ತೆಲಂಗಾಣಕ್ಕೆ ರೆಡ್ಡಿ ಸೆಡ್ಡು
ನವದೆಹಲಿ/ಹೈದರಾಬಾದ್: 'ಆಂಧ್ರಪ್ರದೇಶ ಜನರು ಕಾಂಗ್ರೆಸ್‌ಗೆ ನಿಷ್ಠರಾಗಿ ಇದ್ದದ್ದಕ್ಕೆ ಆ ಪಕ್ಷ ರಾಜ್ಯಕ್ಕೆ ಸೂಕ್ತ ಉಡುಗೊರೆಯನ್ನೇ ಕೊಟ್ಟಿದೆ. ಪ್ರತ್ಯೇಕ ರಾಜ್ಯ ರಚನೆಯ ಮಸೂದೆಯನ್ನು ವಿಧಾನಸಭೆಯಲ್ಲಿ ಸೋಲಿಸುತ್ತೇವೆ.'
- ಹೀಗೆಂದು ಅಬ್ಬರಿಸಿದ್ದು ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ.
ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರ ಆಂಧ್ರಪ್ರದೇಶದ ಜನರನ್ನು ಯಾಕೆ ಇಂಥ ದೃಷ್ಟಿಯಲ್ಲಿ ನೋಡುತ್ತಿದೆ ಎನ್ನುವುದೇ ತಮಗೆ ಅರ್ಥವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಅಚ್ಚರಿ ವ್ಯಕ್ತಪಡಿಸಿದರು. ಕಾಂಗ್ರೆಸ್‌ಗೆ ಆಂಧ್ರದ ನಾಗರಿಕರು ನಿಷ್ಠರಾಗಿದ್ದಕ್ಕೆ ಈ ಉಡುಗೊರೆಯೇ ಎಂದು ದೆಹಲಿಯಲ್ಲಿರುವ ನಾಯಕರನ್ನು ಪ್ರಶ್ನಿಸಬೇಕಾಗಿದೆ ಎಂದು ಕಿರಣ್ ರೆಡ್ಡಿ ಹೇಳಿದರು.
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸಂಪುಟ ಹತ್ತು ಜಿಲ್ಲೆಗಳನ್ನೊಳಗೊಂಡ ತೆಲಂಗಾಣ ರಾಜ್ಯ ರಚನೆಯ ಮಸೂದೆಗೆ ಅನುಮೋದನೆ ನೀಡಿತ್ತು.
ಬೇರೆಯವರನ್ನು ನೇಮಿಸಿ: ರಾಜಕೀಯ ಕಾರಣಗಳಿಗಾಗಿ ಕಾಂಗ್ರೆಸ್ ಪ್ರತ್ಯೇಕ ರಾಜ್ಯ ರಚನೆಯ ನಾಟಕವಾಡುತ್ತಿದ್ದರೆ ತಮ್ಮ ಸ್ಥಾನದಲ್ಲಿ ಬೇರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿಕೊಳ್ಳಲಿ ಎಂಬ ನೇರ ಸವಾಲನ್ನೂ ಪಕ್ಷದ ವರಿಷ್ಠರಿಗೆ ಕಿರಣ್ ರೆಡ್ಡಿ ಹಾಕಿದ್ದಾರೆ. ಡಿ.12ರಿಂದ ಆರಂಭವಾಗುವ ಆಂಧ್ರಪ್ರದೇಶ ವಿಧಾನಸಭೆ ಅಧಿವೇಶನದಲ್ಲಿ ಹೊಸ ರಾಜ್ಯ ರಚನೆ ಸಂಬಂಧಿ ಮಸೂದೆಯನ್ನು ಸೋಲಿಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಮಿಶ್ರ ಪ್ರತಿಕ್ರಿಯೆ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಕೇಂದ್ರ ಸಂಪುಟದಲ್ಲಿ ನಿರ್ಣಯ ಅಂಗೀಕರಿಸಿದ್ದನ್ನು ಖಂಡಿಸಿ ಸೀಮಾಂಧ್ರ ಪ್ರದೇಶದಲ್ಲಿ ಶುಕ್ರವಾರ ಹಾಗೂ ಶನಿವಾರ ಬಂದ್‌ಗೆ ಕರೆ ನೀಡಲಾಗಿತ್ತು. ಶನಿವಾರ ಬಂದ್‌ಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಖಾಸಗಿ ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆಯೇ ಕಾರ್ಯ ನಿರ್ವಹಿಸುತ್ತಿದ್ದವು. ಟಿಡಿಪಿ, ವೈ.ಎಸ್.ಆರ್.ಕಾಂಗ್ರೆಸ್ ವಿಭಜನೆ ವಿರುದ್ಧ ಪ್ರತಿಭಟನೆ ನಡೆಸಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

