ಇದೆಂಥಾ ಸಂಸ್ಕೃತಿ ಸಚಿವರೇ?
ಬೆಂಗಳೂರು: ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕಾಳಜಿ ವಹಿಸಬೇಕಾದ ಸಚಿವರಿಗೇ ತಮ್ಮ ಇಲಾಖೆಯಲ್ಲಿ ಏನೇನಾಗುತ್ತಿದೆ ಎಂಬುದೇ ಗೊತ್ತಿಲ್ಲ.
ಕನ್ನಡದ ಒಬ್ಬ ಶ್ರೇಷ್ಠ ಕಲಾವಿದೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾದಾಗ ಇವರಿಂದಲಾದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಒಂದಷ್ಟು ನೆರವು ಸಿಗುತ್ತದೆ ಎಂದು ನಿರೀಕ್ಷಿಸಿದ್ದ ಜನತೆಗೆ ಸಚಿವೆ ಉಮಾಶ್ರೀ ಅವರ ಕಾರ್ಯವೈಖರಿ ನಿರಾಸೆ ಮೂಡಿಸಿದೆ. ತಮ್ಮ ಇಲಾಖೆಯಲ್ಲಿ ಏನೇನು ಕೆಲಸಗಳಾಗಬೇಕು ಎಂದು ಸಚಿವರು ತಲೆಕೆಡಿಸಿಕೊಳ್ಳುತ್ತಿಲ್ಲ. ಮಂತ್ರಿಯಾಗಿದ್ದೇ ಸಾಧನೆ ಎಂದುಕೊಂಡಿರುವುದರಿಂದಲೋ ಏನೋ ತಾವು ಜವಾಬ್ದಾರಿ ಹೊತ್ತಿರುವ ಇಲಾಖೆಯ ಆಗುಹೋಗುಗಳ ಕುರಿತು ಉಮಾಶ್ರೀ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ, ಜನರ ಕೈಗೂ ಅವರು ಸಿಗುವುದಿಲ್ಲ ಎಂಬ ಆರೋಪವಿದೆ.
ಇಷ್ಟಕ್ಕೆಲ್ಲಾ ಕಾರಣ ಕನ್ನಡ, ಸಂಸ್ಕೃತಿ ಇಲಾಖೆ ಸಚಿವರಿಗೆ ಇಲಾಖೆಯ ಆಗುಹೋಗುಗಳನ್ನು ವಿವರಿಸಬೇಕಾದ ಪ್ರಧಾನ ಕಾರ್ಯದರ್ಶಿ, ಆಯುಕ್ತರ ಹುದ್ದೆ ಖಾಲಿ ಇರುವುದು.
ಇದನ್ನು ತಕ್ಷಣವೇ ಭರ್ತಿ ಮಾಡಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂಬ ಕಾಳಜಿಯೂ ಸಚಿವರಿಗೆ ಇದ್ದಂತಿಲ್ಲ. ಹೀಗಾಗಿ ಇಲಾಖೆಯ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಅವರಿಗೆ ಮಾಧ್ಯಮಗಳಲ್ಲಿ ಪ್ರಕಟವಾಗುವ ವರದಿಯೇ ದಾರಿ ದೀಪವಾಗಿದೆ. ಇಷ್ಟೆಲ್ಲಾ ಹೇಳಲು ಪ್ರಮುಖ ಕಾರಣ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಬಂಧಿಸಿದಂತೆ ಸಚಿವರು ನಡೆದುಕೊಂಡಿರುವ ರೀತಿ.
ಶತಮಾನೋತ್ಸವದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅದಕ್ಕೆ ಸರ್ಕಾರದಿಂದ ನೆರವು ಕೇಳಿತ್ತು. ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಪರಿಷತ್ ಅಧ್ಯಕ್ಷರು ಭಾನುವಾರ ಕಾರ್ಯಕ್ರಮವೊಂದರಲ್ಲಿ ಸರ್ಕಾರ ಮತ್ತು ಸಚಿವರ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿದ್ದರು. ಕಾರ್ಯವೈಖರಿಗೆ ಧಿಕ್ಕಾರ ಕೂಗಿದ್ದರು.
ಎಚ್ಚೆತ್ತುಕೊಂಡ ಸಚಿವರು: ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದೇ ತಡ ಸಚಿವೆ ಉಮಾಶ್ರೀ ಧಿಗ್ಗನೆ ಮೇಲೆದ್ದಿದ್ದಾರೆ. ತಮ್ಮ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ? ಏನೇನು ಆಗಬೇಕಾಗಿದೆ ಎಂದು ತಿಳಿದುಕೊಳ್ಳಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ತಕ್ಷಣವೇ ಸಾಹಿತ್ಯ ಪರಿಷತ್ತಿನ ಬೇಡಿಕೆಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಇದುವರೆಗೆ ವಿಳಂಬಕ್ಕೆ ಕಾರಣರಾದವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ್ದಾರೆ.
ಮಡಿಕೇರಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೇ 1 ಕೋಟಿ ಬಿಡುಗಡೆ ಮಾಡಲಾಗಿದೆ. ಇದರ ಜತೆಗೆ ವಿಶೇಷ ಅನುದಾನ 1 ಕೋಟಿ ಬಿಡುಗಡೆ ಮಾಡಬೇಕಿದ್ದು, ಈ ಕುರಿತ ಪ್ರಸ್ತಾವನೆ ಹಣಕಾಸು ಇಲಾಖೆಗೆ ಕಳುಹಿಸಿಕೊಟ್ಟು ಸಾಕಷ್ಟು ಸಮಯವಾಗಿದೆ. ಆದರೂ ಹಣ ಬಿಡುಗಡೆ ಆಗದ ಕಾರಣ ಕೂಡಲೇ ಈ ಕಡತ ಬೆಂಬತ್ತಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇನ್ನು ಜಿಲ್ಲಾ ಸಾಹಿತ್ಯ ಪರಿಷತ್ಗಳಿಗೆ ಬಿಡುಗಡೆಯಾಗಬೇಕಿದ್ದ 3.50 ಕೋಟಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಸಂಜೆಯ ವೇಳೆಗೆ ಹಣ ಬಿಡುಗಡೆ ಆದೇಶ ಹೊರಡಿಸುವಂತೆ ಮಾಡಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ ಸಾಹಿತ್ಯ ಪರಿಷತ್ತಿಗೆ ಸಂಬಂಧಿಸಿದ ಹಣ ಬಿಡುಗಡೆ ವಿಳಂಬವಾಗಲು ಕಾರಣರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನವನ್ನೂ ನೀಡಿದ್ದಾರೆ.
ಇದನ್ನೆಲ್ಲಾ ನೋಡಿದಾಗ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುವವರೆಗೆ ಉಮಾಶ್ರೀ ಅವರಿಗೆ ತಾವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಸಚಿವರು ಎಂಬ ಸಂಗತಿ ಮರೆತು ಹೋದಂತೆ ಕಾಣುತ್ತಿದೆ.
ಪ್ರಧಾನ ಕಾರ್ಯದರ್ಶಿ, ಆಯುಕ್ತರೇ ಇಲ್ಲ
ಕನ್ನಡ ನಾಡು, ನುಡಿ ಬಗ್ಗೆ ರಾಜ್ಯ ಸರ್ಕಾರ ಎಷ್ಟೊಂದು ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ನಿದರ್ಶನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎರಡು ಪ್ರಮುಖ ಹುದ್ದೆಗಳಾದ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರ ಹುದ್ದೆ ಖಾಲಿ ಇದೆ.
ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಸವರಾಜ್ ಅವರು ಅಲ್ಲಿಂದ ಎತ್ತಂಗಡಿಯಾದ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ರಮೇಶ್ ಝಳಕಿ ಅವರಿಗೆ ಹೆಚ್ಚುವರಿಯಾಗಿ ಈ ಜವಾಬ್ದಾರಿ ವಹಿಸಲಾಗಿತ್ತು.
ನಂತರ ಅವರೂ ಇಲ್ಲದೆ ಹುದ್ದೆ ಖಾಲಿ ಬಿದ್ದಿದೆ. ಅದೇ ರೀತಿ ಆಯುಕ್ತರಾಗಿದ್ದ ರಾಮಕೃಷ್ಣ ಅವರು ನಿವೃತ್ತರಾದ ಬಳಿಕ ಈ ಸ್ಥಾನಕ್ಕೆ ಯಾರನ್ನೂ ನೇಮಿಸಿಯೇ ಇಲ್ಲ.
ಈ ಎರಡು ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ವಹಿಸಿದ ನಿರ್ಲಕ್ಷ್ಯದಿಂದಾಗಿ ಇಲಾಖೆಯ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಕೆಲಸ ಆಗುತ್ತಲೇ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

