ಹುಲಿಗೆ 4ನೇ ಬಲಿ

ಕನ್ನಡಪ್ರಭ ವಾರ್ತೆ, ಎಚ್.ಡಿ. ಕೋಟೆ, ಡಿ.3-
ನರಭಕ್ಷಕ ಹುಲಿಗೆ ಮತ್ತೊಂದು ಬಲಿ...
ಹೆಗ್ಗಡೆದೇವನ ಕೋಟೆ ತಾಲೂಕಿನ ಹೆಡಿಯಾಲ ಅರಣ್ಯ ವಲಯದ ಚಿಕ್ಕಬರಗಿಯಲ್ಲಿ ಮಂಗಳವಾರ ಸಂಜೆ ಹುಲಿ ಮತ್ತೊಬ್ಬನನ್ನು ಬಲಿ ತೆಗೆದುಕೊಂಡಿದೆ.
ಹೆಗ್ಗಡಹಳ್ಳಿಯ ಬಸಪ್ಪ (60) ಎಂಬಾತನೇ ಹುಲಿಗೆ ಬಲಿಯಾದ ದುರ್ದೈವಿ. ಈತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನರಭಕ್ಷಕ ವ್ಯಾಘ್ರವು ಈತನನ್ನು ಎಳೆದೊಯ್ದು, ತಲೆ ಭಾಗವನ್ನು ಬಿಟ್ಟು ದೇಹವನ್ನೆಲ್ಲ ತಿಂದು ಹಾಕಿದೆ. ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಒಬ್ಬನನ್ನು ಹಾಗೂ ಬಂಡಿಪುರ ಅರಣ್ಯ ವಲಯದಲ್ಲಿ ಮೂವರು ಒಟ್ಟು ಇದುವರೆಗೆ ನಾಲ್ವರು ವ್ಯಾಘ್ರಕ್ಕೆ ಬಲಿಯಾಗಿದ್ದಾರೆ.
ಮತ್ತೊಬ್ಬರನ್ನು ಹುಲಿ ಬಲಿತೆಗೆದುಕೊಂಡ ಸುದ್ದಿ ಕೇಳುತ್ತಿದ್ದಂತೆಯೇ ಗ್ರಾಮದ ಜನತೆ ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜೀಪಿಗೆ ಬೆಂಕಿ ಇಟ್ಟ ಘಟನೆ ಕೂಡ ನಡೆದಿದೆ.
ಈ ಗ್ರಾಮದ ಸಮೀಪದ ಬೇಲದಕುಪ್ಪೆ ಜಾತ್ರೆ ನಡೆಯುತ್ತಿದ್ದು, ವಿಷಯ ತಿಳಿದ ಕೂಡಲೇ ಜನರು ತಮ್ಮ ಗ್ರಾಮಗಳಿಗೆ ತೆರಳಿದರು. ಹುಲಿಯನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಎರಡು ದಿನ ಕಾರ್ಯಾಚರಣೆ ನಡೆಸಿದ್ದರು. ಆದರೆ ಮೈಸೂರಿನಲ್ಲಿ ಕಳೆದೆರಡು ದಿನಗಳಿಂದ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯಾಧಿಕಾರಿಗಳು ಅಲ್ಲಿಗೆ ತೆರಳಿದ ಕಾರಣ, ಇತ್ತ ಹುಲಿ ಮತ್ತೊಂದು ಬಲಿ ತೆಗೆದುಕೊಂಡಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಳೆದ ನ.27ರಂದು ನರಭಕ್ಷಕ ಹುಲಿಯ ದಾಳಿಗೆ ಎಚ್.ಡಿ. ಕೋಟೆ ತಾಲೂಕು ನಡಹಾಡಿ ಗ್ರಾಮದ ಬಸವರಾಜು ಎಂಬವರು ಬಲಿಯಾಗಿದ್ದರು. ಅಂದು ಅಕ್ಕಪಕ್ಕದ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು.
ಇದಾದ 2 ದಿನಗಳಲ್ಲಿ ನ.29 ರಂದು ಸೀಗೆವಾಡಿ ಹಾಡಿಯ ಚಲುವ (40) ಎಂಬಾತನನ್ನು ನರಭಕ್ಷಕ ಹುಲಿ ಬಲಿ ತೆಗೆದುಕೊಂಡಿತ್ತು. ಅಲ್ಲದೆ ಇದೆ ಪ್ರಕರಣದಲ್ಲಿ ಚಿಕ್ಕ ಎಂಬಾತ ಕೂಡ ಗಾಯಗೊಂಡಿದ್ದ.
ಅರಣ್ಯ ರಕ್ಷಕ ಬಲಿ: ಮೂರನೆ ಪ್ರಕರಣದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮೂರ್ಕಲ್ ಬಳಿ ಅರಣ್ಯ ರಕ್ಷಕ ಸುರೇಶ್ (24) ಎಂಬುವರು ಮತ್ತೊಂದು ಹುಲಿಗೆ ಬಲಿಯಾಗಿದ್ದರು. ಈ ಮೂವರನ್ನು 2 ನರಭಕ್ಷಕ ಹುಲಿಗಳು ಬಲಿ ತೆಗೆದುಕೊಂಡ ನಂತರ, ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದರು. ದಸರಾ ಆನೆಗಳನ್ನು ಕೂಡ ಹುಲಿ ಸೆರೆಗೆ ಕಾರ್ಯಾಚರಣೆ ಬಳಿಸಿಕೊಂಡಿದ್ದರು. ಆದರೆ ಹುಲಿಗಳು ಸೆರೆ ಸಿಕ್ಕಿರಲಿಲ್ಲ. ಏತನ್ಮಧ್ಯೆ ಮೈಸೂರು ಹೊರ ವಲಯದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿರುವುದರಿಂದ ಅರಣ್ಯಾಧಿಕಾರಿಗಳ ಗಮನ ಅತ್ತ ಕೇಂದ್ರೀಕೃತವಾಗಿತ್ತು. ಅಲ್ಲದೆ ದಸರಾ ಆನೆಗಳನ್ನು ಕಾಡಾನೆ ಓಡಿಸುವ ಕಾರ್ಯಾಚರಣೆಗೆ ಕರೆದೊಯ್ಯಲಾಗಿತ್ತು. ಹೀಗಾಗಿ ನರಭಕ್ಷಕ ಹುಲಿ ಮಂಗಳವಾರ ಮತ್ತೊಬ್ಬನನ್ನು ಬಲಿ ತೆಗೆದುಕೊಂಡಿದೆ. ಒಂದೇ ವಾರದಲ್ಲಿ ನಾಲ್ವರು ಹುಲಿಗೆ ಬಲಿಯಾಗಿರುವುದರಿಂದ ಕಾಡಂಚಿನ ಗ್ರಾಮದ ಜನರು ಆತಂಕಗೊಂಡಿದ್ದಾರೆ.
ಸಿಗದ ಸುಳಿವು: ನರಕ್ಷಕ ಹುಲಿ ಸೆರೆಗೆ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಸಿಬ್ಬಂದಿ ಹುಲಿ ಸಿಗದೆ ಬಳಲಿ ಬೆಂಡಾಗಿದ್ದಾರೆ. ಮೂವರನ್ನು ಬಲಿ ತೆಗೆದುಕೊಂಡಿದ್ದ ಹುಲಿಗಳನ್ನು ಹಿಡಿಯಲು ಎಚ್.ಡಿ. ಕೋಟೆ ಭಾಗದಿಂದ ಅರಣ್ಯ ಇಲಾಖೆ ಸಿಬ್ಬಂದಿಯ 2 ತಂಡಗಳು 4 ಆನೆಗಳನ್ನು ಬಳಸಿ ಕಾರ್ಯಾಚರಣೆಗೆ ಇಳಿದಿದ್ದವು. ಇತ್ತ ಮೈಸೂರಿನಲ್ಲಿ 8 ಆನೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹುಲಿ ಕಾರ್ಯಾಚರಣೆಯಲ್ಲಿದ್ದ ದಸರಾ ಆನೆ ಅಭಿಮನ್ಯುವನ್ನು ಇಲ್ಲಿಗೆ ಬಳಸಿಕೊಳ್ಳಲಾಗಿದೆ. ಮನುಷ್ಯರ ವಾಸನೆಯಿಂದ ಹುಲಿ ಕಾಡಿನಿಂದ ಹೊರಗೆ ಬಾರದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಹುಣಸೂರು ಭಾಗದ ಡಿ.ಬಿ. ಕುಪ್ಪೆ ಅರಣ್ಯ ವಲಯದಲ್ಲಿ ಹುಲಿ ಸೆರೆಗೆ 4 ಕಡೆಗಳಲ್ಲಿ ಅಳವಡಿಸಿದ್ದ ಕ್ಯಾಮೆರಾ ಬದಲಿಸಲು ಚಿಂತಿಸಲಾಗಿದ್ದು, ಬುಧವಾರ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅಲ್ಲಿನ ಸಿಸಿಎಫ್ ಗೋಕುಲ್ ತಿಳಿಸಿದ್ದಾರೆ.
ಉದ್ರಿಕ್ತ ಗ್ರಾಮಸ್ಥರಿಂದ ಜೀಪಿಗೆ ಬೆಂಕಿ
ನರಭಕ್ಷಕ ಹುಲಿ ಮತ್ತೊಬ್ಬ ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡ ಹಿನ್ನೆಲೆ, ಸ್ಥಳೀಯ ಗ್ರಾಮಸ್ಥರು ಅರಣ್ಯ ಇಲಾಖೆಯ ಅತಿಥಿಗೃಹಕ್ಕೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿ, ಇಲಾಖೆಯ ಜೀಪಿಗೆ ಬೆಂಕಿ ಹಚ್ಚಿ, ಅರಣ್ಯಾಧಿಕಾರಿಗಳನ್ನು ಘೇರಾವ್ ಮಾಡಿದ್ದಾರೆ. ಒಂದು ವಾರದಲ್ಲಿ ಸತತವಾಗಿ ಮೂವರನ್ನು ಬಲಿ ತೆಗೆದುಕೊಂಡಿರುವುದರಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡಿದ್ದಾರೆ. ನೀವು ಕೂಡುವ ಪರಿಹಾರ ನಮಗೆ ಬೇಕಾಗಿಲ್ಲ, ನಮಗೆ ಪ್ರಾಣ ರಕ್ಷಣೆ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಎಸ್ಪಿ ಆಗಮಿಸಿದ್ದಾರೆ.
ಹುಲಿಗೆ ಬಲಿ
27/11 -ನಡಹಾಡಿಯ ಬಸವರಾಜ್
29/11 -ಸಿಜೆವಾಡಿಯ ಹಾಡಿಯ ಚಲುವ
30/11 -ಅರಣ್ಯ ರಕ್ಷಕ ಸುರೇಶ್
3/12 - ಚಿಕ್ಕಬರಗಿಯ ಬಸಪ್ಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


