ಮಂಗಳನೆಡೆಗೆ ಯಶಸ್ವಿ ಹೆಜ್ಜೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ(ಇಸ್ರೋ) ಮಂಗಳಯಾನ ಯೋಜನೆಗೆ ಸಂಬಂಧಿಸಿದ ಮತ್ತೊಂದು ಅಗ್ನಿಪರೀಕ್ಷೆಯಲ್ಲಿ ಯಶಸ್ವಿಯಾಗಿದೆ. ಮಾರ್ಸ್ ಆರ್ಬಿಟರ್ ಮಿಷನ್ ಅನ್ನು ಭೂಕಕ್ಷೆಯಿಂದ ಹೊರಕ್ಕೆ ತಳ್ಳಿ ಮಂಗಳನತ್ತ ಸಾಗಿಸುವ ಕಾರ್ಯವನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಈ ಮೂಲಕ ಪ್ರತಿಸ್ಪರ್ಧಿ ಚೀನಾದ ಪ್ರಯತ್ನವನ್ನು ಹಿಂದಿಕ್ಕಿರುವ ಭಾರತವು ಮಂಗಳಯಾನ ಕೈಗೊಂಡ ಕೆಲವೇ ಕೆಲವು ರಾಷ್ಟ್ರಗಳ ತಂಡಕ್ಕೆ ಸೇರ್ಪಡೆಯಾಗಿದೆ. ಅಮೆರಿಕ, ಯುರೋಪ್ ಮತ್ತು ರಷ್ಯಾ ಜತೆಗೆ ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ದಾಟಿರುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಮಂಗಳನತ್ತ ಪಯಣ: ಶನಿವಾರ ಮಧ್ಯರಾತ್ರಿ 12.49ಕ್ಕೆ ಸರಿಯಾಗಿ ಟ್ರಾನ್ಸ್ ಮಾರ್ಸ್ ಇಂಜೆಕ್ಷನ್ (ಟಿಎಂಐ) ಕಾರ್ಯಾಚರಣೆಯು ನಡೆಯಿತು.
ನಿರಂತರವಾಗಿ 23 ನಿಮಿಷಗಳ ಕಾಲ ಫೈರಿಂಗ್ ನಡೆಸಿ ಮಾರ್ಸ್ ಆರ್ಬಿಟರ್ ಭೂಕಕ್ಷೆಯ ತೆಕ್ಕೆಯಿಂದ ಜಾರುವಂತೆ ಮಾಡಲಾಯಿತು. ಈ ಕಾರ್ಯ ಮುಗಿಯುತ್ತಿದ್ದಂತೆ ಮಾರ್ಸ್ ಆರ್ಬಿಟರ್ ತನ್ನ 75 ಕೋಟಿ ಕಿಲೋ ಮೀಟರ್ ದೂರದ ಪ್ರಯಾಣವನ್ನು ಆರಂಭಿಸಿತು. 300 ದಿನಗಳ ಕಾಲ ಈ ಪ್ರಯಾಣ ನಡೆಯಲಿದ್ದು, 2014ರ ಸೆಪ್ಟೆಂಬರ್ನಲ್ಲಿ ಆರ್ಬಿಟರ್ ಅಂಗಾರಕನ ಕಕ್ಷೆಯನ್ನು ಸೇರಲಿದೆ.
ಕೆಲ ಕ್ಷಣಗಳ ಆತಂಕ: ಮಧ್ಯರಾತ್ರಿ ನಡೆದ ಕಾರ್ಯಾಚರಣೆ ವೇಳೆ ಒಂದು ಅವಧಿಯಲ್ಲಿ ಹವಾಮಾನದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿನ ಗ್ರೌಂಡ್ ಸ್ಟೇಷನ್ಗೆ ಮಾರ್ಸ್ ಆರ್ಬಿಟರ್ನ ಸ್ಥಿತಿಯ ಬಗೆಗಿನ ಡಾಟಾ ಲಭ್ಯವಾಗಲಿಲ್ಲ. ಹೀಗಾಗಿ ಕ್ಷಣ ಕಾಲ ಆತಂಕ ಸೃಷ್ಟಿಯಾಯಿತು. ಆದರೆ, ಸ್ವಲ್ಪ ಹೊತ್ತಲ್ಲೇ ಸಮಸ್ಯೆ ಬಗೆಹರಿದು ಎಲ್ಲರೂ ನಿರಾಳರಾದರು. ಈವರೆಗೆ ವಿಶ್ವಾದ್ಯಂತ ನಡೆಸಿದ ಮಂಗಳ ಯೋಜನೆಯಲ್ಲಿ ಅರ್ಧಕ್ಕಿಂತ ಹೆಚ್ಚು ವಿಫಲವಾಗಿವೆ. ಅಲ್ಲದೇ, ಯಾವ ರಾಷ್ಟ್ರವೂ ತನ್ನ ಮೊದಲ ಯೋಜನೆಯಲ್ಲೇ ಯಶಸ್ವಿಯಾದದ್ದಿಲ್ಲ. ಹಾಗಾಗಿ ಕೇವಲ ಇಸ್ರೋ ವಿಜ್ಞಾನಿಗಳು ಮಾತ್ರವಲ್ಲ ವಿಶ್ವದ ಬಹುತೇಕ ವಿಜ್ಞಾನಿಗಳು ಈ ಕಾರ್ಯಾಚರಣೆಗಾಗಿ ಕುತೂಹಲದಿಂದ ಕಾಯುತ್ತಿದ್ದರು. ನ.5ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಾರ್ಸ್ ಆರ್ಬಿಟರ್ ಅನ್ನು ಉಡಾಯಿಸಲಾಗಿತ್ತು. ಅದಾದ ಬಳಿಕ ಈವರೆಗೆ 5 ಬಾರಿ ಇಸ್ರೋ ತನ್ನ ಆರ್ಬಿಟರ್ನ ಪಥವನ್ನು ಮೇಲಕ್ಕೇರಿಸುವ ಕಾರ್ಯ ನಡೆಸಿತ್ತು. ಅತ್ಯಂತ ಮಹತ್ವದ ಹಾಗೂ ಕ್ಲಿಷ್ಟಕರ ಘಟ್ಟವೆಂದು ಪರಿಗಣಿಸಲಾಗಿದ್ದ ಟ್ರಾನ್ಸ್ ಮಾರ್ಸ್ ಇಂಜೆಕ್ಷನ್ ಕಾರ್ಯವನ್ನು ಡಿ.1ರಂದು ನಡೆಸುವುದಾಗಿ ಇಸ್ರೋ ಘೋಷಿಸಿತ್ತು. ಅದರಂತೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಈ ಕಾರ್ಯ ಯಶಸ್ವಿಯಾಗಿ ನೆರವೇರಿತು.
ಮಂಗಳಯಾನ ಭಾರತದ ಗರಿಮೆ: ಕಸ್ತೂರಿರಂಗನ್
ಮಂಗಳಯಾನ ಯೋಜನೆಯು ಭಾರತದ ಹಿರಿಮೆಯನ್ನು ಎತ್ತಿಹಿಡಿದಿದ್ದು, ಉತ್ತಮ ಸಾಧನೆ ಮಾಡಿರುವ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಭಾರತವೂ ಸೇರುವಂತೆ ಮಾಡಿದೆ ಎಂದು ಯೋಜನಾ ಆಯೋಗದ ಸದಸ್ಯ ಹಾಗೂ ಇಸ್ರೋದ ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ವಿಜ್ಞಾನಿಗಳು ತಮ್ಮ ಎಲ್ಲ ವೈಫಲ್ಯಗಳನ್ನೂ ಯಶಸ್ಸಿನ ಮೆಟ್ಟಿಲೆಂದು ಭಾವಿಸಿ ಮುಂದುವರಿದಿದ್ದಾರೆ. ಅದರಿಂದಲೇ ಈ ಸಾಧನೆ ಸಾಧ್ಯವಾಯಿತು. ಈ ಯೋಜನೆಯು ಹೊಸ ತಲೆಮಾರಿನವರಿಗೆ ಸ್ಫೂರ್ತಿಯಾಗಿದ್ದು, ಮಂಗಳನ ವಿಜ್ಞಾನದ ಬಗ್ಗೆ ಹೊಸ ಹೊಸ ಮಾಹಿತಿಗಳನ್ನು ಇದು ಒದಗಿಸಲಿದೆ ಎಂದೂ ಅವರು ಹೇಳಿದ್ದಾರೆ.
ಇಂದು ಚೀನಾದ 'ಜೇಡ್ ರ್ಯಾಬಿಟ್' ನಭಕ್ಕೆ
ಚೀನಾವೂ ಬಾಹ್ಯಾಕಾಶ ಯೋಜನೆಯಲ್ಲಿ ತಾನು ಯಾರಿಗೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಲು ಸಿದ್ಧವಾಗಿದೆ. 1976ರ ಬಳಿಕ ಪ್ರಥಮ ಬಾರಿಗೆ ಚೀನಾ ಮಾನವರಹಿತ ರೋವರ್ವೊಂದನ್ನು ಚಂದ್ರನ ಅಂಗಳಕ್ಕೆ ಕಳುಹಿಸಲಿದೆ. 'ಜೇಡ್ ರ್ಯಾಬಿಟ್' ಎಂಬ ಹೆಸರಿನ ವ್ಯೋಮನೌಕೆ ಸೋಮವಾರ ಬೆಳಗ್ಗೆ 5.30ಕ್ಕೆ ಸರಿಯಾಗಿ ನಭಕ್ಕೆ ಚಿಮ್ಮಲಿದೆ. 15 ವರ್ಷಗಳೊಳಗೆ ಚಂದ್ರನಲ್ಲಿ ಶಾಶ್ವತ ನೆಲೆ ಕಂಡುಕೊಳ್ಳುತ್ತೇವೆ ಹಾಗೂ ಇದೇ ವ್ಯೋಮನೌಕೆ ಮೂಲಕ ಮಂಗಳ ಯೋಜನೆಯನ್ನೂ ಹಮ್ಮಿಕೊಳ್ಳುತ್ತೇವೆ ಎಂದು ಚೀನಾ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


