ಪ್ರಧಾನ ಸುದ್ದಿ

ವಿಐಎಸ್‌ಎಲ್ ಖಾಸಗೀಕರಣ ಮಾಡಬೇಡಿ

Published On :

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಒಂದು ಕಾಲದಲ್ಲಿ ರಾಜ್ಯದ ಹೆಮ್ಮೆಯ ಪ್ರತೀಕವಾಗಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಖಾಸಗೀಕರಣ ಮಾಡಬಾರದು ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರಧಾನಿ ಮನಮೋಹ್ ಸಿಂಗ್ ಅವರಿಗೆ ಪತ್ರ ಬರೆದಿರುವ ರಾಜೀವ್ ಚಂದ್ರಶೇಖರ್, ವಿಐಎಸ್‌ಎಲ್‌ನ್ನು ರಚನಾತ್ಮಕವಾಗಿ ಪುನಶ್ಚೇತನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ತಮ್ಮನ್ನು ಭೇಟಿ ಮಾಡಿದ ವಿಐಎಸ್‌ಎಲ್ ಕಾರ್ಮಿಕ ಸಂಘದ ಪದಾಧಿಕಾರಿಗಳನ್ನು ಸಂತೈಸಿದ ರಾಜೀವ್ ಚಂದ್ರಶೇಖರ್, ಈ ಹೋರಾಟದಲ್ಲಿ ಕಾರ್ಮಿರೊಂದಿಗೆ ಇರುವುದಾಗಿ ಒತ್ತಾಸೆ ನೀಡಿದ್ದಾರೆ.
ಪ್ರಧಾನಿಗೆ ಬರೆದಿರುವ ಪತ್ರದಲ್ಲಿ, ಸಾರ್ವಜನಿಕ ವಲಯದ ಉದ್ದಿಮೆಗಳನ್ನು ನಷ್ಟದಂಚಿಗೆ ತಳ್ಳಿ, ಮುಚ್ಚುತ್ತೇವೆ ಇಲ್ಲ ಖಾಸಗೀಕರಣವನ್ನು ಒಪ್ಪಿಕೊಳ್ಳಿ ಎಂಬ ಒತ್ತಡ ಹೇರುವ ಧೋರಣೆಯಲ್ಲೇ ದೋಷ ಇದೆ. ವಿಐಎಸ್‌ಎಲ್‌ನ ಬೆಳವಣಗೆ ಮತ್ತು ಮೌಲ್ಯಸೃಷ್ಟಿಯ ಬಗ್ಗೆ ಸರ್ಕಾರ ನಿಖರ ಮಾರ್ಗಸೂಚಿ ಮತ್ತು ಯೋಜನೆಗಳನ್ನು ಹೊಂದಬೇಕು ಎಂದು ಸಲಹೆ ಮಾಡಿದ್ದಾರೆ.
ವಿಎಸ್‌ಐಎಲ್ ಖಾಸಗಿಕರಣ ಯೋಚನೆಯನ್ನು ಕೈಬಿಟ್ಟು ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್)ದ 60 ಸಾವಿರ ಕೋಟಿ ವೆಚ್ಚದ ಅಧುನೀಕರಣ ಕಾರ್ಯಕ್ರಮದ ಭಾಗವಾಗುವಂತೆ ನೋಡಿಕೊಳ್ಳಬೇಕು. ವಿಐಎಸ್‌ಎಲ್‌ನ್ನು ಖಾಸಗಿ ಅವರಿಗೆ ನೀಡಿದರೆ ಭದ್ರಾವತಿಯ ನೂರಾರು ಜನರು ಕೆಲಸ ಕಳೆದುಕೊಳ್ಳುತ್ತಾರೆ. ಈ ಕಾರ್ಖಾನೆಯ ಅಧುನೀಕರಣದ ಬಗ್ಗೆ ಕೇವಲ ಒಂದು ವರ್ಷದ ಹಿಂದೆ ಮಾತನಾಡಲಾಗುತ್ತಿತ್ತು. ಆದರೆ ಈಗ ಏಕಾಏಕಿ ಭಾರತೀಯ ಉಕ್ಕು ಪ್ರಾಧಿಕಾರ (ಸೈಲ್) ಜಂಟಿ ಉದ್ಯಮ ಮಾಡಲು ಹೊರಟಿರುವುದು ಏಕೆ ಎಂದೇ ಗೊತ್ತಾಗುತ್ತಿಲ್ಲ.
ವಿಐಎಸ್‌ಎಲ್ ಕರ್ನಾಟಕದ ಆರ್ಥಿಕತೆಯ ಅವಿಭಾಜ್ಯ ಅಂಗ, ಇದರ ಅಧುನಿಕರಣದ ಬಗ್ಗೆ ನೀಡಿದ ಭರವಸೆಗಳು ಈಡೇರದಿರುವುದು ಶೋಚನೀಯ. ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಕುರಿತಾದ ಸರ್ಕಾರದ ನಡೆಯಲ್ಲಿ ದೋಷವಿದೆ ಎಂದು ರಾಜೀವ್ ಚಂದ್ರಶೇಖರ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಉದ್ದಿಮೆಗಳನ್ನು ತೆರಿಗೆದಾರರ ಈಕ್ಚಿಟಿಗಳೆಂದು ಪರಿಗಣಿಸಬೇಕು, ಸಾರ್ವಜನಿಕ ಉದ್ದಿಮೆಗಳ ಮೇಲಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಎಚ್ಚರ ವಹಿಸಬೇಕು. ಕರ್ನಾಟಕ ಸರ್ಕಾರ ಸಲ್ಲಿಸಿರುವ 243 ಎಕರೆ ಗಣಿ ಪ್ರದೇಶ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ಆ ಮೂಲಕ ಭದ್ರಾವತಿ ನಗರದ ಸಾವಿರಾರು ಜನರ ಸಂಕಷ್ಟ ನಿವಾರಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಪ್ರಧಾನಿ ಸಿಂಗ್ ಅವರನ್ನು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.