ಪ್ರಧಾನ ಸುದ್ದಿ

ಅರಣ್ಯವಾಸಿಗಳಿಗೆ ಹಕ್ಕುಪತ್ರ ಕುಂಟು ನೆಪ ಕಷ್ಟ

Published On :

ಕ.ಪ್ರ.ವಾರ್ತೆ,  ಮಂಗಳೂರು,  ಆ. 25-
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆ ಜಾರಿಯಲ್ಲಿದ್ದರೂ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿಲ್ಲ. ಹಾಗಾಗಿ ಅರಣ್ಯದಲ್ಲಿ ವಾಸಿಸುತ್ತಿರುವ ಅನೇಕ ಮಂದಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ನಕ್ಸಲ್ ಸಮಸ್ಯೆ ನಿಯಂತ್ರಿಸುವ ದಿಟ್ಟ ಹೆಜ್ಜೆಯಾಗಿ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಈ ಕುರಿತು ಅಧಿಕಾರಿಗಳಿಗೆ, ಸಿಬ್ಬಂದಿಗೆ ತಿಳುವಳಿಕೆ ಮೂಡಿಸಿ ತ್ವರಿತ ಅನುಷ್ಠಾನಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ಸಾಮಾನ್ಯವಾಗಿ ಅರಣ್ಯದಲ್ಲಿ ಹಕ್ಕು ಪತ್ರಕ್ಕೆ ಅರ್ಜಿ ಸಲ್ಲಿಸಿದರೆ ತಿರಸ್ಕರಿಸುವುದೇ ಜಾಸ್ತಿ. ಹಾಗಾಗಿ ಅರಣ್ಯವಾಸಿಗಳೂ ಹಕ್ಕುಪತ್ರಕ್ಕೆ ದುಂಬಾಲು ಬೀಳುತ್ತಿಲ್ಲ. ತಮ್ಮದೇ ವಾಸಸ್ಥಳವಾದರೂ ಹಕ್ಕಿಗಾಗಿ ಕಾಡಿಬೇಡುವುದು ಅರಣ್ಯವಾಸಿಗಳಿಂದ ಸಾಧ್ಯವಾಗುತ್ತಿಲ್ಲ. ಜನಪ್ರತಿನಿಧಿಗಳಿಗಿಂತ ಅಧಿಕಾರಿ, ಸಿಬ್ಬಂದಿಗೆ ಕಾನೂನು, ಯೋಜನೆ ಬಗೆಗಿನ ಅಜ್ಞಾನದಿಂದ ನಿರೀಕ್ಷಿತ ರೀತಿಯಲ್ಲಿ ಹಕ್ಕುಪತ್ರ ವಿತರಣೆಯಾಗುತ್ತಿಲ್ಲ. ಇದನ್ನೇ ನಕ್ಸಲರು ತಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಬಳಕೆ ಮಾಡುವುದು ಸಾಮಾನ್ಯ. ಇದನ್ನು ತಪ್ಪಿಸಲು ಕುಂಟುನೆಪ ಹೇಳದೆ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಅಧಿಕಾರಿಗಳೇ ಸಿಬ್ಬಂದಿಗೆ ತಿಳುವಳಿಕೆ ಕೊಡಲಿದ್ದಾರೆ.

ಸಮಿತಿ ಪುನರ್ರಚನೆ: ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿಯನ್ವಯ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಅರಣ್ಯ ಹಕ್ಕು ಸಮಿತಿ ಪುನರ್ ರಚಿಸಲಾಗಿದೆ. ಈ ಸಮಿತಿಯಲ್ಲಿ 15 ಮಂದಿ ಸದಸ್ಯರಿದ್ದು, ಒಬ್ಬರು ಅಧ್ಯಕ್ಷ. ಹಕ್ಕುಪತ್ರಕ್ಕೆ ಫಲಾನುಭವಿ ಸಲ್ಲಿಸಿದ ವೈಯಕ್ತಿಕ ಅರ್ಜಿ ಪಡೆದು ಮುಂದಿನ ಕ್ರಮಕ್ಕೆ ಉಪವಿಭಾಗ ಮಟ್ಟದ ಸಮಿತಿ, ಜಿಲ್ಲಾ ಮಟ್ಟದ ಸಮಿತಿಗೆ ರವಾನಿಸಿ ಹಕ್ಕುಪತ್ರ ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಅರ್ಜಿಗಳನ್ನು ಶಿಫಾರಸ್ಸು ಮಾಡುವುದಷ್ಟೇ ಈ ಸಮಿತಿ ಕೆಲಸ.
ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳಗಳಲ್ಲಿ ತರಬೇತಿ ನಡೆಯಲಿದ್ದು, ಸಹಾಯಕ ಕಮಿಷನರ್, ವಲಯ ಅರಣ್ಯಾಧಿಕಾರಿ, ಕಂದಾಯ ಅಧಿಕಾರಿ, ಜಿಲ್ಲಾ ಪಂಚಾಯ್ತಿ ಸದಸ್ಯರು, ತಾಲೂಕು ಪಂಚಾಯ್ತಿ ಸದಸ್ಯರು, ಗ್ರಾಮ ಪಂಚಾಯ್ತಿ ಅಧಿಕಾರಿ, ಗ್ರಾಮಗಳ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರು ಹಾಜರಾಗಲಿದ್ದಾರೆ. ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆ ಈಗಾಗಲೇ ಸಭೆಯ ನೋಟೀಸ್ ನೀಡಿದೆ. ಅರಣ್ಯ ಹಕ್ಕು ಸಮಿತಿ ಅನುಷ್ಠಾನಕ್ಕೆ ಈ ರೀತಿ ಸಾಮೂಹಿಕವಾಗಿ ಸಭೆ ನಡೆಸುವುದು ಇದೇ ಮೊದಲು.

434 ಮಂದಿಗೆ ಹಕ್ಕುಪತ್ರ: ಕಳೆದ ವರ್ಷ ಅರಣ್ಯದಲ್ಲಿ ವಾಸಿಸುತ್ತಿರುವ ಮಲೆಕುಡಿಯರು, ಕೊರಗರು ಸೇರಿದಂತೆ 72 ಅರ್ಜಿ ಸಲ್ಲಿಕೆಯಾಗಿತ್ತು. ಇದರಲ್ಲಿ 8 ಅರ್ಜಿ ನೆಟ್ಟಣ, 29 ಅರ್ಜಿ ಬೆಳ್ತಂಗಡಿ, 30 ಅರ್ಜಿ ಸುಳ್ಯ, 5 ಅರ್ಜಿ ಬಂಟ್ವಾಳದಿಂದ ಸಲ್ಲಿಕೆಯಾಗಿತ್ತು. 2009ರಿಂದ ಈವರೆಗೆ ಒಟ್ಟು ಸಲ್ಲಿಕೆಯಾದ ಅರ್ಜಿಯಲ್ಲಿ ಪರಿಶಿಷ್ಟ ಪಂಗಡದ 506 ಅರ್ಜಿಯಲ್ಲಿ 434 ಅರ್ಜಿ ವಿಲೇವಾರಿಯಾಗಿದೆ. ಇತರೆ ಜಾತಿಗಳ 1172 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 2005ರ ಮೊದಲು ಅರಣ್ಯದಲ್ಲಿ ವಾಸವಿದ್ದ ಪರಿಶಿಷ್ಟ ಜಾತಿಯವರಿಗೆ ಹಕ್ಕುಪತ್ರ ನೀಡಲು ಅವಕಾಶವಿದೆ. ಇದಕ್ಕೆ ಅಗತ್ಯ ದಾಖಲೆಪತ್ರಗಳನ್ನು ಸಮಿತಿಗೆ ಹಾಜರುಪಡಿಸಬೇಕು. ಆದರೆ ಇತರೆ ಜಾತಿಯವರು 75 ವರ್ಷದಿಂದ ಅರಣ್ಯದಲ್ಲಿರುವ ಬಗ್ಗೆ ದಾಖಲೆ ಹಾಜರುಪಡಿಸಬೇಕು. ಹಳೆ ದಾಖಲೆ ಲಭ್ಯವಿಲ್ಲದಿರುವುದೇ ಇವರ ಅರ್ಜಿ ತಿರಸ್ಕೃತಗೊಳ್ಳಲು ಕಾರಣ. ಈವರೆಗೆ ಹಕ್ಕುಪತ್ರ ಪಡೆದವರಲ್ಲಿ ಮರಾಠಿ ನಾಯ್ಕ 41, ಮಲೆಕುಡಿಯರು 23 ಹಾಗೂ ಕೊರಗರು 8 ಮಂದಿ ಸೇರಿದ್ದಾರೆ. ಕುದುರೆಮುಖ ವನ್ಯಜೀವಿ ವ್ಯಾಪ್ತಿಯಲ್ಲಿ ಮಲೆಕುಡಿಯ ಸಮುದಾಯ ಸಲ್ಲಿಸಿದ 9 ಅರ್ಜಿ ಇತ್ಯರ್ಥಗೊಂಡಿಲ್ಲ. 2012ರಲ್ಲಿ ಒಟ್ಟು 14 ಅರ್ಜಿ ಸಲ್ಲಿಕೆಯಾಗಿತ್ತು. ಉಳಿದ ಅರ್ಜಿಯನ್ನು ತಿರಸ್ಕೃರಿಸಲಾಗಿತ್ತು.

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.