ಬಲೆಗೆ ವ್ಯಾಘ್ರ

ಮೈಸೂರು/ಎಚ್.ಡಿ. ಕೋಟೆ: ಕಳೆದೊಂದು ವಾರದಿಂದ ಮೈಸೂರು ಜಿಲ್ಲೆಯ ಜನರ ನಿದ್ದೆಗೆಡಿಸಿದ್ದ ನರಭಕ್ಷಕ ಹುಲಿ ಹಾಗೂ ಕಾಡಾನೆಗಳಿಂದ ಕೊನೆಗೂ ಮುಕ್ತಿ ದೊರೆತಿದೆ. ಆದರೆ, ಇನ್ನೊಂದೆಡೆ ಹುಣಸೂರು ಬಳಿ ಮತ್ತೊಂದು ಕಾಡಾನೆ ಹಿಂಡು ಕಾಣಿಸಿಕೊಂಡಿದೆ.
ಒಂದೇ ವಾರದಲ್ಲಿ ನಾಲ್ವರನ್ನು ಬೇಟೆಯಾಡಿದ್ದ ನರಭಕ್ಷಕ ಹುಲಿಯನ್ನು ಚಿಕ್ಕಬರಗಿ ಗ್ರಾಮದ ಬಳಿಯೇ ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಚಿಕ್ಕಬರಗಿಯ ಬಸಪ್ಪ ಅವರನ್ನು ಬಲಿ ತೆಗೆದುಕೊಂಡ ಪ್ರದೇಶದ ಸಮೀಪವೇ ಈ ಹುಲಿ ಸೆರೆ ಸಿಕ್ಕಿರುವುದು ಗಮನಾರ್ಹ. ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಹುಲಿ ಕಾಣಿಸಿಕೊಂಡ ಕೂಡಲೇ ಅದರ ಮೇಲೆ ಮೂರು ಬಾರಿ ಅರವಳಿಕೆ ಚುಚ್ಚುಮದ್ದು ಪ್ರಯೋಗಿಸಿ ಸೆರೆ ಹಿಡಿಯಲಾಗಿದೆ. ನಾಲ್ವರನ್ನು ಬಲಿ ತೆಗೆದುಕೊಂಡಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ತೀವ್ರಗೊಳಿಸಿ, ಅರಣ್ಯ ಇಲಾಖೆ ಅತಿಥಿಗೃಹ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಈ ಹುಲಿಗೆ ಕಂಡಲ್ಲಿ ಗುಂಡಿಕ್ಕುವಂತೆ ಸರ್ಕಾರ ಆದೇಶಿಸಿತ್ತು. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು.
ಆದರೆ ರಾಷ್ಟ್ರೀಯ ಪ್ರಾಣಿಯಾದ ಹುಲಿಯನ್ನು ಜೀವಂತವಾಗಿಯೇ ಸೆರೆ ಹಿಡಿಯಲು, ಮತ್ತೆ ಕಂಟಕಪ್ರಾಯ ಎಂಬುದು ತಿಳಿದು ಬಂದರೆ ಗುಂಡಿಕ್ಕಿ ಕೊಲ್ಲುವ ಉದ್ದೇಶದೊಂದಿಗೆ ಇಲಾಖೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು.
ಸೆರೆ ಸಿಕ್ಕಿದ್ದು ಹೇಗೆ?: ಗುರುವಾರ ಬೆಳಗ್ಗೆ 6.30ರಿಂದಲೇ ಗ್ರಾಮದ ಐದಾರು ಕಿ.ಮೀ. ವ್ಯಾಪ್ತಿಯಲ್ಲಿನ ಕೆರೆ ನೀರು ಕುಡಿಯಲು ಬರಬಹುದು ಎಂಬ ಲೆಕ್ಕಾಚಾರದಲ್ಲಿ ನಾಲ್ಕು ಆನೆಗಳನ್ನು ಬಳಸಿಕೊಂಡು ಎಸಿಎಫ್ ರವಿಶಂಕರ್ ನೇತೃತ್ವದ 50 ಮಂದಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು 20 ಮತ್ತು ಸ್ಥಳೀಯರ ತಂಡ ಕಾರ್ಯಾಚರಣೆ ಆರಂಭಿಸಿತು. ಈ ತಂಡದಲ್ಲಿ ಬಂಡೀಪುರ, ಮೈಸೂರು, ನಾಗರಹೊಳೆ ಮತ್ತು ಬನ್ನೇರುಘಟ್ಟದಿಂದ ಬಂದಿದ್ದ ಪಶು ವೈದ್ಯಾಧಿಕಾರಿಗಳೂ ಇದ್ದರು. 12 ಗಂಟೆ ಸುಮಾರಿಗೆ ಹುಲಿ ಚಿಕ್ಕಬರಗಿಯ ಬಸಪ್ಪನನ್ನು ಕೊಂದ ಸ್ಥಳಕ್ಕೆ ವಾಸನೆ ಹಿಡಿದು ದೇಹವನ್ನು ಹುಡುಕಿಕೊಂಡು ಮತ್ತೆ ಬಂದಿತ್ತು. ಆನೆ ಬರುವ ಶಬ್ದ ಕೇಳಿದ ಕೂಡಲೇ ಹುಲಿ ಒಮ್ಮೆ ಗರ್ಜಿಸಿದೆ. ಇದನ್ನು ಕೇಳಿಸಿಕೊಂಡ ಬನ್ನೇರುಘಟ್ಟ ವೈದ್ಯ ಡಾ. ಸತನ್ ಮೂರು ಬಾರಿ ಅರವಳಿಕೆ ಚುಚ್ಚುಮದ್ದನ್ನು ಗನ್ ಮೂಲಕ ನೀಡಿದ್ದಾರೆ. ಇದರಿಂದ ಹುಲಿ ಪ್ರಜ್ಞೆ ತಪ್ಪುತ್ತಿದ್ದಂತೆ ಬೋನಿಗೆ ಹಾಕಿ ಟ್ರ್ಯಾಕ್ಟರ್ನಲ್ಲಿ ಚಿಕ್ಕಬರಗಿಯ ಅರಣ್ಯ ಇಲಾಖೆ ಅತಿಥಿಗೃಹಕ್ಕೆ ತರಲಾಯಿತು.
ಹುಲಿ ಕೊಲ್ಲಲು ಗ್ರಾಮಸ್ಥರ ಪಟ್ಟು: ಹುಲಿ ಸೆರೆ ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅತಿಥಿಗೃಹಕ್ಕೆ ಮುತ್ತಿಗೆ ಹಾಕಿದರು. ಇದೆ ಮೊದಲ ಬಾರಿಗೆ ನಾಲ್ಕು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಆದ್ದರಿಂದ ಹುಲಿಯನ್ನು ನಮ್ಮ ಎದುರಿಗೆ ಕೊಲ್ಲಬೇಕೆಂದು ಪಟ್ಟು ಹಿಡಿದರು. ಆದರೆ ಹುಲಿ ಕೊಲ್ಲಲು ಅವಕಾಶ ನೀಡದ ಅಧಿಕಾರಿಗಳು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಹುಲಿ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ನರಭಕ್ಷಕ ಹುಲಿಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮೃಗಾಲಯಕ್ಕೆ ಶುಕ್ರವಾರ ಕಳುಹಿಸಿಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮನುಷ್ಯರ ಬೇಟೆ ಏಕೆ?
ಸೆರೆಸಿಕ್ಕ ನರಭಕ್ಷಕ ಗಂಡು ಹುಲಿ ಮೇಲೆ ಮುಳ್ಳು ಹಂದಿಯೊಂದು ದಾಳಿ ನಡೆಸಿ ಗಾಯಗೊಳಿಸಿದೆ. ಹಂದಿಯ ಮುಳ್ಳು ಕುತ್ತಿಗೆ ಭಾಗದಲ್ಲಿ ಚುಚ್ಚಿರುವುದರಿಂದ ಇತರ ಪ್ರಾಣಿಗಳ ಭೇಟಿ ಇದರಿಂದ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಜನರ ಮೇಲೆಯೇ ದಾಳಿ ನಡೆಸುತ್ತಿತ್ತು ಎಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಹುಲಿ ಯೋಜನೆ ನಿರ್ದೇಶಕ ಎಚ್.ಸಿ. ಕಾಂತರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


