ಪ್ರಧಾನ ಸುದ್ದಿ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಜಿ.ಎಸ್.ಶಿವರುದ್ರಪ್ಪ (1926-2013)
Published On :

ಕಾಣದ ಕಡಲಿನ ಮೊರೆತದ ಜೋಗುಳ ಆಲಿಸಿದ ರಾಷ್ಟ್ರಕವಿ ಜಿಎಸ್ಸೆಸ್
ನಡೆದಿದ್ದಾರೆ ಕಾಣದ ಊರಿಗೆ.., ಕಣ್ಣೀರ ಕಡಲನು ಇಲ್ಲಿಯೇ ಬಿಟ್ಟು...


ಬೆಂಗಳೂರು: ಕನ್ನಡ ಸಾರಸ್ವತ ಲೋಕದ ಅಗ್ರ ಸಾಹಿತಿ, ಹಿರಿತಲೆ, ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸೋಮವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಧಿವಶರಾದರು.
87 ವರ್ಷ ವಯಸ್ಸಿನ ಜಿಎಸ್‌ಎಸ್ ಅವರು ಪತ್ನಿಯರಾದ ರುದ್ರಾಣಿ, ಪದ್ಮಾವತಿ, ಮಕ್ಕಳಾದ ಡಾ. ಶಿವಪ್ರಸಾದ್, ಜೈದೇವ ಹಾಗೂ ಪುತ್ರಿ ಜಯಂತಿ ಅವರನ್ನು ಅಗಲಿದ್ದಾರೆ. ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗಿದ್ದ ಶಿವರುದ್ರಪ್ಪ ಅವರು, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಅವರು ಬನಶಂಕರಿ 2ನೇ ಹಂತದಲ್ಲಿರುವ ಸ್ವಗೃಹ 'ಚೈತ್ರ'ದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರು ಸೋಮವಾರ ಮಧ್ಯಾಹ್ನ 12.10ಕ್ಕೆ ಕೊನೆಯುಸಿರೆಳೆದರು.
ಜಿಎಸ್‌ಎಸ್ ಅವರ ಪಾರ್ಥಿವ ಶರೀರವನ್ನು ಸಂಜೆ 6ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ಕಿಮ್ಸ್ ಆಸ್ಪತ್ರೆಯ ಶೈತ್ಯಾಗಾರಕ್ಕೆ ಕೊಂಡೊಯ್ಯಲಾಯಿತು. ಕಿರಿಯ ಪುತ್ರ ಡಾ.ಶಿವಪ್ರಸಾದ್ ಇಂಗ್ಲೆಂಡ್‌ನಲ್ಲಿದ್ದು, ಗುರುವಾರ ನಗರಕ್ಕೆ ಆಗಮಿಸಲಿದ್ದಾರೆ.
 ವಿಧಿವಿಧಾನ ಬೇಡ
ಆದರೆ, ಜಿಎಸ್‌ಎಸ್ ಅವರು ತಮ್ಮ ಪಾರ್ಥಿವ ಶರೀರದ ಅಂತ್ಯಕ್ರಿಯೆ ವೇಳೆ ಯಾವುದೇ ಧಾರ್ಮಿಕ ವಿಧಿವಿಧಾನಗಳು ಬೇಕಿಲ್ಲ. ಸಮಾಧಿಯೂ ಬೇಡ ಎಂದು ನಾಲ್ಕು ತಿಂಗಳ ಹಿಂದೆ ಕುಟುಂಬ ವರ್ಗದವರಿಗೆ ಹೇಳಿದ್ದರಂತೆ. ಹೀಗಾಗಿ ಪಾರ್ಥಿವ ಶರೀರವನ್ನು ಚಿತೆಗೇರಿಸಿ ನಂತರ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಸರ್ಕಾರ ಚಿಂತನೆ ನಡೆಸಿದೆ.
ನಿಧನದ ವಾರ್ತೆ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಸಚಿವರಾದ ಉಮಾಶ್ರೀ, ರಾಮಲಿಂಗಾರೆಡ್ಡಿ, ಸಂಸದ ಅನಂತಕುಮಾರ್, ಮಾಜಿ ಸಚಿವ ಸುರೇಶ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಜಿಎಸ್‌ಎಸ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.  ಸಾಹಿತಿಗಳು, ಕವಿಗಳು, ಲೇಖಕರು, ವಿಮರ್ಶಕರು, ರಂಗಕರ್ಮಿಗಳು, ಕಲಾವಿದರು, ಗಾಯಕರು, ಚಿತ್ರ ನಟರು, ಹಿರಿಯ ಅಧಿಕಾರಿಗಳೂ ಗೌರವ ಸಲ್ಲಿಸಿದರು.

ಡಾ.ಜಿ.ಎಸ್.ಶಿವರುದ್ರಪ್ಪ ಅವರ ಸಾವಿನಿಂದ ಇಡೀ ರಾಜ್ಯ ಶೋಕತಪ್ತವಾಗಿದೆ. ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ಹಾಗೂ ನಾಡಿನ ಜನರಿಗೆ ಭಗವಂತ ನೀಡಲಿ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಜಿಎಸ್ಸೆಸ್ ಒಬ್ಬ ಶ್ರೇಷ್ಠ ಕವಿ ಹಾಗೂ ಬಹುದೊಡ್ಡ ವಿದ್ವಾಂಸ. ಕನ್ನಡ ಸಾರಸ್ವತ ಲೋಕಕ್ಕೆ ಒಳ್ಳೆಯ ಕಾವ್ಯಗಳನ್ನು ನೀಡಿದ್ದಾರೆ. ಅವರ ನಿಧನದಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ.
- ಪ್ರೊ. ದೇಜಗೌ, ಸಾಹಿತಿ

ಕನ್ನಡ ನಾಟಕ ರಂಗಕ್ಕೆ ಉತ್ತಮ ದಾರಿ ತೋರುವಲ್ಲಿ ಜಿಎಸ್‌ಎಸ್ ಪಾತ್ರ ಅಪಾರವಾದುದು. ಮಹಾ ಸಜ್ಜನ, ಅಂತಹ ದೊಡ್ಡ ಚೇತನ ಇಷ್ಟು ಬೇಗ ಮರೆಯಾಗಿದ್ದು ದುಃಖ ತಂದಿದೆ.
- ಡಾ. ಕಂಬಾರ, ಸಾಹಿತಿ

ಇಂದು ರಜೆ
ಮೃತರ ಗೌರವಾರ್ಥ ರಾಜ್ಯಾದ್ಯಂತ 2 ದಿನ ಶೋಕಾಚರಣೆ ಘೋಷಿಸಲಾಗಿದೆ. ಸರ್ಕಾರಿ ಶಾಲೆ, ಕಾಲೇಜು, ಎಲ್ಲ ರೀತಿಯ ಕೋರ್ಟ್‌ಗಳಿಗೆ ಮಂಗಳವಾರ ರಜೆ ಇದೆ.
ಗುರುವಾರ ಅಂತ್ಯಕ್ರಿಯೆ
ರಾಷ್ಟ್ರಕವಿ ಜಿಎಸ್ಸೆಸ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನಡೆಯಲಿದೆ.
ಎರಡು ತಿಂಗಳಿನಿಂದ ಪ್ರಜ್ಞಾಹೀನ
ಕಿಡ್ನಿ ತೊಂದರೆಯಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಜಿಎಸ್‌ಎಸ್, ಸುಮಾರು ಒಂದು ತಿಂಗಳವರೆಗೂ ಚಿಕಿತ್ಸೆ ಪಡೆದಿದ್ದರು. ಅಷ್ಟೊತ್ತಿಗೆ ಯಾರನ್ನೂ ಗುರುತಿಸಲಾಗದಷ್ಟು ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಜಿಎಸ್‌ಎಸ್‌ರನ್ನು ಆಸ್ಪತ್ರೆಯಿಂದ ಮನೆಗೆ ಕರೆತರಲಾಗಿತ್ತು. ಇಬ್ಬರು ಶುಶ್ರೂಷಕಿಯರ ನೆರವಿನೊಂದಿಗೆ ಎರಡು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

ಪ್ರಶಸ್ತಿ, ಪುರಸ್ಕಾರಗಳು
ಕೇಂದ್ರ ಸಾಹಿತ್ಯ ಅಕಾಡೆಮಿ-    1984
ಪಂಪ ಪ್ರಶಸ್ತಿ-    1997
ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ-     1973
ದಾವಣಗೆರೆಯಲ್ಲಿ ನಡೆದ 61ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
ರಾಷ್ಟ್ರಕವಿ ಪುರಸ್ಕಾರ-     2006
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-     1982
ನಾಡೋಜ (ಕನ್ನಡ ವಿಶ್ವವಿದ್ಯಾಲಯ)
ಗೌರವ ಡಾಕ್ಟರೇಟ್ (ಬೆಂಗಳೂರು ವಿವಿಮತ್ತು ಕುವೆಂಪು ವಿವಿ)

ಕವನ ಸಂಕಲನಗಳು
*  ಸಾಮಗಾನ
*  ಚೆಲುವು-ಒಲವು
*  ದೇವಶಿಲ್ಪಿ
*  ದೀಪದ ಹೆಜ್ಜೆ
*  ಅನಾವರಣ
*  ತೆರೆದ ಬಾಗಿಲು
*  ಗೋಡೆ
*  ವ್ಯಕ್ತಮಧ್ಯ
*  ತೀರ್ಥವಾಣಿ
*  ಕಾರ್ತಿಕ
*  ಕಾಡಿನ ಕತ್ತಲಲ್ಲಿ
*  ಪ್ರೀತಿ ಇಲ್ಲದ ಮೇಲೆ
*  ಚಕ್ರಗತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.