ಬಿಜೆಪಿಗೆ ಅಗ್ರ

ನವದೆಹಲಿ: ಮಾಜಿ ಮುಖ್ಯಮಂತ್ರಿ, ಕೆಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿಗೆ ಮರಳುವುದಕ್ಕೆ ಪಕ್ಷದ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ. ಮುಹೂರ್ತ ನಿಗದಿ ಪ್ರಕ್ರಿಯೆಗಳನ್ನು ಮುಂದುವರಿಸುವಂತೆ ರಾಜ್ಯದ ನಾಯಕರಿಗೆ ಸೂಚಿಸಿದೆ. ಎಲ್ಲಾ ಅಂದುಕೊಂಡಂತೆಯಾದರೆ 2014 ಜನವರಿ 1ಕ್ಕೂ ಮುನ್ನವೇ ಅವರು ಬಿಜೆಪಿ ಸೇರಲಿದ್ದಾರೆ.
ಗುರುವಾರ ರಾಜ್ಯದ ನಾಯಕರು ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರೊಂದಿಗೆ ಯಡಿಯೂರಪ್ಪ ಒಡ್ಡಿರುವ ಷರತ್ತುಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಲುವಾಗಿ ಯಡಿಯೂರಪ್ಪ ಅವರ ಷರತ್ತುಗಳಿಗೆ ಹೈಕಮಾಂಡ್ ತಾತ್ವಿಕವಾಗಿ ಒಪ್ಪಿದೆ. ಅಲ್ಲದೇ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ಪ್ರಕ್ರಿಯೆಯನ್ನು ನಿರ್ವಹಿಸಲು ಅನಂತಕುಮಾರ್ ಅವರನ್ನು ನಿಯೋಜಿಸಲಾಗಿದೆ. ಶುಕ್ರವಾರ ರಾಜ್ಯ ಬಿಜೆಪಿ ಪ್ರಮುಖ ನಾಯಕರು ಬೆಂಗಳೂರಿನಲ್ಲಿ ಮತ್ತೊಂದು ಸುತ್ತು ಮಾತುಕತೆ ನಡೆಸುತ್ತಾರೆ.
ನಂತರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಪಕ್ಷದ ಹೈಕಮಾಂಡ್ ನೀಡಿರುವ ಸಂದೇಶ ರವಾನಿಸುತ್ತಾರೆ. ಅದಾದ ನಂತರ ಯಡಿಯೂರಪ್ಪ ಅವರನ್ನು ಪಕ್ಷದ ಹೈಕಮಾಂಡ್ ದೆಹಲಿಗೆ ಕರೆಸಿಕೊಳ್ಳಬಹುದು. ಇಲ್ಲವೇ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಬರ ಮಾಡಿಕೊಳ್ಳುವ ಔಪಚಾರಿಕ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ವಿಳಂಬಕ್ಕೆ ಕಾರಣವೇನು?: ಮುಂಬೈ ಕಾರ್ಯಕಾರಿಣಿ ಸಭೆಯ ವೇಳೆಯಲ್ಲೇ ರಾಜ್ಯ ನಾಯಕರು ಯಡಿಯೂರಪ್ಪ ಅವರನ್ನು ಬರಮಾಡಿಕೊಳ್ಳಲು ಹೈಕಮಾಂಡ್ಗೆ ಮನವಿ ಮಾಡಿದ್ದರು. ಆದರೆ, ಉತ್ತರದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರಲಿಲ್ಲ. ಈ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಮತ್ತು ಹಗರಣಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರಿಂದ, ಹಗರಣಗಳಿಂದಾಗಿ ಅಧಿಕಾರ ಕಳೆದುಕೊಂಡಿದ್ದ ಯಡಿಯೂರಪ್ಪ ಅವರು ಪಕ್ಷದಲ್ಲಿರುವುದು ಸೂಕ್ತವಲ್ಲ ಎಂದು ನಿರ್ಧರಿಸಲಾಗಿತ್ತು.
ಮುಂದಿನ ಲೋಕಸಭಾ ಚುನಾವಣೆ ಬರುವ ವೇಳೆಗೆ ಕೇಂದ್ರದ ಮತ್ತಷ್ಟು ಹಗರಣಗಳು ರಾಜ್ಯದಲ್ಲಿ ಆಗಬಹುದಾದ ಹಗರಣಗಳ ಮುಂದೆ ಯಡಿಯೂರಪ್ಪ ಅವರ ಹಗರಣಗಳು ಗೌಣವಾಗುತ್ತವೆಂಬುದು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ. ಮುಂಬರುವ ಲೋಕಸಭಾ ಚುನಾವಣೆಯತ್ತ ನೇರದೃಷ್ಟಿ ನೆಟ್ಟಿರುವ ನಾಯಕರು ಈಗ ಯಡಿಯೂರಪ್ಪ ಅವರ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ. ಹೀಗಾಗಿ ರಾಜ್ಯ ನಾಯಕರ ಲೆಕ್ಕಾಚಾರ ಅವರಿಗೂ ಸಮ್ಮತವಾಗಿದೆ.
ಅಂಕಿ ಅಂಶ ವಿವರಿಸಿದ ನಾಯಕರು: ಗುರುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಹಾಲಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಅರವಿಂದ ಲಿಂಬಾವಳಿ ಅವರು ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ತ್ವರಿತವಾಗಿ ಸೇರಿಸಿಕೊಳ್ಳುವುದರಿಂದಾಗುವ ಅನುಕೂಲಗಳನ್ನು ವಿವರಿಸಿದರು.
ಬಿಎಸ್ವೈ ಬಂದರೆ 20 ಸ್ಥಾನ!: ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಸ್ಥಾನಗಳು, ಪಡೆದ ಶೇಕಡಾವಾರು ಮತಗಳು, ಯಡಿಯೂರಪ್ಪ ಪಕ್ಷ ತೊರೆದ ನಂತರ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಸ್ಥಾನಗಳು ಮತ್ತು ಮತಗಳು, ಕೆಜೆಪಿ ಪಡೆದ ಸ್ಥಾನ ಮತ್ತು ಮತಗಳು, ಅದರಿಂದಾಗಿ ಕಾಂಗ್ರೆಸ್ಗಾದ ಅನುಕೂಲಗಳ ಬಗ್ಗೆ ಅನಂತಕುಮಾರ್ ಅಂಕಿ- ಅಂಶ ಸಹಿತ ವಿವರಿಸಿದರು. ಯಡಿಯೂರಪ್ಪ ಬಿಜೆಪಿಗೆ ಸೇರಿದರೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ರಿಂದ 22 ಸ್ಥಾನ ಗೆಲ್ಲಲು ಸಾಧ್ಯ ಎಂದುದನ್ನು ಮನವರಿಕೆ ಮಾಡಿಕೊಟ್ಟರು.
ಯಡಿಯೂರಪ್ಪ ಷರತ್ತುಗಳ ಬಗ್ಗೆಯೂ ಚರ್ಚಿಸಲಾಯಿತು. ಈ ಹಂತದಲ್ಲಿ ಯಡಿಯೂರಪ್ಪ ಅವರನ್ನು ಗೌರವಯುತವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಬೇಕು, ಅವರ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿರ್ಣಾಯಕ ಜವಾಬ್ದಾರಿ ನೀಡಬೇಕು, ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ತಮ್ಮ ಪುತ್ರನಿಗೆ ನೀಡಬೇಕೆಂಬುದು ಸೇರಿದಂತೆ ಬಹುತೇಕ ಷರತ್ತುಗಳನ್ನು ಒಪ್ಪಲಾಗಿದೆ.
ಪ್ರಹ್ಲಾದ್ ಜೋಶಿ, ಕೆ.ಎಸ್.ಈಶ್ವರಪ್ಪ, ಅರವಿಂದ ಲಿಂಬಾವಳಿ ಅವರು ಅನಂತಕುಮಾರ್ ನಿವಾಸಕ್ಕೆ ತೆರಳಿ ಚರ್ಚಿಸಿದರು. ಅಲ್ಲಿ ಸುದೀರ್ಘವಾಗಿ ಚರ್ಚಿಸಿದ ನಂತರ ಅನಂತಕುಮಾರ್ ನೇತೃತ್ವದಲ್ಲಿ ರಾಜನಾಥ್ಸಿಂಗ್ ಅವರನ್ನು ರಾಜ್ಯದ ನಾಯಕರು ಭೇಟಿ ಮಾಡಿ ಚರ್ಚಿಸಿದರು. ನಂತರ ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಷಿ, ಈಶ್ವರಪ್ಪ ಮತ್ತು ಅರವಿಂದ ಲಿಂಬಾವಳಿ, 'ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರಲು ಕೇಂದ್ರ ನಾಯಕರು ಒಪ್ಪಿಗೆ ನೀಡಿದ್ದಾರೆ' ಎಂದು ಘೋಷಿಸಿದರು.
ಅನಂತ್ ಕುಮಾರ್ ನೇತೃತ್ವದಲ್ಲಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದೆವು. ಯಡಿಯೂರಪ್ಪ ವಾಪಸಾತಿ ಬಗ್ಗೆ ಬೇಗ ನಿರ್ಣಯ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಘಟಕಕ್ಕೆ ನಿರ್ದಿಷ್ಟ ಸೂಚನೆ ನೀಡುವಂತೆ ನಿವೇದಿಸಿಕೊಂಡಿದ್ದೇವೆ. ಅದಕ್ಕೆ ರಾಷ್ಟ್ರೀಯ ಅಧ್ಯಕ್ಷರು ಸಕಾರಾತ್ಮವಾಗಿ ಸ್ಪಂದಿಸಿ ಮುಂದೇನು ಮಾಡಬೇಕೆಂದು ತಿಳಿಸಿದ್ದಾರೆ ಎಂದರು.
ಡಿಸೆಂಬರ್ ಅಂತ್ಯದಲ್ಲಿ ಮೊದಲ ರಾಜ್ಯ ಕಾರ್ಯಕಾರಿಣಿ ಸಭೆ ಇದೆ. ಈ ಸಭೆಗೆ ಭಾಗಿಯಾಗಿ ಲೋಕಸಭಾ ಚುನಾವಣೆ ಸಿದ್ಧತೆ ಮತ್ತು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಬೇಕು ಎಂದು ಕೋರಿದ್ದೇವೆ.
23ರಿಂದ 28ರೊಳಗೆ ಅವರು ಸೂಚಿಸಿದ ದಿನ ಕಾರ್ಯಕಾರಿಣಿ ಸಭೆ ನಡೆಯುತ್ತದೆ. ಅದರ ಪೂರ್ವದಲ್ಲಿ ಕೂಡ ರಾಜ್ಯದ ಪ್ರಮುಖರ ಜತೆ ಚರ್ಚೆ ಮಾಡುವುದಾಗಿ ರಾಜನಾಥ್ ಸಿಂಗ್ ತಿಳಿಸಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಇಡೀ ಪಕ್ಷದ ಕಾರ್ಯಕರ್ತರೇ ಸಿದ್ಧರಾಗಿದ್ದಾರೆ. ಇಲ್ಲಿ ಯಾರಿಗೂ ಪ್ರತಿಷ್ಠೆಯ ಪ್ರಶ್ನೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಈಶ್ವರಪ್ಪ, ಈಗಾಗಲೇ ನಾವು ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದೇವೆ. ಅವರು ಮುಕ್ತ ಮನಸ್ಸಿನಿಂದ ಇದ್ದಾರೆ ಎಂದರು.
ಮೆತ್ತಗಾದ ಯಡಿಯೂರಪ್ಪ
ಆರಂಭದಲ್ಲಿ ಭಾರಿ ಷರತ್ತು ಒಡ್ಡುತ್ತಿದ್ದ ಯಡಿಯೂರಪ್ಪ ಅವರೂ ಈಗ ಮೃದುವಾಗಿದ್ದಾರೆ. ತಮ್ಮ ಬಹುತೇಕ ಷರತ್ತುಗಳನ್ನು ಸಡಿಲಿಸಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು, ಅದೇ ಮುಖ್ಯ ಎಂದು ಹೇಳುತ್ತಿರುವ ಯಡಿಯೂರಪ್ಪ ಅವರಿಗೆ ದೂರದಲ್ಲಿ ತಾವು ಕೇಂದ್ರ ಸಂಪುಟ ಸೇರುವ ಆಸೆಯೂ ಇದೆ. ಜತೆಗೆ ತಮ್ಮ ವಿರುದ್ಧ ಇರುವ ಹಗರಣಗಳಿಂದ, ಸಿಬಿಐ ಕುಣಿಕೆಯಿಂದ ಮುಕ್ತಿ ಪಡೆಯುವ ಲೆಕ್ಕಾಚಾರವೂ ಇದೆ. ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿಯಾದರೆ ಇದೆಲ್ಲವೂ ಸಾಧ್ಯ ಎಂಬ ಕಾರಣಕ್ಕೆ ಷರತ್ತುಗಳನ್ನು ಸಡಿಲಿಸಿದ್ದಾರೆ. ತಕ್ಷಣಕ್ಕೆ ಗೌರವಯುತ ಪ್ರವೇಶ, ಬೆಂಬಲಿಗರಿಗೆ ಸ್ಥಾನಮಾನ, ಶಿವಮೊಗ್ಗದಲ್ಲಿ ಮಗನಿಗೆ ಟಿಕೆಟ್ ಮತ್ತು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿರ್ಣಾಯಕ ಜವಾಬ್ದಾರಿಯನ್ನು ಮಾತ್ರ ಅವರು ಕೇಳುತ್ತಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಬಿಜೆಪಿ ಸೇರುವ ವಿಚಾರದಲ್ಲಿ ರಾಜ್ಯದ ನಾಯಕರಿಂದ ಯಾವುದೇ ತಕರಾರಿಲ್ಲ. ಅವರು ಪಕ್ಷಕ್ಕೆ ಆಗಮಿಸಿದಾಗ ನೀಡುವ ಸ್ಥಾನಮಾನದ ಬಗ್ಗೆ ರಾಷ್ಟ್ರ ನಾಯಕರೇ ತೀರ್ಮಾನಿಸಲಿದ್ದಾರೆ. ಅವರ ತೀರ್ಮಾನಕ್ಕೆ ರಾಜ್ಯ ನಾಯಕರು ಬದ್ಧರಾಗಿರುತ್ತಾರೆ. ಪಕ್ಷದಿಂದ ಹೊರ ಹೋಗಿರುವ ಯಡಿಯೂರಪ್ಪ ಅವರಿಗೂ ಬಿಜೆಪಿ ಅನಿವಾರ್ಯವಾಗಿದೆ. ಪಕ್ಷ ಮತ್ತು ನಾಯಕನ ಸಮ್ಮಿಲನದಿಂದ ಪಕ್ಷಕ್ಕೆ, ರಾಜಕಾರಣಕ್ಕೆ ಶಕ್ತಿ ಬರುತ್ತದೆ. ಯಾರಿಗೆ, ಯಾರು ಅನಿವಾರ್ಯ ಎಂಬುದಕ್ಕಿಂತ ಪೂರಕ ಎಂಬುದೇ ಸೂಕ್ತ.
-ಆಯನೂರು ಮಂಜುನಾಥ್,
ರಾಜ್ಯಸಭಾ ಸದಸ್ಯ
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿ ಕೊಳ್ಳಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಅವರನ್ನು ಗೌರವಯುತವಾಗಿ ಕರೆತರಲಾಗುವುದು.
- ಪ್ರಹ್ಲಾದ್ ಜೋಷಿ, ಬಿಜೆಪಿ ಮುಖಂಡ
- ಕನ್ನಡಪ್ರಭ ಪ್ರತಿನಿಧಿಯಿಂದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


