ಪ್ರಧಾನ ಸುದ್ದಿ

ಶಾದಿ, ಅನ್ನವಲ್ಲ, 'ಕನ್ನಡ ಭಾಗ್ಯ' ನೀಡಿ...

ಶಾದಿ, ಅನ್ನವಲ್ಲ, 'ಕನ್ನಡ ಭಾಗ್ಯ' ನೀಡಿ...
Published On :

ಆಳುವ ವರ್ಗಕ್ಕೆ ಮಾತೃಭಾಷೆ ಬಗೆಗಿನ ಕಾಳಜಿ ಎಷ್ಟರ ಮಟ್ಟಿಗಿದೆ ಎನ್ನುವುದಕ್ಕೆ ಶತಮಾನದ ಸಂಭ್ರಮಾಚರಣೆಯ ಸಂದರ್ಭದಲ್ಲೂ ಕಸಾಪ ಕಡೆಗಣನೆಯೇ ಸಾಕ್ಷಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಪ್ಪಟ ಕನ್ನಡ ಅಧಿಕಾರಿಗಳು, ಭಾಷಾ ಕಾಳಜಿ ಇರುವವರನ್ನೇ ಉನ್ನತ ಹುದ್ದೆಗೆ ನೇಮಿಸಬೇಕು.  
- ಪ್ರೊ.ಶಿವನಂಜಯ್ಯ, ಸಾಹಿತಿ, ರಾಮನಗರ

ಕನ್ನಡ ಸಾಹಿತ್ಯ ಪರಿಷತ್ ಆರಂಭದಲ್ಲಿ ಸರ್ಕಾರದ ನೆರವು ಪಡೆಯದೇ ಸ್ವಾವಲಂಬಿಯಾಗಿತ್ತು. ಸರ್ಕಾರದ ಮುಂದೆ ಕೈ ಒಡ್ಡಲು ಶುರು ಮಾಡಿದರೆ ಯಾವುದೇ ಸಂಸ್ಥೆಯಾದರೂ ಇದೇ ಹಣೆಬರಹ. ಕನ್ನಡಪ್ರಭ ಮುಖಪುಟದಲ್ಲಿ ಸುದ್ದಿ ಪ್ರಕಟಿಸಿ ಸರ್ಕಾರಕ್ಕೆ ಮಾತ್ರವಲ್ಲ ಎಲ್ಲರಿಗೂ ನೆನಪು ಮಾಡಿಸಿದ್ದು ಯಥಾಯೋಗ್ಯ.  
- ಭುವನೇಶ್ವರಿ ಹೆಗಡೆ, ಸಾಹಿತಿ

ಕಸಾಪ ಈಗಾಗಲೇ ಅನೇಕ ಬಾರಿ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ, ಇದೀಗ 'ಕನ್ನಡಪ್ರಭ' ಪತ್ರಿಕೆಯಲ್ಲಿ ಬಂದಿರುವುದರಿಂದ ಇಡೀ ನಾಡಿನ ಕನ್ನಡಿಗರಿಗೆ ಪರಿಸ್ಥಿತಿ ಅರಿವಾಗಿದೆ. ಮಾತ್ರವಲ್ಲ ಸರ್ಕಾರ ಕೂಡ ಕೊನೆಗೂ ಎಚ್ಚೆತ್ತುಕೊಂಡಿದೆ.  
- ನೀಲಾವರ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಕ.ಸಾ.ಪ.ಅಧ್ಯಕ್ಷರು

ಶಾದಿ ಭಾಗ್ಯ, ಅನ್ನ ಭಾಗ್ಯ ಯೋಜನೆಗಳನ್ನು ಜನ ಕೇಳಿರಲಿಲ್ಲ. ಸರ್ಕಾರಗಳು ಓಟಿಗಾಗಿ ಇಂಥಹ ಗಿಮಿಕ್ ಹಮ್ಮಿಕೊಂಡು ಜನರ ಸ್ವಾಭಿಮಾನ ಹರಾಜು ಹಾಕುತ್ತಿವೆ. ಅಹಂ ತನ್ನ ಅರ್ಹತೆ ಎಂದುಕೊಂಡಿರುವ ಉಮಾಶ್ರೀ ಅವರಂಥ ಅಪ್ರಬುದ್ಧರನ್ನು ಸಚಿವೆಯನ್ನಾಗಿ ಮಾಡಿರುವುದು ದುರಂತ.  
- ಉದಯರವಿ, ಮಾಜಿ ಅಧ್ಯಕ್ಷ, ಹಾಸನ ಜಿಲ್ಲಾ ಕಸಾಪ

ಕನ್ನಡಕ್ಕಿರೋದು ಒಂದೇ ಸಾಹಿತ್ಯ ಪರಿಷತ್ತು. ಅದು ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಬಾರದೆ, ಕೇಳುವ ಅನುದಾನ ಬಿಡುಗಡೆಗೂ ಮುಂದಾಗದೆ ಅಲಕ್ಷತನ ತೋರಲಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರದ ಹಂತದಲ್ಲಿನ ಈ ಧೋರಣೆ ನಿರ್ಲಕ್ಷದ ಪರಮಾವಧಿ.   
- ಡಾ. ಸ್ವಾಮೀರಾವ ಕುಲ್ಕರ್ಣಿ,ಹಿರಿಯ, ಗುಲ್ಬರ್ಗ

ರಾಜ್ಯ ಸರ್ಕಾರ ಅನವಶ್ಯಕ ಯೋಜನೆಗಳಿಗೆ ಕೋಟಿಗಟ್ಟಲೆ ಅನುದಾನ ಸುರಿಯುತ್ತಿದೆ. ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಮರೆತಿರುವುದು ಬೇಸರ ಸಂಗತಿ. ಕನ್ನಡದ ಉಳಿವಿಗಾಗಿಯೇ ನೂರು ವರ್ಷ ದುಡಿದ ಕಸಾಪ ಹಾಗೂ ಅದರ ಯೋಜನೆಗಳಿಗೆ ಸರ್ಕಾರ ಸ್ಪಂದಿಸಬೇಕು.
- ಡಾ. ಎಂ.ಎಂ. ಕಲಬುರ್ಗಿ, ಸಾಹಿತಿ, ಧಾರವಾಡ

ಕನ್ನಡ ಸಾಹಿತ್ಯ ಪರಿಷತ್ ತನ್ನದೇ ಪರಂಪರೆ ಇತಿಹಾಸವನ್ನು ಹೊಂದಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರವು ಕನ್ನಡದ ಕಂಪನ್ನು ಪಸರಿಸಲು ಶ್ರಮಿಸುತ್ತಿರುವ ಪರಿಷತ್ತಿನ ಶತಮಾನೋತ್ಸವ ಕಾರ್ಯಕ್ರಮಕ್ಕೆ ತ್ವರಿತವಾಗಿ ಅನುದಾನ ಬಿಡುಗಡೆ ಮಾಡಬೇಕು.
- ಟಿ.ಎಸ್. ನಾಗೇಂದ್ರ ಬಾಬು, ಸಾಹಿತಿ, ಚಿಕ್ಕಬಳ್ಳಾಪುರ

ಕರ್ನಾಟಕ ಸರ್ಕಾರವು ಕನ್ನಡ ಭಾಷೆಗೆ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಮೊದಲಿನಿಂದಲೂ ವರ್ತಿಸುತ್ತಿದೆ. ಕನ್ನಡದ ಕಾರ್ಯ ಕಸಾಪಕ್ಕೆ ಬಿಟ್ಟಿದ್ದು, ಎಂಬಂಥ ಅನಾಥ ಪರಿಸ್ಥಿತಿಯಿದೆ. ಪರಿಣಾಮ ಕನ್ನಡಿಗರು ಅಲ್ಲಿಲ್ಲಿ ಭಿಕ್ಷೆ ಬೇಡಿ ಕನ್ನಡ ಬೆಳೆಸುವಂಥ ಪರಿಸ್ಥಿತಿಗೆ ಸಿಲುಕಿದ್ದಾರೆ. ಕನ್ನಡಪ್ರಭ ತೋರಿದ ಕಾಳಜಿಗೆ ಅಭಿನಂದನೆ.  
- ಅಶೋಕಕುಮಾರ್ ಜೈನ್, ಜಿಲ್ಲಾಧ್ಯಕ್ಷ, ಕರವೇ, ರಾಯಚೂರು

ಕಸಾಪ ಶತಮಾನೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮುತುವರ್ಜಿ ವಹಿಸಬೇಕಾದ ಅಗತ್ಯವಿತ್ತು. ಸಕಾರಾತ್ಮಕ ದೃಷ್ಟಿಯಿಂದ ಹೇಳುವುದಾದರೆ ಹಾಲಂಬಿ ಹರಿಹಾಯುವ ಬದಲು ಸರ್ಕಾರದಿಂದ ಸವಲತ್ತು ಪಡೆದು ವಿಜೃಂಭಣೆಯಿಂದ ಕಾರ್ಯಕ್ರಮ ಆಯೋಜಿಸಬೇಕು. ಇದಕ್ಕೆ ಸರ್ಕಾರ ಸಹ ಸ್ಪಂದಿಸಬೇಕು.  
- ಪ್ರೊ.ಅರವಿಂದ ಮಾಲಗತ್ತಿ, ಸಾಹಿತಿ

ಕಸಾಪಕ್ಕೆ ನೂರು ವರ್ಷವಾಗಿರುವುದು ಅವಿಸ್ಮರಣೀಯ ದಿನ. ಇದಕ್ಕಾಗಿ ವರ್ಷಪೂರ್ತಿ ಅದ್ಧೂರಿ ಕಾರ್ಯಕ್ರಮ ನಡೆಸುವುದಕ್ಕಾಗಿ ನಾನಾ ಕಾರ್ಯಕ್ರಮ ಕಸಾಪ ಕಾರ್ಯಕಾರಿ ಸಮಿತಿ ರೂಪಿಸಿ, ಮುಖ್ಯಮಂತ್ರಿಗಳನ್ನು ಮನವಿ ಮಾಡಿಕೊಂಡರೂ ಸ್ಪಂದಿಸಿಲ್ಲ. ಇದು ನೋವಿನ ಸಂಗತಿಯಾಗಿದೆ.  
- ವೀರಣ್ಣ ನಿಂಗೋಜಿ, ಜಿಲ್ಲಾಧ್ಯಕ್ಷ, ಕಸಾಪ, ಕೊಪ್ಪಳ

ಸಾಹಿತ್ಯ ಚಟುವಟಿಕೆಯನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಕಟ್ಟುವ ನಿಟ್ಟಿನಲ್ಲಿ ಕಸಾಪ ಸಂಸ್ಥೆಯು ಶತಮಾನಗಳ ಕಾಲ ಅವಿಸ್ಮರಣೀಯ ಸೇವೆ ಸಲ್ಲಿಸಿದೆ. ಅದರ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿ ಎಂದು ಒತ್ತಾಯಿಸುತ್ತೇವೆ.  
- ಡಾ. ತೋಂಟದ ಸಿದ್ಧಲಿಂಗ ಶ್ರೀಗಳು, ತೋಂಟದಾರ್ಯ ಮಠ, ಗದಗ

ಕಸಾಪ ಆರ್ಥಿಕವಾಗಿ ದುರ್ಬಲಗೊಳ್ಳುವಂತೆ ಮಾಡಬಾರದು, ಸದೃಢವಾಗುವ ನಿಟ್ಟಿನಲ್ಲಿ ಸರ್ಕಾರ ಸಹಕರಿಸಬೇಕು. ಸಿಎಂ ಸಿದ್ದರಾಮಯ್ಯ ಸಾಹಿತ್ಯ ಪ್ರೇಮಿ. ಅವರ ಸಂಪುಟದಲ್ಲಿ ಪುಸ್ತಕ ಪ್ರೇಮಿಗಳಿದ್ದಾರೆ. ಅವರ ಅವಧಿಯಲ್ಲಿ ಕಸಾಪ ನಿರ್ಲಕ್ಷ್ಯದೌರ್ಭಾಗ್ಯ. ಕಸಾಪದಿಂದ ನೋವಿನ ಧ್ವನಿ ಬರಬಾರದು, ಬಂದರೆ ಸರ್ಕಾರಕ್ಕೆ ಒಳ್ಳೆಯದಲ್ಲ.  
- ಕುಂ. ವೀರಭದ್ರಪ್ಪ, ಖ್ಯಾತ ಸಾಹಿತಿ

ಪ್ರಜೆಗಳ ಹಣದಿಂದ ನಡೆಯುವ ಸರ್ಕಾರ ಪ್ರಜೆಗಳ ಸಾಹಿತ್ಯ, ಕಲೆಗಳ ಚಟುವಟಿಕೆಗಳಿಗೆ ಧನ ಸಹಾಯ ಮಾಡಬೇಕು. ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಯಾವುದೋ ಯೋಜನೆಗಳಿಗೆ ಕೋಟಿಗಟ್ಟಲೆ ಹಣವನ್ನು ದುಂದು ವೆಚ್ಚ ಮಾಡುವ ಸರ್ಕಾರ ಸಾಹಿತ್ಯ ಚಟುವಟಿಕೆಗಳಿಗೆ ಅನುದಾನ ನೀಡದಿರುವುದು ವಿಷಾದನೀಯ.
- ಪ್ರೊ. ಲೀಲಾ ಅಪ್ಪಾಜಿ, ಕವಯತ್ರಿ, ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಆಚರಣೆ ಮಾಡುವುದನ್ನು ಮರೆತು ಕುಳಿತುಕೊಂಡ ಕಾಲದಲ್ಲಿ 'ಕನ್ನಡಪ್ರಭ' ಕನ್ನಡಿಗರನ್ನು ಎಚ್ಚರಿಸಿದೆ. ಇದು, ಕರ್ನಾಟಕಕ್ಕಿಂತ ಕನ್ನಡ ಸರ್ಕಾರವಾಗಬೇಕು. ಕಸಾಪಕ್ಕೆ ನೂರು ವರ್ಷ ತುಂಬಿದೆ. ಸರ್ಕಾರವೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.  
- ರವೀಶ್ ಕ್ಯಾತನಬೀಡು, ಸಂಚಾಲಕರು, ಜನದನಿ ಸಂಘಟನೆ, ಚಿಕ್ಕಮಗಳೂರು

ನೂರು ವರ್ಷಕ್ಕೆ ಕಾಲಿಡುತ್ತಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಯೋಜನೆಗಳಿಗೆ ಸರ್ಕಾರ ಸ್ವಯಂ ಪ್ರೇರಣೆಯಿಂದ ಸಹಾಯ ಮಾಡುವ ಮೂಲಕ ಆರು ಕೋಟಿ ಕನ್ನಡಿಗಳ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗಬೇಕು. ಕಸಾಪ ಬಗ್ಗೆ ಸರ್ಕಾರ ತೋರುತ್ತಿರುವ ಅಸಡ್ಡೆ ಬಗ್ಗೆ ಬೆಳಕು ಚೆಲ್ಲಿರುವ ಕನ್ನಡಪ್ರಭಕ್ಕೆ ಧನ್ಯವಾದ.
- ವೀರ ವೆಂಕಟಪ್ಪ, ಅಧ್ಯಕ್ಷರು, ಕಸಾಪ ವಿಶೇಷ ಘಟಕ, ಕೆಜಿಎಫ್

ಕನ್ನಡ ಸಾಹಿತ್ಯದ ಕೆಲಸಗಳಿಗೆ ಸರ್ಕಾರ ಮುಖ ಕಿವುಚಿಕೊಳ್ಳುತ್ತಿರುವುದು ಕನ್ನಡಿಗರಿಗೆ ಮಾಡಿದ ಅವಮಾನ. ಇಂಥದ್ದೊಂದು ಘೋರ ಅಪರಾಧ ಈ ಸರ್ಕಾರದಿಂದ ನಡೆಯಬಾರದು. ಸಾಹಿತ್ಯ ಸಂಸ್ಕೃತಿಗೆ ಈ ಸರ್ಕಾರ ಆದ್ಯತೆ ನೀಡುತ್ತದೆ ಎಂಬ ಭಾವನೆಗಳಿದ್ದು, ಅದಕ್ಕೆ ಸ್ಪಂದಿಸಲಿ. 'ಕನ್ನಡಪ್ರಭ' ಕಾರ್ಯ ಶ್ಲಾಘನೀಯ.   
- ನಾಗನಾಥ ಪಾಟೀಲ್ ಚಿಲ್ಲರ್ಗಿ, ಬೀದರ್

ನೂರು ವರ್ಷಗಳ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‌ನ ಶತಮಾನೋತ್ಸವ ಆಚರಣೆಗೆ ಸರ್ಕಾರ ಆರ್ಥಿಕ ನೆರವು ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದು ಸರಿಯಲ್ಲ.  ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅನ್ನು ಬಲಗೊಳಿಸಬೇಕಾದದ್ದು ಸರ್ಕಾರದ ಕರ್ತವ್ಯವೂ ಹೌದು. ಈ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸಲ್ಲದು.
- ಈಶ್ವರಚಂದ್ರ ಚಿಂತಾಮಣಿ, ಸಾಹಿತಿ, ಬಿಜಾಪುರ

ನಾಡು, ನುಡಿ ರಕ್ಷಣೆ ಬಗ್ಗೆ ಸರ್ಕಾರಕ್ಕೆ ಎಷ್ಟು ಕಾಳಜಿ ಇದೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ. ಸಾಹಿತ್ಯ ಪರಿಷತ್ ಬಗ್ಗೆ ಸರ್ಕಾರ ಹಾಗೂ ಕನ್ನಡ, ಸಂಸ್ಕೃತಿ ಸಚಿವರ ನಿರ್ಲಕ್ಷ್ಯವನ್ನು 'ಕನ್ನಡಪ್ರಭ' ಕನ್ನಡಿ ಹಿಡಿದು ವಾಸ್ತವವನ್ನು ತಿಳಿಸಿದೆ. ಜನರಿಂದಲೇ ಹಣ ಸಂಗ್ರಹಿಸಿ ಶತಮಾನದ ಸಂಭ್ರಮಾಚರಣೆ ಮಾಡಲೂ ಸಿದ್ಧ.  
- ಪ್ರಭು ಹಿಟ್ನಳ್ಳಿ, ಹಾವೇರಿ

ರಾಜ್ಯಸರ್ಕಾರ ಇಂತಹ ಸಂಸ್ಥೆಯ ಬಗ್ಗೆ ನಿರ್ಲಕ್ಷ ಧೋರಣೆ ತಾಳದೇ ಅಗತ್ಯ ಸೌಲಭ್ಯಗಳನ್ನು ನೀಡಿ, ಕನ್ನಡದ ಬೆಳವಣಿಗೆಗೆ ಕೈಜೋಡಿಸಬೇಕು. ಅಲ್ಲದೇ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು, ಅದರ ಮೂಲಕ ಇನ್ನಷ್ಟು ಕನ್ನ್ನಡವನ್ನ್ನು ಬೆಳಸುವ ಕಾರ್ಯ ಮುಂದುವರೆಸಬೇಕು.
- ಶ್ರೀಸಿದ್ಧರಾಮ ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ

ಕನ್ನಡದ ನಾಡು-ನುಡಿಯ ಬೆಳಗವಣಿಗೆಯಲ್ಲಿ ಕಳೆದ ನೂರು ವರ್ಷಗಳಿಂದ ತನ್ನದೇ ಆದ ಸೇವೆ ಸಲ್ಲಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನಿರ್ಲಕ್ಷ ಧೋರಣೆ ತೋರುವುದು ಸರಿಯಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಗಮನ ಹರಿಸಬೇಕಿದೆ.  
- ರಾಮಕೃಷ್ಣ ಮರಾಠೆ, ಸಾಹಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.