ಕಲಬೆರಕೆ ಹಾಲಿಂದ ಆರೋಗ್ಯ ಹಾಳು
ಕಲಬೆರಕೆ ಹಾಲಿಂದ ಕಂದಮ್ಮ ಬೆಳೆಯದು, ಆರೋಗ್ಯ ಹಾಳು
ಕನ್ನಡಪ್ರಭ ವಾರ್ತೆ ಬೆಂಗಳೂರು ಡಿ.11
ಬೆಲೆ ಕಡಿಮೆ ಎಂದು ಮಕ್ಕಳಿಗೆ ಕಲಬೆರಕೆ ಹಾಲು ಕುಡಿಸಿದರೆ ಕಂದಮ್ಮಗಳ ಆರೋಗ್ಯ ಕೆಡುವುದರಲ್ಲಿ ಅನುಮಾನವೇ ಇಲ್ಲ. ಹಿಂದೆ ಮುಂದೆ ಆಲೋಚಿಸದೆ ಕೈಗೆ ಸಿಗುವ ಹಾಲು ಖರೀದಿ ಮಾಡಿ ಕುಡಿಯುವ ಜನ ಪ್ರತಿದಿನವೂ ವಿಷವನ್ನು ತಮ್ಮ ದೇಹದೊಳಕ್ಕೆ ಬಿಟ್ಟುಕೊಳ್ಳುತ್ತಿದ್ದಾರೆ.
ಒಂದು ಅಥವಾ ಎರಡು ದಿನ ಕಲಬೆರಕೆ ಹಾಲು ಸೇವನೆ ಮಾಡುವುದರಿಂದ ಆರೋಗ್ಯ ಕೆಡದು. ಆದರೆ, ಪ್ರತಿ ದಿನವೂ ನಿಯಮಿತವಾಗಿ ಕಲಬೆರಕೆ ಹಾಲು ಕುಡಿಯುವುದರಿಂದ ಆನಾರೋಗ್ಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ಮಕ್ಕಳು ಬೆಳೆಯುತ್ತಾ ಸಾಗಿದಂತೆ ದೇಹವು ಕಾಯಿಲೆಗಳ ಸಂಗ್ರಹಾಗಾರವಾಗುತ್ತದೆ. ವಿಷಕಾರಕ ಅಂಶಗಳಿರುವ ಹಾಲನ್ನು ಮಕ್ಕಳಿಗೆ ಕುಡಿಸುವ ಮುನ್ನ ಅಥವಾ ನೀವು ಕುಡಿಯುವ ಮುನ್ನ ಆಲೋಚಿಸಿ. ಎದೆ ಹಾಲು ತಪ್ಪಿಸಿ ಶಿಶುಗಳಿಗೆ ಪ್ಯಾಕೆಟ್ ಹಾಲು ಕುಡಿಸುವ ತಾಯಂದಿರು ಎಚ್ಚರದಿಂದಿರಬೇಕು. ಮಕ್ಕಳ ಬೆಳವಣಿಗೆ ಕುಂಠಿತ, ಕೂದಲು ಬಿಳಿಯಾಗುವುದು, ಹಲ್ಲು ಹಾಳಾಗುವುದು ಹಾಗೂ ಶಕ್ತಿಹೀನತೆಗೆ ಹಾಲು ಪ್ರಮುಖ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ.
ತಾಯಿ ಎದೆ ಹಾಲು ಬಿಟ್ಟ ಮಗುವಿಗೆ ಉತ್ತಮ ಗುಣಟ್ಟದ ಹಸುವಿನ ಹಾಲನ್ನು ನೀಡಿದಾಗಲೇ ಅಜೀರ್ಣವಾಗುವ ಉದಾಹರಣೆ ನೋಡಿರುತ್ತೀರಿ.
ಜೀವಕ್ಕೆ ಕಂಟಕಪ್ರಾಯವಾಗುವ ರಾಸಾಯನಿಕಗಳನ್ನು ಸೇವಿಸಿದರೆ ಮಕ್ಕಳ ಆರೋಗ್ಯದ ಕಥೆ ಏನಾಗಬೇಕು? ಕಲಬೆರಕೆ ಹಾಲೇ ಕಾರಣ: ಮಕ್ಕಳಿಗೆ ವಾಂತಿಭೇದಿ ಹಾಗೂ ಶ್ವಾಸಕೋಶದ ಸಮಸ್ಯೆ ಎದುರಾಗುತ್ತಿರುತ್ತದೆ.
ಇದಕ್ಕೆ ಪ್ರಮುಖ ಕಾರಣವೇ ಕಲಬೆರಕೆ ಹಾಲು ಎಂದು ಮಕ್ಕಳ ತಜ್ಞ ಡಾ.ಎ.ಎಸ್.ಪ್ರಕಾಶ್ ಹೇಳುತ್ತಾರೆ. ಇದಲ್ಲದೇ ಭವಿಷ್ಯದಲ್ಲಿ ದೇಹ ಬೆಳವಣಿಗೆಯಲ್ಲಿ ಕುಂಠಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಕಲಬೆರಕೆ ಹಾಲನ್ನು ಉಣಿಸಿದರೆ ಅದೇ ವಿಷವಾಗುವ ಸಾಧ್ಯತೆಯಿದೆ. ಇನ್ನು ವಯಸ್ಕರ ಆರೋಗ್ಯದ ಮೇಲೂ ವಿಪರೀತ ಪರಿಣಾಮ ಬೀರುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರು ಕಲಬೆರಕೆ ಹಾಲು ಕುಡಿದರೆ ಅದು ಜೀವವನ್ನೇ ತೆಗೆಯಲಿದೆ. ಹಾಲಿನಲ್ಲಿನ ಕೊಬ್ಬು ಪ್ರಮಾಣವನ್ನು ಹೆಚ್ಚಿಸಲು ಬಳಸುವ ರಾಸಾಯನಿಕಗಳು ಹೃದಯ ಸಮಸ್ಯೆ ಇರುವವರಿಗೆ ಕೂಡಲೇ ರಕ್ತದೊತ್ತಡ ಮತ್ತು ಮಧುಮೇಹವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ದೇಹದಲ್ಲಿ ಕಲಬೆರಕೆ ಹಾಲು ಕೂಡಲೇ ಕೊಬ್ಬಿನ ಪ್ರಾಣವನ್ನು ಹೆಚ್ಚಿಸುತ್ತದೆ. ಇದರ ಜತೆಗೆ ಕ್ಯಾನ್ಸರ್, ಕಿಡ್ನಿ ವೈಫಲ್ಯ, ಜಠರ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಹಾಲಿನಲ್ಲಿರುವ ವಿಷಕಾರಕ ಅಂಶಗಳು ಮತ್ತು ಅದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳನ್ನು ವೈದ್ಯರು ಹೀಗೆ ವಿವರಿಸುತ್ತಾರೆ.
ಯೂರಿಯಾ- ಹೊಟ್ಟೆನೋವು, ಹೃದಯ ಬಡಿತದಲ್ಲಿ ವಿಪರೀತ ಏರುಪೇರು, ಸ್ನಾಯು ಸೆಳೆತ, ಅಶಕ್ತತೆ, ವಾಂತಿಭೇದಿ, ಡೆಹೇರಿಯಾ
ಡಿಟರ್ಜಂಟ್- ಕ್ಯಾನ್ಸರ್, ಶ್ವಾಸಕೋಶ ಸಂಬಂಧಿ ಕಾಯಿಲೆ, ಕಿಡ್ನಿ ಸಂಬಂಧಿ ಕಾಯಿಲೆ, ಹೃದಯ ಕಾಯಿಲೆ
ಪ್ರಾಣಿಗಳ ಕೊಬ್ಬು, ಸ್ಟಾರ್ಚ್, ಉಪ್ಪು, ಸಕ್ಕರೆ- ಮಧುಮೇಹ, ರಕ್ತದೊತ್ತಡ ಏರಿಕೆ, ಹೃದಯ ಸಂಬಂಧಿ ಕಾಯಿಲೆ, ಜೇರ್ಣ ಸಂಬಂಧಿ ಕಾಯಿಲೆ
ಬೆಂಝಾಯಿಕ್ ಆ್ಯಸಿಡ್- ಆ್ಯಸಿಡಿಟಿ
ಅಮೋನಿಯಂ ಸಲ್ಫೇಟ್- ಮೂಳೆ ಸಂಬಂಧಿ ಕಾಯಿಲೆ, ಕ್ಯಾನ್ಸರ್
ಫಾರ್ಮಲಿನ್- ಕ್ಯಾನ್ಸರ್, ಜಠರ ಸಂಬಂಧಿ ಕಾಯಿಲೆ
ಹೈಡ್ರೋಜನ್ ಫೆರಾಕ್ಸೈಡ್- ಕೂದಲು ಬಿಳಿಯಾಗುವುದು, ಹಲ್ಲು ಹುಳುಕು ಹಾಗೂ ಹಳದಿ
ಕಲಬೆರಕೆಗೆ ಕಾರಣವೇನು?
ರಾಜ್ಯಕ್ಕೆ ಆಂಧ್ರ, ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ಕಲಬೆರಕೆ ಹಾಲು ಬರುತ್ತದೆ. ಆ ರಾಜ್ಯಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಸದೃಢವಾಗಿಲ್ಲ. ಇದರಿಂದ ಖಾಸಗಿ ಸಂಸ್ಥೆಗಳ ಪಾರುಪತ್ಯ ಹೆಚ್ಚಿದೆ. ರೈತರು ಹಾಲಿಗೆ ನೀರು ಮಿಶ್ರಣ ಮಾಡಿದರೆ, ಅದನ್ನು ಸಹಕಾರ ಸಂಘಗಳು ತಿರಸ್ಕರಿಸಿದರೆ ಖಾಸಗಿ ಸಂಸ್ಥೆಗಳು ಬಂದು ಕಡಿಮೆ ದರಕ್ಕೆ ಅಥವಾ ಅದೇ ದರಕ್ಕೆ ಪಡೆದುಕೊಳ್ಳುತ್ತವೆ. ಇದರಿಂದ ಪಕ್ಕದ ರಾಜ್ಯದಲ್ಲಿನ ಬಹುತೇಕ ಹಾಲುಗಳ ಎಸ್ಎನ್ಎಫ್ ಪ್ರಮಾಣ ಶೇ.7.5ನ್ನು ದಾಟುವುದಿಲ್ಲ. ಆದರೆ ಮಾರುಕಟ್ಟೆಯ ಗುಣಮಟ್ಟ ಕಾಪಾಡಿಕೊಳ್ಳಲು 10ಕ್ಕೂ ಹೆಚ್ಚಿನ ತರಹದ ರಾಸಾಯನಿಕಗಳನ್ನು ಬೆರೆಸುತ್ತಾರೆ. ಇದರಿಂದ ಕಡಿಮೆ ಪ್ರಮಾಣದ ಹಾಲಿಗೆ ನೀರು ಸೇರಿಸಿ ಲಾಭಾಂಶವನ್ನು ಹೆಚ್ಚು ಪಡೆಯಬಹುದು. ಇದರಿಂದ ಹಾಲು ಉದ್ಯಮಿಗಳು ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಪಡೆಯಬಹುದಾಗಿದೆ. ಇನ್ನು ನಗರಗಳಲ್ಲಿ ಹಾಲು ಉತ್ಪಾದಕರಿಗೆ ತಿಳಿಯದೇ ಕಲಬೆರಕೆಯಾಗುತ್ತಿದೆ. ಹಸುಗಳೇ ಈ ಕಲಬೆರಕೆಗೆ ಕಾರಣವಾಗುತ್ತಿವೆ. ಮತ್ತೊಂದೆಡೆ ಮಾಲೀಕರ ನಿರ್ಲಕ್ಷ್ಯವು ಕಾರಣವಾಗಿರುತ್ತದೆ. ಬೆಂಗಳೂರಿನಂತಹ ನಗರಗಳಲ್ಲಿ ಕೆಲ ಹಸುಗಳು ಮಾರುಕಟ್ಟೆಯಲ್ಲಿಯೇ ಬಿದ್ದಿರುತ್ತವೆ. ಚಪ್ಪಲಿ, ಪ್ಲಾಸ್ಟಿಕ್, ಹಾಳಾದ ತರಕಾರಿ ಸೇರಿದಂತೆ ಎಲ್ಲ ಕೊಳಚೆಗಳನ್ನು ಅವು ಸೇವಿಸುತ್ತವೆ. ಇದರಿಂದ ಹಸುವಿನ ಹಾಲಿನಲ್ಲಿ ಯೂರಿಯಾ ಸೇರಿದಂತೆ ಕೆಲ ರಾಸಾಯನಿಕಗಳು ಸೇರುತ್ತವೆ. ಇದಲ್ಲದೇ ಹಾಲಿನಲ್ಲಿ ಆ್ಯಸಿಡ್ ಪ್ರಮಾಣವನ್ನು ಅಧಿಕವಾಗುತ್ತದೆ.
ಕಲಬೆರಕೆ ಹಾಲು ಮಾರಾಟ ತಡೆಗಟ್ಟಲು ಅವಕಾಶಗಳಿವೆ. ಅಂತಹ ಹಾಲು ಮಾರಾಟ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಅಂತಹ ಹಾಲು ಮಾರಾಟ ನಿಷೇಧಕ್ಕೂ ಕ್ರಮ ಕೈಗೊಳ್ಳುವಂತೆ ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
-ಯು.ಟಿ.ಖಾದರ್, ಆರೋಗ್ಯ ಸಚಿವ
ಮಕ್ಕಳಿಗೆ ಪದೇಪದೆ ವಾಂತಿಭೇದಿ ಹಾಗೂ ಶ್ವಾಸಕೋಶದ ಸಮಸ್ಯೆ ಎದುರಾಗುತ್ತಿರುತ್ತದೆ. ಇದಕ್ಕೆ ಪ್ರಮುಖ ಕಾರಣವೇ ಕಲಬೆರಕೆ ಹಾಲು.
-ಡಾ.ಎ.ಎಸ್.ಪ್ರಕಾಶ್ ಮಕ್ಕಳ ತಜ್ಞ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

