ಐಷರ್ನಿಂದ ಹೊಸ ಟ್ರಕ್ಕು, ಬಸ್ಸು
ಇಂದೋರ್: 'ಗೋ ಪ್ರೊ ಸಿರೀಸ್' ಹೆಸರಿನ ಹನ್ನೊಂದು ಹೊಸ ವಾಹನಗಳನ್ನು ವಿಇ ಕಮರ್ಷಿಯಲ್ ವೆಹಿಕಲ್ಸ್ ಕಂಪನಿ ಅನಾವರಣಗೊಳಿಸಿದೆ. ಇವುಗಳಲ್ಲಿ ಟ್ರಕ್ಗಳು ಹಾಗೂ ಬಸ್ಗಳು ಸೇರಿದ್ದು, ಈ ಮೂಲಕ ಪ್ರಸ್ತುತ ಭಾರತದ ಟ್ರಕ್ ಮಾರುಕಟ್ಟೆಯಲ್ಲಿ ಶೇ. 5ರಷ್ಟಿರುವ ತನ್ನ ಪಾಲನ್ನು ಮುಂದಿನ ಕೆಲ ವರ್ಷಗಳಲ್ಲಿ ಶೇ. 10ಕ್ಕೆ ಏರಿಸಿಕೊಳ್ಳುವ ಯತ್ನಕ್ಕೆ ಕಂಪನಿ ಮುಂದಾಗಿದೆ.
ಸ್ವಿಡನ್ನ ವೋಲ್ವೊ ಮತ್ತು ಭಾರತದ ಐಷರ್ನ ಜಂಟಿ ಸಹಭಾಗಿತ್ವ ರೂಪವಾಗಿರುವ ವಿಇ ವೆಹಿಕಲ್ಸ್, ಇಂದೋರ್ ಸಮೀಪದ ಪಿತಾಮ್ಪುರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ತನ್ನ ಹೊಸ ಮಾದರಿಯ ವಾಹನಗಳನ್ನು ತೆರೆದಿರಿಸಿದೆ. ಮುಂದಿನ ವರ್ಷದ ಫೆಬ್ರವರಿಯಿಂದ ಆರಂಭಿಸಿ, 'ಗೋ ಪ್ರೊ ಸಿರೀಸ್' ಅವತರಣಿಕೆಯ ಅಡಿಯಲ್ಲಿ ಅನಾವರಣಗೊಂಡಿರುವ ನೂತನ ವಾಹನಗಳು ಹಂತ-ಹಂತವಾಗಿ ಮಾರುಕಟ್ಟೆ ಪ್ರವೇಶಿಸಲಿವೆ. 'ಭಾರತದ ಟ್ರಕ್ ಉದ್ಯಮಕ್ಕೆ ಹೆಚ್ಚಿನ ವೃತ್ತಿಪರತೆ ಅಗತ್ಯವಿದೆ. ಇಂಧನ ಕ್ಷಮತೆ ಹೆಚ್ಚಾದರೆ ಅಷ್ಟರಮಟ್ಟಿಗೆ ಗ್ರಾಹಕನಿಗೆ ಲಾಭವಾಗುತ್ತದೆ. ಉತ್ತಮ ಕ್ಯಾಬಿನ್ ವ್ಯವಸ್ಥೆ ಇದ್ದಾಗ ಚಾಲಕ ಸುಸ್ತಾಗದೆ ಹೆಚ್ಚಿನ ಅವಧಿಗೆ ವಾಹನ ಚಲಾಯಿಸಬಹುದು. ಇವೆಲ್ಲವೂ ಒಟ್ಟಾರೆ ಉತ್ಪಾದಕತೆಯ ಹೆಚ್ಚಳ ಹಾಗೂ ಸಮೃದ್ಧಿಗೆ ಕಾರಣವಾಗುತ್ತವೆ. ಪ್ರೊಫೆಷನಲಿಸಂ, ಪ್ರೊಡಕ್ಟಿವಿಟಿ, ಫ್ರಾಫಿಟ್, ಪ್ರಾಸ್ಪರಿಟಿ ಇಂಥ ಎಲ್ಲ ಗುರಿಗಳನ್ನು ಮುಟ್ಟುವ ತಾಂತ್ರಿಕತೆ ಹಾಗೂ ವಿನ್ಯಾಸಗಳು ಹೊಸ ಮಾದರಿಯ ಟ್ರಕ್ಗಳಲ್ಲಿ ಇರುವುದರಿಂದ ಇವಕ್ಕೆ 'ಗೋ ಪ್ರೊ' ಎಂದೇ ಕರೆಯಲಾಗಿದೆ' ಎಂದು ಐಷರ್ ಮೋಟಾರ್ಸ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಸಿದ್ಧಾರ್ಥ ಲಾಲ್ ಹೇಳಿದರು. 'ಭಾರತದಲ್ಲಿ ರಸ್ತೆಗಳ ಜಾಲ ಹಿಗ್ಗುತ್ತಿದೆ. ಸುಧಾರಣೆಗೂ ತೆರೆದುಕೊಂಡಿದೆ. ಇದಕ್ಕೆ ಪೂರಕವಾಗಿ ಸಾರಿಗೆ ವ್ಯವಸ್ಥೆಯೂ ಇನ್ನಷ್ಟು ಸಮರ್ಪಕವಾಗಬೇಕಿದ್ದು, ಈ ಅವಶ್ಯಕತೆಯನ್ನು ಐಷರ್ನ ಹೊಸ ಟ್ರಕ್ಗಳು ಸಮರ್ಥವಾಗಿ ಪೂರೈಸಲಿವೆ' ಎಂದು ವೋಲ್ವೊ ಸಮೂಹದ ಜೊಕಿಮ್ ರೊಸೆನ್ಬರ್ಗ್ ಹೇಳಿದ್ದಾರೆ.
5ರಿಂದ 49 ಟನ್ಗಳವರೆಗಿನ ವಾಹನಗಳು ಹೊಸ 'ಗೋ ಪ್ರೊ' ಸರಣಿಯಲ್ಲಿದ್ದು, ಇವುಗಳ ಬೆಲೆ ಇನ್ನಷ್ಟೇ ಘೋಷಣೆಯಾಗಬೇಕಿದೆ. ಹೊಸ ಅವತರಣಿಕೆಯ ವಾಹನಗಳ ಎಂಜಿನ್ಗಳನ್ನು ವೋಲ್ವೊ ಸಮೂಹದ ತಂತ್ರಜ್ಞಾನ ಸಹಕಾರದಿಂದ ಅಭಿವೃದ್ಧಿಪಡಿಸಲಾಗಿದ್ದು, ಇಂಧನ ಕ್ಷಮತೆ ಹಾಗೂ ದೀರ್ಘಾವಧಿ ಬಾಳಿಕೆಯ ಭರವಸೆಗಳನ್ನು ಐಷರ್ ನೀಡಿದೆ. 2008ರಲ್ಲಿ ವೋಲ್ವೊ-ಐಷರ್ ಸಹಭಾಗಿತ್ವ ಪ್ರಾರಂಭಗೊಂಡಾಗಿನಿಂದ ಉತ್ಪನ್ನ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಈವರೆಗೆ 1800 ಕೋಟಿ ರುಪಾಯಿಗಳು ಹೂಡಿಕೆಯಾಗಿದ್ದು, 2014ರ ಅಂತ್ಯದ ವೇಳೆಗೆ ಇನ್ನೂ 700 ಕೋಟಿ ರುಪಾಯಿಗಳನ್ನು ಹೂಡುವುದಾಗಿ ವಿಇ ಕಮರ್ಷಿಯಲ್ ವೆಹಿಕಲ್ಸ್ಘೋಷಿಸಿದೆ.
- ಚೈತನ್ಯ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

