ತಂತಿ ತಂತು ಜೀವಕ್ಕೆ ಕುತ್ತು
ಬೆಳಗಾವಿ: ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ವಿದ್ಯುತ್ ಅಪಘಾತದಿಂದ ಬರೋಬ್ಬರಿ 1114 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ!
ಇವರಲ್ಲಿ 457 ಮಂದಿ ವಿದ್ಯುತ್ ಸರಬರಾಜು ಕಂಪನಿ, ಕೆಪಿಟಿಸಿಎಲ್ ನಿರ್ಲಕ್ಷ್ಯದಿಂದ ಮೃತರಾಗಿದ್ದಾರೆ ಎಂದು ಇಲಾಖೆಯೇ ನಿರ್ಧರಿಸಿದ್ದು, ಅವರಿಗೆ ಪರಿಹಾರವನ್ನೂ ನೀಡಿದೆ.
ಈ ರೀತಿಯ ವಿದ್ಯುತ್ ಅವಘಡಕ್ಕೆ ವಿದ್ಯುತ್ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಕೊರತೆ, ಇಲಾಖೆಯ ನಿರ್ಲಕ್ಷ್ಯ ಹಾಗೂ ಹಳೆಯದಾದ ತಂತಿ, ಕಂಬಗಳನ್ನು ಬದಲಾಯಿಸದೇ ಇರುವುದು ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಮೃತರಲ್ಲಿ ಶೇ.40ಕ್ಕೂ ಹೆಚ್ಚು ಜನರು ಇಲಾಖೆಯ ಅಜಾಗರೂಕತೆಗೆ ಬಲಿಯಾಗಿದ್ದಾರೆ.
ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಇನ್ನೂ ಹಳೆಯ ವಿದ್ಯುತ್ ತಂತಿ, ಕಂಬಗಳೇ ಇವೆ. ಜೋತು ಬಿದ್ದಿರುವ ತಂತಿ, ತುಕ್ಕು ಹಿಡಿದ ಕಬ್ಬಿಣದ ಕಂಬಗಳನ್ನು ಬದಲಾಯಿಸಿಲ್ಲ. ಇದಲ್ಲದೇ ವಿದ್ಯುತ್ ತಂತಿ ಜೋಡಿಸುವಾಗ ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಹೈಟೆನ್ಷನ್ ತಂತಿ ಹಾದು ಹೋಗುವಲ್ಲಿ ಕೆಳಗೆ ಜಾಳಿಗೆಯ ತಂತಿ ಅಥವಾ ಪೈಪ್ ಹಾಕಬೇಕೆಂಬ ನಿಯಮವಿದ್ದರೂ ಅದನ್ನು ಪಾಲಿಸಿಲ್ಲ. ಟ್ರಾನ್ಸ್ಫಾರ್ಮರ್ ಸಹ ಹಳೆಯ ಮಾದರಿಯವೇ ಇವೆ. ಕೆಲವೆಡೆ ಫ್ಯೂಸ್ ಹೋಗಿದ್ದಲ್ಲಿ, ಅಥವಾ ವಿದ್ಯುತ್ ತಂತಿ ಹರಿದಿದ್ದಲ್ಲಿ ಅದನ್ನು ಸರಿಪಡಿಸದೇ ವೈಯರನ್ನು ಹೊರಗಿನಿಂದಲೇ ಜೋಡಿಸಿ ತೆರಳುತ್ತಾರೆ. ಇದೂ ಅಪಾಯಕ್ಕೆ ಆಹ್ವಾನಿಸುತ್ತದೆ. ಇನ್ನು ವಿದ್ಯುತ್ ತಂತಿ ಹರಿದು ಬಿದ್ದ ಬಗ್ಗೆ, ಅಥವಾ ಟ್ರಾನ್ಸ್ಫಾರ್ಮರ್ ತೊಂದರೆಯ ಬಗ್ಗೆ ದೂರು ನೀಡಿದರೂ ಸ್ಪಂದಿಸುವುದಿಲ್ಲ, ದುರಸ್ತಿ ಮಾಡುವುದಿಲ್ಲ ಎಂಬ ಆರೋಪ ಸಾಮಾನ್ಯವಾಗಿದೆ.
ಅನಾಹುತ ಸಂಭವಿಸಿದಾಗ ಮಾತ್ರ ಸಂಬಂಧಿತ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳುತ್ತಾರೆ ಹೊರತು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಪರೂಪ. ಹಾಗಾಗಿ, ವಿದ್ಯುತ್ ಅಪಘಾತಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ ಕಾರ್ಮಿಕರು ಸೇರಿದಂತೆ ರಾಜ್ಯದಲ್ಲಿ ಒಟ್ಟು 1114 ಮಂದಿ ಅಸು ನೀಗಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ರಾಯಚೂರು ಶಾಖೋತ್ಪನ್ನ ಕೇಂದ್ರದಲ್ಲಿ ಎರಡು ಪ್ರತ್ಯೇಕ ವಿದ್ಯುತ್ ಅಪಘಾತಗಳಲ್ಲಿ ಇಬ್ಬರು ಹಾಗೂ ಬಳ್ಳಾರಿ ಶಾಖೋತ್ಪನ್ನ ಕೇಂದ್ರದಲ್ಲಿ ಸಂಭವಿಸಿದ ವಿದ್ಯುತ್ ದುರಂತದಲ್ಲಿ ಇಬ್ಬರು ಗುತ್ತಿಗೆ ಕಾರ್ಮಿಕರು ಮೃತಪಟ್ಟಿದ್ದಾರೆ.
ಬೆಳಗಾವಿಯಲ್ಲಿ ಹೆಚ್ಚು: ರಾಜ್ಯದಲ್ಲೇ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಂದಿ ವಿದ್ಯುತ್ ಅಪಘಾತಗಳಿಗೆ ಬಲಿಯಾಗಿದ್ದಾರೆ. ಒಟ್ಟು 121 ಮಂದಿ ಜೀವ ತೆತ್ತಿದ್ದಾರೆ. ಚಾಮರಾಜನಗರದಲ್ಲಿ ಅತಿ ಕಡಿಮೆ ಅಂದರೆ 13 ಮಂದಿ ಮೃತರಾಗಿದ್ದಾರೆ.
ಪರಿಹಾರದಲ್ಲಿ ತಾರತಮ್ಯ: ವಿದ್ಯುತ್ ಅಪಘಾತಗಳಲ್ಲಿ ಮೃತಪಟ್ಟವರಿಗೆ ಪರಿಹಾರಧನ ವಿತರಣೆಯಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಮೃತಪಟ್ಟವರ ಅಜಾಗರೂಕತೆಯಿಂದ ವಿದ್ಯುತ್ ಅಪಘಾತ ಸಂಭವಿಸಿದರೆ ಅವರ ಕುಟುಂಬಕ್ಕೆ ಯಾವುದೇ ಪರಿಹಾರಧನ ದೊರೆಯದು. ಆದರೆ, ವಿದ್ಯುತ್ ಸರಬರಾಜು ಕಂಪನಿಗಳ ಅಜಾಗರೂಕತೆಯಿಂದ ಸಂಭವಿಸಿದಲ್ಲಿ ಮಾತ್ರ ಮೃತಪಟ್ಟ ಅರ್ಹ ಕುಟುಂಬಗಳ ಅವಲಂಬಿತರಿಗೆ ಪರಿಹಾರ ನೀಡಲಾಗುತ್ತದೆ. ಕಳೆದ ಮೂರು ವರ್ಷಗಳಲ್ಲಿ ವಿದ್ಯುತ್ ಅಪಘಾತಗಳಲ್ಲಿ ಮೃತಪಟ್ಟ ಒಟ್ಟು 1114 ಜನರ ಪೈಕಿ 457 ಮೃತರ ಕುಟುಂಬಕ್ಕೆ ಒಟ್ಟು 5.73 ಕೋಟಿ ಪರಿಹಾರಧನ ನೀಡಲಾಗಿದೆ.
3 ವರ್ಷಗಳಲ್ಲಿ ವಿದ್ಯುತ್ ಅಪಘಾತಕ್ಕೆ ಬಲಿಯಾದವರ ಜಿಲ್ಲಾವಾರು ವಿವರ
ಬೆಂಗಳೂರು ನಗರ 63
ಬೆಂಗಳೂರು ಗ್ರಾ. 35
ಕೋಲಾರ 34
ಚಿಕ್ಕಬಳ್ಳಾಪುರ 19
ರಾಮನಗರ 21
ದಾವಣಗೆರೆ 49
ಚಿತ್ರದುರ್ಗ 50
ತುಮಕೂರು 84
ಮಂಡ್ಯ 38
ಮೈಸೂರು 37
ಚಾಮರಾಜನಗರ 13
ಕೊಡಗು 25
ಹಾಸನ 48
ದಕ್ಷಿಣ ಕನ್ನಡ 45
ಉಡುಪಿ 25
ಶಿವಮೊಗ್ಗ 35
ಚಿಕ್ಕಮಗಳೂರು 46
ಬೆಳಗಾವಿ 121
ಧಾರವಾಡ 15
ಗದಗ 15
ಹಾವೇರಿ 27
ಬಿಜಾಪುರ 27
ಬಾಗಲಕೋಟೆ 41
ಉತ್ತರ ಕನ್ನಡ 24
ಗುಲ್ಬರ್ಗ 28
ಯಾದಗಿರಿ 22
ಬೀದರ 36
ರಾಯಚೂರು 29
ಕೊಪ್ಪಳ 26
ಬಳ್ಳಾರಿ 36
- ಶ್ರೀಶೈಲ ಮಠದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

