ಪ್ರಧಾನ ಸುದ್ದಿ

ಅನ್ನದಾತರಿಗೆ ಸಾಲದ ಸುಗ್ಗಿ!

ಅನ್ನದಾತರಿಗೆ ಸಾಲದ ಸುಗ್ಗಿ!
Published On :

ಬೆಂಗಳೂರು: ರಾಜ್ಯದಲ್ಲಿ ಸಾಲಗಾರ ರೈತರು ಹೆಚ್ಚಾಗುತ್ತಿದ್ದಾರೆ. ಹೌದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದುವರೆಗೆ ಸುಮಾರು 3.75 ಲಕ್ಷ ರೈತರು ಇದೇ ಪ್ರಥಮ ಬಾರಿಗೆ ಸಹಕಾರ ಸಂಘಗಳು ಅಥವಾ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ಬೆಳೆ ಸಾಲ ಪಡೆದಿದ್ದಾರೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೊಸ ಸಾಲಗಾರರ ಸಂಖ್ಯೆ ವ್ಯಾಪಕವಾಗಿದೆ. ಇದಕ್ಕೆ ಕಾರಣ ಅತಿವೃಷ್ಟಿ ಮತ್ತು ಅನಾವೃಷ್ಟಿಗಳಿಂದ ಆಗಿರುವ ಬೆಳೆಹಾನಿಗೆ ಸೂಕ್ತ ಪರಿಹಾರ ಸಿಗದೇ ಇರುವುದು ಮತ್ತು ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳಿಗೆ ಆಶಾದಾಯಕ ವಾತಾವರಣ ಮೂಡಿರುವುದು.
ಪ್ರಸಕ್ತ ವರ್ಷ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರ ಮತ್ತು ಶೇ. 3ರ ಬಡ್ಡಿದರದಲ್ಲಿ ಇದುವರೆಗೆ ಸುಮಾರು 11.74 ಲಕ್ಷ ರೈತರಿಗೆ 4830 ಕೋಟಿ ಸಾಲ ಒದಗಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 10.25 ಲಕ್ಷ ರೈತರಿಗೆ 3700 ಕೋಟಿ ಸಾಲ ಒದಗಿಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 1130 ಕೋಟಿ ಹೆಚ್ಚುವರಿ ಸಾಲ ನೀಡಲಾಗಿದೆ. ಅಂದರೆ ಈ ವರ್ಷ ಸುಮಾರು ಒಂದೂವರೆ ಲಕ್ಷ ರೈತರು ಹೊಸದಾಗಿ ಸಾಲ ಪಡೆದಿದ್ದಾರೆ. ಆದರೆ, ಸಹಕಾರಿ ಸಂಸ್ಥೆಗಳು ನೀಡುವ ಮಾಹಿತಿ ಪ್ರಕಾರ ಹಳೆ ಸಾಲ ತೀರಿಸದೆ ಇರುವುದರಿಂದ ಮತ್ತು ಸಾಲ ಮನ್ನಾ ಹಣ ಸರ್ಕಾರದಿಂದ ಪಾವತಿಯಾಗದ ಕಾರಣ ಸುಮಾರು ಒಂದು ಲಕ್ಷ ರೈತರಿಗೆ ಈ ವರ್ಷ ಮತ್ತೆ ಸಾಲ ಸಿಕ್ಕಿಲ್ಲ. ಈ ಲೆಕ್ಕಾಚಾರ ಗಮನಿಸಿದಾಗ ಇದೇ ಪ್ರಥಮ ಬಾರಿಗೆ ಹೊಸದಾಗಿ ಸಾಲ ಪಡೆದ ರೈತರ ಸಂಖ್ಯೆ ಇನ್ನೂ ಒಂದು ಲಕ್ಷವಾಗುತ್ತದೆ. ಅಂದರೆ, ಸಹಾಕರಿ ಸಂಸ್ಥೆಗಳ ಮೂಲಕ  ಈ ವರ್ಷ ಹೊಸದಾಗಿ ಸಾಲ ಪಡೆದ ರೈತರ ಸಂಖ್ಯೆ 2.50 ಲಕ್ಷ ತಲುಪುತ್ತದೆ.

ರಾಷ್ಟ್ರೀಕೃತ ಬ್ಯಾಂಕ್ಗಳದ್ದೂ ಇದೇ ಸ್ಥಿತಿ: ಇನ್ನು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲೂ ಇದೇ ಪರಿಸ್ಥಿತಿ. ಸಹಕಾರಿ ಸಂಸ್ಥೆಗಳಂತೆ ಬ್ಯಾಂಕ್ಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗುವುದಿಲ್ಲವಾದರೂ ಶೇ. 4ರ ಬಡ್ಡಿ ದರದಲ್ಲಿ ಸಾಲ ಲಭ್ಯವಾಗುತ್ತಿದೆ. ಇದರ ಅನುಕೂಲ ಪಡೆದ ಸುಮಾರು 1.25 ಲಕ್ಷ ರೈತರು ಇದೇ ಪ್ರಥಮ ಬಾರಿಗೆ ಬೆಳೆ ಸಾಲ ಪಡೆದಿದ್ದಾರೆ. ಇದಕ್ಕಾಗಿ ಬ್ಯಾಂಕ್ಗಳು ಸುಮಾರು 1,100 ಕೋಟಿಯನ್ನು ಹೆಚ್ಚುವರಿಯಾಗಿ ಖರ್ಚು ಮಾಡಿವೆ.
ಇದಿಷ್ಟೇ ಅಲ್ಲ, ಬೆಳೆ ಸಾಲಕ್ಕಾಗಿ ಇನ್ನೂ ಸುಮಾರು 40 ಸಾವಿರ ಅರ್ಜಿಗಳು ಬ್ಯಾಂಕ್ಗಳಲ್ಲಿದ್ದು, ಜನವರಿ ವೇಳೆಗೆ ಇವು ಇತ್ಯರ್ಥಗೊಳ್ಳಲಿವೆ. ಈ ಬಾರಿ ಉತ್ತಮ ಮಳೆಯಾಗಿ ಕೃಷಿಗೆ ಪೂರಕ ವಾತಾವರಣ ಇರುವುದರಿಂದ ಸಾಲ ಮರುಪಾವತಿಯಾಗುತ್ತದೆ ಎಂಬ ಖಾತರಿಯೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ಗಳು ಕೂಡ ರೈತರಿಗೆ ಅವಶ್ಯಕತೆಗೆ ತಕ್ಕಂತೆ ಸಾಲ ನೀಡುತ್ತಿವೆ.

ರೈತರು ಹೊಸದಾಗಿ ಸಾಲಗಾರರಾಗಿದ್ದೇಕೆ?: ಸಾಕಷ್ಟು ರೈತರು ಯಾವುದೇ ಸಾಲ ಪಡೆಯದೆ ಪ್ರತಿ ವರ್ಷ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಸಾಲ ಮಾಡಿದರೆ ಅದನ್ನು ತೀರಿಸಲು ಸಾಧ್ಯವಾಗದೇ ಇದ್ದರೆ ಎಂಬ ಆತಂಕದಿಂದ ಇದ್ದಿದ್ದರಲ್ಲೇ ಸರಿದೂಗಿಸಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದರು.
ಈ ವರ್ಷ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಾಕಷ್ಟು ಬೆಳೆಹಾನಿಯಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರದಿಂದ ಪರಿಹಾರವೂ ಸಿಕ್ಕಿಲ್ಲ. ಆದರೆ, ರಾಜ್ಯದ ಬಹುತೇಕ ಕಡೆ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಆಶಾದಾಯಕ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಬೆಳೆ ಹಾನಿಯಿಂದ ನಷ್ಟವಾದರೂ ಅದನ್ನು ಸರಿದೂಗಿಸಿಕೊಳ್ಳಬಹುದು ಎಂಬ ಆಶಾಭಾವನೆಯಿಂದ ಅನೇಕ ರೈತರು ಸಾಲದ ಮೊರೆ ಹೋಗಿದ್ದಾರೆ. ಹೀಗಾಗಿ ಈ ಬಾರಿ ಪ್ರಥಮ ಬಾರಿ ಸಾಲ ಮಾಡಿರುವ ರೈತರ ಸಂಖ್ಯೆ ಹೆಚ್ಚಾಗಿದೆ.

ಕೇಂದ್ರದಿಂದ ಪರಿಹಾರ ಬಂದಿಲ್ಲ
ರಾಜ್ಯದಲ್ಲಿ ಅತಿವೃಷ್ಟಿಯಿಂದ 2724.37 ಕೋಟಿ, ಅನಾವೃಷ್ಟಿಯಿಂದ 1058 ಕೋಟಿ ಹಾನಿಯಾಗಿದೆ. ಹೀಗಾಗಿ ಪರಿಹಾರ ಕಾರ್ಯಕ್ಕಾಗಿ 3782.37 ಕೋಟಿ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅದೇ ರೀತಿ ಅಡಕೆ ಬೆಳೆ ವ್ಯಾಪಕವಾಗಿ ಹಾನಿಗೊಳಗಾಗಿದ್ದರಿಂದ ಪರಿಹಾರ ನೀಡಲು 175 ಕೋಟಿ ಬಿಡುಗಡೆ ಮಾಡುವುದಾಗಿ ಕೇಂದ್ರ ಸಚಿವರೇ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಕೇಂದ್ರದಿಂದ ಪರಿಹಾರದ ಮೊತ್ತ ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರ ತನ್ನ ಇತಿಮಿತಿಯಲ್ಲಿ ರೈತರಿಗೆ ಸಾಕಷ್ಟು ಪರಿಹಾರ ವಿತರಿಸಿದೆಯಾದರೂ ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಲಕ್ಷಾಂತರ ರುಪಾಯಿ ಬೆಳೆಹಾನಿಯಾಗಿದ್ದರೆ ಸಾವಿರಾರು ರುಪಾಯಿ, ಸಾವಿರಾರು ರುಪಾಯಿ ಬೆಳೆಹಾನಿಯಾದರೆ ನೂರಾರು ರುಪಾಯಿ ಪರಿಹಾರ ವಿತರಿಸಲಾಗಿದೆ. ಇದರಿಂದಾಗಿ ರೈತರು ಅನಿವಾರ್ಯವಾಗಿ ಸಾಲದ ಮೊರೆ ಹೋಗಿದ್ದಾರೆ.

  • ಪ್ರಸಕ್ತ ವರ್ಷ ಬೆಳೆ ಸಾಲಕ್ಕಾಗಿ ಸಲ್ಲಿಕೆಯಾದ ಅರ್ಜಿಗಳು - 40000
  • ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ಗಳಿಂದ 1100 ರು. ಕೋಟಿ ಹೆಚ್ಚುವರಿ ಹಣ ಬಳಕೆ
  •  ಬೆಳೆ ಹಾನಿ ಪರಿಹಾರ ನೀಡಲು ಕೇಂದ್ರ ನೀಡುವ ಮೊತ್ತ -ರು.175 ಕೋಟಿ
  • ಕಳೆದ ವರ್ಷ 10.25 ಲಕ್ಷ ರೈತರಿಗೆ ವಿತರಿಸಿದ ಸಾಲದ ಮೊತ್ತ -ರು.3700 ಕೋಟಿ
  • ಪ್ರಸಕ್ತ ವರ್ಷ ಶೇ.3ರ ಬಡ್ಡಿ ದರದಲ್ಲಿ ನೀಡಿದ ಸಾಲ-4830 ಕೋಟಿ ರು.
ಪ್ರದೀಪ್ ಕುಮಾರ್ ಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.