದಗಿಸಲು ಸರಪಾಡಿಯಲ್ಲಿ ಬೃಹತ್ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರ ನಡುವೆ, ಎಎಂಆರ್ ಹೃತ್ವಿಕ್ ಹೈಡಲ್ ಪ್ರಾಜೆಕ್ಟ್ ಮೂಲಕ ಅಣೆಕಟ್ಟನ್ನು ಎತ್ತರಿಸಲಾಗಿದೆ. ಆ ಮೂಲಕ ಕಂಪನಿ ಗ್ರಾಮಸ್ಥರನ್ನು ಮುಳುಗಿಸುವ ಕೆಲಸ ಮಾಡುತ್ತಿದೆ ಎನ್ನುವುದು ಗ್ರಾಮಸ್ಥರ ಆರೋಪ.
ಡ್ಯಾಂ ಎತ್ತರ ಏರಿಸಿಲ್ಲ- ಕಂಪನಿ: ಗ್ರಾಮಸ್ಥರು ಕಂಪನಿ ವಿರುದ್ಧ ಆರೋಪಗಳ ಸುರಿಮಳೆ ಹರಿಸುತ್ತಿರುವಂತೆಯೇ ಗ್ರಾಮಸ್ಥರ ಆರೋಪವನ್ನು ಕಂಪನಿ ನಿರಾಕರಿಸಿದೆ.
ಈ ಬಗ್ಗೆ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಎಎಂಆರ್- ಹೃತ್ವಿಕ್ ಪವರ್ ಪ್ರಾಜೆಕ್ಟ್ ಮುಖ್ಯಸ್ಥ ಪ್ರವೀಣ್ ಕುಮಾರ್, 'ಡ್ಯಾಂ ಎತ್ತರ ಹೆಚ್ಚಿಸುವ ಯಾವುದೇ ಪ್ರಸ್ತಾಪ ಕಂಪನಿ ಮುಂದಿಲ್ಲ. ಮತ್ತದು ಸಾಧ್ಯವೂ ಇಲ್ಲ' ಎಂದಿದ್ದಾರೆ.
ಕಳೆದ ಬೇಸಗೆಯಲ್ಲಿ ಡ್ಯಾಂನಲ್ಲಿ ನಡೆದಿರುವುದು ಅಣೆಕಟ್ಟಿನ ಹಲಗೆಗಳ ರಿಪೇರಿ ಕಾರ್ಯ. ಇದನ್ನು ಗ್ರಾಮಸ್ಥರಿಗೆ ತಪ್ಪಾಗಿ ಬಿಂಬಿಸಲಾಗಿದೆ. ಅತಿಯಾದ ಮಳೆಯಿಂದ ಕೃಷಿಗೆ ಹಾನಿಯಾಗಿರಬಹುದೇ ವಿನಾ ಡ್ಯಾಂನ ಎತ್ತರವನ್ನು ಹೆಚ್ಚಿಸಲಾಗಿದೆ ಎನ್ನುವುದು ಸುಳ್ಳು ಎನ್ನುತ್ತಾರೆ ಅವರು. ಆದರೆ, ಡ್ಯಾಂ ಎತ್ತರಕ್ಕೆ ಸಂಬಂಧಿಸಿದಂತೆ ಸರಪಾಡಿ ಗ್ರಾಮಸ್ಥರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ದೂರು ನೀಡಿದ್ದು, ಜಿಲ್ಲಾಧಿಕಾರಿ ಮೂಲಕ ಈಗ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಸಮಸ್ಯೆ ಏನು?: ಮಳೆಗಾಲಕ್ಕೆ ಮುನ್ನವೇ ಸರಪಾಡಿ ಅಣೆಕಟ್ಟಿನಲ್ಲಿ ಕಾಮಗಾರಿಗಳು ನಡೆದಿದ್ದವು. ಹೃತ್ವಿಕ್ ಹೈಡಲ್ ಪ್ರಾಜೆಕ್ಟ್ ಆಗಿ ತಳವೂರಿರುವ ಎಎಂಆರ್ ಕಂಪನಿ ಇದೀಗ ಸರಪಾಡಿಯಲ್ಲಿ ಸದ್ದಿಲ್ಲದೆ ಈಗಿರುವ ಅಣೆಕಟ್ಟಿನ ಎತ್ತರವನ್ನು 1.50 ಮೀ. ಹೆಚ್ಚಿಸುವ ಕಾರ್ಯ ನಡೆಸಿದೆ. ಇದರಿಂದಾಗಿ ಈ ಬಾರಿಯ ಮಳೆಗಾಲದಲ್ಲಿ ಹೆಚ್ಚು ಭೂಮಿ ಜಲಾವೃತವಾಗಿ ಲಕ್ಷಾಂತರ ರು.ನಷ್ಟವೂ ಸಂಭವಿಸಿದೆ ಎನ್ನುವುದು ಗ್ರಾಮಸ್ಥರ ಆರೋಪ.
ಯೋಜನೆ ವಿರೋಧಿಸುವ ಸಲುವಾಗಿ ಹುಟ್ಟಿಕೊಂಡ ಸಂತ್ರಸ್ತರ ಸಮಿತಿ ಗ್ರಾಮದ ಜನರನ್ನು ಒಟ್ಟುಗೂಡಿಸಿಕೊಂಡು, ಹೋರಾಟ ರೂಪಿಸಿದ್ದರೂ ನಂತರ ಸುಮ್ಮನಾದ ರೀತಿಯ ಬಗ್ಗೆ ಜನರಲ್ಲಿನ್ನೂ ಆಕ್ರೋಶವಿದೆ. ಕಂಪನಿ ಕಡೆಯಿಂದ ಇನ್ನೂ ಸೂಕ್ತ ಪರಿಹಾರ ದೊರೆಯದ ಸಂತ್ರಸ್ತರು ಇದ್ದಾರೆ.
ಗ್ರಾಮಸ್ಥರಿಗೆ ಯಾಕೆ ಸಿಟ್ಟು: ಗ್ರಾಮದಲ್ಲಿ ತಳವೂರಿರುವ ಎಎಂಆರ್ ಕಂಪನಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಪೂರೈಸುವ ಭರವಸೆ ನೀಡಿತ್ತು. ಆದರೆ ಆ ಭರವಸೆಯನ್ನು ಮರೆತಿರುವ ಕಂಪನಿ, ಗ್ರಾಮದ ಅಭಿವೃದ್ಧಿಗೆ ಬೆನ್ನು ಹಾಕಿದ್ದಲ್ಲದೆ, ಕೃಷಿ ಭೂಮಿ ಮುಳುಗಡೆಯಾಗಿದ್ದರೂ ಗ್ರಾಮಸ್ಥರ ನೆರವಿಗೆ ಬರದಿರುವುದು ಗ್ರಾಮಸ್ಥರ ಸಿಟ್ಟಿಗೆ ಕಾರಣವಾಗಿದೆ. ಕಂಪನಿಯೂ ಕೂಡ ತನ್ನ ಅಣೆಕಟ್ಟು ಪರಿಸರದಲ್ಲಿ ನಡೆದ ಕಾಮಗಾರಿ ಬಗ್ಗೆ ಗ್ರಾಮಸ್ಥರಿಗೆ ಸಮರ್ಪಕ ಮಾಹಿತಿ ನೀಡಿದರೆ ಇಂತಹ ಗೊಂದಲಕ್ಕೆ ಶೀಘ್ರ ಪರಿಹಾರ ದೊರಕೀತು ಎನ್ನುವುದು ಸ್ಥಳೀಯರ ವಾದ.
ಉದ್ದಿಮೆಗಳನ್ನು ಸ್ಥಾಪಿಸಿ ಕೃಷಿ ನಾಶಗೊಳಿಸುವ ಸಂಚು ನಡೆದಿದೆ. ಎಎಂಆರ್ ಕಂಪನಿ ಕೃಷಿಕರ ಅವನತಿಯನ್ನು ಮಾಡಲು ಬಂದಿರುವ ಉದ್ದಿಮೆಯಾಗಿದೆ. ಅದನ್ನು ಪಕ್ಷಾತೀತವಾಗಿ ವಿರೋಧಿಸಬೇಕಿದೆ.
- ಸರಪಾಡಿ ಅಶೋಕ್ ಶೆಟ್ಟಿವಲಯ ರೈತರ ಹಿತರಕ್ಷಣಾ ಸಂಘದ ಅಧ್ಯಕ್ಷ
ಹೃತ್ವಿಕ್ ಹೈಡಲ್ ಪ್ರಾಜೆಕ್ಟ್ ಸರಪಾಡಿಯಲ್ಲಿ ಅಣೆಕಟ್ಟೆ ಎತ್ತರಿಸಿರುವ ಬಗ್ಗೆ ಮಾಹಿತಿ ಬಂದಿಲ್ಲ. ಆದರೆ ಈ ಬಗ್ಗೆ ಜಿಪಂ ಎಂಜಿನಿಯರ್ ಮೂಲಕ ಪರಿಶೀಲಿಸಲಾಗುವುದು. ಆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
-ಎನ್.ಪ್ರಕಾಶ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
- ಮೌನೇಶ ವಿಶ್ವಕರ್ಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

