ಮೆಕ್ಡೊನಾಲ್ಡ್ಸ್ ಡೌನ್.. ಡೌನ್...
ಮೆಕ್ಡೊನಾಲ್ಡ್ಸ್ಗೆ ಹೋಗಿ ಫಾಸ್ಟ್ ಫುಡ್ ತಿನ್ನಲೇಬೇಡಿ. ತಿಂದರೆ ಆರೋಗ್ಯ ಹಾಳು ಎಂದು ಈ ಕಂಪನಿಯೇ ತನ್ನ ನೌಕರರಿಗೆ ಹೇಳಿದೆ. 'ಕನ್ನಡಪ್ರಭ'ದಲ್ಲಿ ಈ ಕುರಿತು ಗುರುವಾರ ವಿಶೇಷ ವರದಿ ಪ್ರಕಟವಾಗಿತ್ತು. ಮೆಕ್ಡೊನಾಲ್ಡ್ಸ್ಗೆ ಹೋಗಿ ಫಾಸ್ಟ್ಫುಡ್ ಸೇವಿಸಿ ಬಂದವರ ಅನಿಸಿಕೆ ಹೀಗಿದೆ...
'ಮನೆಗೆ ಉಪಕಾರಿ, ದೇಶಕ್ಕೆ ಮಾರಿ'
ಜಂಕ್ಫುಡ್ನಲ್ಲಿರುವ ಅಧಿಕ ಕ್ಯಾಲೊರಿಗಳಿಂದಾಗಿ ಇತ್ತೀಚೆಗೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮೆಕ್ಡೊನಾಲ್ಡ್ ಕಂಪನಿ ತನ್ನ ನೌಕರರಿಗೆ ನೀಡಿರುವ ಸಲಹೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಒಟ್ಟಿನಲ್ಲಿ ಮೆಕ್ಡೊನಾಲ್ಡ್ಸ್ ನೀಡಿರುವ ಹೇಳಿಕೆ 'ಮನೆಗೆ ಉಪಕಾರಿ, ದೇಶಕ್ಕೆ ಮಾರಿ' ಎಂಬಂತಿದೆ. ನಾವು ಮೆಕ್ಡೊನಾಲ್ಡ್ಗೆ ಹೋದವರಲ್ಲ, ಇನ್ಮುಂದೆ ಖಂಡಿತ ಹೋಗುವುದೇ ಇಲ್ಲ.
- ಕೆ.ಟಿ. ಮಂಜುನಾಥ್, ಬಿಸಿನೆಸ್ ಎಕ್ಸಿಕ್ಯೂಟಿವ್, ಟೊರೆಂಟ್ ಫಾರ್ಮಾ
ಸ್ನೇಹಿತರಿಗೆ ವರದಿ ತೋರಿಸಿ ಬುದ್ಧಿ ಹೇಳುವೆ
ಮನೆ ಪಕ್ಕದಲ್ಲೇ ಮೆಕ್ಡೊನಾಲ್ಡ್ ಇದೆ. ಮಕ್ಕಳು ವಾರಕ್ಕೊಮ್ಮೆ ಅಲ್ಲಿಗೆ ಹೋಗಿ ಜಂಕ್ಫುಡ್ ತಿನ್ನುತ್ತಾರೆ. ಅದರಿಂದಾಗುವ ಹಾನಿ ಬಗ್ಗೆ ಮೆಕ್ಡೊನಾಲ್ಡ್ನವರೇ ಹೇಳಿದ್ದನ್ನು 'ಕನ್ನಡಪ್ರಭ' ಮುಖಪುಟದಲ್ಲಿ ಪ್ರಕಟಿಸಿ, ಅದರ ಗಂಭೀರತೆ ತಿಳಿಸಿದೆ. ಇವತ್ತೇ ಮಕ್ಕಳಿಗೆ ಮತ್ತವರ ಸ್ನೇಹಿತರಿಗೆ ಈ ವರದಿ ತೋರಿಸಿ ಬುದ್ಧಿ ಹೇಳುವೆ.
- ಭಾವನಾ ವೇಣುಗೋಪಾಲ್, ಕೇಂದ್ರ ಸರ್ಕಾರಿ ಉದ್ಯೋಗಿ, ಆರ್ಎಂವಿ 2ನೇ ಹಂತ
'ಕನ್ನಡಪ್ರಭ'ಕ್ಕೆ ಧನ್ಯವಾದಗಳು
ಮೆಕ್ಡೊನಾಲ್ಡ್ನಲ್ಲಿ ಸಿಗುವ ಬಹುತೇಕ ಎಲ್ಲ ಆಹಾರಗಳು ಜಂಕ್ ಮತ್ತು ಅಧಿಕ ಕ್ಯಾಲೊರಿ ಇರುವಂಥದ್ದು. ಅವರೇ ಹೇಳಿರುವಂತೆ ಇನ್ನು ನಾವು ಅದನ್ನು ತಿನ್ನುವ ಹಾಗೇ ಇಲ್ಲ. ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದೂ ಉದ್ಯಮ ನಡೆಸುತ್ತಿರುವ ಮೆಕ್ಡೊನಾಲ್ಡ್ ಅನ್ನು ಎಲ್ಲರೂ ತಿರಸ್ಕರಿಸಲಿ. ಅರಿವು ಮೂಡಿಸಿದ್ದಕ್ಕೆ 'ಕನ್ನಡಪ್ರಭ'ಕ್ಕೆ ಧನ್ಯವಾದ.
- ಪ್ರಕಾಶ್ ಅಕ್ಕಿಪೇಟೆ, ಹೊಟೇಲ್ ಉದ್ಯಮಿ
ಶಾಲೆಗಳಲ್ಲೂ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಿ
ಮೆಕ್ಡೊನಾಲ್ಡ್ ಉತ್ಪನ್ನಗಳು ಖಂಡಿತ ಜಂಕ್ಫುಡ್ಗಳೇ. ತಾಯಿಯಾಗಿ ನಾನು ಮಕ್ಕಳಿಗೆ ಆ ಬಗ್ಗೆ ತಿಳಿ ಹೇಳುತ್ತಿದ್ದೇನೆ. ಇತ್ತೀಚೆಗೆ ಶಾಲೆಗಳಲ್ಲೂ ಜಂಕ್ಫುಡ್ಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಬೆಳವಣಿಗೆ ಹಂತದಲ್ಲಿರುವ ಮಕ್ಕಳಿಗೆ ವಿಷ ಸೇವನೆ ಅಂತಲೇ ಹೇಳಬೇಕಾಗುತ್ತದೆ.
- ಶೋಭಾ ಜ್ಞಾನೇಶ್, ಖಾಸಗಿ ಸಂಸ್ಥೆ ಉದ್ಯೋಗಿ, ಡಾಲರ್ಸ್ ಕಾಲನಿ
ಆಹಾರದ ಬಗ್ಗೆ ಗ್ರಾಹಕರಿಗೆ ವಿವರ ನೀಡಲೇಬೇಕು
ಮೆಕ್ಡೊನಾಲ್ಡ್ ಸಂಸ್ಥೆ ಅವರ ಸಿಬ್ಬಂದಿಗೆ ಸಲಹೆ ನೀಡಿದೆ. ಅವರ ಸಿಬ್ಬಂದಿಯಷ್ಟೇ ಗ್ರಾಹಕರ ಆರೋಗ್ಯ ಕೂಡ ಮುಖ್ಯ. ನಮ್ಮ ಪ್ರಕಾರ ಮೆಕ್ಡೊನಾಲ್ಡ್ನಲ್ಲಿ ತಯಾರಿಸುವ ಎಲ್ಲ ಆಹಾರವೂ ಜಂಕ್. ಅವರಲ್ಲಿ ತಯಾರಾದ ಯಾವ ಆಹಾರ ಜಂಕ್, ಯಾವುದು ಜಂಕ್ ಅಲ್ಲ ಎಂಬ ಬಗ್ಗೆ ಗ್ರಾಹಕರಿಗೆ ವಿವರ ನೀಡಲೇಬೇಕು. ಇಲ್ಲದಿದ್ದರೆ ಮಾಹಿತಿ ಹಕ್ಕು ಕಾಯ್ದೆಯಡಿ ಅದನ್ನು ಪಡೆಯಲು ಸಿದ್ಧ.
- ಆರ್.ಪ್ರಭಾಕರ್, ಅಧ್ಯಕ್ಷ, ಬೆಂಗಳೂರು ಗ್ರಾಹಕರ ಸಂಘ
ಊಟದ ಬದಲಿಗೆ ಬಳಸುವಂಥವರಿಗೆ ಎಚ್ಚರಿಕೆ ಗಂಟೆ
ಅಪರೂಪಕ್ಕೊಮ್ಮೆ ಬರೀ ಸ್ನ್ಯಾಕ್ಸ್ ತರ ಬಳಸಬಹುದಾದ ಜಂಕ್ಫುಡ್ಗಳನ್ನು ಊಟದ ಬದಲಿಗೆ ಬಳಸುವಂಥವರಿಗೆ ಇದು ಎಚ್ಚರಿಕೆ ಗಂಟೆ. ಅಂಥ ಒಂದು ಎಚ್ಚರಿಕೆಯನ್ನು ಜಂಕ್ಫುಡ್ ತಯಾರಿಸುವಂಥ ಮೆಕ್ಡೊನಾಲ್ಡ್ ಸಂಸ್ಥೆಯೇ ನೀಡಿರುವುದು ಒಳ್ಳೆಯ ಬೆಳವಣಿಗೆ. ಎಲ್ಲರೂ ಇನ್ಮುಂದೆ ಜಂಕ್ಫುಡ್ ತಿನ್ನುವುದನ್ನು ಬಿಟ್ಟು ಬಿಡಲಿ ಎಂಬುದು ನನ್ನ ಸಲಹೆ.
- ಬಿ. ಜಲಜಾಕ್ಷಿ, ಗೃಹಿಣಿ, ಚಾಮರಾಜಪೇಟೆ
ಎಫ್ಸಿಯದ್ದು ಕೂಡ ಎಲ್ಲ ಜಂಕ್ ಫುಡ್ ಗಳೇ
ಮೆಕ್ಡೊನಾಲ್ಡ್ ಮಾತ್ರವಲ್ಲ, ಕೆಎಫ್ಸಿಯದ್ದು ಕೂಡ ಎಲ್ಲ ಜಂಕ್ಫುಡ್ಗಳೇ. ಅವರು ಎಲ್ಲ ಆಹಾರವನ್ನು ಪ್ರಿಸರ್ವೇಟಿವ್ಸ್ ಹಾಕಿ ತಯಾರಿಸುತ್ತಾರೆ. ಹಾಗಾಗಿ, ಅಲ್ಲಿ ಸಿಗುವ ಯಾವ ಆಹಾರವೂ ಸ್ವಾಭಾವಿಕವಾದವಲ್ಲ. ಇನ್ನಾದರೂ ಅಂಥ ಬಹುರಾಷ್ಟ್ರೀಯ ಕಂಪನಿಗಳ ಆಕರ್ಷಣೆಗೆ ಮರುಳಾಗದೇ ಸ್ಥಳೀಯ ಹೊಟೇಲ್ಗಳಲ್ಲಿ ಸಿಗುವ ಆಹಾರ ಸೇವಿಸುವುದೇ ಉತ್ತಮ.
- ಎಂ. ಬಾಲಾಜಿ, ಎಂಜಿನಿಯರ್, ಬೆಂಗಳೂರು
ಮೆಕ್ಡೊನಾಲ್ಡ್ಸ್ ಇಬ್ಬಗೆ ನೀತಿಗೆ ಧಿಕ್ಕಾರ
ಮೆಕ್ಡೊನಾಲ್ಡ್ಸ್ನವರ ಹೇಳಿಕೆಯೇ ಹಾಸ್ಯಾಸ್ಪದ. ತಮ್ಮ ಸಿಬ್ಬಂದಿಗೆ ಜಂಕ್ಫುಡ್ ಸೇವಿಸಬೇಡಿ ಎಂದು ಹೇಳುವ ಆ ಸಂಸ್ಥೆ ಮಾರಾಟ ಮಾಡುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದೆ. ತಮ್ಮ ಸಿಬ್ಬಂದಿಗೆ ಜಂಕ್ಫುಡ್ ತಿನ್ನಬೇಡಿ ಎಂದು ಹೇಳಿದ ಮೇಲೆ ನಾವೂ ಮೆಕ್ಡೊನಾಲ್ಡ್ಸ್ಗೆ ಹೋಗಬೇಡಿ ಎಂದು ಇತರರಿಗೆ ಹೇಳಬಹುದು. ಅಂಥ ಕಡೆ ತಿನ್ನಲು ಹೋಗುವ ಮುನ್ನ ಜನ ಯೋಚಿಸಬೇಕು.
- ಡಾ.ಎಚ್.ಎಸ್.ಪ್ರೇಮಾ, ಆಹಾರತಜ್ಞೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

