ಪ್ರಧಾನ ಸುದ್ದಿ

ಹಣ ಬಿಡುಗಡೆ ಮಾಡಿದರೆ ಮುಗಿಯಿತೇ?

ಹಣ ಬಿಡುಗಡೆ ಮಾಡಿದರೆ ಮುಗಿಯಿತೇ?
Published On :

ಡಾ.ನಾ. ಡಿಸೋಜ ಕತೆಗಾರರಾಗಿ, ಕಾದಂಬರಿಕಾರರಾಗಿ ಬಹಳಷ್ಟು ಬರವಣಿಗೆಯ ಕೆಲಸ ಮಾಡಿದವರು. ಅವರ ಬರವಣಿಗೆಯಲ್ಲಿ ಹಿಂದಿನ ದನಿಯೊಂದು ಕೇಳಿಸುತ್ತಲೇ ಬಂದಿರುವುದಕ್ಕೆ ಸಾಕಷ್ಟು ಉದಾಹರಣೆ ಇದೆ. ಇದೀಗ 75 ವರ್ಷ ದಾಟಿರುವ ಡಿಸೋಜ ಕಳೆದುಹೋದ ಒಂದು ಕಾಲಮಾನದ ಸಾಕ್ಷಿಪ್ರಜ್ಞೆಯಾಗಿ ಹಲವು ಸಂಗತಿಯನ್ನು ತಮ್ಮ ಕೃತಿಗಳಲ್ಲಿ ದಾಖಲಿಸುತ್ತಾ ಹೋಗಿದ್ದಾರೆ. ಮಲೆನಾಡಿಗೆ ತಪ್ಪದೇ ಬರುತ್ತಿದ್ದ ಪ್ಲೇಗಿನಿಂದ ಹಿಡಿದು ಮುಳುಗಡೆ ಅನ್ನುವ ತಲ್ಲಣವನ್ನೂ ಸೆರೆ ಹಿಡಿದುಕೊಟ್ಟಿದ್ದಾರೆ. ಮಲೆನಾಡಿನ ಅಪರೂಪದ ದೃಶ್ಯಾವಳಿಗಳು, ಕೆಲ ಅಪರೂಪದ ವ್ಯಕ್ತಿಗಳು, ಸಾಹಿತ್ಯ ಪ್ರಪಂಚದ ಧೀಮಂತರು ಅವರ ಕೃತಿಗಳಲ್ಲಿ ಹಾದು ಹೋಗುತ್ತಾರೆ. ಕಾದಂಬರಿ, ಸಣ್ಣ ಕತೆ, ಮಕ್ಕಳ ಸಾಹಿತ್ಯ, ನಾಟಕ, ಜೀವನ ಚರಿತ್ರೆ ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಜನರಿಗೆ ವಿಷಯ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಕೈಜಾರುತ್ತಿರುವ ಮಕ್ಕಳ ಸಾಹಿತ್ಯದ ಬಗ್ಗೆ ಅವರದ್ದು ವಿಶೇಷ ಪ್ರೇಮ. ಇಂತಹ ಅಪರೂಪ ಸಾಹಿತಿ ಈಗ ಮಡಿಕೇರಿಯಲ್ಲಿ ನಡೆಯುವ 80ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು. ಸಮ್ಮೇಳನದ ಮೇಲಿನ ಅವರ ನಿರೀಕ್ಷೆಗಳು, ಕನ್ನಡ ವಾತಾವರಣ ಹುಟ್ಟುಹಾಕುವಲ್ಲಿ ಯಾರು ಏನು ಮಾಡಬೇಕು, ಕನ್ನಡಕ್ಕಿರುವ ಆತಂಕಗಳನ್ನು ನಾಡಿನ ಜನರಿಗೆ, ಸರ್ಕಾರಕ್ಕೆ, ಅಧಿಕಾರಿಗಳಿಗೆ ತಿಳಿಸಲು, ಜೊತೆಗೆ ಎಚ್ಚರಿಸಲು ಸಜ್ಜಾಗಿದ್ದಾರೆ. ಈ ಬಗ್ಗೆ ತಮ್ಮ  ಅನಿಸಿಕೆಗಳನ್ನು 'ಕನ್ನಡಪ್ರಭ'ದೊಂದಿಗೆ ಹಂಚಿಕೊಂಡಿದ್ದಾರೆ.

- ಮಡಿಕೇರಿಯ ನಿಮ್ಮ ಸಾಹಿತ್ಯ ಸಮ್ಮೇಳನ ಹೇಗಿರುತ್ತದೆ, ಏನೆಲ್ಲಾ ವಿಷಯ ಪ್ರಸ್ತಾಪಿಸುತ್ತೀರಾ?
ಸಮ್ಮೇಳನದಲ್ಲಿ ಹೇಳುವ ಮಾತನ್ನು ಹೇಳಬೇಕಾದ ರೀತಿಯಲ್ಲಿ ಕಠೋರವಾಗಿದ್ದರೂ ಹೇಳುವ ಪ್ರಯತ್ನ ಮಾಡುತ್ತೇನೆ. ಮಲೆನಾಡು- ಪಶ್ಚಿಮಘಟ್ಟ ನಿಧಾನವಾಗಿ ಮಾಯವಾಗುತ್ತಿದೆ. ಈ ಬಗ್ಗೆ ಗಮನ ಸೆಳೆಯುತ್ತೇನೆ. ಮರೆಯಾಗುತ್ತಿರುವ ಮಲೆನಾಡಿನ ಶ್ರೀಮಂತಿಕೆ ಬಗ್ಗೆ ಪ್ರಸ್ತಾಪಿಸುತ್ತೇನೆ. ಇದರ ಜೊತೆಗೆ ನೂತನ ಸಿಎಂ ಆಯ್ಕೆಯಾದ ತಕ್ಷಣ ಲೇಖಕರ ಮನೆಗೆ ಹೋಗಿ ಬಂದರು. ಇದು ಒಳ್ಳೆಯ ಬೆಳವಣಿಗೆ. ಇದರ ಜೊತೆಗೆ ಒಬ್ಬ ಲೇಖಕನನ್ನು ಬಂಧಿಸಿ ಜೈಲಿಗೆ ಕಳುಹಿಸಿದರು. ಇದು ಮನಸ್ಸಿಗೆ ನೋವು ತಂದ ವಿಚಾರ. ಬರೆದಿದ್ದನ್ನು ಮೊದಲು ತಾಳ್ಮೆಯಿಂದ ಕೇಳಬೇಕು- ಓದಬೇಕು. ಒಪ್ಪಿಕೊಳ್ಳೋದು ಬಿಡುವುದು ನಂತರದ ವಿಚಾರ. ಇಂತಹ ವಿಷಯಗಳನ್ನು ನನ್ನ ಭಾಷಣದಲ್ಲಿ ಹೇಳುತ್ತೇನೆ.

-ಸಾಹಿತ್ಯ ಸಮ್ಮೇಳನದಲ್ಲಿ ನಿಮ್ಮ ಜವಾಬ್ದಾರಿ ಎಂತಹದ್ದು?

ಸಮ್ಮೇಳನದಲ್ಲಿ ನನ್ನದೇ ಆದ ವಿಚಾರ ತಿಳಿಸಬೇಕೆಂದಿದ್ದೇನೆ. ಹಿಂದಿನ ಸಮ್ಮೇಳನದಲ್ಲಿ ಅಧ್ಯಕ್ಷರು ಇದುವರೆಗೆ ಹೇಳದೇ ಇರುವ ಕೆಲವು ವಿಚಾರ ಹೇಳಲು ಸಿದ್ಧನಾಗಿದ್ದೇನೆ. ಅದನ್ನು ಜನರು- ಸರ್ಕಾರ ಅಳವಡಿಸಿಕೊಂಡರೆ ಒಳ್ಳೆಯದು. ಜನ- ಸರ್ಕಾರ ನನ್ನ ವಿಚಾರ ಆಲಿಸಬೇಕೆಂಬ ಆಸೆ ನನ್ನದು.

- ಹಿಂದಿನ ಸಮ್ಮೇಳನದ ನಿರ್ಣಯಗಳ ಅನುಷ್ಠಾನ, ಸರ್ಕಾರದ ಉದಾಸೀನದ ಬಗ್ಗೆ ಏನು ಹೇಳುತ್ತೀರಾ?
ಸಮ್ಮೇಳನಕ್ಕೆ ಜನ ಬರುತ್ತಾರೆ. ಜಾತ್ರೆ ರೀತಿ ನಡೆದು ಹೋಗುತ್ತದೆ. ಕೆಲವರು ಉಪಯೋಗ ಪಡೆದುಕೊಳ್ಳುತ್ತಾರೆ. ಮತ್ತೆ ಕೆಲವರು ಬಂದು ಹೋಗುತ್ತಾರೆ. ಅಲ್ಲಿ ತೆಗೆದುಕೊಳ್ಳುವ ನಿರ್ಣಯವನ್ನು ಸರ್ಕಾರ ಅನುಷ್ಠಾನ ಮಾಡದಿದ್ದರೆ ಸಮ್ಮೇಳನಕ್ಕೆ ಬೆಲೆಯೇ ಇಲ್ಲ. ಸರ್ಕಾರವು ಮಡಿಕೇರಿ ಸಮ್ಮೇಳನಕ್ಕೆ 2 ಕೋಟಿ ಬಿಡುಗಡೆ ಮಾಡುತ್ತಿದೆ. ಅಷ್ಟು ಮಾಡಿದರೆ ಸಾಕೇ? ಹಣ ಬಿಡುಗಡೆಯಷ್ಟೇ ತನ್ನ ಕರ್ತವ್ಯ ಎಂದು ಭಾವಿಸುವ ಧೋರಣೆ ಎಷ್ಟು ಸರಿ? ಸರ್ಕಾರ ಒಬ್ಬ ಅಧಿಕಾರಿಯನ್ನು ಸಾಹಿತ್ಯ ಸಮ್ಮೇಳನಕ್ಕೆ ನಿಯೋಜಿಸಿ, ಸಾಹಿತ್ಯ ಸಮ್ಮೇಳನದಲ್ಲಿ ಏನೆಲ್ಲಾ ಮಾತು, ಸಲಹೆ ಬರುತ್ತದೋ ಅದನ್ನು ದಾಖಲೆ ಮಾಡಿ, ಅವುಗಳ ಅನುಷ್ಠಾನಕ್ಕೆ ಪ್ರಯತ್ನಿಸಬೇಕು.

- ನಮ್ಮ ಸರ್ಕಾರದ ಕನ್ನಡ ಕಾಳಜಿ ಎಂತಹದ್ದು?
ನಮ್ಮ ಸರ್ಕಾರ ಕನ್ನಡ ಸರ್ಕಾರವಾಗಿ ಉಳಿದಿಲ್ಲ. ಈ ವಿಚಾರದಲ್ಲಿ ನಿರಾಸೆ ಇದೆ. ಮಹಾರಾಷ್ಟ್ರ, ಕೇರಳ, ಪಶ್ಚಿಮ ಬಂಗಾಳದೊಂದಿಗೆ ನಮ್ಮನ್ನು ಹೋಲಿಸಿಕೊಂಡರೆ ಬಹಳ ಬೇಸರವೆನಿಸುತ್ತದೆ. ನಮ್ಮ ವಿಧಾನಸೌಧದಲ್ಲಿರುವ ಅಧಿಕಾರಿಗಳು ಕನ್ನಡಿಗರಾಗಿಲ್ಲ. ಇಂಗ್ಲಿಷ್ ವ್ಯಾಮೋಹ ಬಿಡುತ್ತಿಲ್ಲ. ಮಂತ್ರಿಗಳೂ ಅವರನ್ನು ಕಿವಿ ಹಿಡಿದು ಬದಲಿಸಲಿಲ್ಲ. ಹಾಗೆಯೇ ಮೊದಲು ನಾವು ಕನ್ನಡಿಗರಾಗಬೇಕು. ಮರಾಠಿ, ಬೆಂಗಾಳಿಗಳು ಹೇಗೆ ಅವರವರು ತಮ್ಮತನ ಬಿಟ್ಟುಕೊಟ್ಟಿಲ್ಲವೋ ಹಾಗೆ ನಾವು ಕನ್ನಡ ಅನುಷ್ಠಾನಕ್ಕೆ ಬದ್ಧರಾಗಬೇಕಿದೆ.

- ಸಾಹಿತ್ಯ ಕ್ಷೇತ್ರದ ಮೇಲೆ ಜನರದ್ದು ಎಂತಹ ನಿರೀಕ್ಷೆ?
ಜನತೆ ಕಲಾವಿದನ ಮೇಲಿಡುವ ನಿರೀಕ್ಷೆಗಿಂತ ಸಾಹಿತಿಯಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಸಾಹಿತ್ಯ ನಿತ್ಯದ ಬದುಕಿಗೆ ಬೇಕಾದ ಸ್ಫೂರ್ತಿ ಕೊಡುತ್ತದೆ. ಬದುಕು ಯಾವ ದಿಕ್ಕಿಗೆ ಹೋಗುತ್ತಿದೆ ಅಥವಾಲಹೋಗಕೇಬೆಂದು ಸಾಹಿತ್ಯ ಮಾರ್ಗದರ್ಶನ ಮಾಡುತ್ತದೆ. ಹೀಗಾಗಿ ಸಾಹಿತ್ಯ ಕ್ಷೇತ್ರ ಬಲಿಷ್ಠವಾಗಬೇಕು, ಗುಣಮಟ್ಟದ ಸಾಹಿತ್ಯ ಬರಬೇಕೆಂಬ ಆಶಯವಿದೆ.
ಟಿ ಮನೆಯಲ್ಲಿ ಕನ್ನಡ ಮಾಧ್ಯಮ ಹೇಗಾಗಬೇಕು?
ನಿಜ. ಇಂದು ಶಾಲೆ ಇರಲಿ ಮನೆಯಲ್ಲೂ ಕನ್ನಡ ಮಾಧ್ಯಮ ಇಲ್ಲವಾಗಿದೆ. ಅಪ್ಪ ಅಮ್ಮನಿಗೆ ತಮ್ಮ ಮಗು ನಾಯಿಯನ್ನು ನಾಯಿ ಎಂದು ಕರೆಯುವುದಕ್ಕಿಂತ ಡಾಗ್ ಎಂದು ಕರೆದರೆ ಹೆಚ್ಚು ತೃಪ್ತಿ. ಅನೇಕ ಮನೆಗಳಲ್ಲಿ ಕನ್ನಡ ಮಾತನಾಡುವುದನ್ನು ಒಪ್ಪಿಕೊಳ್ಳುವುದೇ ಇಲ್ಲ. ಮಹಾರಾಷ್ಟ್ರದಲ್ಲಿ ಮರಾಠಿ ಗೊತ್ತಿಲ್ಲದಿದ್ದರೆ ಬದುಕು ಸಾಗಿಸಲಾಗದು. ಆದರೆ, ಕರ್ನಾಟಕದಲ್ಲಿ 20- 30 ವರ್ಷದಿಂದ ಕನ್ನಡ ಗೊತ್ತಿಲ್ಲದೇ ಇರುವವರೂ ಇದ್ದಾರೆ.

-ಮಕ್ಕಳ ಸಾಹಿತ್ಯ ನಿಮ್ಮ ನೆಚ್ಚಿನ ಕ್ಷೇತ್ರಗಳಲ್ಲೊಂದು. ಇದರ ಬಗ್ಗೆ ನಿಮ್ಮ ಪ್ರಸ್ತಾಪ?
ನಾವು ಮಕ್ಕಳಿಗೆ ಮಾಡಿರುವ ಕೆಲಸ ಬಹಳ ಕಡಿಮೆ. ಹಿಂದೆ ಸಾಕಷ್ಟು ಮಕ್ಕಳ ಸಾಹಿತ್ಯ ಬಂತು. ಆದರೀಗ ತುಂಬಾ ಕಡಿಮೆ ಇದೆ. ಉತ್ತಮ ಪುಸ್ತಕ ತರದಿದ್ದರೆ ಮಕ್ಕಳು ಅನಾಥರಾಗುತ್ತಾರೆ. ಮಕ್ಕಳನ್ನು ಕೈಬಿಟ್ಟ ಹಾಗಾಗುತ್ತದೆ. ಈ ಬಗ್ಗೆ ಒಂದಷ್ಟು ಚಿಂತನೆ ಅಗತ್ಯವಿದೆ. ಒಂದು ಕಾಲದಲ್ಲಿ ಪುಸ್ತಕದಿಂದ ಮಾತ್ರ ಜ್ಞಾನ ಸಿಗುತ್ತಿತ್ತು. ಆದರೆ, ಈಗ ಜ್ಞಾನ ಪಡೆಯುವ ಮಾಧ್ಯಮ ಬದಲಾಗಿದೆ. ಆದರೆ, ಪುಸ್ತಕದಲ್ಲಿ ಏನಿರುತ್ತದೆ ಎಂಬುದನ್ನು ನಾವು ಮಕ್ಕಳಿಗೆ ತಿಳಿಸುತ್ತಿಲ್ಲ. ಹೀಗಾಗಿ ಟಿವಿ- ಕಂಪ್ಯೂಟರ್ ಬಿಟ್ಟು ಇತ್ತಕಡೆ ಬರುವುದೇ ಇಲ್ಲ. ಪುಸ್ತಕದಲ್ಲಿ ಒಂದು ಸಂಸ್ಕೃತಿ ಇದೆ. ಹಾಗೆಯೇ ಅಲ್ಲಿರುವ ಮನೋಭಾವ ತಿಳಿಸುವ ಅಗತ್ಯವಿದೆ.

- ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಾ, ಏನೆನಿಸುತ್ತಿದೆ?
ಬಹಳ ಸಂತೋಷವಾಯ್ತು. ನಾನೇನು ದೊಡ್ಡ ಸಾಧನೆ ಮಾಡಿದ್ದೇನೆಂದು ಅನಿಸುತ್ತಿಲ್ಲ. ಆದರೆ, ಸಾಧನೆ ಗುರುತಿಸಿದ್ದು ಸಂತಸ ತಂದಿದೆ. ಈ ಹಿಂದಿನ ಐದಾರು ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬರುತ್ತಿತ್ತು. ಆದರೆ, ಕೊನೆ ಹಂತದಲ್ಲಿ ಬೇರೆಯವರ ಹೆಸರು ಅಂತಿಮವಾಗುತ್ತಿತ್ತು. ಇದಕ್ಕಿಂತ ಹೆಚ್ಚಾಗಿ ಈ ವಿಷಯ ಕೇಳಿ ಊರಿನವರು ಸಂಭ್ರಮಪಡುತ್ತಿದ್ದಾರಲ್ಲ, ಅದು ಹೆಚ್ಚು ಖುಷಿ ತಂದಿದೆ. ನನ್ನನ್ನು ನಿಜವಾಗಿ ಬಯಸಿದ್ದು ಊರಿನವರು- ಸ್ನೇಹಿತರು. ನಾನು ಬರೆದಿದ್ದನ್ನು ಜನ ಓದಿ ಮೆಚ್ಚಿ ಗೌರವಿಸುತ್ತಾ ಬಂದಿದ್ದಾರೆ. ಅವರ ಪ್ರತಿಕ್ರಿಯೆ ಅದ್ಭುತವಾದದ್ದು. ನಾನು ಬರೆದ ಕೃತಿ ಸಿನೆಮಾ, ನಾಟಕವಾಗಿ ಜನ ಸಂತೋಷಪಟ್ಟರು. ಆಗ ಖುಷಿಪಟ್ಟಿದ್ದೆ. ಇವತ್ತಿನ ಸಂತೋಷ ದೊಡ್ಡ ಪ್ರಮಾಣದ್ದು.

ತುಂಬಾ ಖುಷಿ ಆಯ್ತು: ಫಿಲೋಮಿನಾ ಡಿಸೋಜ
ಸಾಗರ: ವಿಷಯ ತಿಳಿದ ತಕ್ಷಣ ತುಂಬಾ ಖುಷಿ ಆಯ್ತು. ಬೇರೆ ಊರುಗಳಲ್ಲಿರುವ ಮಕ್ಕಳಿಗೆ ಫೋನ್ ಮಾಡಿ ಹೇಳುವ ಮೂಲಕ ಸಂತೋಷ ಹಂಚಿಕೊಂಡೆ ಎಂದು 80ನೇ ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷರಾಗಿ ಆಯ್ಕೆಯಾದ ನಾ.ಡಿಸೋಜ ಪತ್ನಿ ಫಿಲೋಮಿನ ಡಿಸೋಜ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದರು.
ಡಿಸೋಜ ತುಂಬಾ ಸಾಹಿತ್ಯ ಸೇವೆ ಮಾಡಿದ್ದಾರೆ. ಹಾಗಾಗಿ ಈ ಗೌರವ ತಾನಾಗಿಯೇ ಬಂದಿದೆ ಎಂದ ಅವರು, ಸಾಹಿತಿಯಾಗಿ ಸಲ್ಲುವ ಜೊತೆಗೆ ಕುಟುಂಬದ ಸದಸ್ಯರಾಗಿಯೂ ಅವರು ಸಲ್ಲುತ್ತಾರೆ. ನಮ್ಮ ಜೊತೆ ಹೇಗಿರಬೇಕು ಹಾಗೆಯೇ ಇದ್ದಾರೆ ಎಂದು ಹೇಳಿದರು.

- ಶ್ರೀಕಾಂತ್ ಭಟ್/ ರಾಜೇಶ್ ಭಡ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.