ಪ್ರಧಾನ ಸುದ್ದಿ

ತೆರೆದುಕೊಳ್ಳಲಿದೆ ಕನ್ನಡದ ವಿಶ್ವ ನುಡಿಸಿರಿ!

Published On :

ಕ.ಪ್ರ. ವಾರ್ತೆ, ಮೂಡುಬಿದಿರೆ, ಡಿ. 18-
ನುಡಿಸಿರಿ ಅಂದರೆ ಸಾಹಿತ್ಯದ ಸಾಂಗತ್ಯ. 'ವಿರಾಸತ್‌' ಅಂದರೆ ಸಂಗೀತದ ರಸದೌತಣ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 'ಹಾಲು-ಜೇನು' ಬೆರೆತಂತೆ ನುಡಿಸಿರಿ ಮತ್ತು ವಿರಾಸತ್ ಒಟ್ಟಿಗೇ ನಡೆಯುತ್ತಿದೆ. ತೆರೆದುಕೊಳ್ಳಲಿದೆ ಕನ್ನಡದ ಸಿರಿ. ಇದುವೇ ವಿಶ್ವನುಡಿಸಿರಿ.
ನ ಭೂತೋ ನ ಭವಿಷ್ಯತಿ (ಹಿಂದೆ ನಡೆದಿಲ್ಲ, ಬಹುಶಃ ಮುಂದೆ ನಡೆಯೋದೂ ಇಲ್ಲ) ಎಂದರೆ ಏನು ಎಂಬುದು ಅರಿವಾಗಬೇಕಿದ್ದರೆ ನೀವು ವಿಶ್ವನುಡಿಸಿರಿಯನ್ನು ನೋಡಬೇಕು.
ಕಳೆದ 10 ವರ್ಷಗಳಿಂದ ಮೂಡುಬಿದಿರೆಯಲ್ಲಿ ಡಾ. ಮೋಹನ ಆಳ್ವ ಅವರು ನಡೆಸುತ್ತಿರುವ ಸಾಹಿತ್ಯ ಮತ್ತು ಸಂಗೀತ ಸೇವೆಗೆ ಈ ವರ್ಷ ದಶಮಾನೋತ್ಸವದ ಸಂಭ್ರಮ. ವಿಶ್ವನುಡಿಸಿರಿ ಹೆಸರಿನಲ್ಲಿ ದಶಮಾನೋತ್ಸವ ಆಚರಿಸಲು ನಿರ್ಧರಿಸಲಾಗಿದ್ದು, ಸಾಹಿತ್ಯ ಮತ್ತು ಸಂಗೀತ ಪ್ರಿಯರನ್ನು ಸ್ವಾಗತಿಸಲು ಮೂಡುಬಿದಿರೆ ಡಿ.19ರ ಸೂರ್ಯ ಮೂಡುವುದನ್ನೇ ಕಾಯುತ್ತಿದೆ. ಗೋಧೂಳಿಯ ಹೊತ್ತಿಗೆ ಮೂಡುಬಿದಿರೆ ತುಂಬ ಕನ್ನಡದ ಕಂಪು. ಕನ್ನಡ ಪ್ರಿಯರ ಕಣ್ಮನ ತಂಪು.
ಕಾರಣ ವಿಶ್ವನುಡಿಸಿರಿಗೆ 1 ಲಕ್ಷ ಪ್ರತಿನಿಧಿಗಳು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. 50 ಸಾವಿರ ಪ್ರತಿನಿಧಿಗಳು 4 ದಿನ ಮೂಡುಬಿದಿರೆಯಲ್ಲೇ ಉಳಿದು ವಿಶ್ವನುಡಿಸಿರಿ ಸವಿಯಲು ನಿರ್ಧರಿಸಿದ್ದಾರೆ. ಪ್ರತಿನಿತ್ಯ 2 ಲಕ್ಷ ಜನ ಸಾಹಿತ್ಯ-ಸಂಗೀತ ಪ್ರೇಮಿಗಳು ಆಗಮಿಸುವ ನಿರೀಕ್ಷೆಯಿದೆ. ಅವರ ಸಂಗೀತ ಮತ್ತು ಸಾಹಿತ್ಯ ಹಸಿವಿನ ಜತೆಗೆ ಹೊಟ್ಟೆಯ ಹಸಿವನ್ನೂ ಇಂಗಿಸುವ ಕೆಲಸಕ್ಕೆ ಮೋಹನ ಆಳ್ವರ ನೇತೃತ್ವದಲ್ಲಿ ಮೂಡುಬಿದಿರೆಯ ವಿದ್ಯಾಗಿರಿ ಸಿಂಗಾರಗೊಂಡು ನಿಂತಿದೆ. ಇತ್ತ ಅತಿಥಿಗಳ ಸತ್ಕಾರಕ್ಕೆ, ಅವರ ವಾಸ್ತವ್ಯಕ್ಕೆ ಆಳ್ವಾಸ್ ಶಿಕ್ಷಣ ಸಂಸ್ಥೆ  ಸಿಬ್ಬಂದಿ, ವಿದ್ಯಾರ್ಥಿಗಳು, ಮೂಡುಬಿದಿರೆಯ ಮನೆಮನೆಯ ಸದಸ್ಯರೂ ಟೊಂಕಕಟ್ಟಿ ನಿಂತಿದ್ದಾರೆ.
ವಿಶ್ವನುಡಿಸಿರಿ ಆಗಿರುವುದರಿಂದ ಈ ಬಾರಿ ನುಡಿಸಿರಿ ಜತೆಗೆ ಇನ್ನಷ್ಟು ಸಿರಿಗಳ ಗರಿ ಜೋಡಿಸಲಾಗಿದೆ. ವರ್ಷದಂತೆ ಕೋಟ ಶಿವರಾಮ ಕಾರಂತ ಸಭಾಂಗಣದಲ್ಲಿರುವ ಮುಖ್ಯವೇದಿಕೆಯಾದ ರತ್ನಾಕರವರ್ಣಿ ವೇದಿಕೆಯಲ್ಲಿ ನುಡಿಸಿರಿ. ಅದಕ್ಕೆ ಸಮಾನಾಂತರವಾಗಿ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ವಿದ್ಯಾರ್ಥಿಸಿರಿ, ನಾಡೋಜ ಎಚ್.ಎಲ್. ನಾಗೇಗೌಡ ವೇದಿಕೆಯಲ್ಲಿ ಜಾನಪದ ಸಿರಿ ಮತ್ತು ಪದ್ಮವಿಭೂಷಣ ವರ್ಗಿಸ್ ಕುರಿಯನ್ ವೇದಿಕೆಯಲ್ಲಿ ಕೃಷಿಸಿರಿ ನಡೆಯಲಿದೆ. ವಿಶೇಷವಾಗಿ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ವಿದ್ಯಾರ್ಥಿಸಿರಿ ಆಯೋಜಿಸಲಾಗಿದ್ದು, ಪ್ರೌಢಶಾಲೆಯಿಂದ ಉನ್ನತ ಶಿಕ್ಷಣದವರೆಗಿನ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳಿಂದ ಕವಿತೆ, ಕತೆ, ಸಂಗೀತ, ನೃತ್ಯ, ಉಪನ್ಯಾಸಗಳು ನಡೆಯಲಿವೆ.

ಮೆರವಣಿಗೆ ಮೂಲಕ ಚಾಲನೆ
ಡಿ.19ಕ್ಕೆ ಅದ್ಧೂರಿಯಾದ ಜಾನಪದ ಸಾಂಸ್ಕೃತಿಕ ಮೆರವಣಿಗೆ ಮೂಲಕ ವಿಶ್ವನುಡಿಸಿರಿಗೆ ಚಾಲನೆ ದೊರೆಯಲಿದ್ದು, ಮೆರವಣಿಗೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಿಂದ ಜಾನಪದ ಕಲಾವಿದರ ತಂಡಗಳು ಭಾಗವಹಿಸಲಿವೆ. ಹೀಗೆ ಭಾಗವಹಿಸುವ ಜಾನಪದ ಕಲಾವಿದರ ಸಂಖ್ಯೆ 6-7 ಸಾವಿರ ಇರಲಿದೆ. ಸಂಜೆ 6 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು 4 ದಿನಗಳ ಸಂಗೀತ-ಸಾಹಿತ್ಯ ರಸದೌತಣಕ್ಕೆ ಚಾಲನೆ ನೀಡಲಿದ್ದಾರೆ.

ವಿಶೇಷ ಸಂಪುಟಗಳು
ವಿಶ್ವನುಡಿಸಿರಿ ಅಂಗವಾಗಿ ವಿಶೇಷ ಸಂಪುಟಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಸಮಗ್ರ ಕರ್ನಾಟಕದ ಮಾಹಿತಿ ಒಳಗೊಂಡ - ಸಿರಿಗನ್ನಡ, ಕರಾವಳಿ ಕರ್ನಾಟಕದ ಕನ್ನಡದ ಚಟುವಟಿಕೆಗಳನ್ನು ಒಳಗೊಂಡಂತೆ -ಕನ್ನಡ ವೈಜಯಂತಿ, ಹಾಗೂ ಈವರೆಗೆ ನಡೆದ 9 ನುಡಿಸಿರಿಗಳ ಅಧ್ಯಕ್ಷರ ಭಾಷಣಗಳನ್ನು ಒಳಗೊಂಡ ಪುಸ್ತಕ ಬಿಡುಗಡೆಯಾಗಲಿವೆ. ಇದರ ಜತೆಗೆ 400 ಪುಸ್ತಕ ಮಳಿಗೆಗಳು ಪುಸ್ತಕ ಪ್ರಿಯರಿಗಾಗಿ ಕಾದಿವೆ.

ತಪ್ಪದೇ ನೋಡಿ
ನುಡಿಸಿರಿಯ ಕಾರ್ಯಕ್ರಮಗಳಂತೂ ಸದಾ ಅಚ್ಚುಕಟ್ಟು. ಯಾವುದನ್ನೂ ತಪ್ಪಿಸಿಕೊಳ್ಳುವ ಹಾಗಿಲ್ಲ. ಹಾಗಾಗಿ ಅವುಗಳ ಬಗ್ಗೆ ಹೇಳುವಂತಿಲ್ಲ. ಆದರೆ ವಿಶ್ವನುಡಿಸಿರಿಯಲ್ಲಿ ವಿಶೇಷ ಪುಸ್ತಕಗಳ ಪ್ರದರ್ಶನವೊಂದನ್ನು ನಿಮಗಾಗಿ ಆಯೋಜಿಸಲಾಗಿದೆ. ಇಲ್ಲಿ ಕನ್ನಡದ ಅಪರೂಪದ ಪುಸ್ತಕಗಳು, ಹಸ್ತಪ್ರತಿಗಳು ಇರಲಿವೆ. ಅದರ ಜತೆಗೆ ಈವರೆಗೆ ನುಡಿಸಿರಿ ಅಧ್ಯಕ್ಷರಾದವರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ಅಕಾಡೆಮಿ ಪ್ರಶಸ್ತಿ ಪಡೆದ ಪುಸ್ತಕಗಳೂ ಇರಲಿವೆ. ಸಾಹಿತ್ಯ ಪತ್ರಿಕೆಗಳ ಪ್ರದರ್ಶನವೂ ನಡೆಯಲಿದೆ. ಇಷ್ಟೆಲ್ಲ ಅತ್ಯಮೂಲ್ಯ ಸಂಗ್ರಹ ಒಂದೇ ಕಡೆ ದೊರೆಯುವುದು ಅತ್ಯಂತ ಅಪರೂಪ.

- ವಿನಾಯಕ ಭಟ್ಟ ಮೂರೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.