ಪ್ರಧಾನ ಸುದ್ದಿ

ರಾತ್ರಿ ವಾಹನ ಸಂಚಾರಕ್ಕೆ ಮತ್ತೆ ಕೇರಳ ಯತ್ನ

Published On :

ಕ.ಪ್ರ. ವಾರ್ತೆ,  ಮೈಸೂರು,  ಡಿ. 9-
ಬಂಡೀಪುರದ ಮೂಲಕ ರಾತ್ರಿ ವಾಹನ ಸಂಚಾರಕ್ಕೆ ಕೇರಳ ಮತ್ತೆ ಹಿಂಬಾಗಿಲ ಮೂಲಕ ಪ್ರಯತ್ನ ಮುಂದುವರಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಈ ಪ್ರಕರಣವು ವಿಚಾರಣೆಯಲ್ಲಿದ್ದರೂ, ಜೊತೆಗೆ ಈ ಹಿಂದೆ ಕರ್ನಾಟಕದ ನಾಲ್ವರು ಮುಖ್ಯಮಂತ್ರಿಗಳು ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರೂ, ಕೇರಳ ಸರ್ಕಾರ ಬಂಡೀಪುರದ ಮೂಲಕ ರಾತ್ರಿ ಪರ್ಯಾಯ ಮಾರ್ಗದ ಮೂಲಕ ಸಂಚಾರದ ವಿಷಯವನ್ನು ಮತ್ತೆ ಚರ್ಚೆಗೆ ತಂದಿದೆ. ಈ ಬಗ್ಗೆ ಚರ್ಚಿಸಲು ಡಿ.10 ರಂದು ಕೇರಳ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಕೆ. ಮೊಹಾಂತಿ, ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಶಿವಶೈಲಂ ಅವರ ನಡುವೆ, ಬಹುಮಹಡಿ ಕಟ್ಟಡದಲ್ಲಿ ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿದೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ಸ್ (ಆರ್ ಆ್ಯಂಡ್ ಬಿ) ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಬಂಡೀಪುರದ ಮೂಲಕ ಹಾದುಹೋಗುವ ಎರಡು ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ಆದೇಶದ ಮೇರೆಗೆ ಜಾರಿ ಮಾಡಲಾಗಿದೆ. ನ್ಯಾಯಾಲಯವು ಈಗಾಗಲೇ ತನ್ನ ಆದೇಶದಲ್ಲಿ ಕೇವಲ 30 ಕಿ.ಮೀ. ಹೆಚ್ಚಿರುವ ಹುಣಸೂರು-ಗೋಣಿಕೊಪ್ಪ- ಕುಟ್ಟ- ಕರ್ಟೆಕುಲಂ ಮಾರ್ಗವನ್ನು ರಾತ್ರಿ ಸಂಚಾರ ನಿಷೇಧದ ಸಮಯದಲ್ಲಿ ಪರ್ಯಾಯ ಮಾರ್ಗವಾಗಿ ಬಳಸಬೇಕೆಂದು ಆದೇಶಿಸಿದೆ. ಇದಲ್ಲದೆ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಪ್ರಕರಣದಲ್ಲಿ ರಾಷ್ಟ್ರೀಯ ಹೆದ್ದಾರಿ 212 ಕ್ಕೆ ಪರ್ಯಾಯವಾಗಿ ಕೊಡಗು ಜಿಲ್ಲೆಯ ತಿತಿಮತಿ ಮೂಲಕ ಕೇವಲ 3- ಕಿಲೊಮೀಟರ್ ಹೆಚ್ಚಿರುವ ಮಾರ್ಗವಿದ್ದು, ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗುವುದಿಲ್ಲವೆಂದು ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.

ಪರ್ಯಾಯ ಚರ್ಚೆ ಅಗತ್ಯ ಇಲ್ಲ: ಹೈಕೋರ್ಟ್ ಆದೇಶ ಗೌರವಿಸಿ, ಕರ್ನಾಟಕ ಸರ್ಕಾರವು ಈ ಪರ್ಯಾಯ ಮಾರ್ಗವನ್ನು ದುರಸ್ತಿಗೊಳಿಸಿ ಮೇಲ್ದರ್ಜೆಗೇರಿಸಲು 48 ಕೋಟಿಗಳನ್ನು ಬಿಡುಗಡೆ ಮಾಡಿದ್ದು, ದುರಸ್ತಿ ಕೆಲಸವು ಈಗಾಗಲೇ ಪೂರ್ಣಗೊಂಡಿದೆ. ಹೈಕೋರ್ಟ್ ಪರ್ಯಾಯ ಮಾರ್ಗವನ್ನು ಈಗಾಗಲೇ ಗುರುತಿಸಿ ಆದೇಶಿಸಿರುವುದರಿಂದ ಹಾಗೂ ನ್ಯಾಯಾಲಯದಲ್ಲಿ ಕೇರಳ ಸರ್ಕಾರ ಹಾಗೂ ಅರ್ಜಿದಾರರಾಗಿದ್ದ ಖಾಸಗಿ ಸಾರಿಗೆ ಸಂಸ್ಥೆಯ ಮಾಲೀಕರು ಇದನ್ನು ಒಪ್ಪಿಕೊಂಡಿದ್ದರಿಂದ, ಈಗ ಮತ್ತೊಮ್ಮೆ ಪರ್ಯಾಯ ಮಾರ್ಗದ ಬಗ್ಗೆ ಚರ್ಚೆ ಅವಶ್ಯಕತೆ ಇರುವುದಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಕೇರಳ ಸರ್ಕಾರವು ಪ್ರಸ್ತಾಪಿಸಿದ್ದ ಇನ್ನೊಂದು ಬದಲಿ ಮಾರ್ಗವು ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳ ನಡುವಿನ ಅತಿಸೂಕ್ಷ್ಮ ವನ್ಯಜೀವಿ ವಲಸೆ ಮಾರ್ಗವನ್ನು ಸೀಳಿ ಹಾದುಹೋಗಿದ್ದು, ಇದು ಈಗಾಗಲೇ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ- ಶಿಪ್) ಅಡಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ.
ಪ್ರಸ್ತುತ ಬಂಡೀಪುರದ ಮೂಲಕ ಹಾದುಹೋಗುವ ಎರಡು ಹೆದ್ದಾರಿಗಳಲ್ಲಿ ರಾತ್ರಿ ವಾಹನ ಸಂಚಾರ ನಿರ್ಬಂಧದ ವಿಷಯವು ಸುಪ್ರೀಂಕೋರ್ಟ್‌ನಲ್ಲಿದ್ದು, ಈ ವಿಷಯದ ಚರ್ಚೆಯು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಬಹುದು.
ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅ.3 ರಂದು ಈ ವಿಚಾರವಾಗಿ ಚರ್ಚಿಸಲು ಭೇಟಿ ಮಾಡಲಾಗಿತ್ತು. ಆದರೆ ಕೇರಳದ ಒತ್ತಾಯವನ್ನು ವನ್ಯಜೀವಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹಾಗೂ ನ್ಯಾಯಾಲಯದ ಆದೇಶವನ್ನು ಗೌರವಿಸುವ ತನ್ನ ಬದ್ಧತೆಯ ದೃಷ್ಟಿಯಿಂದ ತಿರಸ್ಕರಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.