ಎಚ್ಚರ, ನೀವು ಕುಡುಯುವ ಹಾಲಿನಲ್ಲಿ ಬರೀ ರಾಸಾಯನಿಕ ಮಿಶ್ರಣವೇ ತುಂಬಿದೆ..!

ಐವತ್ತಕ್ಕೂ ಹೆಚ್ಚು ಕಲಬೆರಕೆ ಹಾಲಿನ ಬ್ರಾಂಡ್ಗಳು, ಆರೋಗ್ಯ ಹಾನಿಕಾರಿ ರಾಸಾಯನಿಕ ಮಿಶ್ರಣ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಡಿ.10-
ಬೆರಕೆ ನೋಟ
19 ಕ್ಕೂ ಹೆಚ್ಚು ಕಳಪೆ ಹಾಲಿನ ಬ್ರಾಂಡ್ ಗಳು
40 ಕ್ಕೂ ಅಧಿಕ ಬ್ರಾಂಡ್ ಗುಣಮಟ್ಟ ಕಳಪೆ
ರಾಜ್ಯದ ಮಾರುಕಟ್ಟೆಯಲ್ಲಿ ಕಲಬೆರಕೆ ಹಾಲಿನದ್ದೇ ಕಲರವ... ಇಲ್ಲಿ ಗುಣಮಟ್ಟದ ಹಾಲಿನ ಬ್ರಾಂಡ್ಗಳು ಬೆರಳೆಣಿಕೆಯಷ್ಟಿದ್ದರೆ ಹಾಲಿನ ಸೋಗಿನಲ್ಲಿ ವಿಷ ಉಣಿಸುವ ಬ್ರಾಂಡ್ಗಳ ಸಂಖ್ಯೆ ಅರ್ಧಶತಕ ಮೀರುತ್ತವೆ.
ರಾಜ್ಯದ ಮಾರುಕಟ್ಟೆಯಲ್ಲಿ 19ಕ್ಕೂ ಅಧಿಕ ಕಲಬೆರಕೆ ಹಾಲಿನ ಬ್ರಾಂಡ್ಗಳಿದ್ದರೇ, 40ಕ್ಕೂ ಅಧಿಕ ಬ್ರಾಂಡ್ಗಳು ಗುಣಮಟ್ಟದಲ್ಲಿ ಕಳಪೆ.
ವರದಿಯ ಪ್ರತಿ 'ಕನ್ನಡಪ್ರಭ'ಕ್ಕೆ ಲಭ್ಯವಾಗಿದ್ದು, ಇನ್ನಷ್ಟು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಈ ವರದಿಯಲ್ಲಿನ ಅಂಶಗಳನ್ನು ಗಮನಿಸಿದರೆ ಹಾಲು ಕುಡಿಯುವ ಒಂದಲ್ಲ, ಸಾಕಷ್ಟು ಬಾರಿ ಆಲೋಚಿಸಬೇಕಾಗುತ್ತದೆ. ಇಂತಹ ಹಾಲನ್ನು ಮಾರುಕಟ್ಟೆಗೆ ಬಿಡುತ್ತಿರುವ ಖಾಸಗಿ ಕಂಪನಿಗಳು ಹಾಗೂ ಎಲ್ಲ ವಿಚಾರ ತಿಳಿದು ಕಣ್ಮುಚ್ಚಿ ಕುಳಿತ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ.
ವಿಚಿತ್ರವೆಂದರೆ ರಾಜ್ಯದ ಸರ್ಕಾರಿ ಪ್ರಯೋಗಾಲಯಗಳಲ್ಲಿ ಕಲಬೆರಕೆ ಹಾಲು ಕಂಡುಹಿಡಿಯುವ ತಂತ್ರಜ್ಞಾನವೇ ಇಲ್ಲ. ಕಲಬೆರಕೆ ದಂಧೆಕೋರರು ಎಷ್ಟು ಮುಂದುವರಿದಿದ್ದಾರೆ ಎಂದರೆ, ಪ್ರಯೋಗಾಲಯಗಳಲ್ಲಿ ಕಂಡುಹಿಡಿಯಲಾಗದ ರಾಸಾಯನಿಕಗಳನ್ನು ಅವರು ಹಾಲಿಗೆ ಬಳಸುತ್ತಿದ್ದಾರೆ. ಆಘಾತಕಾರಿ ವಿಚಾರವೆಂದರೆ ಮುಂಬೈ ಹಾಗೂ ಹೈದರಾಬಾದ್ನಲ್ಲಿ ಹಾಲಿಗೆ ಬೆರಕೆ ಮಾಡಲೆಂದೇ ರಾಸಾಯನಿಕ ಪುಡಿ ತಯಾರಿಸುವ ಘಟಕಗಳಿವೆ.
89 ಮಾದರಿ ಕಳಪೆ : ಕಳೆದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ರಾಜ್ಯಾದ್ಯಂತ 50ಕ್ಕೂ ಅಧಿಕ ಸಂಸ್ಥೆಗಳ 139 ಹಾಲಿನ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ ಕೇವಲ 50 ಮಾದರಿಗಳು ಮಾತ್ರ ಉತ್ತಮ ಗುಣಮಟ್ಟ ಹೊಂದಿರುವುದು ಬೆಳಕಿಗೆ ಬಂದಿದೆ. ಇನ್ನುಳಿದ 89 ಮಾದರಿಗಳು ಕಳಪೆ ಹಾಗೂ ಇದರಲ್ಲಿ 32 ಮಾದರಿಗಳಲ್ಲಿ ಕಲಬೆರಕೆ ಪತ್ತೆಯಾಗಿದೆ. ಇನ್ನುಳಿದ 57 ಮಾದರಿ ಕಳಪೆ ಗುಣಮಟ್ಟ ಹೊಂದಿವೆ. ಅಲ್ಲದೆ ಇದರಲ್ಲಿಯೂ ಕಲಬೆರಕೆ ಇದ್ದಿರುವ ಸಾಧ್ಯತೆ ಹೆಚ್ಚಿದೆ. ಗುಣಮಟ್ಟ ಪರಿಶೀಲನೆ ಮಾಡಿದಾಗ 45 ಸಂಸ್ಥೆಗಳ ಹಾಲಿನಲ್ಲಿ ಸಮರ್ಪಕ ಕೊಬ್ಬು ಹಾಗೂ ಎಸ್ಎನ್ಎಫ್ ಇರಲಿಲ್ಲ. 19 ಸಂಸ್ಥೆಗಳ 32 ಮಾದರಿಗಳಲ್ಲಿ ಯೂರಿಯಾ, ಡಿಟರ್ಜಂಟ್, ಉಪ್ಪು, ಸಕ್ಕರೆ, ಹೈಡ್ರೋಜನ್ ಪೆರಾಕ್ಸೈಡ್ ಹಾಗೂ ಕಾಸ್ಟಿಕ್ ಸೋಡಾಗಳಿರುವುದು ಪತ್ತೆಯಾಗಿದೆ.
ಕಲಬೆರಕೆ ಹೇಗಾಗುತ್ತಿದೆ?
ಹಾಲಿನ ಮಾರುಕಟ್ಟೆ ಸ್ಪರ್ಧೆಯಲ್ಲಿ ಉಳಿಯಲು ಹಾಲಿಗೆ ನೀರು ಬೆರೆಸಲಾಗುತ್ತದೆ. ಇದರಿಂದ ಹಾಲಿನಲ್ಲಿನ ಕೊಬ್ಬು ಹಾಗೂ ಎಸ್ಎನ್ಎಫ್ ಪ್ರಮಾಣವು ಕುಸಿಯುತ್ತದೆ. ಆಗ ಮಾರುಕಟ್ಟೆ ಗುಣಮಟ್ಟ ಉಳಿಸಿಕೊಳ್ಳಲು ಡಿಟರ್ಜಂಟ್, ಸಕ್ಕರೆ, ಪ್ರಾಣಿಗಳ ಕೊಬ್ಬು, ಉಪ್ಪು, ಸ್ಟಾರ್ಚ್, ಬೆನ್ಝಾಯಿಕ್ ಆ್ಯಸಿಡ್, ಅಮೋನಿಯಂ ಸಲ್ಫೇಟ್, ಫಾರ್ಮಲಿನ್, ಯೂರಿಯಾ, ಹೈಡ್ರೋಜನ್ ಫೆರಾಕ್ಸೈಡ್ಗಳನ್ನು ಸೇರಿಸಲಾಗುತ್ತದೆ. ಇದರ ಜತೆ ಹಾಲು ಕೆಡದಂತೆ ವಾಷಿಂಗ್ ಸೋಡಾ, ಕಾಸ್ಟಿಕ್ ಸೋಡಾ, ಬೋರಿಕ್ ಆ್ಯಸಿಡ್, ಸಾಲಿಸಿಲಿಕ್ ಆ್ಯಸಿಡ್, ಹೈಪೋಕ್ಲೊರೈಡ್ಗಳನ್ನು ಬಳಸಲಾಗುತ್ತದೆ. ವಿಚಿತ್ರವೆಂದರೆ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನಡೆಸುವ ಪ್ರಯೋಗಾಲಯಗಳಲ್ಲಿ ಯೂರಿಯಾ, ಡಿಟರ್ಜಂಟ್, ಉಪ್ಪು, ಸಕ್ಕರೆ, ಹೈಡ್ರೋಜನ್ ಪೆರಾಕ್ಸೈಡ್ ಹಾಗೂ ಕಾಸ್ಟಿಕ್ ಸೋಡಾ ಹೊರತುಪಡಿಸಿ ಉಳಿದ ಅಂಶಗಳಿರುವುದು ಪತ್ತೆಯಾಗುವುದೇ ಇಲ್ಲ.
11 ಲಕ್ಷ ಲೀಟರ್ ಖಾಸಗಿ ಹಾಲು ರಾಜ್ಯಕ್ಕೆ
ರಾಜ್ಯದಲ್ಲಿ ಒಟ್ಟು 59 ಲಕ್ಷ ಲೀಟರ್ ಹಾಲಿಗೆ ಪ್ರತಿನಿತ್ಯ ಬೇಡಿಕೆಯಿದೆ. ಇದರಲ್ಲಿ 30 ಲಕ್ಷ ಲೀಟರ್ ಹಾಲನ್ನು ಕೆಎಂಎಫ್ ಒದಗಿಸುತ್ತದೆ. ಸುಮಾರು 18 ಲಕ್ಷ ಲೀಟರ್ ಹಾಲನ್ನು ರೈತರೇ ನೇರವಾಗಿ ಮಾರುತ್ತಾರೆ. 11 ಲಕ್ಷ ಲೀ.ಹಾಲು ಹೊರ ರಾಜ್ಯದಿಂದ ಹಾಗೂ ಖಾಸಗಿ ಸಂಸ್ಥೆಗಳಿಂದ ಪೂರೈಕೆಯಾಗುತ್ತಿದೆ. 6 ಲಕ್ಷ ಲೀ. ಹಾಲನ್ನು ಹೊಟೇಲ್ ಉದ್ಯಮ ಖರೀದಿಸುತ್ತಿದೆ. ಆರೋಗ್ಯ ಇಲಾಖೆ ಮೂಲದ ಪ್ರಕಾರ ಹೊಟೇಲ್ ಉದ್ದಿಮೆ ದಪ್ಪ ಹಾಲಿಗಾಗಿ ಕಲಬೆರಕೆ ಹಾಲಿನ ಮೊರೆ ಹೋಗುತ್ತಿವೆ.
ಇದರರ್ಥ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ಖಾಸಗಿ ಬ್ರಾಂಡ್ಗಳು ಕಲಬೆರಕೆಯೆಂದಲ್ಲ. ಆದರೆ ಸರ್ಕಾರದ ವರದಿ ಪ್ರಕಾರ ಬಹುತೇಕ ಸಂಸ್ಥೆಗಳ ಹಾಲು ವಿಷಯುಕ್ತವಾಗಿದೆ.
ಹಾಲಿನ ಬ್ರಾಂಡ್ ಕೊಬ್ಬು(ಶೇ.) ಎಸ್ಎನ್ಎಫ್(ಶೇ.) ಕಲಬೆರಕೆ ಪದಾರ್ಥ
ನಿರ್ಮಲ 3.5 8.35 ಯೂರಿಯಾ
ತಿರುಮಲ 3.2 8.65 ಕಾಸ್ಟಿಕ್ ಸೋಡಾ, ಉಪ್ಪು
ಸಂಗಮ 2.3 6.05 ಯೂರಿಯಾ
ಆರೋಕ್ಯ 2.6 8.48 ಸಕ್ಕರೆ, ನ್ಯೂಟ್ರಿಲೈಝರ್, ಉಪ್ಪು
ವರ್ಣಾ 3 8.35 ಉಪ್ಪು
ದೂಧ್ ಪಂಢರಿ 3.4 8.35 ಉಪ್ಪು
ಮಿಸ್ಟಿ 3.4 8.5 ಉಪ್ಪು
ಊರ್ಜಾ 3.5 8.6 ಉಪ್ಪು
ಲಕ್ಷ್ಮಿ 3.5 8.1 ಉಪ್ಪು
ಸ್ವಾಭಿಮಾನ್ 2.8 8.3 ಸಕ್ಕರೆ, ಡಿಟರ್ಜಂಟ್
ಶಿವಾಮೃತ್ 3 8.2 ಡಿಟರ್ಜಂಟ್
ಪ್ರತಿಭಾ 2.6 8.1 ನ್ಯೂಟ್ರಿಲೈಝರ್
ಸಹ್ಯಾದ್ರಿ 3 8.1 ಡಿಟರ್ಜಂಟ್
ಸ್ವಸ್ತಿಕ್ 1.8 8 ನ್ಯೂಟ್ರಿಲೈಝರ್
ಶ್ರೀ ಕೃಷ್ಣ 2.9 8 ಕಾಸ್ಟಿಕ್ ಸೋಡಾ,ಯೂರಿಯಾ
ಹುತಾತ್ಮ 3.5 8.6 ಸಕ್ಕರೆ, ನ್ಯೂಟ್ರಿಲೈಝರ್
ಕಾವೇರಿ 3.8 8.8 ಕಾಸ್ಟಿಕ್ ಸೋಡಾ
ಗೋಕುಲ ಡೈರಿ 2.5 8.7 ಕಾಸ್ಟಿಕ್ ಸೋಡಾ
ಕೃಷ್ಣ 2.4 8.08 ಕಾಸ್ಟಿಕ್ ಸೋಡಾ
ಗೋವಿಂದ 4.2 8.53 ಹೈಡ್ರೋಜನ್ ಫೆರಾಕ್ಸೈಡ್
ಆಹಾ 1.5 9.1 ಕಾಸ್ಟಿಕ್ ಸೋಡಾ
ಮಾರುಕಟ್ಟೆ ಗುಣಮಟ್ಟ ಉಳಿಸಿಕೊಳ್ಳಲು ಡಿಟರ್ಜಂಟ್, ಸಕ್ಕರೆ, ಪ್ರಾಣಿಗಳ ಕೊಬ್ಬು, ಉಪ್ಪು, ಸ್ಟಾರ್ಚ್, ಬೆನ್ಝಾಯಿಕ್ ಆ್ಯಸಿಡ್, ಅಮೋನಿಯಂ ಸಲ್ಫೇಟ್, ಫಾರ್ಮಲಿನ್, ಯೂರಿಯಾ, ಹೈಡ್ರೋಜನ್ ಫೆರಾಕ್ಸೈಡ್ ಗಳನ್ನು ಸೇರಿಸಲಾಗುತ್ತದೆ.
ಕೆಎಂಎಫ್ ಏನು ಮಾಡುತ್ತಿದೆ?
-ಉತ್ಪಾದಕರಿಂದ ಹಾಲು ಪಡೆಯುವಾಗ ಕೆಎಂಎಫ್ ನೀಡಿರುವ ಕಿಟ್ ಮೂಲಕ ಪರೀಕ್ಷಿಸಲಾಗುತ್ತದೆ. ಒಂದೊಮ್ಮೆ ಗುಣಮಟ್ಟದಲ್ಲಿ ಇಳಿಕೆಯಾಗಿದ್ದರೆ ಕಡಿಮೆ ಹಣ ನೀಡಲಾಗುತ್ತದೆ ಹಾಗೂ ಕಲಬೆರಕೆ ಕಂಡುಬಂದರೆ ಗ್ರಾಮ ಸಭೆಯಲ್ಲಿ ಛೀಮಾರಿ ಹಾಕಲಾಗುತ್ತದೆ.
-ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಶೀತಲ ಕೇಂದ್ರಕ್ಕೆ ಹಾಲು ಬರುವಾಗಲೂ ಮತ್ತೆ ಗುಣಮಟ್ಟ ಹಾಗೂ ಕಲಬೆರಕೆ ಅಂಶಗಳನ್ನು ಪರಿಶೀಲಿಸಲಾಗುತ್ತದೆ. ಒಂದೊಮ್ಮೆ ಕಲಬೆರಕೆ ಕಂಡುಬಂದರೆ ಅಂತಹ ಸಂಘಗಳ ಪರವಾನಗಿ ರದ್ದುಗೊಳಿಸಲಾಗುತ್ತದೆ.
-ಶೀತಲ ಕೇಂದ್ರದಿಂದ ಡೈರಿಗೆ ಬರುವಾಗಲೂ ಮತ್ತೆ ಇವೆರಡು ಅಂಶಗಳನ್ನು ಪರೀಕ್ಷಿಸಲಾಗುತ್ತದೆ. ಇದರ ಜತೆಗೆ ಕೆಎಂಎಫ್ನ ಗುಣಮಟ್ಟ ನಿಯಂತ್ರಣ ತಂಡವು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ.
-ನಂದಿನಿ ಹಾಲಿನ ಗುಣಮಟ್ಟದ ಬಗ್ಗೆ ಸಂದೇಹ ಬಂದಲ್ಲಿ ಗ್ರಾಹಕರೆದುರೇ ಪರಿಶೀಲಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.
-ಈ ಗುಣಮಟ್ಟದ ಪ್ರಮಾಣವನ್ನು ಪ್ರತಿ ಹಾಲಿನ ಪ್ಯಾಕ್ನಲ್ಲಿಯೂ ಮುದ್ರಿಸಲೇಬೇಕು. ನಿಮ್ಮ ಮನೆಯ ಹಾಲಿನ ಗುಣಮಟ್ಟದ ಬಗ್ಗೆ ಸಂಶಯ ಬಂದಿದ್ದರೆ ಸಂಚಾರಿ ಹಾಲು ಪರೀಕ್ಷಾ ವಾಹನಕ್ಕೆ ಕರೆ ಮಾಡಬಹುದು. ದೂ. ಸಂ- 9591994374/ 9591994309
ಕೆಎಂಎಫ್ನಲ್ಲಿ ಕೆಲವೊಮ್ಮೆ ರೈತರು ನೀರನ್ನು ಬೆರೆಸಬಹುದು. ಆದರೆ ಕಡಿಮೆ ದರ ಸಿಗುವ ಭಯದಲ್ಲಿ ಅದನ್ನು ಮಾಡುವುದಿಲ್ಲ. ರಾಜ್ಯದಲ್ಲಿ ಕೇವಲ ಸರ್ಕಾರಿ ಸಹಕಾರ ಸಂಘದ ಮೂಲಕ ಹಾಲಿನ ಖರೀದಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ನಲ್ಲಿ ಯಾವುದೇ ಕಲಬೆರಕೆಯಾಗುತ್ತಿಲ್ಲ. ಮತ್ತೊಂದೆಡೆ ಕೆಎಂಎಫ್ನಲ್ಲಿ ಪ್ರತಿದಿನ 55 ಲಕ್ಷ ಲೀಟರ್ ಹಾಲು ದೊರೆಯುತ್ತಿದ್ದು, 30 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ. ಇದರಿಂದ ಹಾಲಿಗೆ ಕಲಬೆರಕೆ ಮಾಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ.
- ಎ.ಎಸ್.ಪ್ರೇಮನಾಥ್, ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕ
ಈ ಕೆಳಗೆ ಹೇಳಿದಂತೆ ಪ್ರತಿ ಹಾಲಿನ ಕೊಬ್ಬು ಹಾಗೂ ಎಸ್ಎನ್ಎಫ್ ಪ್ರಮಾಣವಿರಬೇಕು. ಸಣ್ಣ ಮಕ್ಕಳಿಗೆ ಇಂತಹ ಕಲಬೆರಕೆ ಹಾಲು ನೀಡುವುದು ದೊಡ್ಡ ಅಪಾಯಕ್ಕೆ ಆಮಂತ್ರಣ ನೀಡಿದಂತೆ. ವಿಜ್ಞಾನದ ಪ್ರಕಾರ ತಾಯಿ ಎದೆ ಹಾಲಿನ ಹೊರತಾಗಿ ಹಸುವಿನ ಹಾಲು ಕುಡಿಸುವುದಾರೆ ಹಾಲನ್ನು ಕರೆದ ಒಂದು ಗಂಟೆಯಲ್ಲಿ ಪಾಶ್ಚೀಕರಿಸಿ ನೀಡಬೇಕು. ಇಲ್ಲವಾದಲ್ಲಿ ಮಗುವಿನ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇನ್ನು ಸಾಮಾನ್ಯ ಹಾಲಿನ ಗುಣಮಟ್ಟ ಕಾಪಾಡಲು ಕರೆದ 4 ಗಂಟೆಯೊಳಗೆ ಕಾಯಿಸಿ ನಾಲ್ಕು ಡಿಗ್ರಿಯಲ್ಲಿ ಶೇಖರಿಸಬೇಕು. ಇದು ಕೂಡ 24 ಗಂಟೆಗೆ ಮಾತ್ರ ಸೀಮಿತ. ಹಾಲಿನಲ್ಲಿ ಇಂದು 10ಕ್ಕೂ ಅಧಿಕ ತರಹದ ವಸ್ತುಗಳನ್ನು ಬೆರಕೆ ಮಾಡಲಾಗುತ್ತಿದೆ. ಆದರೆ ಸಾಕಷ್ಟು ಕಲಬೆರಕೆಗಳನ್ನು ಗುರುತಿಸುವ ತಂತ್ರಜ್ಞಾನವೇ ನಮ್ಮ ರಾಜ್ಯದಲ್ಲಿಲ್ಲ. ಬೆರಳೆಣಿಕೆಯ ಖಾಸಗಿ ಪ್ರಯೋಗಾಲಯದಲ್ಲಿ ಮಾತ್ರ ಪರೀಕ್ಷಿಸಬಹುದಾಗಿದೆ.
- ಸದಾನಂದ ಮೈಯ್ಯ, ಆಹಾರ ತಜ್ಞ
- ರಾಜೀವ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


