'ಕನ್ನಡಿ ಪ್ರಭ'ಕ್ಕೆ ಪ್ರಶಂಸೆಯ ಸುರಿಮಳೆ

ಸಾರಿಗೆ ಇಲಾಖೆ ಮೇಲಧಿಕಾರಿಗಳ ದಾರ್ಷ್ಟ್ಯ ತೆರೆದಿಟ್ಟ 'ಕನ್ನಡಪ್ರಭ'ಕ್ಕೆ ಪ್ರಶಂಸೆ ನಿರೀಕ್ಷೆಗೂ ಮೀರಿ ಹರಿದು ಬಂದಿದೆ. ಗದಗ 'ಕನ್ನಡಪ್ರಭ' ಕಚೇರಿಗೆ ಆಗಮಿಸಿದ ಸುಮಾರು 50ಕ್ಕೂ ಹೆಚ್ಚು ಸಾರಿಗೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಲಧಿಕಾರಿಗಳ ದರ್ಪವನ್ನು ದಮನ ಮಾಡುವಂತೆ ಪತ್ರಿಕೆಗೆ ಮನವಿ ಮಾಡಿದ್ದಾರೆ.
ಕ.ಪ್ರ. ವಾರ್ತೆ, ಬೆಂಗಳೂರು, ಡಿ. 15-
ಸಾರಿಗೆ ಇಲಾಖೆ ಮೇಲಧಿಕಾರಿಗಳ ದಾರ್ಷ್ಟ್ಯವನ್ನು ತೆರೆದಿಟ್ಟ 'ಕನ್ನಡಪ್ರಭ'ಕ್ಕೆ ಮೆಚ್ಚುಗೆ ಹಾಗೂ ಪ್ರಶಂಸೆ ನಿರೀಕ್ಷೆಗೂ ಮೀರಿ ಹರಿದು ಬರುತ್ತಿದೆ. ಭಾನುವಾರ ರಾಜ್ಯಾದ್ಯಂತ ನೊಂದ ನೌಕರರ ಕರೆಗಳ ರಿಂಗಣಕ್ಕೆ ಮಿತಿಯೇ ಇರಲಿಲ್ಲ.
ಗದಗ 'ಕನ್ನಡಪ್ರಭ' ಕಚೇರಿಗೆ ಆಗಮಿಸಿದ ಸುಮಾರು 50ಕ್ಕೂ ಹೆಚ್ಚು ಕೆಎಸ್ಆರ್ಟಿಸಿ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಈ ಶೋಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸಾರಿಗೆ ಸಚಿವರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ವಿಷಯಗಳನ್ನೊಳಗೊಂಡ ಬಹಿರಂಗ ಪತ್ರವನ್ನು 'ಕನ್ನಡಪ್ರಭ'ದ ಮೂಲಕವೇ ಪ್ರಕಟಿಸಿ ಎಂದು ಮನವಿ ಮಾಡಿದರು. ನೊಂದವರ ಪರವಾಗಿ ಧ್ವನಿ ಎತ್ತಿರುವ ಬಗ್ಗೆ ನೌಕರರು ಸಂತಸ ವ್ಯಕ್ತಪಡಿಸಿ 'ಕನ್ನಡಪ್ರಭ'ಕ್ಕೆ ಜಯಘೋಷ ಹಾಕಿದರು.
ಬೆಂಗಳೂರು ಕಚೇರಿಯಲ್ಲಿ ಇಡೀ ದಿನ ಕರೆಗಳ ರಿಂಗಣಿಸುತ್ತಿತ್ತು. ಕರೆ ಮಾಡಿದ ನೊಂದ ನೌಕರರೊಬ್ಬರು, 'ನೀವು ಬರೆದಿದ್ದು ಕೇವಲ ಶೇ.1ರಷ್ಟು ಮಾತ್ರ. ಇನ್ನೂ ಶೇ.99ರಷ್ಟು ಬರೆಯುವುದು ಬಾಕಿ ಇದೆ. ಅದಕ್ಕೆ ಪೂರಕ ಮಾಹಿತಿ ಒದಗಿಸುತ್ತೇವೆ. ನನ್ನ ಕೆಲಸ ಹೋದರೂ ಪರವಾಗಿಲ್ಲ. ಹೆಸರು ಸಹಿತ ಪ್ರಕಟಿಸಿ' ಎಂದು ಆಕ್ರೋಶ ಭರಿತ ಪ್ರಶಂಸೆ ವ್ಯಕ್ತಪಡಿಸಿದರು. ಬಿಜಾಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಗುಲ್ಬರ್ಗ, ಬೀದರ್, ರಾಯಚೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಜನ ಕರೆ ಮಾಡಿ ಅಭಿನಂದನೆ ವ್ಯಕ್ತಪಡಿಸಿದರು.
'ಕನ್ನಡಪ್ರಭ' ಕೆಎಸ್ಆರ್ಟಿಸಿ ಅಧಿಕಾರಿಗಳ ಹಕೀಕತ್ತು ಬಯಲಿಗೆಳೆದಿದ್ದು ಪ್ರಶಂಸನೀಯ. ಇನ್ನಾದರೂ ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು.
-ಬಾಬುರಾಜೇಂದ್ರ ಭದ್ರಾಪುರ , ಸಾಮಾಜಿಕ ಕಾರ್ಯಕರ್ತ
ಅಧಿಕಾರಿಗಳ ದಬ್ಬಾಳಿಕೆ ಅತಿಯಾಗಿದೆ. ಉಸಿರುಗಟ್ಟಿಸುವ ವಾತಾವರಣ ಸಾರಿಗೆ ಇಲಾಖೆಯಲ್ಲಿದೆ. ನಿರ್ಭಯವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು.
- ಎಂ. ಲಕ್ಷ್ಮಣ್ ಸಂಚಾಲಕರು, ಎಸಿಐಸಿಎಂ
ಕಳೆದ 18 ವರ್ಷಗಳಿಂದ ಪ್ರತಿ ತಿಂಗಳು ಪ್ರತಿಯೊಬ್ಬ ನೌಕರನಿಂದಲೂ 540 ರು. ವಸೂಲಿ ಮಾಡುವ ಸಂಸ್ಥೆ ಇದುವರೆಗೂ ನಿವೃತ್ತಿಯಾದವರಿಗೆ ಯಾವುದೇ ವೇತನ ಕೊಟ್ಟಿಲ್ಲ
- ನಂಜುಂಡಪ್ಪ, ಕೆಎಸ್ಆರ್ಟಿಸಿ ನೌಕರರ ಸಂಘದ ಅಧ್ಯಕ್ಷರು, ಮಂಡ್ಯ.
ಕರ್ತವ್ಯಕ್ಕೆ ನಿಯೋಜಿಸಲು ಲಂಚ, ರಜೆ ಕೊಡಲು ಲಂಚ, ಹೀಗೆ ಲಂಚಕ್ಕಾಗಿ ಹಪಾಹಪಿಸುವ ಮೇಲಾಧಿಕಾರಿಗಳಿಂದ ಕೆಎಸ್ಆರ್ಟಿಸಿ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.
- ದೀಪಕ ಜಮಖಂಡಿ, ನಗರ ಸೇವಕ ಬೆಳಗಾವಿ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಸರ್ಕಾರದಿಂದ ಕಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ದೌರ್ಜನ್ಯಗಳ ಬಗ್ಗೆ ಸವಿಸ್ತಾರವಾಗಿ ಪತ್ರಿಕೆಯಲ್ಲಿ ಪ್ರಕಟಿಸಿರುವುದು ನಿಜ.
- ಮರಿ ಜೋಸೆಫ್, ದಲಿತ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ
ಮೇಲಧಿಕಾರಿಗಳು ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ ಇಷ್ಟೊಂದು ಕಿರುಕುಳ, ದೌರ್ಜನ್ಯ ನಡೆಸುತ್ತಿರುವುದು ತಿಳಿದು ವಿಷಾದವೆನಿಸಿತು. ಇನ್ನಾದರೂ ಅಧಿಕಾರಿಗಳು ಬದಲಾಗಲಿ.
- ಅಬ್ದುಲ್ರಜಾಕ ಸಂಖ, ಬಿಜಾಪುರ.
ಅಧಿಕಾರಿಗಳ ದೌರ್ಜನ್ಯವನ್ನು 'ಕನ್ನಡಪ್ರಭ' ಎಳೆ ಎಳೆಯಾಗಿ ಬಿಡಿಸಿಟ್ಟಿದೆ. ಹೆದರಿಕೆಯಿಂದ ಬಹುಪಾಲು ಸಿಬ್ಬಂದಿ ತಮ್ಮ ನೋವು ಹೊರಗಿಡುತ್ತಿಲ್ಲ.
- ಲಕ್ಷ್ಮಣ ಆವಂಟಿ, ನ್ಯಾಯವಾದಿ, ಚಿಂಚೋಳಿ
ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಚಾಲಕ ನಿರ್ವಾಹಕರು ಮನುಷ್ಯರೇ, ಸಾರಿಗೆ ಇಲಾಖೆ ಅಧಿಕಾರಿಗಳು ಅವರನ್ನು ಅವಮಾನ ರೀತಿಯಲ್ಲಿ ನಡೆಸಿಕೊಳ್ಳುವುದು ನಾಚಿಕೆಗೇಡಿನ ವಿಷಯ.
- ಮಲ್ಲಿಕಾರ್ಜುನ.ಕೆ, ಚಿತ್ತಾಪುರ
ಸಾರಿಗೆ ಸಂಸ್ಥೆಯು ಕಾರ್ಮಿಕ ವರ್ಗದ ಮೇಲೆ ನಡೆಸುತ್ತಿರುವ ದೌರ್ಜನ್ಯ 'ಕನ್ನಡಪ್ರಭ' ಬಯಲಿಗೆಳೆದಿರುವುದು ಮುಗ್ದ ಕಾರ್ಮಿಕರಿಗೆ, ಬಡ ಪಾಯಿಗಳಿಗೆ ನಿಟ್ಟಿಸಿರು ಬಿಡುವಂತಾಗಿದೆ.
- ಶರಣಪ್ಪ ಪಾಟೀಲ್, ಬೇಳಕೇರಾ
ಮಾಧ್ಯಮಕ್ಕೆ ಮಾಹಿತಿ ನೀಡಿದರೆ ನೌಕರರ ವಿರುದ್ಧ ಅಧಿಕಾರಿಗಳು ಸೇಡು ತೀರಿಸುತ್ತಾರೆ. ಮಂಗಳೂರು ವಿಭಾಗದಲ್ಲೂ ನೌಕರರ ಶೋಷಣೆ ನಡೆಯುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಅಗತ್ಯ
- ಶಿವರಾಜ್, ಮೆಕ್ಯಾನಿಕ್, ಮಂಗಳೂರು
'ಕನ್ನಡಪ್ರಭ' ವರದಿಯಲ್ಲಿ ಚಾಲಕರು, ನಿರ್ವಾಹಕರ ಸಮಸ್ಯೆಗಳನ್ನು ಬಿಡಿಸಿಟ್ಟಿರುವುದು ಸ್ವಾಗತಾರ್ಹ. ಮಹಿಳೆಯರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲದಿರುವುದು ಬೇಸರ ತಂದಿದೆ.
- ಹಣಮಂತರಾವ ಭೋವಿ, ಕೋಡ್ಲಿ
ಪತ್ರಿಕೆ ಸಮಗ್ರ ವರದಿ ನೀಡಿರುವುದು ಸ್ವಾಗತ. ಅಧಿಕಾರಿಗಳು ನೋಟಿಸ್ ನೀಡಿ ಚಾಲಕ, ನಿರ್ವಾಹಕರಿಂದ ಲಂಚ ಪಡೆಯುತ್ತಿರುವ ಅಂಶ ಪತ್ರಿಕೆ ಬೆಳೆಕಿಗೆ ತಂದಿರುವುದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದಂತಾಗಿದೆ.
- ರಾಮಶೆಟ್ಟಿ ಪವಾರ, ಪಪಂ ಸದಸ್ಯ, ಚಿಂಚೋಳಿ
'ಕನ್ನಡಪ್ರಭ'ದಲ್ಲಿ ಪ್ರಕಟಗೊಂಡಿರುವ ವರದಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೊಡಗು ಘಟಕದ ಕೆಎಸ್ಆರ್ಟಿಸಿ ಮೇಲಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ.
- ಅಣ್ಣಯ್ಯ, ಸಮಾಜಸೇವಕ, ಕುಶಾಲನಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


