ಪ್ರಧಾನ ಸುದ್ದಿ

ಮೌನ ಸಿಟ್ಟಾದಾಗ ಜೇಟ್ಲಿ ಘೀಳಿಟ್ಟರು

ಮೌನ ಸಿಟ್ಟಾದಾಗ ಜೇಟ್ಲಿ ಘೀಳಿಟ್ಟರು
Published On :

ಪಿಟಿಐ , ಮುಂಬೈ/ನವದೆಹಲಿ , ಆ.30-
'ಒಂಬತ್ತು ವರ್ಷಗಳಲ್ಲಿ ಪ್ರಧಾನ ಪ್ರತಿಪಕ್ಷ ಎರಡು ಬಾರಿ ಅಧಿಕಾರ ಕಳೆದುಕೊಂಡಿದೆ. ಹೀಗಿದ್ದರೂ ಅದು ಯಾವುದೇ ರೀತಿಯಲ್ಲಿ ಪರಿಸ್ಥಿತಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿಲ್ಲ'
- ಹೀಗೆಂದು ಬಹಳ ತೀಕ್ಷ್ಣವಾಗಿ ಮಾತುಗಳನ್ನಾಡಿದ್ದು ಪ್ರಧಾನಿ ಡಾ.ಮನಮೋಹನ್ ಸಿಂಗ್.
ಶುಕ್ರವಾರ ರಾಜ್ಯಸಭೆಯಲ್ಲಿ ಹಣಕಾಸು ಪರಿಸ್ಥಿತಿ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿದ ವೇಳೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
'ಮೌನ' ಮುರಿದರು: ಬಿಜೆಪಿ ವಿರುದ್ಧ ಮುಗಿಬಿದ್ದ ಪ್ರಧಾನಿ ಮನಮೋಹನ್ ಸಿಂಗ್, ಸದ್ಯದ ಪರಿಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ಆರೋಪಿಸಿದರು. 'ಪ್ರಜಾಪ್ರಭುತ್ವದಲ್ಲಿ ಸಹಮತ ಏರ್ಪಡಿಸುವುದು ಕೇವಲ ಸರ್ಕಾರದ ಕರ್ತವ್ಯ ಅಲ್ಲ. ಈ ನಿಟ್ಟಿನಲ್ಲಿ ಪ್ರತಿಪಕ್ಷದ ಪಾತ್ರವೂ ಇದೆ' ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಅವರನ್ನು ಚುಚ್ಚಿದರು. 'ನಮ್ಮ ದೇಶದ ವ್ಯವಸ್ಥೆಯಲ್ಲಿ ಸಂಸತ್ ಶ್ರೇಷ್ಠವಾದದ್ದು. ಪ್ರತಿಯೊಂದು ಅಧಿವೇಶನದ ಸಂದರ್ಭದಲ್ಲಿ ಕಲಾಪಕ್ಕೆ ಅಡ್ಡಿಪಡಿಸುವುದರಿಂದ ಏನು ಸಿಗುತ್ತದೆ' ಎಂದು ಪ್ರಧಾನಿ ಪ್ರಶ್ನಿಸಿದರು.

ಎರಡು ಬಾರಿ: ಬಿಜೆಪಿ ವಿರುದ್ಧ ಅತ್ಯುಗ್ರ ವಾಗ್ಬಾಣಗಳನ್ನು ಪ್ರಯೋಗಿಸಿದ ಪ್ರಧಾನಿ, ಕಳೆದ 9 ವರ್ಷಗಳಲ್ಲಿ ಬಿಜೆಪಿಯನ್ನು 2 ಬಾರಿ ಮತದಾರರು ತಿರಸ್ಕರಿಸಿದ್ದಾರೆ. ಅದರ ನೆನಪು ಇದೆಯೇ ಎಂದು ಪ್ರಶ್ನಿಸಿದರು. 'ಕಳೆದ 9 ವರ್ಷಗಳ ಘಟನೆಗಳನ್ನು ನೆನಪು ಮಾಡಿಕೊಂಡಾಗ ಪ್ರತಿಪಕ್ಷ ಎರಡು ಬಾರಿ ಅಧಿಕಾರ ಕಳೆದುಕೊಂಡಿದೆ. ಈ ವಿಚಾರದಲ್ಲಿ ಅದು ಹೊಂದಾಣಿಕೆಯನ್ನೇ ಮಾಡಿಕೊಂಡೇ ಇಲ್ಲ' ಎಂದು ಪ್ರಧಾನಿ ಟೀಕಿಸಿದರು.

ಅವಕಾಶ ಮಾಡಿಕೊಡಿ: ರಾಜ್ಯಸಭೆಯಲ್ಲಿ ಮೊದಲಿಗೆ ಮಾತನಾಡಿದ್ದ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ, 'ದೇಶದಲ್ಲಿ ಬಂಡವಾಳ ಹೂಡಿಕೆಗೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಸೂಕ್ತ ವಾತಾವರಣ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದ್ದರು. ಪ್ರಧಾನಿ ಸಿಂಗ್ ಬಿಜೆಪಿ ವಿರುದ್ಧ ಟೀಕೆ ಮುಂದುವರಿಸಿದ್ದರಿಂದ ಕೋಪೋದ್ರಿಕ್ತರಾದ ಜೇಟ್ಲಿ 'ನಾವು ನಿಮ್ಮ ವೈಫಲ್ಯಗಳ ಬಗ್ಗೆ ಕಾರಣಗಳನ್ನು  ಕೇಳಲು ಬಂದಿಲ್ಲ' ಎಂದು ಹೇಳಿ ಬಿಜೆಪಿ ಸದಸ್ಯರ ಜತೆ ಸಭಾತ್ಯಾಗ ಮಾಡಿದರು.

ಸುಧಾರಣೆ ಹಿಂತೆಗೆಯುವುದಿಲ್ಲ:  ರುಪಾಯಿ ಕುಸಿತ ನಿಜಕ್ಕೂ ಕಳವಳಕಾರಿ ಎಂದು ಹೇಳಿದ ಪ್ರಧಾನಿ, ಯಾವುದೇ ಕಾರಣಕ್ಕೂ ಆರ್ಥಿಕ ಸುಧಾರಣೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಸುಲಭವಾಗಿ ಕೈಗೊಳ್ಳುವಂಥ ಸುಧಾರಣೆಗಳು ಮುಗಿದಿವೆ. ಇನ್ನೇನಿದ್ದರೂ ಕಠಿಣ ಕ್ರಮಗಳನ್ನು ಕೈಗೊಳ್ಳುವ ದಿನಗಳು ಸಮೀಪಿಸಿವೆ ಎಂದು ಮನಮೋಹನ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಶೇ.5.5ರ ದರದಲ್ಲಿ ಆರ್ಥಿಕ ಅಭಿವೃದ್ಧಿ:  ರುಪಾಯಿ ಮೌಲ್ಯ ಕಳೆಗುಂದಿದರೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.5.5ರಷ್ಟು ಆರ್ಥಿಕ ಅಭಿವೃದ್ಧಿ ಸಾಧಿಸುವ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಕಠಿಣ ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳಲು ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕುಸಿದಿರುವ ಹಣಕಾಸು ವ್ಯವಸ್ಥೆಯನ್ನು ಮೇಲಕ್ಕೆತ್ತಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ.    
ಸೂಕ್ತ ಕ್ರಮ: ಆಯಾತ-ನಿರ್ಯಾತದಲ್ಲಿ ಅಂತರ ಉಂಟಾಗಿದೆ.  ಅದನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು ಪ್ರಧಾನಿ. ಬೃಹತ್ ಅರ್ಥ ವ್ಯವಸ್ಥೆಯಲ್ಲಿ ವಿದೇಶಿ ಹೂಡಿಕೆ ಹೆಚ್ಚಿಸಲು ಎಲ್ಲ ರೀತಿಯ ಸ್ನೇಹಿ  ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಶೇ.4.4ಕ್ಕೆ ಕುಸಿದ ಜಿಡಿಪಿ
ಡಾಲರ್ ಸೇರಿದಂತೆ ಪ್ರಮುಖ ಕರೆನ್ಸಿಗಳ ಎದುರು ರುಪಾಯಿ ಮೌಲ್ಯ ಕುಸಿದಿರುವುದರ ಜತೆಗೆ ಮತ್ತೊಂದು ಕಳವಕಾರಿ ಅಂಶ ಹೊರಬಿದ್ದಿದೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ.4.7ರಿಂದ ಶೇ.4.4ಕ್ಕೆ ಕುಸಿದಿದೆ. ಗಣಿ, ಉತ್ಪಾದನಾ ಕ್ಷೇತ್ರಗಳಲ್ಲಿ ನಿರೀಕ್ಷಿತ ಗುರಿ ಸಾಧನೆ ಮಾಡಲು ಅಸಾಧ್ಯವಾದ್ದರಿಂದ ಈ ಬೆಳವಣಿಗೆ ಕಂಡುಬಂದಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಕನಿಷ್ಠ ದಾಖಲೆಯಾಗಿದೆ. ಗಣಿ ಉದ್ದಿಮೆ ಕ್ಷೇತ್ರ ಶೇ.1.2ರಷ್ಟು ಬೆಳವಣಿಗೆ ಸಾಧಿಸಿದೆ. ಉತ್ಪಾದನಾ ಕ್ಷೇತ್ರ ಶೇ.12ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಅರವಿಂದ ಮಾಯಾರಾಮ್ ತಿಳಿಸಿದ್ದಾರೆ.

ಪ್ರಧಾನಿ ಭರವಸೆ ಬಳಿಕ ಚೇತರಿಸಿದ ರುಪಾಯಿ
ಕಳೆಗುಂದಿರುವ ರುಪಾಯಿ ಶುಕ್ರವಾರ ಮತ್ತಷ್ಟು ಚೇತರಿಸಿಕೊಂಡಿದೆ. ಗುರುವಾರ 66.15ರಷ್ಟು ಚೇತರಿಕೆ ಕಂಡ ರುಪಾಯಿ ಶುಕ್ರವಾರ ದಿನದ ಅಂತ್ಯಕ್ಕೆ ಡಾಲರ್ ಎದುರು 65.70ರಲ್ಲಿ ಮುಕ್ತಾಯವಾಯಿತು. ಸಂಸತ್‌ನಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಳವಳಕಾರಿ. ಆದರೆ, ಅದರಿಂದ ಉಂಟಾಗಿರುವ ಕೊರತೆಯನ್ನು ಇತರ ಮಾರ್ಗಗಳ ಮೂಲಕ ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದು ಡಾಲರ್ ಎದುರು ಚೇತರಿಕೆಗೆ ಕಾರಣವಾಯಿತು. 'ಕೆಲ ಸಂದರ್ಭಗಳಲ್ಲಿ ರುಪಾಯಿ ಅಪಮೌಲ್ಯ ದೇಶದ ರಫ್ತು ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ನೆರವಾಗುತ್ತದೆ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.