ಡಿಸಿಪಿ ಮನೆ ನಾಯಿಗೆ ಪೊಲೀಸ್ ಊಟ, ಪಾಠ

ಕನ್ನಡಪ್ರಭ ವಾರ್ತೆ, ಮಂಗಳೂರು, ಆ. 30-
ಮನೆಯ ಸಾಕು ನಾಯಿಗೆ ಪೊಲೀಸ್ ಇಲಾಖೆಯ ಊಟ ಮತ್ತು ಪಾಠದ ವ್ಯವಸ್ಥೆ!
ಇಂಥ 'ಅಪರೂಪ'ದ ಸೌಲಭ್ಯ ಮಂಗಳೂರು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಪ.ರಾ. ಶೆಟ್ಟಿ ಅವರ ಸಾಕು ನಾಯಿಗೆ ಸಿಗುತ್ತಿದೆ. ಪ್ರತಿದಿನ ಪೊಲೀಸ್ ಇಲಾಖೆಯ ಶ್ವಾನದಳಕ್ಕೆ ನೀಡುವ ಆಹಾರ ಪೂರೈವುದಲ್ಲದೇ, ಪೊಲೀಸ್ ಇಲಾಖೆಯ ಶ್ವಾನಗಳಿಗೆ ತರಬೇತಿ ನೀಡುವ ಸಿಬ್ಬಂದಿಯೊಬ್ಬರು ಡಿಸಿಪಿ ಶೆಟ್ಟಿ ಅವರ ಮನೆಗೆ ದಿನಕ್ಕೆರಡು ಬಾರಿ ತೆರಳಿ ಸಾಕು ನಾಯಿಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ.
ಶೆಟ್ಟಿ ಅವರ ನಾಯಿಗೆ ವಿಶೇಷ ಆತಿಥ್ಯ ಸಿಗುತ್ತಿದ್ದರೆ ಅವರ ಅಡಿಯಲ್ಲಿ ಕೆಲಸ ಮಾಡುವ ಪೊಲೀಸ್ ಪೇದೆಗಳ ಪಾಡು ನಾಯಿಗಿಂತಲೂ ಕಡೆಯಾಗಿದೆ. ಇವರು ನೀಡುವ ಶಿಸ್ತು ಕ್ರಮದ ಕಿರುಕುಳಕ್ಕೆ ನವೀನ್ ಎಂಬ ಪೊಲೀಸ್ ಪೇದೆ ಆತ್ಮಹತ್ಯೆಗೂ ಯತ್ನಿಸಿದ್ದಾರೆ. 6 ತಿಂಗಳಲ್ಲಿ 15ಕ್ಕೂ ಹೆಚ್ಚು ಪೊಲೀಸರಿಗೆ ಶಿಸ್ತು ಕ್ರಮದ ಶಿಕ್ಷೆ ನೀಡಿ 'ಅಶಿಸ್ತು' ಮೆರೆದಿದ್ದಾರೆ.
ಡಿಸಿಪಿ ಪ.ರಾ. ಶೆಟ್ಟಿ ಅವರ ಮನೆ ನಾಯಿಗೆ ಶ್ವಾನದಳದ ಪೊಲೀಸರು ಪಾಳಿಯಂತೆ ತರಬೇತಿ ನೀಡಬೇಕು. ಶ್ವಾನದಳ ಕಚೇರಿಯಿಂದ ನಾಯಿಗೆ ನೀಡುವ ಆಹಾರ ಹಿಡಿದು ಶ್ವಾನ ತರಬೇತಿದಾರ ಬಸ್ನಲ್ಲಿ ಬೆಳಗ್ಗೆ 9 ಗಂಟಗೆ ಹೊರಟು ಡಿಸಿಪಿ ಕ್ವಾಟರ್ಸ್ಗೆ 9.30 ತಲುಪುತ್ತಾರೆ. ನಾಯಿಗೆ ಆಹಾರ ನೀಡಿ 11 ಗಂಟೆವರೆಗೆ ಬೇಸಿಕ್ ತರಬೇತಿ ನೀಡಿ ವಾಪಸ್ ಬಸ್ನಲ್ಲಿ ತೆರಳುತ್ತಾರೆ. ಸಂಜೆ ಮತ್ತೆರಡು ಗಂಟೆ ತರಬೇತಿ ನೀಡುತ್ತಾರೆ. ಶ್ವಾನದಳದಲ್ಲಿ 8 ನಾಯಿಗಳಿಗೆ ನೀಡುವ ಆಹಾರದಲ್ಲೇ ಒಂದಂಶ ಡಿಸಿಪಿ ಮನೆಗೆ ಕಳುಹಿಸಲಾಗುತ್ತಿದೆ.
ಹಿಂದೆ ಪೊಲೀಸ್ ಕಮಿಷನರ್ ಆಗಿದ್ದ ಸೀಮಂತ್ ಕುಮಾರ್ ಸಿಂಗ್ ಡಿಸಿಪಿಗಳ ಬಹುತೇಕ ಅಧಿಕಾರ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. 6 ತಿಂಗಳ ಹಿಂದೆ ಮನೀಷ್ ಕರ್ಬಿಕರ್ ಅವರು ಕಮಿಷನರ್ ಆಗಿ ಬಂದ ಬಳಿಕ ರಜೆ, ಶಿಕ್ಷೆ, ಪೊಲೀಸ್ ವಾಹನ ಉಸ್ತುವಾರಿ ಸಹಿತ ಎಲ್ಲ ಅಧಿಕಾರವನ್ನು ಡಿಸಿಪಿಗಳಿಗೆ ಬಿಟ್ಟುಕೊಟ್ಟಿದ್ದಾರೆ. ಕಚೇರಿಗೆ 5 ನಿಮಿಷ ತಡವಾಗಿ ಬಂದರೆ, ಆಕಸ್ಮಾತ್ ಸೆಲ್ಯೂಟ್ ಹೊಡೆಯದಿದ್ದರೂ ಇನ್ಕ್ರಿಮೆಂಟ್ ಕಟ್ನಂಥ ಶಿಕ್ಷೆ ವಿಧಿಸಲಾಗಿದೆ.
ಕಿರುಕುಳದಿಂದ ಆತ್ಯಹತ್ಯೆ ಯತ್ನ: ಮೀಸಲು ಪಡೆ ಪೊಲೀಸ್ ನವೀನ್ ಎಂಬವರು ಮೂಗಿನ ಆಪರೇಷನ್ಗಾಗಿ ರಜೆಗೆ ತೆರಳಿದ್ದರು. ವಾಪಸ್ ಬರುವಾಗ ಕರ್ತವ್ಯಕ್ಕೆ ಹಾಜರಾಗಲು ಡಿಸಿಪಿ ಶೆಟ್ಟಿ ಅವರು ಅವಕಾಶ ನೀಡಿಲ್ಲ. ಪದೇ ಪದೇ ಕಚೇರಿಗೆ ಬಂದರೂ ವಾಪಸ್ ಕಳುಹಿಸಿ ಅಮಾನತು ಮಾಡಲು ಡೆಸರ್ಟರ್ ನೊಟಿಫಿಕೇಷನ್ ಹೊರಡಿಸಿದ್ದಾರೆ.
ಪದೇ ಪದೇ ಡಿಸಿಪಿ ಕಚೇರಿಗೆ ನವೀನ್ ಬಂದಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ನವೀನ್ ತನ್ನ ಹೆತ್ತವರ ಜತೆ ತೆರಳಿ ಪೊಲೀಸ್ ಕಮಿಷನರ್ ಅವರ ಬಳಿ ದೂರಿದಾಗ ಅವರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು. ಇಷ್ಟಾದರೂ ಡಿಸಿಪಿ ಶೆಟ್ಟಿ ಅವರು ಕಚೇರಿ ಒಳಗೆ ಸೇರಿಸಿಕೊಳ್ಳಲಿಲ್ಲ.
ಬೇಸತ್ತ ನವೀನ್ ನಾನು ಸಾಯುತ್ತೇನೆ, ಇದಕ್ಕೆ ಡಿಸಿಪಿ ಪ.ರಾ.ಶೆಟ್ಟಿ ಮತ್ತು ಆರ್ಪಿಐ (ಮೀಸಲು ಪೊಲೀಸ್ ಇನ್ಸ್ಪೆಕ್ಟರ್) ಕಿರುಕುಳ ಕಾರಣ ಎಂದು ಗುರುವಾರ ತಮ್ಮ ಸ್ನೇಹಿತರಿಗೆ ಎಸ್ಎಂಎಸ್ ಕಳುಹಿಸಿ ನಾಪತ್ತೆಯಾಗಿದ್ದರು. ಮಧ್ಯರಾತ್ರಿವರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಪುಂಜಾಲಕಟ್ಟೆಯಲ್ಲಿ ಗೆಳೆಯನ ಮನೆಯಲ್ಲಿದ್ದ ನವೀನ ಅವರನ್ನು ಕಚೇರಿಗೆ ಕರೆತಂದು ಕರ್ತವ್ಯಕ್ಕೆ ಹಾಜರುಪಡಿಸಿದ್ದಾರೆ!
ಸಮವಸ್ತ್ರ ಕಿಸೆಗೆ ಕತ್ತರಿ!
ಪೊಲೀಸರ ಸಮವಸ್ತ್ರ ಹೊಲಿಯಲು ಡಿಸಿಪಿ ಸೂಚಿಸಿದ ರೇಮಂಡ್ ಟೈಲರ್ಗೆ ನೀಡಬೇಕು. ಹೊಲಿಯುವ ಮುನ್ನ 500, ಬಳಿಕ 350 ನೀಡಬೇಕು! ಸಮವಸ್ತ್ರ ಹೊಲಿದ ಬಳಿಕ ಟೈಲರ್ ನೇರವಾಗಿ ಡಿಸಿಪಿ ಕಚೇರಿಗೆ ತಂದು ಕೊಡುತ್ತಾನೆ. ಅಲ್ಲಿಂದ ಪೊಲೀಸರು ಸಮವಸ್ತ್ರ ಪಡೆದುಕೊಂಡು ಹೋಗಬೇಕು. ಇದರ ಹಿಕ್ಮತ್ ಗೊತ್ತಿರುವ ಪೊಲೀಸರು ಪೇಚಾಡುತ್ತಿದ್ದಾರೆ! ಇನ್ನು ವಾಹನಗಳ ರಿಪೇರಿಗೂ ಇದೇ ರೀತಿಯ ಕಟ್ಟುಪಾಡುಗಳು. ಪೊಲೀಸ್ ವಾಹನ ಚಾಲಕರೂ ಮಾಸಿಕ 'ಕಪ್ಪ' ಕಡ್ಡಾಯವಾಗಿ ನೀಡಲೇಬೇಕು. ಇವರ ಮನೆ ಅಕ್ಕಪಕ್ಕ ಸಾರ್ವಜನಿಕರ ವಾಹನ ನಿಂತರೆ ಅರ್ಡಲಿಗಳ ಬಳಿ ಹೇಳಿ ಗಾಳಿ ತೆಗೆಸುವುದು ಮಾಮೂಲು.
ಎಸ್ಪಿ ಶ್ರೇಣಿ ಅಧಿಕಾರಿಗೆ ಪೊಲೀಸ್, ಎಸ್ಐ, ಪಿಐ ವರದಿ ಮಾಡಬೇಕು. ಅದಕ್ಕಾಗಿ ನಿಯಮದಂತೆ ಅಧಿಕಾರವನ್ನು ಡಿಸಿಪಿಗೆ ಹಸ್ತಾಂತರಿಸಿದ್ದೇನೆ. ಡಿಸಿಪಿ ಕಾರ್ಯವೈಖರಿ ಬಗ್ಗೆ ದೂರುಗಳಿದ್ದರೆ ನನಗೆ ಮೇಲ್ಮನವಿ ಸಲ್ಲಿಸಬಹುದು. ಡಿಸಿಪಿ ನಾಯಿಗೆ ಶ್ವಾನದಳದ ಆಹಾರ ನೀಡುತ್ತಿದ್ದರೆ ಅದು ತಪ್ಪು. ನಿಯಮದಂತೆ ಶ್ವಾನದಳದ ಪೊಲೀಸರನ್ನು ಮನೆಯ ನಾಯಿಗೆ ತರಬೇತಿ ನೀಡಲು ಹೇಳುವಂತಿಲ್ಲ.
- ಮನೀಷ್ ಕರ್ಬಿಕರ್, ಪೊಲೀಸ್ ಕಮಿಷನರ್
- ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


