ಮೋಜಾ ಇಲ್ಲ ಜರೂರಾ?
ಜನಪ್ರತಿನಿಧಿಗಳು ವಿದೇಶಕ್ಕೆ 'ಅಧ್ಯಯನ ಪ್ರವಾಸ' ಕೈಗೊಳ್ಳುವುದು ಅವರ ಹಕ್ಕು ಕೂಡ. ಅವರ ಇಂಥ ಪ್ರವಾಸಗಳಿಂದ ಹೊಸ ಯೋಜನೆಗಳನ್ನು ರೂಪಿಸುವುದಕ್ಕೆ ಸರ್ಕಾರಕ್ಕೆ ಹೊಳಹು ಸಿಕ್ಕರೆ ಅದು ಪ್ರಯೋಜನವೆನ್ನಿಸಿಕೊಳ್ಳುತ್ತದೆ. ಪ್ರವಾಸ ಹೋದವರು ಸರ್ಕಾರಕ್ಕೆ ಸಲಹೆ ರೂಪದ ವರದಿ ಸಲ್ಲಿಸದ್ದು ಇದೆಯೇ? ತಮ್ಮ ಪ್ರತಿನಿಧಿಗಳ ಪ್ರವಾಸದ ಬಗ್ಗೆ ಅವರ ಕ್ಷೇತ್ರಗಳ ಜನ ಏನಂತಾರೆ?
ಸಂತ್ರಸ್ತರಿಗೆ ನೆರವಾಗಿ
ರಾಜ್ಯದಲ್ಲಿ ನೂತನ ಸರ್ಕಾರ ರಚನೆಯಾಗಿ ವರ್ಷವಾಗಿಲ್ಲ. ಆಗಲೇ, ವಿದೇಶ ಪ್ರವಾಸ ಎನ್ನುವುದು ಸರಿಯಲ್ಲ. ಜಿಲ್ಲೆಯ ಸಂತ್ರಸ್ತರು ಇನ್ನೂ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಶಾಸಕರು ಮೊದಲು ಅವರ ನೋವಿಗೆ ಸ್ಪಂದಿಸಿ ಬಳಿಕ ವಿದೇಶ ಪ್ರವಾಸ ಕೈಗೊಂಡರೆ ಉತ್ತಮ.
- ಉಮೇಶ ಹಂಚನಾಳ, ಬಾಗಲಕೋಟೆ
ಪ್ರವಾಸಕ್ಕೆ ಸಮಯವಲ್ಲ
ಶಾಸಕರು ಮೊದಲು ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅರಿತು ಅದನ್ನು ಬಗೆಹರಿಸಬೇಕು. ಬಳಿಕ ವಿದೇಶ ಪ್ರವಾಸದಂತಹ ಕಾರ್ಯಕ್ರಮದಲ್ಲಿ ತೊಡಬೇಕು. ವಿದೇಶಿ ಪ್ರವಾಸದ ಅಧ್ಯಯನಕ್ಕಿಂತಲೂ ಕ್ಷೇತ್ರದ ಅಧ್ಯಯನ ಮುಖ್ಯ ಎಂಬುದು ಮೊದಲು ಶಾಸಕರಿಗೆ ಅರ್ಥವಾಗಬೇಗು.
- ಅಭಿಲಾಷಾ ಪಾಟೀಲ, ಬೀಳಗಿ
ಈಗ ಆಗತ್ಯವಿರಲಿಲ್ಲ
ಸಿಎಂ ಸಿದ್ದರಾಮಯ್ಯನವರೇ ಆರ್ಥಿಕ ಹೊರೆ ತಪ್ಪಿಸಲು ಮುಂದಾಗಬೇಕು ಎಂದಿದ್ದಾರೆ. ಈಗ ಬರಗಾಲ ತಾಂಡವಾಡುತ್ತಿದೆ. ಇದುವೆರೆಗೂ ಮಾಡಿರುವ ಪ್ರವಾಸದ ಇತಿಹಾಸ ನೋಡಿದರೆ ಅದು ರಾಜ್ಯದ ಜನರ ಜೇಬಿಗೆ ಕತ್ತರಿಯೇ ವಿನಃ ಪ್ರಯೋಜನವಾಗಿಲ್ಲ.
- ಎಂ.ಬಿ. ಸಿದ್ದಬಸಪ್ಪ, ರಾಜ್ಯ ತೆಂಗು ಬೆಳೆಗಾರರ ಸಂಘದ ಸಂಚಾಲಕ
ವಿದೇಶಕ್ಕಲ್ಲ, ಬರ ಪ್ರದೇಶಕ್ಕೆ ಹೋಗಿ
ಶಾಸಕರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರು, ನಾಗರಿಕರ ಸಮಸ್ಯೆ ಆಲಿಸಿ ಸ್ಥಳೀಯವಾಗಿ ಸಭೆಗಲನ್ನು ಮಾಡಿ ಜನತೆಯ ಕುಂದುಕೊರತೆಗಳನ್ನು ಆಲಿಸಿ ಮತದಾರ ಪ್ರಭುವಿನ ಸಮಸ್ಯೆಗಳನ್ನು ಬಗೆಹರಿಸಿ ಮತಕ್ಷೇತ್ರ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು.
- ಸತೀಶ ಕುಂಬಾರ, ನಿರುದ್ಯೋಗಿ, ಬೈಲಹೊಂಗಲ
ಜನರ ದುಡ್ಡಲ್ಲಿ ಪ್ರವಾಸ ಸಲ್ಲ
ಶಾಸಕರು ಮೊದಲು ನಮ್ಮ ದೇಶದ ಸಂವಿಧಾನ ಓದಿ, ಜನರ ಸ್ಥಿತಿ ಅರಿಯುವ ಕೆಲಸ ಮಾಡಲಿ. ಸಾರ್ವಜನಿಕರು ತೆರಿಗೆ ರೂಪದಲ್ಲಿ ಕಟ್ಟಿದ ಹಣ ವ್ಯರ್ಥ ಮಾಡಬಾರದು. ಈ ಅಧ್ಯಯನ ಪ್ರವಾಸದಿಂದ ರಾಜ್ಯ, ಜನತೆಗೆ ಎಳ್ಳಷ್ಟೂ ಉಪಯೋಗವಾಗದು.
- ತೇಜಸ್ವಿ ವಿ. ಪಟೇಲ್, ಕಬ್ಬು ಬೆಳೆಗಾರರ ಸಂಘ, ದಾವಣಗೆರೆ
ಜನತೆಗೆ ಅಪಮಾನ
ತಾಲೂಕಿನಲ್ಲಿ ಬರಗಾಲ ತಾಂಡವವಾಡುತ್ತಿದ್ದು ರೈತರು ಭವಿಷ್ಯದ ಕರಾಳ ದಿನಗಳನ್ನು ನೆನೆದು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಶಾಸಕರು ವಿದೇಶ ಪ್ರವಾಸ ಹೊರಟಿರುವುದು ಜನತೆಗೆ ಮಾಡುತ್ತಿರುವ ಅಪಮಾನವಾಗಿದೆ. ಜನರೇ ಬುದ್ಧಿ ಕಲಿಸಬೇಕಾದ ತುರ್ತು ಸಂದರ್ಭ ಒದಗಿ ಬಂದಿದೆ.
- ತಡಸೂರು ಗುರುಮೂರ್ತಿ, ಜೆಡಿಎಸ್ ಅಧ್ಯಕ್ಷ, ತಿಪಟೂರು
ಯಾವ ಉದ್ದೇಶಕ್ಕೆ?
ಅಥಣಿ ಶಾಸಕ ಲಕ್ಷ್ಮಣ ಸವದಿ ವಿದೇಶ ಪ್ರವಾಸ ಕೈಬಿಡಬೇಕು. ಈ ಹಿಂದೆ ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿ ಬಂದವರು ಏನೂ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ವಿದೇಶ ಪ್ರವಾಸ ಮಾಡಿ ಏನೂ ಸಾಧನೆಮಾಡಬೇಕಿಲ್ಲ.
- ಬಿ.ಆರ್. ಗಂಗಪ್ಪಣ್ಣವರ, ನಿವೃತ್ತ ಡಿಡಿಪಿಐ ಅಥಣಿ
ಕುಗ್ರಾಮಕ್ಕೆ ಕಾಯಕಲ್ಪ ನೀಡಲಿ
ಜಗತ್ತಿನ ಮುಂದುವರಿದ ರಾಷ್ಟ್ರಗಳ ಏಳಿಗೆಯಲ್ಲಿ ಭಾರತೀಯರ ಸೇವೆ ಇದೆ. ವಿದೇಶಿಯರೇ ಅಧ್ಯಯನಕ್ಕೆ ಇಲ್ಲಿಗೆ ಬರುವಾಗ ನಮ್ಮ ಶಾಸಕರು ವಿದೇಶಕ್ಕೆ ಹೋಗಬೇಕಾದ ಪ್ರಮೇಯವಿಲ್ಲ. 60 ಲಕ್ಷ ಹಣದಲ್ಲಿ ರಾಜ್ಯದ ಯಾವುದಾದರೂ ಕುಗ್ರಾಮಕ್ಕೆ ಕಾಯಕಲ್ಪ ನೀಡಲಿ.
- ದೇವರಾಜ, ಸ್ವಉದ್ಯೋಗಿ, ದಾವಣಗೆರೆ ಉತ್ತರ ಕ್ಷೇತ್ರ
ಖಂಡನೀಯ
ಕಳಪೆ ಹತ್ತಿ ಬೀಜದಿಂದ ರೈತರು, ಸೂಕ್ತ ಬೆಲೆಗಾಗಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸುವ ಅಗತ್ಯವಿತ್ತು. ನಗರದಲ್ಲಿ ಚರಂಡಿ, ರಸ್ತೆ ಸೇರಿದಂತೆ ಯಾವ ಅಭಿವೃದ್ಧಿ ಕಾಮಗಾರಿಯೂ ಆಗುತ್ತಿಲ್ಲ. ಶಾಸಕರೇ ಇಲ್ಲದಿದ್ದರೆ ಎಲ್ಲ ಕಾರ್ಯಗಳು ವಿಳಂಬವಾಗುತ್ತದೆ.
- ಜಿ.ಎಸ್. ಅಂದಾನಿಗೌಡರ, ಹಾವೇರಿ
ಪರಿಹಾರ ಕೊಡಿಸಲು ಮುಂದಾಗಲಿ
ಕೊಬ್ಬರಿ ನಾಡು ತಿಪಟೂರು ತಾಲೂಕಿನಲ್ಲಿ ಕಳೆದ 5-6 ವರ್ಷದಿಂದಲೂ ನಿರಂತರ ಬರಗಾಲ ಇದೆ. ಶಾಸಕರು ಬಿದ್ದು ಹೋಗಿರುವ ಮರವೊಂದಕ್ಕೆ 10 ಸಾವಿರ ಪರಿಹಾರ ಕೊಡಿಸುತ್ತೇನೆಂದು ಹೇಳುತ್ತಲೇ ರೈತರಿಗೆ ಕೈಕೊಟ್ಟು ಇದೀಗ ವಿದೇಶ ಪ್ರವಾಸ ಹೊರಟಿರುವುದು ಅಪಹಾಸ್ಯವಲ್ಲವೇ?
- ಆಲದಹಳ್ಳಿ ವಿಶ್ವನಾಥ್, ಕೆಜೆಪಿ ಮುಖಂಡ, ತಿಪಟೂರು
ಜನಸೇವೆ ಮಾಡಿ
ಬರಗಾಲದಿಂದ ರೈತರು ಕಂಗೆಟ್ಟಿರುವಾಗ ಶಾಸಕ ಫಿರೋಜ್ ಸೇಠ್ ವಿದೇಶ ಪ್ರವಾಸ ಮಾಡುವುದು ಎಷ್ಟು ಸರಿ? ಈಗಾಗಲೇ ಉತ್ತರ ಮತಕ್ಷೇತ್ರದಲ್ಲಿ ಹಳೆ ಕಾಮಗಾರಿಗಳೆ ಪೂರ್ಣಗೊಂಡಿಲ್ಲ. ಜನಸಾಮಾನ್ಯರು ಸರ್ಕಾರದ ಅನೇಕ ಯೋಜನೆಗಳಿಂದ ವಂಚಿತರಾಗಿದ್ದಾರೆ.
- ದೀಪಾ ಕುಡಚಿ , ಬೆಳಗಾವಿ ಉತ್ತರ ಮತಕ್ಷೇತ್ರ
ಅಧ್ಯಯನ ಓಕೆ, ಮೋಜು ಏಕೆ?
ಸಮಸ್ಯೆಗಳನ್ನು ಅರಿತು ಪರಿಹಾರ ಇದೆಯೇ ಎಂದು ತಿಳಿಯಲು ವಿದೇಶಕ್ಕೆ ಹೋಗಿ ಅಧ್ಯಯನ ಮಾಡಿದಲ್ಲಿ ಪ್ರವಾಸ ಓಕೆ. ಆದರೆ ಇವರ ಪ್ರವಾಸಗಳು ಇದುವರೆಗೂ ಯಾವುದೂ ಪ್ರಯೋಜನವಾಗಿಲ್ಲ. ಕೇವಲ ಮೋಜಿಗಾಗಿ ಹೋಗುತ್ತಿದ್ದಾರೆ ಅಷ್ಟೆ. ಇದರಿಂದ ಯಾವುದೇ ಪ್ರಯೋಜನವಿಲ್ಲ.
- ಡಾ.ರುದ್ರಯ್ಯ ಹಿರೇಮಠ್, ಇಂಡಿಯನ್ ಪಬ್ಲಿಕ್ ಶಾಲೆ
ಸ್ವಂತ ದುಡ್ಡಿನಲ್ಲಿ ಹೋಗಲಿ
ಶಾಸಕರಾಗಿ ಇನ್ನೂ ತಮ್ಮ ಕ್ಷೇತ್ರದಲ್ಲೇ ಸರಿಯಾಗಿ ಪ್ರವಾಸ ಮಾಡದವರು ವಿದೇಶ ಪ್ರವಾಸಕ್ಕೆ ಹೋಗುತ್ತಿರುವುದು ವಿಚಿತ್ರವಾಗಿದೆ. ರೈತರು ನಿತ್ಯವೂ ಸಾಯುತ್ತಿದ್ದಾರೆ. ಪ್ರವಾಸದ ಹೆಸರಿನಲ್ಲಿ ಮೋಜು ಮಾಡುತ್ತಾರೆ. ಇವರಿಗೆ ವಿದೇಶಿ ಪ್ರವಾಸದ ಹುಚ್ಚಿದ್ದರೆ ಸ್ವಂತ ದುಡ್ಡಿನಲ್ಲಿ ಹೋಗಬೇಕು.
- ಪರಶುರಾಮ ಅಗಡಿ, ವಕೀಲರು, ಹಾವೇರಿ
ಮೋಜು ಮಸ್ತಿ, ಪ್ರವಾಸ ಬೇಡ
ಭಾರತದ ಅನೇಕ ರೈತರು ಪ್ರಗತಿ ಹೊಂದಿದ್ದಾರೆ. ಶಾಸಕರು ಇಲ್ಲಿರುವ ರೈತರ ಜಮೀನುಗಳಿಗೆ ಹೋಗಿ ಅಧ್ಯಯನ ಮಾಡಿ ಅಲ್ಲಿ ಕೈಗೊಳ್ಳಬೇಕಾಗಿರುವ ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಬಹುದು. ಶಾಸಕರ ವಿದೇಶ ಪ್ರವಾಸಗಳು ಕೇವಲ ಮೋಜು ಮಸ್ತಿಗಾಗಿ. ಇದನ್ನು ಖಂಡಿಸುತ್ತೇವೆ.
- ಅರವಿಂದ ಕುಲಕರ್ಣಿ, ಇಂಗಳೇಶ್ವರ
ಅವಶ್ಯಕತೆ ಇದೆಯೇ?
ರಾಜ್ಯದಲ್ಲಿ ನಾನಾ ತರಹದ ಸಮಸ್ಯೆಗಳು ತಲೆ ಎತ್ತಿವೆ. ಜನಸಾಮಾನ್ಯರು ದಿಕ್ಕು ತಿಳಿಯದೇ ನಮ್ಮ ರಾಜ್ಯದ ಸ್ಥಿತಿ ಹೀಗೆಕೆ ಎಂದು ಯೋಚಿಸುತ್ತ ಚಿಂತಾಕ್ರಾಂತರಾಗಿದ್ದಾರೆ. ರಾಜ್ಯದ ಜನತೆ ಸಂಕಷ್ಟದಲ್ಲಿರುವ ವೇಳೆ ನಮ್ಮ ಶಾಸಕರಿಗೆ ವಿದೇಶ ಯಾತ್ರೆ ಮಾಡುವುದು ಅವಶ್ಯಕತೆ ಇದೆಯೇ?
- ರೇಷ್ಮಾ ಎ.ಕೆ. ರಾಜ್ಯಶಾಸ್ತ್ರ ಉಪನ್ಯಾಸಕರು, ಬೈಲಹೊಂಗಲ
ಆರ್ಥಿಕ ಹೊರೆ ಅಷ್ಟೆ
ಶಾಸಕರು ಮಾಡುವ ಪ್ರವಾಸ ಯಾರಿಗೂ ಉಪಯೋಗವಿಲ್ಲ. ಪ್ರವಾಸ ಮಾಡಿ ಬಂದ ನಂತರ ಅದರ ಸದ್ಬಳಕೆ ಮಾಡುವುದೇ ಇಲ್ಲ. ಕೇವಲ ಶಾಸಕರು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಹೋಗುತ್ತಾರೆ ವಿನಾ ನಿಜವಾದ ಕಾಳಜಿಯಿಂದಲ್ಲ.
- ವಿಜಯ ವಿಶ್ವೇಶ್ವರಯ್ಯ, ವಿವಿ ವಿದ್ಯಾಶಾಲಾ ಮುಖ್ಯಗುರು
ಫಲಿತಾಂಶ ಶೂನ್ಯ
ಕರಾವಳಿ ಭಾಗದಲ್ಲಿರುವ ಸಮುದ್ರ ಕೊರೆತ, ವಿದ್ಯುತ್ ಉತ್ಪಾದನೆ, ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಿಂದಿನಿಂದಲೂ ಶಾಸಕರು ವಿದೇಶಗಳಿಗೆ ಅಧ್ಯಯನ ಪ್ರವಾಸ ಹೋಗುತ್ತಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ಇಂಥ ಖರ್ಚುಗಳಿಗೆ ಕಡಿವಾಣ ಅಗತ್ಯ.
- ಗಿರೀಶ್ ಕುಡ್ವ, ಕಿರು ಉದ್ದಮಿ, ಕಾರ್ಕಳ
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ
ವಿದೇಶದಲ್ಲಿ ಅಧ್ಯಯನ ಮಾಡಿ ಭಾರತೀಯರನ್ನು ಉದ್ಧಾರ ಮಾಡುವ ವಿಚಾರ ವೈಚಾರಿಕ ದಿವಾಳಿತನ ತೋರಿಸುತ್ತಿದೆ. ಕೋಟ್ಯಂತರ ರು. ಖರ್ಚು ಮಾಡಿ ಇದುವರೆಗೆ ಏನನ್ನೂ ಸಾಧಿಸಿಲ್ಲ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆಯಂತೆ ಶಾಸಕರ ವಿದೇಶ ಪ್ರವಾಸ ಆಗಬಾರದು.
- ಶರಣು ಕಾಟಕರ, ನಂದಿಹಾಳ
ಸ್ವಾರ್ಥಕ್ಕಾಗಿ ವಿದೇಶ ಪ್ರವಾಸ
ಸಾರ್ವಜನಿಕರ ತೆರಿಗೆಯ ದುಡ್ಡಿನಲ್ಲಿ ಈ ಶಾಸಕರು ಮೋಜು ಮಸ್ತಿ ಮಾಡಲು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಈವರೆಗೆ ಯಾವೊಬ್ಬ ಶಾಸಕರೂ ವಿದೇಶ ಪ್ರವಾಸದಿಂದ ಕಲಿತಿರುವ ಬಗ್ಗೆ ಜನರಿಗೆ ತಿಳಿ ಹೇಳಿಲ್ಲ. ಇವರೆಲ್ಲರೂ ತಮ್ಮ ಸ್ವಾರ್ಥಕ್ಕಾಗಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ.
- ಎಲ್.ವಿ. ಪಾಟೀಲ, ಬೆಳಗಾವಿ ಉತ್ತರ ಮತಕ್ಷೇತ್ರ
ಶಾಸಕರ ವಿದೇಶ ಪ್ರವಾಸ ಸಲ್ಲ
ಭೀಕರ ಬರ ಪರಿಸ್ಥಿತಿಯಿಂದ ಕುಡಿಯುವ ನೀರು, ವಿದ್ಯುತ್ ಕ್ಷಾಮ ಉಂಟಾಗಿದ್ದು, ರೈತರು ಸೇರಿದಂತೆ ಜನರು ತೀವ್ರ ತೊಂದರೆಯಲ್ಲಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆ. ಶಾಸಕರು ವಿದೇಶ ಪ್ರವಾಸ ಕೈಬಿಟ್ಟು ಜನಸಾಮಾನ್ಯರ ಸಮಸ್ಯೆ ಪರಿಹರಿಸಲು ಸಮಯ ವ್ಯಯ ಮಾಡಬೇಕು.
- ಅರವಿಂದ ಸಾಲವಾಡಗಿ, ಬಸವನ ಬಾಗೇವಾಡಿ
ನೆರೆ ಸಂತ್ರಸ್ತರಿಗೆ ಸೂರು ಕಟ್ಟಿ
ಉತ್ತರ ಶಾಸಕ ಎಸ್ಸೆಸ್ ಮಲ್ಲಿಕಾರ್ಜುನ್ಗೆ ಕೃಷಿ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಯಾವುದೂ ಹೊಸತಲ್ಲ. ಸರ್ಕಾರ ಶಾಸಕರ ವಿದೇಶ ಪ್ರವಾಸಕ್ಕೆಂದು ಲಕ್ಷಾಂತರ ಹಣ ಪೋಲು ಮಾಡುವ ಬದಲಿಗೆ ಆ ಹಣವನ್ನು ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸಲು, ಹಳ್ಳಿಗೆ ಕುಡಿಯುವ ನೀರೊದಗಿಸಲು ಬಳಸಲಿ.
- ಚಂದ್ರು, ಮುದ್ರಣ ಕೆಲಸಗಾರ, ದಾವಣಗೆರೆ ಉತ್ತರ ಕ್ಷೇತ್ರ
ಬರ ಇದ್ದಾಗ ಪ್ರವಾಸ ಬೇಡ
ಇಂಡಿ ತಾಲೂಕಿನ ಹಲವು ಗ್ರಾಮಗಳು ಕುಡಿವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ. ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಇಲ್ಲಿಯ ಸಮಸ್ಯೆಗಳಿಗೆ ಸ್ಥಾನಿಕವಾಗಿಯೇ ಪರಿಹಾರ ಕಂಡುಕೊಳ್ಳುವ ಸಂಶೋಧನೆ, ಅಧ್ಯಯನ ನಡೆಯಬೇಕು.
- ಬಿ.ಡಿ. ಪಾಟೀಲ(ಹಂಜಗಿ) ಜೆಡಿಎಸ್ ತಾಲೂಕು ಅಧ್ಯಕ್ಷ
ಹೋಗಲಿ ಬಿಡಿ
ನಮ್ಮ ಶಾಸಕರು ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹೊಸ ಯೋಜನೆಗಳನ್ನು ಪರಿಚಯಿಸಲು ಪ್ರವಾಸ ನೆರವಾಗಲಿದೆ. ಇಷ್ಟು ವರ್ಷಗಳ ಕಾಲ ಎಲ್ಲ ಶಾಸಕರು ವಿದೇಶ ಪ್ರವಾಸ ಮಾಡುವ ವೇಳೆ ಉದ್ಭವಿಸದ ಪ್ರಶ್ನೆ ಈಗೇಕೆ ಎಂಬುದು ಅರ್ಥವಾಗುತ್ತಿಲ್ಲ. ಪ್ರವಾಸದಿಂದ ತೊಂದರೆಯಿಲ್ಲ.
- ರಮೇಶ ಕಡಕೋಳ, ಹಾವೇರಿ
ಸಮಸ್ಯೆ ಬದಿಗಿಟ್ಟು ಪ್ರವಾಸ ಸರಿಯಲ್ಲ
ಹಿಂದುಳಿದ ಇಂಡಿ ತಾಲೂಕು ದಶಕದಿಂದಲೂ ಅಭಿವೃದ್ಧಿ ಕಂಡಿಲ್ಲ. ರೈತರು ಹಾಗೂ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿರುವಾಗ ಅವರ ಸಮಸ್ಯೆ ಆಲಿಸಿ ಪರಿಹಾರ ಕಂಡುಕೊಳ್ಳುವುದು ಬಿಟ್ಟು ಶಾಸಕರು ವಿದೇಶ ಪ್ರವಾಸ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ.
- ಜಗನ್ನಾಥ, ರೈತ ಮುಖಂಡ, ಇಂಡಿ
ಶಾಸಕರು ಜವಾಬ್ದಾರಿ ಮರೆತು ವಿದೇಶ ಪ್ರಯಾಣ ಮಾಡುವುದು ಸರಿಯಲ್ಲ. ಕ್ಷೇತ್ರದ ಜನತೆ ಅವರ ಮೇಲೆ ಇಟ್ಟ ಭರವಸೆಗಳ ಮೇಲೆ ಶಾಸಕರು ತಣ್ಣೀರೆರಚುತ್ತಿದ್ದಾರೆ.
- ರಾಹುಲ್ ದೊಡ್ಮನಿ, ಪದವಿ ವಿದ್ಯಾರ್ಥಿ, ಬಡದಾಳ
ವಿದೇಶ ಪ್ರವಾಸಗಳು ಕ್ಷೇತ್ರಾಭಿವೃದ್ಧಿಗೆ ಸಂಬಂಧಿಸಿದ್ದಾದರೆ ಒಳ್ಳೆಯದು. ಆದರೆ ಯಾವುದೇ ದೂರದೃಷ್ಟಿ ಇಲ್ಲದ ಇಂಥ ಪ್ರವಾಸಗಳಿಂದ ಕ್ಷೇತ್ರದ ಸಮಸ್ಯೆಗಳು ಬಗೆ ಹರಿಯುವುದಿಲ್ಲ. ಜನರ ತೆರಿಗೆ ಹಣದಲ್ಲಿ ಪ್ರವಾಸ ಸರಿಯಲ್ಲ, ಅದನ್ನು ಕ್ಷೇತ್ರದ ಸಮಸ್ಯೆ ನೀಗಿಸಲು ಬಳಸಿ.
- ಸುರೇಶ ಅವಟೆ, ಅಧ್ಯಕ್ಷರು ಜೈ ಕರವೇ ಅಫಜಲ್ಪುರ ತಾಲೂಕು
ಚುನಾವಣೆ ಸಂದರ್ಭದಲ್ಲಿ ಮತದಾರರ ಮನವೊಲಿಕೆಗಾಗಿ ಅನೇಕ ಭರವಸೆಗಳನ್ನು ಹೇಳಿ ಪ್ರಚಾರ ಮಾಡಿ ಚುನಾವಣೆಯಲ್ಲಿ ಗೆದ್ದು ಬರುವ ಶಾಸಕರು ನಂತರ ಕ್ಷೇತ್ರದ ಮತದಾರರನ್ನು ಮರೆತು ಸರ್ಕಾರಿ ಖರ್ಚಿನಲ್ಲಿ ವಿದೇಶ ಪ್ರವಾಸಕ್ಕೆ ಹೋಗುವುದು ಉಚಿತವಲ್ಲ.
- ರವಿಕಿರಣ ಬೆಟ್ಟಜೇವರ್ಗಿ, ಜೈ ಕರವೇ ಪಟ್ಟಣ ಘಟಕ, ಅಧ್ಯಕ್ಷರು, ಅಫಜಲ್ಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

