ಸಲಿಂಗ ಸಕ್ರಮಕ್ಕೆ ಸುಗ್ರೀವಾಜ್ಞೆ ಚಿಂತನೆ

ನವದೆಹಲಿ: ವಯಸ್ಕ ಸಲಿಂಗಿಗಳ ನಡುವಿನ ಸಮ್ಮತಿಯ ಲೈಂಗಿಕ ಸಂಬಂಧವನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಕುರಿತು ಚಿಂತನೆ ನಡೆಸುತ್ತಿದೆ. ಇದರ ಜತೆಗೆ, ತೀರ್ಪನ್ನು ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್ನ ವಿಸ್ತೃತಪೀಠಕ್ಕೂ ಸರ್ಕಾರ ಅರ್ಜಿ ಸಲ್ಲಿಸಲಿದೆ. ಸಲಿಂಗಕಾಮವನ್ನು ಅಪರಾಧ ಎಂದು ಘೋಷಿಸಿ ಸುಪ್ರೀಂಕೋರ್ಟ್ ಗುರುವಾರ ನೀಡಿದ್ದ ಐತಿಹಾಸಿಕ ತೀರ್ಪಿನ ವಿರುದ್ಧ ವ್ಯಕ್ತವಾದ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಸೋನಿಯಾ, ಕೇಂದ್ರ ಸಚಿವರ ಅಸಮಾಧಾನ: ಸುಪ್ರೀಂ ತೀರ್ಪು ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕಪಿಲ್ ಸಿಬಲ್ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.'ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸುವ ವಿಚಾರ ಸಂಸತ್ತಿನಲ್ಲಿ ಇತ್ಯರ್ಥವಾಗಲಿದೆ. ದೇಶದ ಎಲ್ಲಾ ಪ್ರಜೆಗಳಿಗೆ ಸಂವಿಧಾನದಲ್ಲಿ ನೀಡಲಾಗಿರುವ ಬದುಕುವ, ಸ್ವಾತಂತ್ರ್ಯದ ಹಕ್ಕನ್ನು ಸಂಸತ್ತು ಎತ್ತಿಹಿಡಿಯಲಿದೆ ಎನ್ನುವ ವಿಶ್ವಾಸ ಇದೆ' ಎಂದು ಸೋನಿಯಾ ಹೇಳಿದ್ದಾರೆ.
ಸರ್ಕಾರ ಏನು ಮಾಡಬಹುದು?
- ಐಪಿಸಿ ಕಲಂ 377ಕ್ಕೆ ತಿದ್ದುಪಡಿ ತರುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಬಹುದು. ಈ ಮೂಲಕ ಕಾನೂನು ತಿದ್ದುಪಡಿಗೆ ಮುಂದಾಗಬಹುದು.
- ಸುಪ್ರೀಂಕೋರ್ಟ್ನ ತೀರ್ಪಿನ ವಿರುದ್ಧ ವಿಸ್ತೃತ ಪೀಠಕ್ಕೆ ಪುನರ್ ಪರಿಶೀಲನೆ ಅಥವಾ ಕ್ಯುರೇಟರ್ ಅರ್ಜಿ ಸಲ್ಲಿಸಬಹುದು
ಶತಮಾನದಷ್ಟು ಹಿಂದಕ್ಕೆ
ಸಲಿಂಗಕಾಮವನ್ನು ಅಕ್ರಮ ಎಂದು ಘೋಷಿಸಿದ ಸುಪ್ರೀಂಕೋರ್ಟ್ ತೀರ್ಪಿಗೆ ವಿತ್ತ ಸಚಿವ ಚಿದಂಬರಂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ತೀರ್ಪು ನಮ್ಮನ್ನು 1860ರಷ್ಟು ಹಿಂದಿನ ಕಾಲಕ್ಕೆ ಕೊಂಡೊಯ್ದಿದೆ. 1860ರಲ್ಲಿದ್ದ ಮನಸ್ಥಿತಿ ಈಗಿಲ್ಲ. ಹಾಗಾಗಿ ಈಗ ಸಲಿಂಗಿಗಳ ನಡುವಿನ ಲೈಂಗಿಕ ಸಂಬಂಧವನ್ನು ಅಪರಾಧ ಎಂದು ನಿರ್ಧರಿಸಿದರೆ ತಪ್ಪಾದೀತು. ಈ ವಿವಾದಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪು ಯೋಗ್ಯವಾಗಿದೆ. ಇದನ್ನು ಕೇಂದ್ರ ಸರ್ಕಾರವೂ ಒಪ್ಪಿಕೊಂಡಿದ್ದು, ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿತ್ತು ಎಂದು ಚಿದು ಹೇಳಿದ್ದಾರೆ.
ಸಲಿಂಗ ಮದುವೆ ಕಾನೂನು ರದ್ದು ಮಾಡಿದ ಕೋರ್ಟ್
ಮೆಲ್ಬೋರ್ನ್: ಆಸ್ಟ್ರೇಲಿಯಾದ ಹೈಕೋರ್ಟ್ ಗುರುವಾರ ಸಲಿಂಗಿಗಳ ನಡುವಿನ ಮದುವೆಗೆ ಸಂಬಂಧಿಸಿದ ಕಾನೂನನ್ನು ರದ್ದು ಮಾಡುವ ಮೂಲಕ ಮಹತ್ವದ ತೀರ್ಪು ನೀಡಿದೆ. ಸಲಿಂಗಿಗಳ ನಡುವಿನ ಮದುವೆ ಕಾನೂನು ದೇಶದ ಫೆಡರಲ್ ಮ್ಯಾರೇಜ್ ಆ್ಯಕ್ಟ್ ಜತೆ ಹೊಂದಾಣಿಕೆಯಾಗುವುದಿಲ್ಲ. ಫೆಡರಲ್ ಕಾನೂನು ಒಂದು ಪುರುಷ ಮತ್ತು ಮಹಿಳೆ ನಡುವಿನ ಬಾಂಧವ್ಯವನ್ನು ಮದುವೆ ಎಂದು ವ್ಯಾಖ್ಯಾನಿಸುತ್ತದೆ.
ಆದರೆ, ಸಲಿಂಗ ಮದುವೆ ಕಾನೂನು ಇದಕ್ಕೆ ತದ್ವಿರುದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಕ್ಯಾನ್ಬೆರ್ರಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಲಿಂಗಿಗಳ ನಡುವಿನ ಮದುವೆಗೆ ಅವಕಾಶ ಮಾಡಿಕೊಡುವ ಆಸ್ಟ್ರೇಲಿಯಾದ ರಾಜಧಾನಿ ವ್ಯಾಪ್ತಿಯ ಕಾನೂನು ಅನ್ನು ಪ್ರಶ್ನಿಸಿ ಫೆಡರಲ್ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಈ ತೀರ್ಪು ನೀಡಿದೆ.
ಸಲಿಂಗಕಾಮಕ್ಕೆ ಸಂಬಂಧಿಸಿ ನಾವು ಕಾನೂನನ್ನು ನಾವು ಆದಷ್ಟು ಶೀಘ್ರ ಬದಲಾಯಿಸಬೇಕಿದೆ. ಇದಕ್ಕಾಗಿ ಸಾಧ್ಯವಾದ ಎಲ್ಲಾ ಮಾರ್ಗಗಳ ಮೂಲಕ ಪ್ರಯತ್ನ ನಡೆಸುತ್ತೇವೆ.
- ಕಪಿಲ್ ಸಿಬಲ್, ಕಾನೂನು ಸಚಿವ
ಐಪಿಸಿಯ 377ನೇ ಕಲಂಗೆ ಸಂಬಂಧಿಸಿ ಸರ್ಕಾರ ಸರ್ವಪಕ್ಷಗಳ ಸಭೆ ಕರೆಯಲಿ. ಸರ್ಕಾರದ ನಿಲುವು ನೋಡಿಕೊಂಡು ನಾವು ಈ ವಿಚಾರಕ್ಕೆ ಸಂಬಂಧಿಸಿ ಚರ್ಚೆ ನಡೆಸುತ್ತೇವೆ.
- ಸುಷ್ಮಾಸ್ವರಾಜ್, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕಿ
ಘನತೆ ಹಾಗೂ ಹಕ್ಕಿನ ವಿಚಾರದಲ್ಲಿ ಎಲ್ಲರೂ ಹುಟ್ಟಿನಿಂದಲೇ ಮುಕ್ತರು ಹಾಗೂ ಸಮಾನರು. ಸಲಿಂಗಿಗಳಿಗೆ ವಿಧಿಸುವ ಜೈಲು ಶಿಕ್ಷೆ, ಬಂಧನ ಹಾಗೂ ತಾರತಮ್ಯವನ್ನು ನಾವು ಖಂಡಿಸುತ್ತೇವೆ. ಎಲ್ಲರಿಗೂ ಸಮಾನತೆಯ ಹಾಗೂ ಸ್ವಾತಂತ್ರ್ಯದ ಪ್ರಪಂಚವನ್ನು ನಿರ್ಮಿಸಲು ನಾವು ಕಟಿಬದ್ಧರಾಗಿದ್ದೇವೆ.
-ಬಾನ್ ಕಿ ಮೂನ್, ವಿಶ್ವಸಂಸ್ಥೆ ಮುಖ್ಯಸ್ಥ
ಇಬ್ಬರು ವಯಸ್ಕ ಸಲಿಂಗಿಗಳ ನಡುವಿನ ಸಮ್ಮತಿಯ ಸೆಕ್ಸ್ ಅನ್ನು ಅಪರಾಧವೆಂದು ಸಾರುವ ಯಾವುದೇ ಕ್ರಮವನ್ನು ನಾವು ವಿರೋಧಿಸುತ್ತೇವೆ. ಸಲಿಂಗಕಾಮಿಗಳ ಹಕ್ಕುಗಳೂ ಕೂಡ ಮಾನವ ಹಕ್ಕುಗಳಾಗಿವೆ. ಸಲಿಂಗಕಾಮಿಗಳಿಗೂ ಸಮಾನವಾಗಿ ಕಾಣುವಂತೆ ನಾವು ವಿಶ್ವದ ಎಲ್ಲಾ ಸರ್ಕಾರಗಳಿಗೆ ಮನವಿ ಮಾಡುತ್ತೇವೆ.
- ಜೆನ್ ಸಾಕಿ,
ಅಮೆರಿಕದ ವಿದೇಶಾಂಗ ಸಚಿವಾಲಯದ ವಕ್ತಾರ
ಸಲಿಂಗಕಾಮ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಆಯ್ಕೆಗೆ ಸಂಬಂಧಿಸಿದ್ದು. ಭಾರತವು ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಸರುವಾಸಿಯಾಗಿದೆ. ಹಾಗಾಗಿ ಅದಕ್ಕೆ ಅಡ್ಡಿ ಮಾಡುವುದು ಬೇಡ.
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


